17 ಫೆಬ್ರುವರಿ 2026
-ಅಷ್ಮಿತಾ ಗುಪ್ತಾ
ಮನುಷ್ಯ ಸಂಕುಲವು ಆಹಾರ ಸರಪಳಿಯ ತುತ್ತತುದಿಗೆ ಏರಿ ಕುಳಿತಿದೆ. ಇನ್ನಿತರ ಬೇಟೆಗಾರ ಪ್ರಾಣಿಗಳಿಗಿಂತ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬೇಟೆಯಾಡುವ, ಶಿಕಾರಿಯನ್ನು ಬಲೆಗೆ ಬೀಳಿಸುವ ಮತ್ತು ಮೀನುಗಾರಿಕೆ ಕೌಶಲದಿಂದಾಗಿ ಮನುಷ್ಯನಿಗೆ ಈ ಸ್ತರವನ್ನು ಏರಲು ಸಾಧ್ಯವಾಗಿದೆ. ‘ಮಹಾ-ಬೇಟೆಗಾರ’ (ಸೂಪರ್-ಪ್ರಿಡೇಟರ್) ಎಂಬ ಪಟ್ಟವನ್ನೂ ದಕ್ಕಿಸಿಕೊಂಡಿರುವ ಮನುಷ್ಯನು ಇತರ ಪ್ರಾಣಿಗಳ ವರ್ತನೆಯಲ್ಲಿ ಬದಲಾವಣೆಗೂ ಕಾರಣೀಭೂತನಾಗುತ್ತಿದ್ದಾನೆ. ಆದರೆ, ಈ ಪ್ರತಿಪಾದನೆಯಲ್ಲಿ ಮೇಲ್ನೋಟಕ್ಕೆ ಕಾಣುವುದಕ್ಕಿಂತ ಹೆಚ್ಚಿನ ಸೂಕ್ಷ್ಮ ವಿಷಯಗಳು ಅಡಕಗೊಂಡಿವೆ ಎಂಬ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್.ಸಿ) ಜೀವಪರಿಸರ ವಿಜ್ಞಾನಗಳ ಕೇಂದ್ರದ ಹೊಸ ಅಧ್ಯಯನವು ಒಳನೋಟಗಳನ್ನು ನೀಡಿದೆ. ಬೇಟೆಯಾಡುವ ಅಥವಾ ಕೊಲ್ಲುವ ಮನುಷ್ಯರ ಉಪಸ್ಥಿತಿಯಲ್ಲಿ ಪ್ರಾಣಿಗಳು ಭೀತಿಯಿಂದ ವರ್ತಿಸುತ್ತವೆ; ಆದರೆ, ಮನುಷ್ಯರ ಉಪಸ್ಥಿತಿಯು ಪ್ರಾಣಘಾತುಕವಲ್ಲದಿರುವಾಗ ಅವುಗಳ ಪ್ರತಿವರ್ತನೆಯಲ್ಲಿ ಈ ಲಕ್ಷಣ ಅಷ್ಟಾಗಿ ಕಂಡುಬರುವುದಿಲ್ಲ ಎಂಬುದು ದೃಢಪಟ್ಟಿದೆ.
ಮನುಷ್ಯರ ವಿಭಿನ್ನ ರೀತಿಯ ಹಸ್ತಕ್ಷೇಪಗಳಿಗೆ ತಮ್ಮ ಪ್ರತಿಕ್ರಿಯೆಯ ಭಾಗವಾಗಿ ವನ್ಯಪ್ರಾಣಿಗಳು ಯಾವ ರೀತಿಯಲ್ಲಿ ವರ್ತನೆಯನ್ನು ಬದಲಾಯಿಸಿಕೊಳ್ಳುತ್ತವೆ ಎಂಬ ಬಗ್ಗೆ ಮೂರು ದಶಕಗಳ ಸಂಶೋಧನೆಯನ್ನು ವಿಶ್ಲೇಷಿಸಿರುವ ಸಮಗ್ರ ಮೆಟಾ-ಅನಾಲಿಸಿಸ್ ಇದಾಗಿದ್ದು, ‘ಎಕಾಲಜಿ ಲೆಟರ್ಸ್’ ನಲ್ಲಿ ಈ ಕುರಿತು ಅಧ್ಯಯನ ವರದಿ ಪ್ರಕಟಿಸಲಾಗಿದೆ. ವನ್ಯಜೀವಿಗಳ ಪಾಲಿಗೆ ಮನುಷ್ಯರು ಯಾವಾಗಲೂ ‘ಮಹಾ ಭೀತಿಕಾರಕ’ವೇ ಎಂಬುದನ್ನು ಅರಿಯುವ ಸಲುವಾಗಿ ವಿವಿಧ ಪ್ರಭೇದಗಳು ಹಾಗೂ ಜೀವವೈವಿಧ್ಯ ಪರಿಸರಗಳಲ್ಲಿ ಪ್ರಾಣಿಗಳ ಮೇಯುವಿಕೆ, ಜಾಗ್ರತೆ ಹಾಗೂ ಚಲನವಲನದಲ್ಲಿನ ವರ್ತನಾ ಬದಲಾವಣೆಯನ್ನು ಅಧ್ಯಯನದಲ್ಲಿ ಅವಲೋಕಿಸಲಾಗಿದೆ.
ಮನುಷ್ಯರು ಯಾವಾಗಲೂ ಅತ್ಯಂತ ಭೀತಿಕಾರಕವೇ?- ಈ ಪ್ರಶ್ನೆಗೆ, “ಇಲ್ಲ, ಎಲ್ಲಾ ಸಂದರ್ಭಗಳಲ್ಲೂ ಈ ರೀತಿ ಇರುವುದಿಲ್ಲ” ಎಂಬುದೇ ಸಂಕ್ಷಿಪ್ತ ಉತ್ತರವಾಗಿದೆ ಎನ್ನುತ್ತಾರೆ ಸಿ.ಇ.ಎಸ್.ನಲ್ಲಿನ ಪಿಎಚ್.ಡಿ. ಸಂಶೋಧನಾರ್ಥಿ ಹಾಗೂ ಅಧ್ಯಯನದ ಪ್ರಮುಖ ಲೇಖಕರಾದ ಶಾನ್ ಡಿ’ಸೋಜಾ. “ಪ್ರಾಣಘಾತುಕ ಬೇಟಿಗಾರರು ಮತ್ತು ಮೀನುಗಾರರನ್ನು ಪ್ರಾಣಿಗಳು ಭೀತಿಕಾರಕ ಎಂಬ ದೃಷ್ಟಿಯಲ್ಲಿ ನೋಡುತ್ತವೆ ಎಂಬುದಕ್ಕೆ ನಮಗೆ ಪ್ರಬಲ ಸಾಕ್ಷ್ಯಗಳು ಲಭ್ಯವಾಗಿವೆ. ಪ್ರಾಣಘಾತುಕ ಮನುಷ್ಯರಿರುವ ಪ್ರದೇಶಗಳಲ್ಲಿ ಪ್ರಾಣಿಗಳು ಹೆಚ್ಚು ಜಾಗ್ರತೆಯಿಂದ ಇರುತ್ತವೆ ಹಾಗೂ ಅವುಗಳ ಮೇಯುವಿಕೆ ಅವಧಿ ಕಡಿಮೆ ಇರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಪ್ರಾಣಘಾತುಕವಲ್ಲದವರ ವರ್ಗದಡಿಯ ಪ್ರವಾಸಿಗರು ಹಾಗೂ ಸಂಶೋಧಕರ ಉಪಸ್ಥಿತಿಗೆ ಪ್ರಾಣಿಗಳು ತೋರುವ ಪ್ರತಿವರ್ತನೆಯು ಕಡಿಮೆ ಜಾಗ್ರತೆಯಿಂದ ಹಾಗೂ ಹೆಚ್ಚು ವಿಭಿನ್ನತೆಗಳಿಂದ ಕೂಡಿರುತ್ತದೆ” ಎಂಬುದು ಅವರ ವಿವರಣೆ.
“ಪ್ರಾಯಶಃ, ರಸ್ತೆ ಹಾಗೂ ಕಾಲೊನಿಗಳಂತಹ ನಿರುಪದ್ರವಿ ಮಾನವ ನಿರ್ಮಿತಿಗಳು ಪ್ರಾಣಿಗಳ ಜಾಗ್ರತೆಯ ಮಟ್ಟವನ್ನು ಕಡಿಮೆಗೊಳಿಸುತ್ತವೆ ಎಂಬುದು ಅತ್ಯಂತ ಅಚ್ಚರಿ ಮೂಡಿಸುವ ಅಂಶವಾಗಿದೆ.. ನಿರ್ದಿಷ್ಟ ಸಂದರ್ಭಗಳಲ್ಲಿ, ಇಂತಹ ಪ್ರದೇಶಗಳು ಅವುಗಳ ಆಶ್ರಯ ನೆಲೆಗಳಂತೆ ಕಾರ್ಯಾಚರಿಸುತ್ತವೆ. ಬೇಟೆಯಾಡುವ ಪ್ರಾಣಿಗಳು ಸಾಮಾನ್ಯವಾಗಿ ಮನುಷ್ಯರಿಂದ ದೂರವಿರಲು ಬಯಸುತ್ತವೆ. ಆದರೆ, ಶಿಕಾರಿಗೆ ಗುರಿಯಾಗುವ ಪ್ರಭೇದಗಳ ಪಾಲಿಗೆ ಜನರ ಉಪಸ್ಥಿತಿಯ ಸಮೀಪದ ಪ್ರದೇಶಗಳು ಸುರಕ್ಷಿತ ಭಾವ ಮೂಡಿಸುತ್ತವೆ” ಎಂದು ಡಿ’ಸೋಜಾ ವಿವರಿಸುತ್ತಾರೆ.
“ಮತ್ತೊಂದು ಕಾರಣವೆಂದರೆ, ರಸ್ತೆಗೆ ಹೊಂದಿಕೊಂಡ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಸಸ್ಯ ಸಂಪತ್ತನ್ನು ಕಡಿತಲೆ ಮಾಡಲಾಗಿರುತ್ತದೆ. ಹೀಗಾಗಿ, ಸಣ್ಣ ಪ್ರಾಣಿಗಳಿಗೆ ಮೇಯುವುದಕ್ಕೆ ಇವು ಸೂಕ್ತ ಪ್ರದೇಶಗಳೆಂಬಂತೆ ತೋರಿಬರುತ್ತವೆ. ಆದರೆ, ಇಂತಹ ಪ್ರದೇಶಗಳಲ್ಲಿ ವಾಹನಿಂದ ಅವಘಡಗಳು ಎದುರಾಗುವ ಅಪಾಯವಿರುತ್ತದೆ” ಎನ್ನುತ್ತಾರೆ ಸಹಲೇಖಕ ಹಾಗೂ ಸಿಇಎಸ್ ಪ್ರಾಧ್ಯಾಪಕರಾದ ಮಾರಿಯಾ ಠಾಕ್ರೆ.
ಶಿಕಾರಿಗೆ ಗುರಿಯಾಗುವ ಪ್ರಾಣಿಗಳ ಮೇಯುವಿಕೆ, ಜಾಗ್ರತೆ ಹಾಗೂ ಚಲನಚಲನಗಳನ್ನು ಸಂಶೋಧಕರು ವರ್ತನಾ ಮಾನದಂಡಗಳಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅಪಾಯವನ್ನು ನಿರ್ವಹಿಸುವಾಗ ಪ್ರಾಣಿಗಳು ಎದುರಿಸುವ ಹೊಂದಾಣಿಕೆಯ ಸವಾಲುಗಳ ಬಗ್ಗೆ ಅರಿಯಲು ಈ ಅಂಶಗಳು ಸಹಕಾರಿಯಾಗುವುದು ಇದಕ್ಕೆ ಕಾರಣ. ವನ್ಯಜೀವಿಗಳು ಜಾಗ್ರತೆಯಿಂದ ಇರುವ ಸಮಯವು ಮೇಯುವಿಕೆಗೆ ಹೊರತಾದ ಸಮಯವಾಗಿರುತ್ತದೆ. ಪ್ರಾಣಿಯ ಚಲನವಲನದಲ್ಲಿನ ಬದಲಾವಣೆಯು ಶಕ್ತಿಯ ಬಳಕೆ ಹಾಗೂ ಸಂಪನ್ಮೂಲಗಳ ಲಭ್ಯತೆಯ ಅವಕಾಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಏಕೆಂದರೆ, ಈ ವರ್ತನೆಗಳುಪ್ರಭೇದದ ಉಳಿವು ಹಾಗೂ ಸಂತಾನೋತ್ಪತ್ತಿಯನ್ನು ನೇರವಾಗಿ ಪ್ರಭಾವಿಸುವುದರಿಂದ ಮನುಷ್ಯರ ಭೀತಿಯು ಕಾಲಕ್ರಮೇಣ ವನ್ಯಪ್ರಾಣಿಗಳ ಸಂಖ್ಯೆಯನ್ನು ಯಾವ ಬಗೆಯಲ್ಲಿ ರೂಪಿಸುತ್ತದೆ ಎಂಬುದರ ಬಗ್ಗೆ ಇಣುಕು ನೋಟವನ್ನು ಲಭ್ಯವಾಗಿಸುತ್ತದೆ.
ಅಧ್ಯಯನದಲ್ಲಿ ದೃಢಪಟ್ಟ ಅಂಶಗಳು ಬಹುಮಟ್ಟಿಗೆ “ರಿಸ್ಕ್ ಅಲೊಕೇಷನ್ ಹೈಪೋಥೀಸಿಸ್” ಅನ್ನು ಬೆಂಬಲಿಸುತ್ತವೆ. ಇದು, ಪ್ರಾಣಿಗಳು ತಮ್ಮ ವರ್ತನೆಯನ್ನು ಭೀತಿಯು ಎಷ್ಟರಮಟ್ಟಿಗೆ ತೀವ್ರ ಹಾಗೂ ಮುನ್ನಂದಾಜಿಗೆ ನಿಲುಕುತ್ತದೆ ಎಂಬುದನ್ನು ಆಧರಿಸಿ ಮಾರ್ಪಡಿಸಿಕೊಳ್ಳುತ್ತವೆ ಎಂದು ಪ್ರತಿಪಾದಿಸುತ್ತದೆ. ಅಪಾಯವು ಅಧಿಕವೂ ಹಾಗೂ ನಿರಂತರವೂ ಆಗಿರುವಾಗ
ಪ್ರಾಣಿಗಳು ಜಾಗರೂಕತೆಯಿಂದ ಇರುತ್ತವೆ. ಆದರೆ. ಯಾವಾಗ ಅಪಾಯವು ಕಡಿಮೆಯೂ ಅಥವಾ ಊಹೆಗೆ ನಿಲುಕುವಂಥದ್ದೂ ಆಗಿರುತ್ತದೋ ಆಗ ನಿರುಮ್ಮುಳವಾಗಿರುತ್ತವೆ.
ವೈಯಕ್ತಿಕ ವರ್ತನೆಯಿಂದಾಚೆಗಿನ ವಿಸ್ತೃತ ನೋಟದ ಬಗ್ಗೆಯೂ ತಜ್ಞರು ಗಮನಸೆಳೆದಿದ್ದಾರೆ. ಭೀತಿ ಹಾಗೂ ವರ್ತನೆಯಲ್ಲಿನ ಬದಲಾವಣೆಗಳು ಮೇಯುವಿಕೆ, ಬೇಟೆಯಾಡುವಿಕೆ ಹಾಗೂ ಜೀವಪರಿಸರ ಸಮತೋಲನದಲ್ಲಿ ಮಾರ್ಪಾಡು ಉಂಟುಮಾಡಿ ಸರಣಿಯೋಪಾದಿಯಲ್ಲಿ ಜೈವಿಕಪರಿಸರ ವ್ಯವಸ್ಥೆಯ ಭಾಗವಾಗಬಹುದು .
“ವರ್ತನೆಯ ಮೇಲೆ ಪ್ರಾಣಾಘಾತುಕ ಪ್ರಭಾವಗಳ ಪರಿಣಾಮವು ವಾಸ್ತವದಲ್ಲಿ ಸಂಘರ್ಷದ ನಿರ್ವಹಣೆಗೆ ಸಹಕಾರಿಯಾಗಬಹುದು. ಅಲ್ಪ ಪ್ರಮಾಣದಲ್ಲಿ ನಡೆಸಲಾಗುವ ಪ್ರಾಣಿವಧೆಯು ಮನುಷ್ಯರು ಹೆಚ್ಚಾಗಿ ನೆಲೆಸಿರುವ ಪ್ರದೇಶಗಳಿಗೆ ವನ್ಯಪ್ರಾಣಿಗಳ ಪ್ರವೇಶವನ್ನು ದೊಡ್ಡ ಪ್ರಮಾಣದಲ್ಲಿ ತಗ್ಗಿಸಬಹುದು. ಈ ವಿಷಯದಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಇತರ ಹಲವು ವಿಧಾನಗಳಿಗಿಂತ ಇದು ಪರಿಣಾಮಕಾರಿಯಾಗುವ ಸಾಧ್ಯತೆ ಇದೆ” ಎನ್ನುತ್ತಾರೆ ಸಿಇಎಸ್ ಪ್ರಾಧ್ಯಾಪಕರಾದ ಸಹಲೇಖಕ ಕಾರ್ತಿಕ್ ಶಂಕರ್
“ಜೀವಪರಿಸರೀಯ ಮತ್ತು ವಿಕಾಸ ಸನ್ನಿವೇಶಗಳಿಗೆ ವರ್ತನಾ ಪ್ರತಿಕ್ರಿಯೆಗಳೊಡನೆ ಸಂಬಂಧ ಕಲ್ಪಿಸುವ ಹೆಚ್ಚು ಮುನ್ನಂದಾಜು ರೂಪುರೇಷೆಗಳು ನಮಗೆ ಅಗತ್ಯ ಇವೆ. ಪ್ರಭೇದಗಳ ಗುಣಲಕ್ಷಣಗಳು, ಮನುಷ್ಯರೊಂದಿಗಿನ ಸಂಪರ್ಕದ ಹಿಂದಿನ ಇತಿಹಾಸ, ಬೇಟೆಯಾಡುವ ಪ್ರಭೇದಗಳು ಹಾಗೂ ಭೂಪ್ರದೇಶದ ಸಂರಚನೆಗಳನ್ನು ಇದು ಒಳಗೊಂಡಿರುತ್ತದೆ” ಎನ್ನುತ್ತಾರೆ ಡಿ’ಸೋಜಾ. ಪ್ರಾಣಿಗಳು ಮನುಷ್ಯರ ಉಪಸ್ಥಿತಿಗೆ ಕೇವಲ ಒಗ್ಗಿಕೊಳ್ಳುತ್ತಿವೆಯೇ ಅಥವಾ ಆಳವಾದ ವಿಕಸನೀಯ ಬದಲಾವಣೆಗೆ ಒಳಗಾಗುತ್ತಿವೆಯೇ ಎಂಬುದನ್ನು ಅರ್ಥ ಮಾಡಿಕೊಳ್ಳಲು ದೀರ್ಘಾವಧಿ ಹಾಗೂ ಪ್ರಾಯೋಗಿಕ ಅಧ್ಯಯನಗಳು ಬಹಳ ಮುಖ್ಯವಾಗುತ್ತವೆ ಎಂದೂ ಅವರು ಅಭಿಪ್ರಾಯಪಡುತ್ತಾರೆ.
ಉಲ್ಲೇಖ:
ಡಿಸೋಜಾ ಎಸ್, ಶಂಕರ್ ಕೆ. ಥಾಕರ್ ಎಂ. Are human super-predators always super-scary? A meta-analysis of wild animal behavioural responses to human interactions, Ecology Letters (2025). https://onlinelibrary.wiley.com/doi/10.1111/ele.70287
ಸಂಪರ್ಕ:
ಶಾನ್ ಡಿ’ಸೋಜಾ
ಜೀವಪರಿಸರ ವಿಜ್ಞಾನಗಳ ಕೇಂದ್ರ
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ) ಇಮೇಲ್: shawndsouza@iisc.ac.in
ವೆಬ್ ಸೈಟ್: https://mariathaker.weebly.com/ https://kartikshankerlab.in/
ಪರ್ತಕರ್ತರ ಗಮನಕ್ಕೆ:
ಅ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ. ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ news@iisc.ac.in ಅಥವಾ pro@iisc.ac.in ಗೆ ಬರೆಯಿರಿ.