ಮಂಗಳನ ಮಣ್ಣಿನಲ್ಲಿನ ವಿಷಯುಕ್ತ ರಾಸಾಯನಿಕದೊಂದಿಗೆ ಇಟ್ಟಿಗೆ ರೂಪಿಸುವ ಬ್ಯಾಕ್ಟೀರಿಯಾ ವರ್ತಿಸುವ ವೈಖರಿ


30 ಜನವರಿ 2026

-ರೋಹಿಣಿ ಸುಬ್ರಹ್ಮಣ್ಯಂ

ಭೂಮಿಯಲ್ಲಿ ಬದುಕುಳಿದು ಸಂತತಿ ವೃದ್ಧಿಸಿಕೊಳ್ಳಬಲ್ಲ ಬ್ಯಾಕ್ಟೀರಿಯಾವು ಮಂಗಳನ ನೆಲದಲ್ಲಿ ಬದುಕುಳಿಯದೇ ಇರಬಹುದು. ಮಂಗಳನ ಮಣ್ಣಿನಲ್ಲಿ ಇದೆ ಎಂದು ಬಾಹ್ಯಾಕಾಶ ಯಾನಗಳ ವೇಳೆ ಪತ್ತೆಹಚ್ಚಲಾಗಿರುವ ಪರ್ಕ್ಲೊರೇಟ್ ಎಂಬ ಕ್ಲೋರಿನ್ ಯುಕ್ತ ರಾಸಾಯನಿಕವು ಈ ಬ್ಯಾಕ್ಟೀರಿಯಾ ಪಾಲಿಗೆ ಪ್ರಮುಖ ನಾಶಕಾರಕವಾಗಿ ಪರಿಣಮಿಸಬಹುದು.

ಮಂಗಳನ ಮಣ್ಣನ್ನು ಇಟ್ಟಿಗೆಯ ಆಕೃತಿಗಳನ್ನಾಗಿ ರೂಪಿಸಬಲ್ಲ ಬ್ಯಾಕ್ಟೀರಿಯಾವು ಈ ರಾಸಾಯನಿಕದ ಉಪಸ್ಥಿತಿಯಲ್ಲಿ ಯಾವ ಬಗೆಯಲ್ಲಿ ವರ್ತಿಸುತ್ತದೆ ಎಂಬುದನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್.ಸಿ) ವಿಜ್ಞಾನಿಗಳು ಇತ್ತೀಚೆಗೆ ದೃಢಪಡಿಸಿಕೊಂಡಿದ್ದಾರೆ. ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ಪರ್ಕ್ಲೊರೇಟ್ ವಿಳಂಬಗೊಳಿಸುತ್ತದೆಯಾದರೂ ಗಟ್ಟಿ ಇಟ್ಟಿಗೆಗಳು ರೂಪುಗೊಳ್ಳುವುದಕ್ಕೂ ಕಾರಣವಾಗುತ್ತದೆ ಎಂಬ ಆಶ್ಚರ್ಯಕರ ಅಂಶವನ್ನು ಅವರು ಕಂಡುಹಿಡಿದಿದ್ದಾರೆ.

”ಮಂಗಳನದ್ದು ಅನ್ಯಗ್ರಹ ಪರಿಸರ. ಭೂಮಿ ಮೂಲದ ಸೂಕ್ಷ್ಮಾಣುಜೀವಿಗಳ ಮೇಲೆ ಈ ಅನ್ಯಗ್ರಹ ಪರಿಸರ ಬೀರುವ ಪರಿಣಾಮವೇನು ಎಂಬುದು ನಾವು ಉತ್ತರ ಕಂಡುಕೊಳ್ಳಬೇಕಾದ ಬಹಳ ಪ್ರಮುಖ ವೈಜ್ಞಾನಿಕ ಪ್ರಶ್ನೆಯಾಗಿದೆ” ಎನ್ನುತ್ತಾರೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹ-ಪ್ರಾಧ್ಯಾಪಕ ಹಾಗೂ ‘ಪಿ.ಎಲ್.ಒ,ಎಸ್. ಒನ್’ ದಲ್ಲಿ (PLOS One) ಪ್ರಕಟವಾಗಿರುವ ಅಧ್ಯಯನ ವರದಿಯ ಸಹಲೇಖಕರಾದ ಅಲೋಕೆ ಕುಮಾರ್.

ಅನ್ಯಗ್ರಹ ವಸತಿ ನೆಲೆಗಳ ನಿರ್ಮಾಣದಲ್ಲಿ ಸಮರ್ಥವಾಗಿ ಬಳಸಬಹುದಾದ ‘ಬಾಹ್ಯಾಕಾಶ ಇಟ್ಟಿಗೆ’ಗಳನ್ನು ಚಂದ್ರನ ಅಥವಾ ಮಂಗಳನ ಮಣ್ಣಿನಿಂದ ತಯಾರಿಸಲು ಸ್ಪೋರೋಸಾರ್ಸಿನಾ ಪ್ಯಾಸ್ಚುರೈ ಎಂಬ ಮಣ್ಣಿನ ಬ್ಯಾಕ್ಟೀರಿಯಾವನ್ನು ಸಂಶೋಧಕರು ಈ ಹಿಂದಿನ ಅಧ್ಯಯನದಲ್ಲಿ ಬಳಸಿದ್ದರು. ಕೃತಕವಾಗಿ ತಯಾರಿಸಲಾದ ಮಂಗಳನ ಅಥವಾ ಚಂದ್ರನ ಮಣ್ಣಿಗೆ ಯೂರಿಯಾ ಹಾಗೂ ಸುಣ್ಣದ ಮಿಶ್ರಣವನ್ನು ಸೇರ್ಪಡೆಗೊಳಿಸಿದಾಗ ಈ ಬ್ಯಾಕ್ಟೀರಿಯಾವು ಕ್ಯಾಲ್ಸಿಯಂ ಕಾರ್ಬೊನೇಟ್ ಹರಳುಗಳನ್ನು ಉತ್ಪತ್ತಿಗೊಳಿಸುತ್ತದೆ. ಈ ಹರಳುಗಳು ‘ಬಯೋಸಿಮೆಂಟೇಷನ್’ ಎಂಬ ಪ್ರಕ್ರಿಯೆಯಲ್ಲಿ ಮಣ್ಣಿನ ಕಣಗಳನ್ನು ಪರಸ್ಪರ ಬಂಧಿಸಿ ಇಟ್ಟಿಗೆಯಾಗಿ ರೂಪಿಸಲು ಸಹಕಾರಿಯಾಗುತ್ತವೆ. ಈ ಪ್ರಕ್ರಿಯೆಗೆ ಗೋರಿಕಾಯಿಯಿಂದ ಹೊರತೆಯಲಾದ ಹೊರತೆಗೆಯಲಾದ ಪುಡಿರೂಪದ ಪಾಲಿಮರ್ ಆಗಿರುವ ನೈಸರ್ಗಿಕ ಅಂಟು (ಗ್ವಾರ್ ಗಾಮ್) ಕೂಡ ಅಗತ್ಯವಿರುತ್ತದೆ.

ಪ್ರಸ್ತುತ ಅಧ್ಯಯನದಲ್ಲಿ, ಬೆಂಗಳೂರಿನ ಮಣ್ಣಿನಲ್ಲಿ ಕಂಡುಬಂದ ಬ್ಯಾಕ್ಟೀರಿಯಾದ ಸ್ಥಳೀಯ ಮೂಲದ ಹೆಚ್ಚು ಸದೃಢವಾದ ರೂಪಾಂತರಿಯನ್ನು ಲೇಖಕರು ಬಳಸಿದ್ದರು.

ಮೊದಲಿಗೆ, ಅವಕ್ಷೇಪ ರೂಪಿಸಬಲ್ಲ ಅದರ ಕ್ಷಮತೆಯನ್ನು ದೃಢಪಡಿಸಿಕೊಂಡ ನಂತರ, ಪರ್ಕ್ಲೊರೇಟ್ ಉಪಸ್ಥಿತಿಯಲ್ಲಿ ಈ ರೂಪಾಂತರಿ ತಳಿಯು ಬದುಕುಳಿಯಬಲ್ಲದೆ ಎಂಬುದನ್ನು ಅರಿಯುವ ಕುತೂಹಲವನ್ನು ತಜ್ಞರು ಹೊಂದಿದ್ದರು. ಪರ್ಕ್ಲೊರೇಟ್ ಅಂಶವು ಮಂಗಳನ ಮಣ್ಣಿನಲ್ಲಿ ಶೇಕಡಾ 1ರಷ್ಟು ಪ್ರಮಾಣದವರೆಗೆ ಇದೆ. ಪರ್ಕ್ಲೊರೇಟ್ ಉಪಸ್ಥಿತಿಯಲ್ಲಿ ಬ್ಯಾಕ್ಟೀರಿಯಾ ಕೋಶಗಳು ಒತ್ತಡಕ್ಕೆ ಒಳಗಾಗುತ್ತವೆ ಎಂಬ ಸಂಗತಿಯನ್ನು ಕೋಲ್ಕತ್ತಾದ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ (ಐ.ಐ.ಎಸ್.ಇ.ಆರ್) ಪ್ರಾಧ್ಯಾಪಕರಾದ ಪುಣ್ಯಸ್ಲೋಕೆ ಭಾದುರಿ ಅವರ ಸಹಭಾಗಿತ್ವದಲ್ಲಿ ತಂಡದ ಸಂಶೋಧಕರು ಖಚಿತಪಡಿಸಿಕೊಂಡರು. ಅಂದರೆ, ಇಂತಹ ಸನ್ನಿವೇಶದಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ನಿಧಾನಗೊಳ್ಳುತ್ತದೆ, ಅವು ಹೆಚ್ಚು ವೃತ್ತಾಕಾರ ಪಡೆದುಕೊಳ್ಳುತ್ತವೆ ಹಾಗೂ ಬಹುಕೋಶ ಮಾದರಿಯ ರಚನೆಗಳಂತೆ ಗಂಟುಗಳ ರೂಪದಲ್ಲಿ ಒಟ್ಟಾಗಲು ಮೊದಲಾಗುತ್ತವೆ. ಹೀಗೆ ಒತ್ತಡಕ್ಕೊಳಗಾದ ಬ್ಯಾಕ್ಟೀರಿಯಾ ಕೋಶಗಳು ಕೋಶಬಾಹ್ಯ ದ್ರವ್ಯದ (ಇಸಿಎಂ) ರೂಪದಲ್ಲಿ ಪರಿಸರಕ್ಕೆ ಹೆಚ್ಚು ಪ್ರೋಟೀನುಗಳು ಮತ್ತು ಸಂಯುಕ್ತ ಕಣಗಳನ್ನು ಬಿಡುಗಡೆಗೊಳಿಸುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಕ್ಲೋರೈಡ್ ನಂತಹ ಪ್ರಕ್ಷೇಪಗಳು ರೂಪುಗೊಳ್ಳುತ್ತವೆ ಹಾಗೂ ಬ್ಯಾಕ್ಟೀರಿಯಾ ಕೋಶಗಳು ಹಾಗೂ ಅವಕ್ಷೇಪಗಳ ನಡುವೆ ಕೋಶಬಾಹ್ಯ ದ್ರವ್ಯವು (ಇಸಿಎಂ) ‘ಮೈಕ್ರೋಬ್ರಿಜ್ ‘ಗಳನ್ನು ರೂಪಿಸುತ್ತವೆ ಎಂಬುದನ್ನು ತಜ್ಞರು ಎಲೆಕ್ಟ್ರಾನ್ ಮೈಕ್ರೋಸ್ಕೋಪಿ ಬಳಸಿ ಖಚಿತಪಡಿಸಿಕೊಂಡರು.

ಪರ್ಕ್ಲೋರೇಟ್ ದಹನಶೀಲವಾದ್ದರಿಂದ ಮಂಗಳನ ಕೃತಕ ಮಣ್ಣಿನಲ್ಲಿ ಸಾಮಾನ್ಯವಾಗಿ ಆ ಅಂಶ ಇರುವುದಿಲ್ಲ. ಆದರೆ, ಪ್ರಸ್ತುತ ಅಧ್ಯಯನದಲ್ಲಿ, ಬಯೋಸಿಮೆಂಟೇಷನ್ ಮೇಲೆ ಅದರ ಪರಿಣಾಮಗಳನ್ನು ಪರೀಕ್ಷಿಸುವ ಸಲುವಾಗಿ ಸಂಶೋಧಕರು ಪ್ರಯೋಗಾಲಯದಲ್ಲಿ ಸಾಯಿಲ್ ಸಿಮ್ಯುಲೆಂಟ್ ಗೆ(ಕೃತಕ ಮಣ್ಣಿಗೆ) ರಾಸಾಯನಿಕವನ್ನು ಜಾಗರೂಕತೆಯಿಂದ ಸೇರ್ಪಡೆಗೊಳಿಸಿದರು. ಹೀಗೆ ಮಾಡುವ ಮೂಲಕ, ಬ್ಯಾಕ್ಟೀರಿಯಾ ಬದುಕುಳಿಯಲು ಅತ್ಯಗತ್ಯವಾದ ಗೋರಿಕಾಯಿಯ ಅಂಟು (ಗ್ವಾರ್ ಗಮ್) ಹಾಗೂ ವೇಗವರ್ಧಕವಾದ ನಿಕಲ್ ಕ್ಲೋರೈಡ್ ಇದ್ದಾಗ ಮಾತ್ರ ಪರ್ಕ್ಲೊರೇಟ್ ಉಪಸ್ಥಿತಿಯು ಮಣ್ಣಿನ ಕಣಗಳ ಪರಸ್ಪರ ಬಂಧವನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ ಎಂಬುದನ್ನು ಕಂಡು ಅವರಿಗೆ ಅಚ್ಚರಿಯಾಯಿತು.

“ಕೇವಲ ಬ್ಯಾಕ್ಟೀರಿಯಾದ ಮೇಲೆ ಪರ್ಕ್ಲೊರೇಟ್ ಪರಿಣಾಮವೇನೆಂಬುದನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಿದಾಗ ಅದು ಒತ್ತಡದಾಯಕ ಅಂಶವೆಂಬುದಾಗಿ ಕಂಡುಬಂದಿತ್ತು. ಆದರೆ ಮಿಶ್ರಣದಲ್ಲಿ ಸೂಕ್ತ ಪ್ರಮಾಣದ ಘಟಕಾಂಶಗಳ

ಉಪಸ್ಥಿತಿಯಲ್ಲಿ ಇಟ್ಟಿಗೆಗಳಲ್ಲಿ ಪರ್ಕ್ಲೊರೇಟ್ ಸಹಕಾರಿ” ಎಂದು ಪ್ಲಾರಿಡಾ ವಿ.ವಿ.ಯಲ್ಲಿ ಪಿಎಚ್.ಡಿ. ಸಂಶೋಧನಾರ್ಥಿಯಾಗಿರುವ ಅಧ್ಯಯನದ ಪ್ರಥಮ ಲೇಖರಾದ ಸ್ವಾತಿ ದೂಬೆ ವಿವರಿಸುತ್ತಾರೆ.

ಒತ್ತಡಕ್ಕೊಳಗಾದ ಜೀವಕೋಶಗಳಿಗೆ ಇಸಿಎಂ ಮೈಕ್ರೊಬ್ರಿಜ್ ಗಳು ಪೌಷ್ಟಿಕಾಂಶಗಳನ್ನು ಪೂರೈಕೆ ಮಾಡುವ ಮೂಲಕ ಬ್ಯಾಕ್ಟೀರಿಯಾದ ಬಯೋಸಿಮೆಂಟೇಷನ್ ಕ್ಷಮತೆಯನ್ನು ಹೆಚ್ಚಿಸುವುದು ಇದಕ್ಕೆ ಕಾರಣವಿರಬಹುದು ಎಂದು ಪ್ರತಿಪಾದಿಸುತ್ತಾರೆ ದೂಬೆ. ಇದರ ಬಗ್ಗೆ ಮುಂದಿನ ಅಧ್ಯಯನಗಳಲ್ಲಿ ಶೋಧನೆ ನಡೆಸುವ ಗುರಿಯನ್ನೂ ತಂಡವು ಹೊಂದಿದೆ. ಮಂಗಳ ಗ್ರಹದಂತಹ ಇಂಗಾಲದ ಡೈಆಕ್ಸೈಡ್ ಅಧಿಕವಿರುವ ವಾತಾವರಣದಲ್ಲಿ ಬ್ಯಾಕ್ಟೀರಿಯಾದ ಬಯೋಸಿಮೆಂಟೇಷನ್ ಸಾಮರ್ಥ್ಯವನ್ನು ಪರೀಕ್ಷಿಸುವ ಉದ್ದೇಶವನ್ನೂ ಅವರು ಹೊಂದಿದ್ದು, ಅದನ್ನು ಪ್ರಯೋಗಾಲದಲ್ಲಿ ಪ್ರತ್ಯನುಕರಣೆ ಮಾಡುವ ಯೋಜನೆ ಹೊಂದಿದ್ದಾರೆ.

ಅಂತಿಮವಾಗಿ, ಈ ವಿಧಾನವನ್ನು ಪರ್ಯಾಯವಾದ ಹಾಗೂ ಸುಸ್ಥಿರವಾದ ನಿರ್ಮಾಣ ಮಾರ್ಗೋಪಾಯವಾಗಿ ಬಳಸಿಕೊಳ್ಳುವುದು ತಂಡದ ಗುರಿಯಾಗಿದೆ. ಆ ಮೂಲಕ, ಭೂಮಿ ಮತ್ತು ಮಂಗಳ ಈ ಎರಡು ಗ್ರಹಗಳ ಮೇಲೂ ಹೆಚ್ಚು ಇಂಗಾಲವನ್ನು ಬೇಡುವ ಸಿಮೆಂಟ್ ಆಧಾರಿತ ನಿರ್ಮಾಣ ವಿಧಾನಗಳ ಅವಲಂಬನೆಯನ್ನು ತಗ್ಗಿಸುವ ಉದ್ದೇಶ ಹೊಂದಲಾಗಿದೆ. ಇಂತಹ ತಾಂತ್ರಿಕತೆಗಳು ಸುಧಾರಿತ ರಸ್ತೆಗಳು, ಲಾಂಚ್ ಪ್ಯಾಡ್ ಗಳು ಹಾಗೂ ರೋವರ್ ಲ್ಯಾಂಡಿಂಗ್ ತಾಣಗಳನ್ನು ನಿರ್ಮಿಸಲು ಸಹಕಾರಿಯಾಗುವ ಮೂಲಕ ಭವಿಷ್ಯದ ಮಂಗಳ ಲ್ಯಾಂಡಿಂಗ್ ಯಾನಗಳನ್ನು ಸುಲಭಗೊಳಿಸುವ ಸಾಧ್ಯತೆ ಇದೆ ಎನ್ನುತ್ತಾರೆ ಐ.ಐ.ಎಸ್.ಸಿ.ಯಲ್ಲಿ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಇಸ್ರೊ ಬಾಹ್ಯಾಕಾಶ ಯಾನಿ ಹಾಗೂ ಸಹ-ಲೇಖಕರಾದ ಶುಭಾಂಶು ಶುಕ್ಲಾ. ಉದಾಹರಣೆಗೆ, ಚಂದ್ರನ ಮೇಲ್ಮೈನಲ್ಲಿರುವ ಅಸಮತೆಯಿಂದ ಕೂಡಿದ ಭೂಪ್ರದೇಶವು ಕೆಲವು ಲ್ಯಾಂಡಿಂಗ್ ಗಳು ವಿಫಲಗೊಳ್ಳಲು ಕಾರಣವಾಗಿದೆ ಎನ್ನುತ್ತಾರೆ ಅವರು.

“ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲವನ್ನು ಎಷ್ಟು ಸಾಧ್ಯವೋ ಅಷ್ಟು ಬಳಸಿಕೊಳ್ಳಬೇಕು. ನಾವು ಭೂಮಿಯಿಂದ ಏನನ್ನೂ ಕೊಂಡೊಯ್ಯಬೇಕಾದ ಪರಿಸ್ಥಿತಿ ಇರಬಾರದು; ಅನ್ಯಗ್ರಹದ ಸಂಪನ್ಮೂಲಗಳನ್ನೇ ಬಳಸಿ ನಿರ್ಮಾಣ ಮಾಡುವುದು ಸಾಧ್ಯವಾಗುವುದಾದರೆ ಅದು ಯಾನವನ್ನು ಬಹಳಷ್ಟು ಸುಲಭಗೊಳಿಸುತ್ತದೆ ಹಾಗೂ ಸುಧೀರ್ಘ ಅವಧಿಯವರೆಗೆ ಸುಸ್ಥಿರ ಯಾನಗಳು ಸಾಧ್ಯವಾಗುತ್ತವೆ” ಎಂಬುದು ಇದರ ಹಿಂದಿರುವ ದೃಷ್ಟಿಕೋನವಾಗಿದೆ ಎನ್ನುತ್ತಾರೆ ಶುಕ್ಲಾ.

ಉಲ್ಲೇಖ:

ದೂಬೆ ಎಸ್, ಶುಲ್ಕಾ ಎಸ್, ಗುಪ್ತಾ ಎನ್, ದೀಕ್ಷಿತ್ ಆರ್, ಭಾದುರಿ ಪಿ, ಕುಮಾರ್ ಎ, Effect of perchlorate on biocementation capable bacteria and Martian bricks, PLOS One (2026). https://journals.plos.org/plosone/article?id=10.1371/journal.pone.0340252

ಸಂಪರ್ಕ:

ಅಲೋಕೆ ಕುಮಾರ್
ಸಹ-ಪ್ರಾಧ್ಯಾಪಕರು
ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ) ಇಮೇಲ್: alokekumar@iisc.ac.in ಫೋನ್: +91 80 2293 2958

ವೆಬ್ ಸೈಟ್: https://kumarlab.com/

ಪರ್ತಕರ್ತರ ಗಮನಕ್ಕೆ:

ಅ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ. ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ news@iisc.ac.in ಅಥವಾ

ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ news@iisc.ac.in ಅಥವಾ pro@iisc.ac.in ಗೆ ಬರೆಯಿರಿ.