ಶಕ್ತಿಮಟ್ಟ ಕಡಿಮೆಯಿರುವಾಗ ಆಪತ್ತಿಗೆ ಒಡ್ಡಿಕೊಂಡು ಆಹಾರ ಮೂಲ ಆಯ್ಕೆಗೆ ಮುಂದಾಗುವ ಸರೀಸೃಪಗಳು


27 ಫೆಬ್ರುವರಿ 2025

ಪ್ರಾಣಿಗಳು ತಮ್ಮ ಆಹಾರ ಅರಸುತ್ತಿರುವ ಸನ್ನಿವೇಶದಲ್ಲಿ, ಅದರಲ್ಲೂ ತೀವ್ರ ಹಸಿವು ಎದುರಿಸುತ್ತಿರುವಾಗ ಮಹತ್ವದ ನಿರ್ಧಾರಗಳನ್ನು ಮಾಡಬೇಕಾಗುತ್ತದೆ. ನಿಶ್ವಿತ ಆಹಾರ ಮೂಲಗಳು (ಕಡಿಮೆ ಆಪತ್ತಿನಿಂದ ಕೂಡಿದ) ಹಾಗೂ ಅನಿಶ್ಚಿತ ಆಹಾರ ಮೂಲಗಳ (ಹೆಚ್ಚು ಆಪತ್ತಿನ ಸಾಧ್ಯತೆಯಿರುವ) ನಡುವಿನ ಆಯ್ಕೆಯು ಇಂತಹ ನಿರ್ಧಾರಗಳಲ್ಲಿ ಒಂದಾಗಿರುತ್ತದೆ. ಅದರಲ್ಲೂ, ಅನಿಶ್ಚಿತ ಆಹಾರ ಮೂಲಗಳ ಆಯ್ಕೆಯು ಅಧಿಕ ಪ್ರತಿಫಲ ನೀಡುವ ಸಾಧ್ಯತೆಯಿರುವಾಗ ಇಂತಹ ನಿರ್ಧಾರವು ಮುಖ್ಯವಾಗುತ್ತದೆ. ಕೆಲವು ಸರೀಸೃಪಗಳು ಹಸಿವಿನಿಂದ ಬಳಲುತ್ತಿರುವ ಸಂದರ್ಭಗಳಲ್ಲಿ ಹೆಚ್ಚಿನ ಪ್ರಮಾಣದ ಆಹಾರ ಪ್ರತಿಫಲ ಸಾಧಿಸಲು ತಮ್ಮನ್ನು ಅಧಿಕ ಆಪತ್ತಿನ ಸಾಧ್ಯತೆಗೆ ಒಡ್ಡಿಕೊಳ್ಳುತ್ತವೆ ಎಂಬುದನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್.ಸಿ) ಜೀವವೈವಿಧ್ಯ ವಿಜ್ಞಾನಗಳ ಕೇಂದ್ರದ (ಸಿಇಎಸ್) ಪ್ರಾಧ್ಯಾಪಕರಾದ ಮರಿಯಾ ಠಾಕೆರ್ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಂಶೋಧನೆ ದೃಢಪಡಿಸಿದೆ.

ಪ್ರಾಣಿಗಳು ಆಹಾರ ಲಭ್ಯತೆ ಸಾಧ್ಯತೆ ಹಾಗೂ ಅದರ ಪ್ರಮಾಣದ ಅಂದಾಜಿಸುವಿಕೆಯನ್ನು ತುಲನೆ ಮಾಡಬಲ್ಲವು ಹಾಗೂ ತಮ್ಮ ಹಸಿವಿನ ಮಟ್ಟ ಯಾವ ಮಟ್ಟದಲ್ಲಿದೆ ಎಂಬುದನ್ನು ಆಧರಿಸಿ ನಿರ್ಧಾರ ತಳೆಯಬಲ್ಲವು ಎಂಬುದು ‘ರಿಸ್ಕ್-ಸೆನ್ಸಿಟೀವ್ ಫೋರೇಜಿಂಗ್ ಹೈಪಾಥಿಸಿಸ್” (ಸಂಕಷ್ಟ-ಸೂಕ್ಷ್ಮ ಅರಸುವಿಕೆಯ ಪರಿಕಲ್ಪನೆ)ನ ಸಾರವಾಗಿದೆ. ಈ ಸಿದ್ಧಾಂತದ ಪ್ರಕಾರ, ಪ್ರಾಣಿಗಳಿಗೆ ಖಾತರಿ ಆಹಾರಮೂಲ ಹಾಗೂ ಖಾತರಿರಹಿತ ಆಹಾರಮೂಲದ (ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುವ ಸಾಧ್ಯತೆಯಿರುವ) ನಡುವೆ ಆಯ್ಕೆ ಎದುರಾದ ಸಂದರ್ಭದಲ್ಲಿ, ತಮ್ಮಗಳ ಶಕ್ತಿಮಟ್ಟವು ಅಧಿಕವಿರುವಾಗ (ಅಂದರೆ ಹಸಿವು ಕಡಿಮೆ ಇರುವಾಗ) ಖಾತರಿ ಆಹಾರಮೂಲದ ಆಯ್ಕೆಗೆ ಒಲವು ತೋರುತ್ತವೆ ಹಾಗೂ ಶಕ್ತಿಮಟ್ಟವು ಕಡಿಮೆ ಇರುವಾಗ (ಅಂದರೆ ಹಸಿವು ಅಧಿಕವಿರುವಾಗ) ಖಾತರಿರಹಿತ ಆಹಾರಮೂಲದ ಆಯ್ಕೆಗೆ ಮುಂದಾಗುತ್ತವೆ. ಹಕ್ಕಿಗಳು ಹಾಗೂ ಸಸ್ತನಿಗಳಲ್ಲಿ ಇಂತಹ ವರ್ತನೆಯ ಬಗ್ಗೆ ವಿಜ್ಞಾನಿಗಳು ಈ ಮುನ್ನ ಅಧ್ಯಯನ ನಡೆಸಿದ್ದರಾದರೂ ಸರೀಸೃಪಗಳಿಗೆ ಸಂಬಂಧಿಸಿದಂತೆ ಈ ಅಧ್ಯಯನವನ್ನು ನಡೆಸಿರಲಿಲ್ಲ.

“ಸರೀಸೃಪಗಳು ತಮ್ಮ ಪಚನ ಕ್ರಿಯೆಯ ವೇಗವನ್ನು ಅಧಿಕ ಪ್ರಮಾಣದಲ್ಲಿ ತಗ್ಗಿಸಿಕೊಳ್ಳಬಲ್ಲವು. ಹೀಗಾಗಿ, ಅವು ಚಳಿಗಾಲದಲ್ಲಿ ಆಹಾರ ಕೊರತೆಯ ಪರಿಸ್ಥಿತಿಯಲ್ಲಿ ಉಪವಾಸದಿಂದ ಬಳಲುವುದರಿಂದ ಪಾರಾಗಲು ನಿದ್ರಾವಸ್ಥೆಗೆ (ಹೈಬರ್ ನೇಷನ್) ಮೊರೆ ಹೋಗುತ್ತವೆ” ಎನ್ನುತ್ತಾರೆ ಠಾಕೆರ್. ಆದರೆ, ವರ್ಷಪೂರ್ತಿ ಬೆಚ್ಚನೆಯ ವಾತಾವರಣದಲ್ಲಿರುವ ಉಷ್ಣವಲಯದಲ್ಲಿನ ಸರೀಸೃಪಗಳು ಕಠಿಣ ಸನ್ನಿವೇಶಗಳಿಂದ (ಆಹಾರ ಕೊರತೆ) ಪಾರಾಗಲು ತಮ್ಮ ಪಚನ ಕ್ರಿಯೆಯ ವೇಗವನ್ನು ತಗ್ಗಿಸಿಕೊಳ್ಳಲಾರವು. ಹೀಗಾಗಿ, ಉಪವಾಸ ಬೀಳಬಹುದಾದ ಸಾಧ್ಯತೆ ತಪ್ಪಿಸಿಕೊಳ್ಳಲು ಉಷ್ಣವಲಯದ ಹಲ್ಲಿ ಪ್ರಭೇದಗಳು ಆಹಾರ ಆಯ್ಕೆಗಳನ್ನು ಲಭ್ಯವಾಗಿಸಿಕೊಳ್ಳಬಲ್ಲ ಸಾಮರ್ಥ್ಯವನ್ನು ಬೆಳೆಸಿಕೊಂಡಿರಬಹುದು ಎಂಬುದು ಅವರ ವಿವರಣೆ.

ಪ್ರಸ್ತುತ ಅಧ್ಯಯನದಲ್ಲಿ, ಸಂಶೋಧಕರು ರಾಕ್ ಆಗಮಾಸ್ (ಪ್ಸಾಮ್ಮೊಫಿಲಸ್ ಡೊರ್ಸಾಲಿಸ್) ಎಂದು ಕರೆಯಲಾಗುವ ಉಷ್ಣವಲಯ ಹಲ್ಲಿಗಳ ಮೇಲೆ ತಮ್ಮ ಅಧ್ಯಯನವನ್ನು ಗಮನ
ಕೇಂದ್ರೀಕರಿಸಿದರು. ಈ ಬಂಡೆ ಹಲ್ಲಿಗಳು ನಗರ ವಾಸಿಗಳೂ ಆಗಿದ್ದು, ಬೆಂಗಳೂರಿನಂತಹ ನಗರ ಹಾಗೂ ಸುತ್ತಮುತ್ತ ಆಶ್ರಯ ಕಂಡುಕೊಂಡಿವೆ.

ತಂಡದವರು, ಈ ಹಲ್ಲಿಗಳಿಗೆ 48 ಗಂಟೆಗಳ ಅವಧಿಯವರೆಗೆ ಸಾಕಷ್ಟು ಆಹಾರ ಲಭ್ಯವಾಗಿಸಿ ಅಥವಾ ಉಪವಾಸ ಬೀಳುವಂತೆ ಮಾಡಿ ಅವುಗಳ ಶಕ್ತಿ ಮಟ್ಟಗಳನ್ನು ಮಾರ್ಪಾಡುಗೊಳಿಸಿದರು. ನಂತರ, ಎರಡೂ ಗುಂಪುಗಳ ಹಲ್ಲಿಗಳಿಗೆ, ಎರಡು ವಿಧದ ಆಹಾರ ಆಯ್ಕೆಗಳನ್ನು ಲಭ್ಯವಾಗಿಸಿದರು. ಇದರಲ್ಲಿ, ಒಂದನೇ ಆಯ್ಕೆಯು, ಎರಡು ಮೀಲ್ ವರ್ಮ್ ಗಳ (ರೆಕ್ಕೆಹುಳದ ಲಾರ್ವಾ ಹಂತ) ಲಭ್ಯತೆ ಖಾತರಿ ಇರುವಂತದ್ದು. ಎರಡನೇ ಆಯ್ಕೆಯು, ಯಾವುದೇ ಮೀಲ್ ವರ್ಮ್ ಇರದ ಅಥವಾ ನಾಲ್ಕು ಮೀಲ್ ವರ್ಮ್ ಗಳಿರುವ ಖಾತರಿರಹಿತವಾದುದು.

“ಸಾಕಷ್ಟು ಆಹಾರ ಲಭ್ಯವಾಗಿಸಲಾಗಿದ್ದ ಹಲ್ಲಿಗಳು ಸುರಕ್ಷತೆಗೆ ಒತ್ತು ಕೊಟ್ಟು, ಖಾತರಿಯಿರುವ ಎರಡು ಮೀಲ್ ವರ್ಮ್ ಗಳ ಆಯ್ಕೆಗೆ ಮುಂದಾದವು” ಎನ್ನುತ್ತಾರೆ ಸಿಇಎಸ್ ಪಿಎಚ್.ಡಿ. ವಿದ್ಯಾರ್ಥಿ ಹಾಗೂ ಅಧ್ಯಯನ ವರದಿಯ ಸಹಲೇಖಕ ಅವಿಕ್ ಬ್ಯಾನರ್ಜಿ. “ಮತ್ತೊಂದೆಡೆ, ಹಸಿವಿನಿಂದ ಬಳಲುತ್ತಿದ್ದ ಹಲ್ಲಿಗಳು ಅಧಿಕ ಆಪತ್ತಿನ ಸಾಧ್ಯತೆಗೆ ತಮ್ಮನ್ನು ಒಡ್ಡಿಕೊಂಡವು. ನಾಲ್ಕು ಮೀಲ್ ವರ್ಮ್ ಗಳಿರುವ ಸಾಧ್ಯತೆಯಿರುವ ಖಾತರಿರಹಿತ ಆಹಾರಮೂಲದ ಆಯ್ಕೆಗೆ ಮುಂದಾದವು. ಗಮನಾರ್ಹ ಅಂಶವೇನೆಂದರೆ, ಪ್ರಯೋಗ ಮುಗಿದಾಗ ಎರಡೂ ಗುಂಪುಗಳ ಹಲ್ಲಿಗಳಿಗೆ ಲಭ್ಯವಾದ ನಿವ್ವಳ ಹಲ್ಲಿಗಳ ಸಂಖ್ಯೆಯಲ್ಲಿ ಯಾವ ವ್ಯತ್ಯಾಸವೂ ಇರಲಿಲ್ಲ. ಇದು, ವಿಭಿನ್ನ ತಂತ್ರಗಳು ಫಲಪ್ರದವಾಗುತ್ತವೆ ಎಂಬುದನ್ನು ಇದು ಸೂಚಿಸುತ್ತದೆ” ಎಂಬುದು ಬ್ಯಾನರ್ಜಿ ಅವರ ವಿವರಣೆ.

ಉಷ್ಣವಲಯದ ಹಲ್ಲಿಗಳು ಆಹಾರ ಮೂಲ ಅನಿಶ್ಚಿತತೆ ಆಧರಿಸಿ ಯಾವ ರೀತಿಯಲ್ಲಿ ತಮ್ಮ ಆಹಾರ ಹುಡುಕಾಟದ ವರ್ತನೆಯನ್ನು ಮಾರ್ಪಡಿಸಿಕೊಳ್ಳುತ್ತವೆ ಎಂಬ ಬಗ್ಗೆ ಹೊಸದಾಗಿ ಅರ್ಥೈಸಿಕೊಳ್ಳಲು ಈ ಅಧ್ಯಯನದಿಂದ ಸಾಧ್ಯವಾಗಿದೆ., ವರ್ಷಪೂರ್ತಿ ಬೆಚ್ಚನೆಯ ವಾತಾವರಣವಿದ್ದು ಶಕ್ತಿಯ ಬೇಡಿಕೆ ಅಧಿಕವಿರುವ ಉಷ್ಣವಲಯದ ಸರೀಸೃಪಗಳಿಗೆ ಈ ಮುಕ್ತ (ಫ್ಲೆಕ್ಸಿಬಲ್) ಧೋರಣೆಯು ಅನಿಶ್ಚಿತ ಪರಿಸ್ಥಿತಿಗಳಲ್ಲಿ ಬದುಕುಳಿಯುವಲ್ಲಿ ಮಹತ್ವದ ಅಂಶವಾಗಿರಬಹುದು.

“ನಮ್ಮ ಪರಿಸರವನ್ನು ತುಲನೆ ಮಾಡಬಲ್ಲ ಹಾಗೂ ಅಗತ್ಯವಿರುವಾಗ ಲೆಕ್ಕಾಚಾರದಿಂದ ಕೂಡಿದ ಸಂಕಷ್ಟಗಳಿಗೆ ಒಡ್ಡಿಕೊಳ್ಳಬಲ್ಲ ಅತ್ಯುತ್ತಮ ಸಾಮರ್ಥ್ಯ ಮನುಷ್ಯರಿಗೆ ಇದೆ ಎಂದು ನಾವು ಹೇಳುತ್ತೇವೆ. ಆದರೆ, ಹಲ್ಲಿಗಳು ಕೂಡ ಇದನ್ನು ಮಾಡಬಲ್ಲವು” ಎನ್ನುತ್ತಾರೆ ಠಾಕೆರ್. “ ಬಂಡೆಹಲ್ಲಿಗಳು (ರಾಕ್ ಆಗಮಾಗಳು) ವಿವಿಧ ಆಯ್ಕೆಗಳನ್ನು ನೆನಪಿಟ್ಟುಕೊಳ್ಳಬಲ್ಲವು ಹಾಗೂ ತಮ್ಮ ಉಳಿಯುವಿಕೆಯನ್ನು ಸುರಕ್ಷಿತಗೊಳಿಸಿಕೊಳ್ಳಲು ಸೂಕ್ತ ಆಯ್ಕೆ ಮಾಡಿಕೊಳ್ಳಬಲ್ಲವು ಎಂಬುದು ತುಂಬಾ ಆಸಕ್ತಿದಾಯಕವಾಗಿದೆ. ನಾವು ಜಾಣ ಹಾಗೂ ಲೆಕ್ಕಾಚಾರಸ್ಥ ಪ್ರಾಣಿಗಳಿಂದ ಸುತ್ತುವರಿಯಲ್ಪಟ್ಟಿದ್ದೇವೆ” ಎನ್ನುವುದು ಠಾಕೆರ್ ಅವರ ಪ್ರತಿಪಾದನೆಯಾಗಿದೆ.

ಉಲ್ಲೇಖ:

ಬ್ಯಾನರ್ಜಿ ಎ, ಠಾಕೆರ್ ಎಂ, Risk-sensitive foraging in a tropical lizard, Biology Letters (2025) https://doi.org/10.1098/rsbl.2024.0628

ಸಂಪರ್ಕ:

ಮರಿಯಾ ಠಾಕೆರ್
ಪ್ರಾಧ್ಯಾಪಕರ, ಜೀವವೈವಿಧ್ಯ ವಿಜ್ಞಾನಗಳ ಕೇಂದ್ರ (ಸಿಇಎಸ್)
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ)
ಇಮೇಲ್: mthaker@iisc.ac.in ಫೋನ್: +91-(0)80-2360-1455 ವೆಬ್ ಸೈಟ್: https://mariathaker.weebly.com/

ಪರ್ತಕರ್ತರ ಗಮನಕ್ಕೆ:

ಅ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ
ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ.

ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ ದಯವಿಟ್ಟು news@iisc.ac.in
ಅಥವಾ pro@iisc.ac.in ಗೆ ಬರೆಯಿರಿ.