03 ಜೂನ್ 2025
-ಸಿಂಧು ಎಂ
ಪಲ್ಮನರಿ ಥ್ರೊಂಬೊಎಂಬಾಲಿಸ್ಮ್ (ಪಿಟಿಇ)ನಂತಹ ಅನಾರೋಗ್ಯ ಪರಿಸ್ಥಿತಿಗಳಿಂದ ಉಂಟಾಗುವ ಅಸಹಜ ರಕ್ತದ ಹೆಪ್ಪುಗಟ್ಟುವಿಕೆಯನ್ನು ನಿಯಂತ್ರಿಸಲು ಬಳಸಬಹುದಾದ ಪರಿಣಾಮಕಾರಿ ಕೃತಕ ಲೋಹಾಧಾರಿತ ನ್ಯಾನೊಜೈನ್ ಅನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ ಸಿ) ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.
ಸಾಮಾನ್ಯ ಸಂದರ್ಭಗಳಲ್ಲಿ ರಕ್ತನಾಳಕ್ಕೆ ಗಾಯವಾದಾಗ ಪ್ಲೇಟ್ ಲೆಟ್ಸ್ ಎಂಬ ವಿಶೇಷ ರಕ್ತ ಕಣಗಳು ಸಕ್ರಿಯಗೊಂಡು ರಕ್ತನಾಳದ ಸುತ್ತ ಗೊಂಚಲಿನಂತೆ ಒಗ್ಗೂಡಿ ರಕ್ಷಾಕವಚದ ಪಾತ್ರ ನಿರ್ವಹಿಸುವ ರಕ್ತದ ಹೆಪ್ಪುಗಳನ್ನು ರೂಪಿಸುತ್ತವೆ. ಈ ಪ್ರಕ್ರಿಯೆಯನ್ನು ಬ್ಲಡ್ ಕ್ಲಾಟಿಂಗ್ ಕ್ಯಾಸ್ಕೇಡ್ (ಹೀಮೋಸ್ಟ್ಯಾಸಿಸ್) ಎನ್ನಲಾಗುತ್ತದೆ. ಕೊಲಾಜೆನ್, ಥ್ರೋಂಬಿಸಿನ್ ನಂತಹ ಶಾರೀರಿಕ ರಾಸಾಯನಿಕಗಳು (ಅಗೋನಿಸ್ಟ್ಸ್) ಹೊಮ್ಮಿಸುವ ಸಂಕೇತಗಳಿಂದ ಪ್ರಚೋದಿತವಾದ ಜಟಿಲ ಸರಣಿ ಪ್ರೋಟೀನ್ ಇಂಟರ್ಕಾಕ್ಷನ್ ಅನ್ನು ಪ್ರತಿವರ್ತನೆಗಳನ್ನು ಇದು ಒಳಗೊಂಡಿರುತ್ತದೆ. ಆದರೆ, ಪಿಟಿಇ ಅಥವಾ ಕೋವಿಡ್-19ದಂತಹ ಕಾಯಿಲೆಗಳ ವೇಳೆ ಈ ಸಂಕೇತಗಳು ಅಸ್ತವ್ಯಸ್ತಗೊಂಡಾಗ ಉತ್ಕರ್ಷಕ ಒತ್ತಡ ಹಾಗೂ ನಂಜುಕಾರಕ ರಿಯಾಕ್ಟೀವ್ ಆಕ್ಸಿಜೆನ್ ಸ್ಪೀಶೀಸ್ (ಆರ್ ಒ ಎಸ್) ಮಟ್ಟಗಳು ಹೆಚ್ಚಾಗುತ್ತವೆ. ಇದು ಪ್ಲೇಟ್ ಲೆಟ್ ಗಳ ಅಧಿಕ-ಸಕ್ರಿಯತೆಗೆ ಎಡೆಮಾಡಿಕೊಡುತ್ತದೆ. ಹೀಗಾಗುವುದು ರಕ್ತನಾಳದಲ್ಲಿ ವಿಪರೀತ ಹೆಪ್ಪುಗಳನ್ನು ರೂಪಿಸಿ ರೋಗ ವ್ಯಾಪಿಸುವಿಕೆ ಹಾಗೂ ಸಾವಿಗೆ ಪ್ರಮುಖ ಕಾರಣವಾದ ಥ್ರೊಂಬೊಸಿಸ್ ಗೆ ಕಾರಣವಾಗುತ್ತದೆ.

ಸಂಸ್ಥೆಯ ನಿರಯವಯ ಮತ್ತು ಭೌತ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಜಿ.ಮುಗೇಶ್ ಅವರ ನೇತೃತ್ವದ ಸಂಶೋಧಕರು ಈ ಸವಾಲಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಸ್ವಾಭಾವಿಕ ಆಂಟಿ ಆಕ್ಸಿಡೆಂಟ್ ಕಿಣ್ವಗಳನ್ನು ಪ್ರತ್ಯನುಕರಿಸುವ ನ್ಯಾನೊಮಟೀರಿಯಲ್ ಗಳನ್ನು (ನ್ಯಾನೊ ಭೌತಸಾಮಗ್ರಿಗಳು) ಅಭಿವೃದ್ಧಿಪಡಿಸಿದ್ದಾರೆ. ಈ ಕಿಣ್ವಗಳು ರಿಯಾಕ್ಟೀವ್ ಆಕ್ಸಿಡೇಟಿವ್ ಮಾಲಿಕ್ಯೂಲ್ ಗಳನ್ನು ನಿರ್ಮೂಲನೆಗೊಳಿಸುತ್ತವೆ. ಈ ‘ನ್ಯಾನೊಜೈಮ್’ಗಳು ಆರ್.ಒ.ಎಸ್. ಮಟ್ಟಗಳನ್ನು ನಿಯಂತ್ರಿಸುವ ಮೂಲಕ ಕಾರ್ಯಾಚರಿಸುತ್ತವೆ. ಆ ಮೂಲಕ, ಅಧಿಕ ಹೆಪ್ಪುಗಳನ್ನು ರೂಪಿಸುವ ಅಥವಾ ಥ್ರೊಂಬೊಸಿಸ್ ಗೆ ಎಡೆಮಾಡಿಕೊಡುವ ಪ್ಲೇಟ್ ಲೆಟ್ ಗಳ ಅಧಿಕ-ಸಕ್ರಿಯತೆಗೆ ತಡೆಯೊಡ್ಡುತ್ತವೆ.
ಇದಕ್ಕಾಗಿ ತಜ್ಞರು, ನಿಯಂತ್ರಿತ ಸರಣಿ ರಾಸಾಯನಿಕ ವರ್ತನೆಗಳ ಮೂಲಕ ಪುಟ್ಟ ಬಿಲ್ಡಿಂಗ್ ಬ್ಲಾಕ್ ಗಳಿಂದ ಹಿಡಿದು ವಿವಿಧ ಗಾತ್ರಗಳ, ಆಕಾರಗಳ ಹಾಗೂ ರೂಪರಾಚನಿಕತೆಯ ರೆಡಾಕ್ಸ್ ಸಕ್ರಿಯ ನ್ಯಾನೊ ಭೌತಸಾಮಗ್ರಿಗಳನ್ನು ಕೃತಕವಾಗಿ ಅಭಿವೃದ್ಧಿಪಡಿಸಿದರು. ನಂತರ, ಮನುಷ್ಯ ರಕ್ತದಿಂದ ಪ್ಲೇಟ್ ಲೆಟ್ ಗಳನ್ನು ಪ್ರತ್ಯೇಕಿಸಿ, ಶಾರೀರಿಕ ಅಗೊನಿಸ್ಟ್ ಗಳ ಮೂಲಕ ಸಕ್ರಿಯಗೊಳಿಸಿ, ವಿವಿಧ ನ್ಯಾನೊಜೈಮ್ ಗಳು (ನ್ಯಾನೊಕಿಣ್ವಗಳು) ಹೇಗೆ ಅಧಿಕ ಪ್ಲೇಟ್ ಲೆಟ್ ಶೇಖರಣೆಯನ್ನು ಪರಿಣಾಮಕಾರಿಯಾಗಿ ತಡೆಯಬಲ್ಲವು ಎಂಬುದನ್ನು ಪರೀಕ್ಷಿಸಿದರು.
ಈ ಅಧ್ಯಯನದ ವೇಳೆ, ಗೋಳಾಕಾರದ ವ್ಯಾನಡಿಯಂ ಪೆಂಟಾಕ್ಸೈಡ್ (V2O5) ನ್ಯಾನೊಜೈಮ್ ಗಳು ಅತ್ಯಂತ ಹೆಚ್ಚು ದಕ್ಷತೆ ಹೊಂದಿವೆ ಎಂಬುದು ತಜ್ಞರಿಗೆ ದೃಢಪಟ್ಟಿತು. ಈ ಭೌತಿಕ ಸಾಮಗ್ರಿಗಳು ಉತ್ಕರ್ಷಕ ಒತ್ತಡ ತಗ್ಗಿಸುವಲ್ಲಿ ಗ್ಲುಟಾಥೆಯಾನ್ ಪೆರಾಕ್ಸಿಡೇಸ್ ಎಂಬ ಸ್ವಾಭಾವಿಕ ಆಂಟಿ ಆಕ್ಸಿಡೆಂಡ್ ಕಿಣ್ವವನ್ನು ಪ್ರತ್ಯನುಕರಿಸುತ್ತವೆ. “ವ್ಯಾನಾಡಿಯಂ ಆಕ್ಸೈಡ್ ನ +5 ಉತ್ಕರ್ಷಕ ಸ್ಥಿತಿ ಮಾತ್ರವೇ ಇರುವ ನ್ಯಾನೊಜೈಮ್ ನ ಪರಿಶುದ್ಧ ಸ್ವರೂಪವನ್ನು ಪಡೆಯುವುದು ಸವಾಲಾಗಿತ್ತು. ಆದರೆ, +4 ಉತ್ಕರ್ಷಕ ಸ್ಥಿತಿಯು ಜೀವಕೋಶಗಳಿಗೆ ನಂಜುಕಾರಕವಾದ್ದರಿಂದ ಇದನ್ನು ಪಡೆಯುವುದು ಮುಖ್ಯವಾಗಿತ್ತು” ಎಂದು ಪಿಎಚ್.ಡಿ. ಸಂಶೋಧನಾರ್ಥಿ ಹಾಗೂ ಅಧ್ಯಯನ ವರದಿಯ ಪ್ರಮುಖ ಲೇಖಕರಲ್ಲಿ ಒಬ್ಬರಾದ ಶೆರಿಷ್ ಜಿ.ಆರ್. ವಿವರಿಸುತ್ತಾರೆ.
ಆರ್.ಒ.ಎಸ್. ಮಟ್ಟಗಳನ್ನು ತಗ್ಗಿಸುವ ರೆಡಾಕ್ಸ್ ರಾಸಾಯನಿಕ ವರ್ತನೆಗಳು ವ್ಯಾನಡಿಯಂ ನ್ಯಾನೊ ಭೌತಸಾಮಗ್ರಿಯ ಮೇಲ್ಮೈನಲ್ಲಿ ನಡೆಯುವುದರಿಂದ ವ್ಯಾನಡಿಯಂ ಲೋಹದ ವಿಶಿಷ್ಟ ರಾಸಾಯನಿಕತೆಯು ನಿರ್ಣಾಯಕವಾಗಿರುತ್ತದೆ” ಎನ್ನುತ್ತಾರೆ ಮುಗೇಶ್.
ಅಧ್ಯಯನಕಾರರು, ಈ ನ್ಯಾನೊಜೈಮ್ ಅನ್ನು ಪಿಟಿಇ ಇರುವ ಇಲಿಗಳ ದೇಹಕ್ಕೆ ಸೇರ್ಪಡೆಗೊಳಿಸಿದರು. ಇದು, ಥ್ರೊಂಬೊಸಿಸ್ ಅನ್ನು ಗಣನೀಯವಾಗಿ ತಗ್ಗಿಸಿ ಅವುಗಳ ಜೀವ ಉಳಿಯುವ ಸಾಧ್ಯತೆಗಳನ್ನು ಹೆಚ್ಚಿಸುವುದು ಕಂಡುಬಂದಿತು. ಇಂತಹ ಇಲಿಗಳ ದೇಹ ತೂಕ, ವರ್ತನೆ, ರಕ್ತದ ಮಾನದಂಡಗಳ ಮೇಲೆ ನ್ಯಾನೊಜೈಮ್ ಸೇರ್ಪಡೆಗೊಳಿಸಿದ ನಂತರದ ಐದು ದಿನಗಳವರೆಗೆ ನಿಗಾ ಇರಿಸಿದಾಗ, ಅದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂಬುದು ಕೂಡ ಖಚಿತಪಟ್ಟಿತು.
ಥ್ರೊಂಬೊಸಿಸ್ ಚಿಕಿತ್ಸೆಗೆ ಬಳಸಲಾಗುವ ಆಂಟಿ-ಪ್ಲೇಟ್ ಲೆಟ್ ಔಷಧಗಳು ಕೆಲವೊಮ್ಮೆ ರಕ್ತಸ್ರಾವ ಹೆಚ್ಚಿಸುವಂತಹ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತವೆ. “ಆದರೆ, ಈ ನ್ಯಾನೊಜೈಮ್ ಗಳು, ಶಾರೀರಿಕ ಹೀಮೊಸ್ಟ್ಯಾಸಿಸ್ ಗೆ ತೊಡಕಾಗುವ ಸಾಂಪ್ರದಾಯಕ ಆಂಟಿ-ಪ್ಲೇಟ್ ಲೆಟ್ ಔಷಧಗಳಂತಲ್ಲ. ಬದಲಿಗೆ, ರೆಡಾಕ್ಸ್ ಸಿಗ್ನಲಿಂಗ್ ಅನ್ನು ಹೊಂದಾಣಿಕೆಗೊಳಿಸುತ್ತವೆ. ಸ್ವಾಭಾವಿಕ ರಕ್ತದ ಹೆಪ್ಪುಗಟ್ಟುವಿಕೆಗೆ ಅಡಚಣೆ ಉಂಟುಮಾಡುವುದಿಲ್ಲ. ಅಂದರೆ, ಪ್ರಸ್ತುತ ಥೆರಪಿಗಳ ಪ್ರಮುಖ ಸಮಸ್ಯೆಯಾದ ರಕ್ತಸ್ರಾವದ ಜಟಿಲತೆಗಳಿಗೆ ಎಡೆಮಾಡಿಕೊಡುವುದಿಲ್ಲ” ಎನ್ನುತ್ತಾರೆ ಪಿಎಚ್.ಡಿ. ಸಂಶೋಧನಾರ್ಥಿ ಹಾಗೂ ಮತ್ತೊಬ್ಬ ಪ್ರಮುಖ ಲೇಖಕರಾದ ಬಿದರೆ ಎನ್ ಶಾಂತಬಾಬು.
ರಕ್ತನಾಳದೊಳಗಿನ ಅಡಚಣೆಯಿಂದ ಉಂಟಾಗುವ ಮತ್ತೊಂದು ಸಮಸ್ಯೆಯಾದ ಇಶ್ಚೆಮಿಕ್ ಸ್ಟ್ರೋಕ್ ಅನ್ನು ತಡೆಗಟ್ಟುವುದರಲ್ಲಿ ನ್ಯಾನೊಜೈಮ್ ಗಳ ಪರಿಣಾಮಕಾರಿತ್ವವನ್ನು ದೃಢಪಡಿಸಿಕೊಳ್ಳಲು ತಂಡವು ಇದೀಗ ಯೋಜಿಸಿದೆ. “ನಾವು ಮನುಷ್ಯರ ಪ್ಲೇಟ್ ಲೇಟ್ ಗಳನ್ನು ಬಳಸಿ ಪ್ರಯೋಗಗಳನ್ನು ಮಾಡಿರುವುದರಿಂದ ಹಾಗೂ ಅವು ಪರಿಣಾಮಕಾರಿಯಾಗಿವೆ ಎಂದು ದೃಢಪಟ್ಟಿರುವುದರಿಂದ ಮನುಷ್ಯರ ಮೇಲೆ ನಡೆಸಲಾಗುವ ಚಿಕಿತ್ಸಾ ಪ್ರಯೋಗಗಳಲ್ಲಿ ಇದು ಯಶಸ್ವಿಯಾಗಲಿದೆ” ಎಂದು ಮುಗೇಶ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಉಲ್ಲೇಖ:
ಶೆರಿನ್ ಜಿಆರ್, ಶರತ್ ಬಾಬು ಬಿ.ಎನ್. ಮಣಿಕಂಠ ಕೆ, ಗಿರೀಶ್ ಕೆಎಸ್, ಮುಗೇಶ್ ಜಿ, Vanadia nanozymes inhibit platelet aggregation, modulate signaling pathways and prevent pulmonary embolism in mice, Angewandte Chemie (2025).
https://onlinelibrary.wiley.com/doi/10.1002/anie.202503737
ಸಂಪರ್ಕ:
ಜಿ.ಮುಗೇಶ್
ಪ್ರಾಧ್ಯಾಪಕರು
ನಿರಯವ ಮತ್ತು ಭೌತ ರಸಾಯನಶಾಸ್ತ್ರ (ಐಪಿಸಿ) ವಿಭಾಗ ಇಮೇಲ್: mugesh@iisc.ac.in
ಫೋನ್: +91-80-2293 3354
ವೆಬ್ ಸೈಟ್: : https://www.mugesh-iisc.in/
ಪರ್ತಕರ್ತರ ಗಮನಕ್ಕೆ:
ಅ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ.
ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ news@iisc.ac.in ಅಥವಾ pro@iisc.ac.in ಗೆ ಬರೆಯಿರಿ.