ನಿರ್ದೇಶಕರ ಮುನ್ನುಡಿ


ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಯನ್ನು ಕೈಗಾರಿಕೋದ್ಯಮಿ ಜಮ್ ಸೇಟ್ ಜಿ ನುಸ್ಸೆರ್ ವಾನ್‍ ಜಿ ಟಾಟಾ, ಮೈಸೂರು ಒಡೆಯರ್ ರಾಜ ಮನೆತನ ಮತ್ತು ಭಾರತ ಸರ್ಕಾರದ ಸಹಭಾಗಿತ್ವದಲ್ಲಿ 1909 ರಲ್ಲಿ ದೂರದೃಷ್ಟಿಯಿಂದ ಸ್ಥಾಪಿಸಲಾಯಿತು.

ಕಳೆದ 111 ವರ್ಷಗಳಲ್ಲಿ, ಐಐಎಸ್ಸಿ ಭಾರತದಲ್ಲಿ ಸುಧಾರಿತ ವೈಜ್ಞಾನಿಕ ಮತ್ತು ತಾಂತ್ರಿಕ ಸಂಶೋಧನೆ ಹಾಗೂ ಶಿಕ್ಷಣದ ಪ್ರಮುಖ ಸಂಸ್ಥೆಯಾಗಿದೆ. ” ಭಾರತೀಯ ಉತ್ಪನ್ನ ಮತ್ತು ಕೈಗಾರಿಕಾ ಕಲ್ಯಾಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸುಧಾರಿತ ಸೂಚನೆಗಳನ್ನು ಒದಗಿಸುವುದು ಮತ್ತು ಜ್ಞಾನದ ಎಲ್ಲಾ ಶಾಖೆಗಳಲ್ಲಿ ಮೂಲ ಸಂಶೋಧನೆ ಕೈಗೊಳ್ಳುವುದು” ಸಂಸ್ಥೆಯ ಉದ್ದೇಶವಾಗಿದೆ. ಈ ಮಾರ್ಗದರ್ಶಿ ಸೂತ್ರಕ್ಕೆ ಅನುಗುಣವಾಗಿ, ಮೂಲ ಜ್ಞಾನದ ಅನ್ವೇಷಣೆ ಹಾಗೂ ಕೈಗಾರಿಕಾ ಮತ್ತು ಸಾಮಾಜಿಕ ಲಾಭಕ್ಕಾಗಿ ಆನ್ವಯಿಕ ಸಂಶೋಧನೆ ನಡುವೆ ಸಮನ್ವಯ ಸಾಧಿಸಲು ಸಂಸ್ಥೆ ಶ್ರಮಿಸಿದೆ.

ಅತಿ ಪ್ರತಿಷ್ಠಿತ ಮತ್ತು ಉತ್ಕೃಷ್ಟ ಪರಂಪರೆ ಹೊಂದಿರುವ ಐಐಎಸ್‍ಸಿ ವಿಶ್ವದ ಅತ್ಯುತ್ತಮ ಪ್ರಯೋಗಾಲಯಗಳಲ್ಲಿ ತರಬೇತಿ ಪಡೆದ ಅತ್ಯುತ್ತಮ, ಪ್ರತಿಭಾನ್ವಿತ ಯುವ ಸಿಬ್ಬಂದಿಗಳ ಆಕರ್ಷಣೆಯನ್ನು ಖಚಿತಪಡಿಸುತ್ತದೆ. 2018 ರಲ್ಲಿ, ಭಾರತ ಸರ್ಕಾರವು ಐಐಎಸ್ಸಿಯನ್ನು ಅತಿ ಉತ್ಕೃಷ್ಠ ಸಂಸ್ಥೆ- ‘ಇನ್ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ (ಐಒಇ)’ ಆಗಿ ಆಯ್ಕೆ ಮಾಡಿದೆ; ಅಲ್ಲದೆ ಜಾಗತಿಕ ವಿಶ್ವವಿದ್ಯಾಲಯ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಮುಂಚೂಣಿ ಸಂಸ್ಥೆಯಾಗಿ ಐಐಎಸ್‍ಸಿ ಮುಂದುವರಿಯುತ್ತಿದೆ.

ಐಐಎಸ್ಸಿಯ ಸಂಶೋಧನೆಗಳು ವೈವಿಧ್ಯಮಯ, ಅಂತರಶಿಸ್ತೀಯವಾಗಿದ್ದು ಸಾಂಪ್ರದಾಯಿಕ ಮಿತಿಗಳಾಚೆ ವಿಸ್ತರಿಸಿದೆ. ಸಂಸ್ಥೆಯು ಆರು ಮುಖ್ಯ ವಿಭಾಗಗಳು ಹಾಗೂ ಇವುಗಳ ಅಡಿ 42 ಕ್ಕೂ ಹೆಚ್ಚು ಶೈಕ್ಷಣಿಕ ವಿಭಾಗ ಮತ್ತು ಕೇಂದ್ರಗಳನ್ನು ಹೊಂದಿದೆ. ಇದು ವಿದ್ಯಾರ್ಥಿಗಳ ಕಲಿಕೆಗೂ ಸಮಾನ ಒತ್ತು ನೀಡುತ್ತಿದ್ದು, ಸಂಸ್ಥೆಯಲ್ಲಿ ಸುಮಾರು 4000 ವಿದ್ಯಾರ್ಥಿಗಳು ವಿವಿಧ ಸ್ನಾತಕೋತ್ತರ, ಪಿಎಚ್‌ಡಿ ಮತ್ತು ಪದವಿ ವ್ಯಾಸಂಗದಲ್ಲಿ ತೊಡಗಿದ್ದಾರೆ; ಮೂಲ ವಿಜ್ಞಾನದಲ್ಲಿ ಯುವ ವಿದ್ಯಾರ್ಥಿಗಳಿಗೆ ಸಂಶೋಧನೆ ಆಧಾರಿತ ತರಬೇತಿ ನೀಡುವ ಉದ್ದೇಶದಿಂದ ನಾಲ್ಕು ವರ್ಷಗಳ ವಿಶೇಷ ಪದವಿ ವ್ಯಾಸಂಗವನ್ನು ಸಂಸ್ಥೆ ನಡೆಸುತ್ತಿದೆ.

ಭಾರತದ ಹೈಟೆಕ್ ಕಂಪನಿಗಳ ಕೇಂದ್ರ ಎನಿಸಿರುವ (ವೈಮಾನಿಕ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ವಲಯ), ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ನೆಲೆವೀಡಾದ ಹಾಗು ಹಲವಾರು ಸ್ಟಾರ್ಟ್ಅಪ್‌ಗಳ ತವರಾದ ಬೆಂಗಳೂರು ನಗರದಲ್ಲಿ  ಐಐಎಸ್ ಸಿ ಸಂಸ್ಥೆ ಸುಮಾರು 440 ಎಕರೆಗಳ, ಹಚ್ಚ ಹಸಿರಿನ ಜಾಗದಲ್ಲಿ ಕ್ಯಾಂಪಸ್ ಹೊಂದಿದೆ. ಇತ್ತೀಚೆಗೆ ಸ್ಥಾಪಿಸಲಾದ ‘ಡಿಜಿಟ್ಸ್’ ಕಚೇರಿಯ ಸಹಾಯದಿಂದ, ನಾವು ಈಗ ಉತ್ತಮ ದರ್ಜೆಯ ಮಾಹಿತಿ ತಂತ್ರಜ್ಞಾನ ಮತ್ತು ನೆಟ್‌ವರ್ಕಿಂಗ್ ವ್ಯವಸ್ಥೆಯನ್ನು ರಚಿಸುವ ಪ್ರಕ್ರಿಯೆಯಲ್ಲಿದ್ದೇವೆ. ಇತ್ತೀಚಿನ ದಿನಗಳಲ್ಲಿ, ಕಾರ್ಯತಂತ್ರ ವಲಯದಲ್ಲಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಐಐಎಸ್ಸಿ ಹಲವು ತಂತ್ರಜ್ಞಾನ-ದೈತ್ಯ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿದೆ. ಸಂಸ್ಥೆಯ ಹಲವು ಮಂದಿ ಬೋಧಕ ಸಿಬ್ಬಂದಿ ತಮ್ಮ ಸಂಶೋಧನೆಗಳನ್ನು ನೇರವಾಗಿ ಸಮಾಜಕ್ಕೆ ತಲುಪಿಸಲು ತಮ್ಮದೇ ಆದ ಸ್ಟಾರ್ಟ್ ಅಪ್ ಗಳನ್ನು ಸ್ಥಾಪಿಸಿದ್ದಾರೆ.

2009 ರಲ್ಲಿ ಐಐಎಸ್ ಸಿ ಶತಮಾನೋತ್ಸವ ವರ್ಷದ ಸಂದರ್ಭದಲ್ಲಿ, ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ಸಂಸ್ಥೆಯ ನೂತನ ಕ್ಯಾಂಪಸ್  ಸ್ಥಾಪಿಸಲಾಯಿತು. ಈ ಕ್ಯಾಂಪಸ್‍ 1,500 ಎಕರೆ ವಿಸ್ತೀರ್ಣ ಹೊಂದಿದ್ದು, ಗ್ರಾಮೀಣ ಭಾಗದ ಶಾಲಾ ಮತ್ತು ಕಾಲೇಜುಗಳ ವಿಜ್ಞಾನ ಮತ್ತು ಗಣಿತ ವಿಷಯಗಳ ಬೋಧಕರಿಗೆ ತರಬೇತಿ ನೀಡುವ ಮಹತ್ವಾಕಾಂಕ್ಷಿ ಯೋಜನೆ ಹೊಂದಿದೆ. ಇದರ ಅಡಿಯಲ್ಲಿ ಈವರೆಗೆ 11,000 ಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಲಾಗಿದೆ; ಈ ಕ್ಯಾಂಪಸ್ ಅನ್ನು ಭಾರತ ಸರ್ಕಾರವು ಉತ್ಕೃಷ್ಟ ಕೇಂದ್ರವೆಂದು ಮಾನ್ಯ ಮಾಡಿದೆ.

ಮುಂಬರುವ ವರ್ಷಗಳಲ್ಲಿ, ಐಐಎಸ್ಸಿ ವಿಶ್ವದ ಅಗ್ರಗಣ್ಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಸ್ಥಾನ ಪಡೆಯುವ ಗುರಿಯನ್ನು ಹೊಂದಿದೆ. ವಿಜ್ಞಾನ ಮತ್ತು ಎಂಜಿನಿಯರಿಂಗ್‌ನ ಎಲ್ಲಾ ವಲಯಗಳಲ್ಲಿ ನಮ್ಮ ಪ್ರಮುಖ ಸಂಶೋಧನಾ ಸಾಮರ್ಥ್ಯವನ್ನು ಬಲಪಡಿಸುವುದು, ವಿಶ್ವ ದರ್ಜೆಯ ಬೋಧನಾ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದು, ಸಂಶೋಧನೆಗೆ ಪ್ರೋತ್ಸಾಹ ಮತ್ತು ಯಶಸ್ವಿ ಸ್ಟಾರ್ಟ್ ಅಪ್‌ಗಳಿಗೆ ಉತ್ತೇಜನ ನೀಡುವುದು ಸಂಸ್ಥೆಯ ಮುಂದಿನ ಗುರಿಯಾಗಿದೆ.  ಗಂಭೀರ ಸವಾಲುಗಳನ್ನು ಪರಿಹರಿಸಲು ಒಟ್ಟಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ವಿವಿಧ ವಿಭಾಗಗಳ ಸಂಶೋಧಕರನ್ನು ಸಬಲಗೊಳಿಸುವ ಕಾರ್ಯವನ್ನು ನಾವು ಮುಂದುವರಿಸಲಿದ್ದೇವೆ. ಅಲ್ಲದೆ ಶಾಲಾ ಶಿಕ್ಷಕರಿಗೆ ತರಬೇತಿ, ಸುಸ್ಥಿರ ಗ್ರಾಮೀಣ ತಂತ್ರಜ್ಞಾನಗಳನ್ನು ಪ್ರಚುರಪಡಿಸುವುದು ಮುಂತಾದ ನೇರ ಸಾಮಾಜಿಕ ಪರಿಣಾಮ ಬೀರುವ ಚಟುವಟಿಕೆಗಳನ್ನು ಹಾಗೂ ಹವಾಮಾನ ಬದಲಾವಣೆ, ಆರೋಗ್ಯ ಸೇವೆ, ಜಲ ನಿರ್ವಹಣೆ, ನವೀಕರಿಸಬಹುದಾದ ಇಂಧನ ಬಳಕೆ ಮುಂತಾದ ಕ್ಷೇತ್ರಗಳಲ್ಲಿನ ಸಂಶೋಧನೆಗಳನ್ನು ನಾವು ಮುಂದುವರಿಸಲಿದ್ದೇವೆ. ಇದೇ ವೇಳೆ, ನಾವು ಆಧುನಿಕ ವೃತ್ತಿಪರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಮತ್ತು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಸಾರ ಮುನ್ನಡೆಯಲಿದ್ದೇವೆ.

ಈ ಪರಿಕಲ್ಪನೆಗಳನ್ನು ಕಾರ್ಯರೂಪಕ್ಕೆ ತರುವುದಲ್ಲದೆ, ಮುಂಬರುವ ವರ್ಷಗಳಲ್ಲಿ ವಿದ್ಯಾರ್ಥಿಗಳು, ನವೀನ ಐಡಿಯಾ ಹೊಂದಿರುವವರು, ಶಿಕ್ಷಕರು, ಸಂಶೋಧಕರು ಮುಂತಾದವರಿಗೆ ಅನಿಯಮಿತ ಅವಕಾಶಗಳನ್ನು ಸೃಷ್ಟಿಸಲಿದ್ದೇವೆ. ಈ ರೋಮಾಂಚಕಾರಿ ಪ್ರಯಾಣದಲ್ಲಿ ನಮ್ಮೊಡನೆ ಸಹಭಾಗಿಯಾಗಲು ನಾನು ನಿಮ್ಮನ್ನು ಸ್ವಾಗತಿಸುತ್ತೇನೆ.

ಗೋವಿಂದನ್ ರಂಗರಾಜನ್
ನಿರ್ದೇಶಕರು