14 ಆಗಸ್ಟ್ 2026
ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಲಾಂಜೆವಿಟಿ ಇಂಡಿಯಾ ಇನಿಷಿಯೇಟಿವ್ ವತಿಯಿಂದ ಈ ತಿಂಗಳ ಆರಂಭದಲ್ಲಿ ಜೆ.ಎನ್. ಟಾಟಾ ಆಡಿಟೋರಿಯಂನಲ್ಲಿ ‘ರೈಸ್ ಫಾರ್ ಹೆಲ್ತಿ ಏಜಿಂಗ್’ (RISE for Healthy Aging) ಸಮ್ಮೇಳನದ ಎರಡನೇ ಆವೃತ್ತಿಯನ್ನು ಆಯೋಜಿಸಲಾಗಿತ್ತು. ‘ದೀರ್ಘಾಯುಷ್ಯ ಹಾಗೂ ಆರೋಗ್ಯಕರ ಹಿರಿವಯಸ್ಸು’ ಕುರಿತು ಆಗಸ್ಟ್ 6-7ರಂದು ನಡೆದ ಈ ಪ್ರಮುಖ ಸಮ್ಮೇಳನದಲ್ಲಿ ಭಾರತ ಮತ್ತು ವಿದೇಶಗಳ ಸುಮಾರು 800 ಜನರು, 60 ಮಂದಿ ತಜ್ಞರು ಹಾಗೂ ಭಾಷಣಕಾರರು ಪಾಲ್ಗೊಂಡಿದ್ದರು. ಹಿರಿವಯಸ್ಸಿಗೆ ಸಂಬಂಧಿಸಿದಂತೆ ಜಾಗತಿಕ ವಿಜ್ಞಾನ ಕ್ಷೇತ್ರದಲ್ಲಿ ಭಾರತವು ಹೊರಹೊಮ್ಮುತ್ತಿರುವ ಪ್ರಮುಖ ಧ್ವನಿಯಾಗಿ ಗುರುತಿಸಿಕೊಳ್ಳಲು ಈ ಸಮ್ಮೇಳನ ವೇದಿಕೆ ಕಲ್ಪಿಸಿತು. ದೇಶದ ಜನರ ಆರೋಗ್ಯಕರ ಜೀವನಾವಧಿಯನ್ನು ವಿಸ್ತರಿಸುವುದು ಹಾಗೂ ಜೀವನದ ಗುಣಮಟ್ಟವನ್ನು ಸುಧಾರಿಸುವುದು ಹೇಗೆ ಎಂಬ ಬಗ್ಗೆ ಸಂಶೋಧಕರು, ವೈದ್ಯರು, ತಂತ್ರಜ್ಞಾನ ತಜ್ಞರು ಮತ್ತು ನೀತಿ ನಿರೂಪಕರು ಚರ್ಚಿಸಿದರು.

ಈ ವರ್ಷದ ಸಮ್ಮೇಳನದ ವಸ್ತು-ವಿಷಯವಾದ ‘ಚಯಾಪಚಯ ಆರೋಗ್ಯ ಮತ್ತು ಹಿರಿವಯಸ್ಸು’ (metabolic health and aging) ವಸ್ತು-ವಿಷಯದ ಕುರಿತು ಮಾತನಾಡಿದ ಲಾಂಜೆವಿಟಿ ಇಂಡಿಯಾ ಉಪಕ್ರಮದ ಸ್ಥಾಪಕ ಪೋಷಕರಾದ ಶ್ರೀ ಪ್ರಶಾಂತ್ ಪ್ರಕಾಶ್ ಅವರು, “ಈ ವರ್ಷ ನಾವು ‘ಚಯಾಪಚಯ ಹಿರಿವಯಸ್ಸು’ ಅನ್ನು (metabolic aging) ಪ್ರಮುಖ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದೇವೆ. ಈ ಕ್ಷೇತ್ರದಲ್ಲಿ ಜಿಎಲ್‌ಪಿ-1 ಔಷಧಗಳು ಮತ್ತು ಪೆಪ್ಟೈಡ್‌ಗಳು ವಹಿಸುತ್ತಿರುವ ಪಾತ್ರದ ಕುರಿತು ಎಲ್ಲರೂ ಮಾತನಾಡುತ್ತಿದ್ದಾರೆ. ಆದ್ದರಿಂದ ಚಯಾಪಚಯ ಕ್ರಿಯೆಯನ್ನು (metabolism) ಚರ್ಚೆಯ ಮುಂಚೂಣಿಗೆ ತರುವುದು ಮುಖ್ಯವೆಂದು ನಾವು ಭಾವಿಸಿದೆವು. ದೇಶವಾಗಿ ನಾವು ದೊಡ್ಡ ಮಟ್ಟದಲ್ಲಿ ಚಯಾಪಚಯ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಈ ಬಿಕ್ಕಟ್ಟನ್ನು ನಿಭಾಯಿಸಲು ನಮಗೆ ಭಾರತದ ಅಗತ್ಯಗಳಿಗೆ ಸರಿಹೊಂದುವಂತಹ ವಿಶಿಷ್ಟ ಪರಿಹಾರಗಳ ಅಗತ್ಯವಿದೆ” ಎಂದು ಹೇಳಿದರು.
ಉದ್ಘಾಟನಾ ಅಧಿವೇಶನದಲ್ಲಿ ನೀತಿ ಆಯೋಗದ ಸದಸ್ಯರಾದ ನವದೆಹಲಿಯ ಏಮ್ಸ್‌ನ ಮಾಜಿ ನಿರ್ದೇಶಕ ಡಾ. ಎಂ. ಶ್ರೀನಿವಾಸ್ ಅವರು ಭಾರತೀಯ ಆರೋಗ್ಯ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಯ ಅಗತ್ಯದ ಬಗ್ಗೆ ವಿವರಿಸಿದರು. ರೋಗಗಳಿಗೆ ಚಿಕಿತ್ಸೆ ನೀಡುವುದರ ಸುತ್ತ ರೂಪುಗೊಂಡಿರುವ ವ್ಯವಸ್ಥೆಯಿಂದ ರೋಗ ತಡೆಗಟ್ಟುವಿಕೆ, ಆರಂಭಿಕ ಹಂತದಲ್ಲೇ ಚಿಕಿತ್ಸಾ ಮಧ್ಯಪ್ರವೇಶ ಮತ್ತು ಜೀವನದುದ್ದಕ್ಕೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಆದ್ಯತೆ ನೀಡುವ ವ್ಯವಸ್ಥೆಯತ್ತ ಬದಲಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಭಾರತೀಯ ಜನಸಂಖ್ಯೆಯನ್ನು ಆಧರಿಸಿದ ಹಿರಿವಯಸ್ಸಿನ ಕುರಿತ ಸಂಶೋಧನೆಯ ಅಗತ್ಯದ ಬಗ್ಗೆ ಗಮನ ಸೆಳೆಯುವುದು ರೈಸ್-2026ರ (RISE 2026) ಪ್ರಮುಖ ಆಶಯವಾಗಿತ್ತು. ಹೀಗಾಗಿ, ಪಾಶ್ಚಿಮಾತ್ಯ ದತ್ತಾಂಶಗಳನ್ನು ಯಥಾವತ್ತಾಗಿ ಅಳವಡಿಸಿಕೊಳ್ಳುವ ಬದಲು, ಭಾರತದ ಜನಸಂಖ್ಯೆಗೆ ನಿರ್ದಿಷ್ಟವಾದ ಹಿರಿವಯಸ್ಸಿಗೆ ಸಂಬಂಧಿಸಿದ ಜೈವಿಕ ಚಹರೆಗಳನ್ನು ಗುರುತಿಸುವ ಸಂಶೋಧನೆಗಳ ಅಗತ್ಯದ ಬಗ್ಗೆ ಚಿಂತನ-ಮಂಥನ ನಡೆಸಲಾಯಿತು . ಭಾರತದಲ್ಲಿ ಹಿರಿವಯಸ್ಸಿಗೆ ಸಂಬಂಧಿಸಿದ ವಿಶಿಷ್ಟ ಜೈವಿಕ ಲಕ್ಷಣಗಳನ್ನು ದಾಖಲಿಸುವ ಹಾಗೂ ಜಾಗತಿಕ ಸಂಶೋಧನೆಯಲ್ಲಿ ದೀರ್ಘಕಾಲದಿಂದ ಇರುವ ಕೊರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪ್ರಯತ್ನಗಳಲ್ಲಿ ‘ಭಾರತ್ ಸ್ಟಡಿ’ಯಂತಹ (BHARAT Study) ಉಪಕ್ರಮಗಳು ಆರಂಭಿಕ ಹೆಜ್ಜೆಗಳಾಗಿವೆ ಎಂದು ವಿವಿಧ ಅಧಿವೇಶನಗಳಲ್ಲಿ ವಿವರಿಸಲಾಯಿತು. ಹಿರಿವಯಸ್ಸನ್ನು ಮಾಪನ ಮಾಡುವ ವಿಧಾನಗಳಲ್ಲಿ ಬದಲಾವಣೆ ತರುತ್ತಿರುವ ಪ್ರೋಟಿಯೋಮಿಕ್ಸ್, ಹೈ-ರೆಸಲ್ಯೂಷನ್ ಮಾಸ್ ಸ್ಪೆಕ್ಟ್ರೋಮೆಟ್ರಿ ಹಾಗೂ ನೆಕ್ಸ್ಟ್-ಜನರೇಷನ್ ಡಯಾಗ್ನೋಸ್ಟಿಕ್ಸ್ ಕ್ಷೇತ್ರಗಳಲ್ಲಿನ ಪ್ರಗತಿಯ ಬಗ್ಗೆಯೂ ಚರ್ಚಿಸಲಾಯಿತು.
ಸಮ್ಮೇಳನದ ವೈಜ್ಞಾನಿಕ ಕಾರ್ಯಕ್ರಮದ ಭಾಗವಾಗಿ ಮೂಲಭೂತ ಜೀವಶಾಸ್ತ್ರದಿಂದ ಹಿಡಿದು ಪರಿವರ್ತಕ ಸಂಶೋಧನೆಯವರೆಗೆ ಚರ್ಚಿಸಲಾಯಿತು. ಜೀವಕೋಶೀಯ ಚಯಾಪಚಯತೆ, ಹಿರಿವಯಸ್ಸು ಮತ್ತು ನರಕೋಶ ಕ್ಷಯಿಸುವಿಕೆಯ ಆನುವಂಶೀಯತೆ, ಕರುಳಿನ ಸೂಕ್ಷ್ಮಾಣು ಜೀವಾವರಣ (ಗಟ್ ಮೈಕ್ರೋಬಯೋಮ್,) ರೋಗನಿರ್ಣಯ, ಪೌಷ್ಟಿಕತೆ, ಸಂತಾನೋತ್ಪತ್ತಿ ಆರೋಗ್ಯ ಹಾಗೂ ಹಿರಿವಯಸ್ಸಿಗೆ ಸಂಬಂಧಿಸಿದ ಅರ್ಥಶಾಸ್ತ್ರ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿಚಾರ ವಿನಿಮಯ ನಡೆದವು.

ಹಿರಿವಯಸ್ಸು, ಚಯಾಪಚಯ ಕ್ರಿಯೆ, ಸಂತಾನೋತ್ಪತ್ತಿ ಮತ್ತು ಜೀವನಶೈಲಿ ಪರಸ್ಪರ ಹೇಗೆ ಸಂಬಂಧ ಹೊಂದಿವೆ ಎಂಬುದನ್ನು ವಿವಿಧ ಅಧಿವೇಶನಗಳಲ್ಲಿ ವಿವರಿಸಲಾಯಿತು. ಋತುಬಂಧ, ಗರ್ಭಾವಸ್ಥೆಯಲ್ಲಿನ ತೂಕ ಹೆಚ್ಚಳ, ಚಯಾಪಚಯ ಅಸ್ವಸ್ಥತೆಗಳು ಹಾಗೂ ಜೀವನದ ವಿವಿಧ ಹಂತಗಳಲ್ಲಿ ಚಿಕಿತ್ಸಾ ಮಧ್ಯಪ್ರವೇಶಗಳ ಕುರಿತು ವಿಶೇಷ ಚರ್ಚೆಗಳು ನಡೆದವು.
ಭಾರತದಲ್ಲಿ ‘ನ್ಯಾಷನಲ್ ಜೆರೋಸೈನ್ಸ್ ರೋಡ್‌ಮ್ಯಾಪ್’ (ಹಿರಿವಯಸ್ಸಿನ ವಿಜ್ಞಾನ ಸಾಗಬೇಕಾದ ಹೆಜ್ಜೆ ಜಾಡು) ರೂಪಿಸುವ ಕುರಿತು ಸಮ್ಮೇಳನದಲ್ಲಿ ವಿಶೇಷ ಸಂವಾದ ನಡೆಯಿತು. ಇದರಲ್ಲಿ ಶ್ರೀ ಪ್ರಶಾಂತ್ ಪ್ರಕಾಶ್, ಡಾ. ಕ್ರಿಸ್ ಗೋಪಾಲಕೃಷ್ಣನ್, ಡಾ. ಕಿರಣ್ ಮಜುಂದಾರ್-ಶಾ ಹಾಗೂ ಡಾ. ರವೀಂದ್ರನಾಥ್ ಕಾಂಚೇರ್ಲಾ ಅವರು ಪಾಲ್ಗೊಂಡು, ದೇಶದಲ್ಲಿ ಜೆರೋಸೈನ್ಸ್ ಕ್ಷೇತ್ರವನ್ನು ಬಲಪಡಿಸಲು ಅಗತ್ಯವಿರುವ ಕ್ರಮಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಲಾಂಜೆವಿಟಿ ಇಂಡಿಯಾ ಉಪಕ್ರಮದ ಪೋಷಕರಾದ ಡಾ. ಕಿರಣ್ ಮಜುಂದಾರ್-ಶಾ ಅವರು ಮಾತನಾಡಿ, “ಭಾರತವು ಈಗ ಅತ್ಯಂತ ಯುವ ದೇಶವಾಗಿದೆ. ಆದರೆ, ನಮ್ಮ ದೇಶವು ಹಿರಿವಯಸ್ಸಿನವರ ದೇಶವಾಗುವತ್ತ ಸಾಗುತ್ತಿದೆ. 2045ರ ವೇಳೆಗೆ ನಮ್ಮಲ್ಲಿ 60 ವರ್ಷ ಮೇಲ್ಪಟ್ಟವರ ಸಂಖ್ಯೆ 30 ಕೋಟಿಗೆ ತಲುಪಲಿದೆ. ಹೀಗಾಗಿ ದೀರ್ಘಾಯುಷ್ಯ ಕುರಿತ ಈ ವಿಚಾರ ಸಂಕಿರಣವು ಅತ್ಯಂತ ಮಹತ್ವದ್ದಾಗಿದೆ. ಭಾರತವನ್ನು ಕೇವಲ ಯುವ ದೇಶವಾಗಿ ನೋಡುವುದರ ಜತೆಗೆ ಹಿರಿವಯಸ್ಸಿನವರ ದೇಶವಾಗುವತ್ತ ಸಾಗುತ್ತಿರುವುದರ ಬಗ್ಗೆಯೂ ಗಮನಿಸಬೇಕಿದೆ. ಅದಕ್ಕಾಗಿ, ನಾವು ಕೇವಲ ಜೀವಿತಾವಧಿಯ ಬಗ್ಗೆ ಮಾತ್ರವಲ್ಲದೆ, ಆರೋಗ್ಯಕರ ಜೀವನಾವಧಿಯ ಬಗ್ಗೆ ಮುಂಚಿತವಾಗಿಯೇ ಯೋಜನೆ ರೂಪಿಸಬೇಕು. ಹಿರಿವಯಸ್ಸಿನಲ್ಲೂ ಆರೋಗ್ಯಕರವಾಗಿ ಮತ್ತು ಉತ್ಪಾದಕತೆಯಿಂದ ಬದುಕಲು ಸಾಧ್ಯವಾಗಿಸುವುದು ಇದರ ಉದ್ದೇಶವಾಗಿರಬೇಕು” ಎಂದು ವಿವರಿಸಿದರು.

ಲಾಂಜೆವಿಟಿ ಇಂಡಿಯಾ ಉಪಕ್ರಮದ ಮತ್ತೊಬ್ಬ ಪೋಷಕರಾದ ಡಾ. ಕ್ರಿಸ್ ಗೋಪಾಲಕೃಷ್ಣನ್ ಅವರು, “ದೀರ್ಘಾಯುಷ್ಯದಲ್ಲಿ ಭಾರತವು ಜಾಗತಿಕವಾಗಿ ಮುಂಚೂಣಿಯಲ್ಲಿರಬೇಕು ಎಂಬುದು ನನ್ನ ಆಶಯ. ಪ್ರಪಂಚದ ಜನಸಂಖ್ಯೆಯ ಶೇಕಡಾ 20ರಷ್ಟು ಜನರನ್ನು ಭಾರತ ಪ್ರತಿನಿಧಿಸುತ್ತದೆ. ಐಐಎಸ್ಸಿಯ ಲಾಂಜೆವಿಟಿ ಇಂಡಿಯಾದಂತಹ ಉಪಕ್ರಮಗಳು ಈ ಕ್ಷೇತ್ರದಲ್ಲಿ ಅಗತ್ಯವಿರುವ ನಾಯಕತ್ವವನ್ನು ರೂಪಿಸುತ್ತವೆ ಎಂದು ನಾನು ಆಶಿಸುತ್ತೇನೆ. ಇದರಿಂದ ನಮ್ಮ ದೇಶದ ಜನರಿಗೆ ಮಾತ್ರವಲ್ಲ, ಇಡೀ ಜಗತ್ತಿಗೂ ಪ್ರಯೋಜನವಾಗಲಿದೆ” ಎಂದು ಹೇಳಿದರು.
ಸಮ್ಮೇಳನದ ಕುರಿತು ಪ್ರತಿಕ್ರಿಯಿಸಿದ ಗ್ಲೋಬಲ್ ಹಾಸ್ಪಿಟಲ್ಸ್ ಸಂಸ್ಥಾಪಕರಾದ ಡಾ. ರವೀಂದ್ರನಾಥ್ ಕಾಂಚೇರ್ಲಾ ಅವರು, “ಇದು ಜೆರೋಸೈನ್ಸ್ ಅಥವಾ ದೀರ್ಘಾಯುಷ್ಯ ವಿಜ್ಞಾನ ಎಂದು ಕರೆಯಲಾಗುವ ಹೊಸ ವಿಜ್ಞಾನ ಕ್ಷೇತ್ರವನ್ನು ಪ್ರತಿನಿಧಿಸುವುದರಿಂದ ಅತ್ಯಂತ ಆಸಕ್ತಿದಾಯಕ ಸಮ್ಮೇಳನವಾಗಿದೆ. ಇದುವರೆಗೆ ಆಸ್ಪತ್ರೆಗಳನ್ನು ಮುಖ್ಯವಾಗಿ ಅನಾರೋಗ್ಯಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ರೂಪಿಸಲಾಗಿದೆ. ಆದರೆ, ಇದು ಸಂಪೂರ್ಣ ವಿಭಿನ್ನವಾದ ಪರಿಕಲ್ಪನೆಯಾಗಿದೆ. ಜನರ ಬದುಕನ್ನು ದೀರ್ಘಕಾಲ ಮತ್ತು ಆರೋಗ್ಯಕರವಾಗಿ ಬದುಕುವಂತೆ ಹೇಗೆ ಉತ್ತಮಗೊಳಿಸಬಹುದು ಎಂಬುದನ್ನು ಕೇಂದ್ರಬಿಂದುವಾಗಿಸಿಕೊಂಡು ಇಲ್ಲಿ ಅತ್ಯುತ್ತಮ ಚರ್ಚೆಗಳು ನಡೆದಿವೆ. ಪರಸ್ಪರರಿಂದ ಕಲಿಯಲು ಸಾಕಷ್ಟು ಅವಕಾಶವೂ ದೊರೆತಿದೆ” ಎಂದರು.
RISE 2026ಕ್ಕೂ ಮುನ್ನ ಆಗಸ್ಟ್ 5ರಂದು ಐಐಎಸ್ಸಿಯ ಜೈವಿಕ ವಿಜ್ಞಾನಗಳ ವಿಭಾಗದಲ್ಲಿ ‘ಏಜಿಂಗ್ ಬಯಾಲಜಿ ಅಂಡ್ ರಿಜೆನರೇಟಿವ್ ಮೆಡಿಸಿನ್’ ಕಾರ್ಯಾಗಾರ ಆಯೋಜಿಸಲಾಗಿತ್ತು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಂಶೋಧಕರು ಹಿರಿವಯಸ್ಸಿನ ಜೀವಶಾಸ್ತ್ರ ಮತ್ತು ಪುನರುತ್ಪತ್ತಿ ವೈದ್ಯಕೀಯ ಕ್ಷೇತ್ರಗಳಲ್ಲಿನ ಇತ್ತೀಚಿನ ಪ್ರಗತಿಗಳನ್ನು ಪ್ರಸ್ತುತಪಡಿಸಿದರು. ಇದು ‘ರೈಸ್’ (RISE) ಸಮ್ಮೇಳನದಲ್ಲಿ ನಡೆದ ವಿಸ್ತೃತ ವೈಜ್ಞಾನಿಕ ಚರ್ಚೆಗಳಿಗೆ ಪೂರಕ ವೇದಿಕೆಯನ್ನು ಒದಗಿಸಿತು.
ಈ ವರ್ಷ ‘ರೈಸ್’ (RISE) ಮುಗಿಯುತ್ತಿದ್ದಂತೆಯೇ ಆಗಸ್ಟ್ 8–9ರಂದು ಸಕ್ಕರೆ ಕಾಯಿಲೆಯ ವೈದ್ಯಕೀಯ ಅಂಶಗಳ ಮೇಲೆ ಕೇಂದ್ರೀಕೃತವಾದ ‘ಟ್ರೀಟ್-ಡಿಎಂ’ (TREAT-DM) ಸಮ್ಮೇಳನವನ್ನು ಆಯೋಜಿಸಲು ಕ್ಯೂರ್ ಟ್ರಸ್ಟ್‌ನೊಂದಿಗೆ ರೈಸ್ (RISE) ಸಹಭಾಗಿತ್ವ ಸಾಧಿಸಿತ್ತು. ಒಟ್ಟು ನಾಲ್ಕು ದಿನಗಳ ಅವಧಿಯ ಈ ಎರಡು ಸಮ್ಮೇಳನಗಳು, ಹಿರಿವಯಸ್ಸು ಮತ್ತು ಚಯಾಪಚಯ ಸಂಬಂಧಿತ ಕಾಯಿಲೆಗಳ ವಿಜ್ಞಾನಕ್ಕೆ ಸಂಬಂಧಿಸಿದಂತೆ ಮೂಲಭೂತ ಸಂಶೋಧನೆಯಿಂದ ಹಿಡಿದು ನೈಜ ವೈದ್ಯಕೀಯ ಆನ್ವಯಿಕತೆಯವರೆಗೆ ಹಲವು ವಿಷಯಗಳ ಕುರಿತು ಚರ್ಚಿಸಲು ಸಂಶೋಧಕರು, ವೈದ್ಯರು ಹಾಗೂ ಕೈಗಾರಿಕಾ ಕ್ಷೇತ್ರದ ನಾಯಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದವು.
ಲಾಂಜೆವಿಟಿ ಇಂಡಿಯಾ ಉಪಕ್ರಮದ ಕುರಿತು:
ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ನೇತೃತ್ವ ವಹಿಸಿರುವ ‘ಲಾಂಜೆವಿಟಿ ಇಂಡಿಯಾ’ ಉಪಕ್ರಮವು, ಭಾರತದಲ್ಲಿ ಆರೋಗ್ಯಕರ ಹಿರಿವಯಸ್ಸಿಗೆ ಸಂಬಂಧಿಸಿದಂತೆ ಆಳವಾದ ಸಂಶೋಧನೆ, ಹೊಸ ಆವಿಷ್ಕಾರಗಳು ಹಾಗೂ ಮುಂಚೂಣಿ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಮುನ್ನಡೆಸಲು ಸಮಗ್ರ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ವೆಬ್‌ಸೈಟ್: https://www.longevity.iisc.ac.in/
ಮಾಧ್ಯಮ ಸಂಪರ್ಕ:
ಮೃಣಾಲ್ ಕುಲಕರ್ಣಿ
ಸಮುದಾಯ ಸಂಪರ್ಕ ಸಮನ್ವಯಕಾರರು, ಲಾಂಜೆವಿಟಿ ಇಂಡಿಯಾ
ಇಮೇಲ್: longevity@iisc.ac.in