ಭಾರತದಲ್ಲಿ ಮುಂಗಾರಿನ ವೇಳೆ ಮಳೆಸಹಿತ ದಿನಗಳನ್ನು ಪ್ರಭಾವಿಸುವ ಮೋಡರಾಶಿಯ ಚಲನೆ


24 ಮಾರ್ಚ್ 2025

ಸಂದೀಪ್ ಮೆನನ್

ಬಹಳ ಹಿಂದಿನಿಂದಲೂ ನಮ್ಮ ಭಾರತದಲ್ಲಿ ಮುಂಗಾರುಮಳೆಯು ಜೀವದ್ರವವಾಗಿದ್ದು, ಕುಡಿಯಲು ಮತ್ತು ನೀರಾವರಿಗೆ ಬೇಕಾಗುವ ಸಿಂಹಪಾಲಿನ ನೀರನ್ನು ಲಭ್ಯವಾಗಿಸುತ್ತಿದೆ. ವಾರ್ಷಿಕವಾಗಿ ಸುರಿದು ಬಿರುಬೇಸಿಗೆಯ ದಾಹವನ್ನು ಇಂಗಿಸುವ ಈ ಮಳೆ ಸುರಿಯಲು ಸಮಭಾಜಕ ವೃತ್ತದೆಡೆಯಿಂದ ಉತ್ತರಕ್ಕೆ ಚಲಿಸುವ ಮೋಡ ಸಮೂಹಗಳೇ ಕಾರಣವಾಗಿರುತ್ತವೆ.

ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್ ಸಿ) ಇತ್ತೀಚಿನ ಅಧ್ಯಯನವು ಈ ಕುರಿತು ಈವರೆಗೂ ಅರ್ಥೈಸಿಕೊಂಡಿದ್ದಕ್ಕೆ ವ್ಯತಿರಿಕ್ತವಾದ ಅಂಶಗಳನ್ನು ದೃಢಪಡಿಸಿದೆ. ಅಂದರೆ, ಮೋಡರಾಶಿಯ ಶಕ್ತಿಯು ಅದರ ಚಲನೆಯಲ್ಲಿ ಹಾಗೂ ಮುಂಗಾರಿನ ಮಳೆಸಹಿತ ದಿನಗಳ (ವೆಟ್ ಸ್ಪೆಲ್) ವೇಳೆ ಭಾರತ ಉಪಖಂಡದ ಮೇಲೆ ಸುರಿಯಲಿರುವ ಮಳೆಯ ಸಾಂದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಇದೀಗ ಸಾಬೀತಾಗಿದೆ.

ಭಾರತದಲ್ಲಿ ಶೇಕಡಾ 80ರಷ್ಟು ವಾರ್ಷಿಕ ಮಳೆಯು ಬೇಸಿಗೆಯ ಮುಂಗಾರಿನ ತಿಂಗಳುಗಳಲ್ಲಿ, ಅಂದರೆ, ಜೂನ್ ನಿಂದ ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಸುರಿಯುತ್ತದೆ. ಈ ಅವಧಿಯಲ್ಲಿ ಬಲವಾದ ಗಾಳಿಯೊಂದಿಗೆ ಹಲವಾರು ಸಲ ದೀರ್ಘಾವಧಿ ಮಳೆ ಸುರಿಯುವ ಹಾಗೂ ಒಣಹವೆಯ (ಡ್ರೈ ಸ್ಪೆಲ್) ದಿನಗಳು ಉಂಟಾಗುತ್ತದೆ. ಈ ಮಳೆಸಹಿತ ಹಾಗೂ ಮಳೆರಹಿತ ಅವಧಿಗಳು ಬೋರಿಯಲ್ ಸಮ್ಮರ್ ಇಂಟ್ರಾಸೀಸನಲ್ ಆಸಿಲೇಷನ್ (ಬಿಎಸ್ಐಎಸ್ಒ, ಮುಂಗಾರು ಇಂಟ್ರಾಸೀಸನಲ್ ಆಸಿಲೇಷನ್ಸ್ ಎಂದೂ ಕರೆಯಲಾಗುತ್ತದೆ)ದಿಂದ ನಿಯಂತ್ರಿತಗೊಳ್ಳುತ್ತವೆ. ಸಮಭಾಜಕ ವೃತ್ತದೆಡೆಯಿಂದ ಭಾರತ ಉಪಖಂಡ ಪ್ರದೇಶದ ಮೇಲೆ ಮೋಡರಾಶಿಗಳನ್ನು ಹೊತ್ತುತರುವುದರೊಂದಿಗೆ ಒಣಹವೆಯ ದಿನಗಳನ್ನು ಕೊನೆಗೊಳಿಸುವ ಪ್ರಕ್ರಿಯೆಯೂ ಇವುಗಳಿಂದಲೇ ಉಂಟಾಗುತ್ತದೆ.. ಮಳೆಸಹಿತ ದಿನಗಳ ಅವಧಿಯು ಮೋಡರಾಶಿಯ ಗಾತ್ರ ಹಾಗೂ ಶಕ್ತಿಯಿಂದ (ಬಲ) ನಿರ್ಧಾರಿತವಾಗುತ್ತದೆ.

1979ರಿಂದ ಮೊದಲ್ಗೊಂಡು ಬಹಳಷ್ಟು ಪ್ರತಿಪಾದನೆಗಳು, ಮೋಡರಾಶಿಯು ಸಮಭಾಜಕ ವೃತ್ತದಲ್ಲಿನ ಕ್ಷೋಭೆಯ ಬಲದ ಮೇಲೆ ಅವಲಂಬಿತವಾಗಿರದೆ ಉತ್ತರ ದಿಕ್ಕಿನೆಡೆಗೆ ಸಾಗುತ್ತದೆ ಎಂದೇ ತರ್ಕ ಮಂಡಿಸಿದ್ದವು. “ಈಗ ಪ್ರಚಲಿತದಲ್ಲಿರುವ ಬಹುತೇಕ ಪಠ್ಯಗಳು, ಸಮಭಾಜಕ ವಲಯದಲ್ಲಿ ಯಾವುದೇ ಸಣ್ಣ ಅಸ್ಥಿರತೆಯನ್ನು ಉಂಟುಮಾಡಿದರೂ ಅದು ಉತ್ತರ ದಿಕ್ಕಿನೆಡೆಗೇ ಸಾಗಲಿದೆ ಎಂದೇ ಹೇಳುತ್ತವೆ” ಎನ್ನುತ್ತಾರೆ ವಾತಾವರಣ ಮತ್ತು ಸಾಗರ ವಿಜ್ಞಾನಗಳ ಕೇಂದ್ರದ (ಸಿಇಒಎಸ್) ಪಿಎಚ್.ಡಿ. ಸಂಶೋಧನಾರ್ಥಿ ಹಾಗೂ ‘ಎನ್.ಪಿ.ಐ. ಕ್ಲೈಮೇಟ್ ಅಂಡ್ ಅಟ್ ಮಾಸ್ಫರಿಕ್ ಸೈನ್ಸ್’ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯ ಮೊದಲ ಲೇಖಕರಾದ ಆದಿತ್ಯ ಕೊಟ್ಟಪಲ್ಲಿ. “ಆದರೆ ವಾಸ್ತವವು ಆ ರೀತಿಯಾಗಿ ಇರುವುದಿಲ್ಲ. ಸಮಭಾಜಕ ಪ್ರದೇಶದಲ್ಲಿನ ಮೋಡ

ರಾಶಿಯು ಆರಂಭದಲ್ಲಿ ದುರ್ಬಲವಾಗಿದ್ದ ಪಕ್ಷದಲ್ಲಿ ಅದು ಉತ್ತರ ದಿಕ್ಕಿನೆಡೆಗೆ ಸಾಗಲಾರದು” ಎಂಬುದನ್ನು ತಜ್ಞರು ಖಚಿತಪಡಿಸಿಕೊಂಡಿದ್ದಾರೆ.

ಐ.ಐ.ಎಸ್.ಸಿ. ತಂಡದವರು ಪ್ರಸ್ತುತ ಬಳಕೆಯಲ್ಲಿರುವ ಹವಾಮಾನ ಮಾದರಿಗಳ ಮುನ್ಸೂಚನೆಗಳಲ್ಲಿರುವ ಕೊರತೆಗಳನ್ನು ಅವಲೋಕಿಸಿ, ಅವುಗಳನ್ನು ಅತ್ಯಂತ ದಕ್ಷತೆಯಿಂದ ಕೂಡಿದ ಮಾದರಿಗಳೊಂದಿಗೆ ಸಂಯೋಜನೆಗೊಳಿಸಿದರು. ಆ ಮೂಲಕ, ಬಿಎಸ್ಐಎಸ್ಒ ಚಲನೆಯನ್ನು ಯಾವ ಅಂಶಗಳು ನಿರ್ದೇಶಿಸುತ್ತವೆ ಎಂಬುದನ್ನು ಪತ್ತೆಹಚ್ಚಿದರು. ಸಮಭಾಜಕ ಮೋಡರಾಶಿಯು ಬಲಯುತವಾಗಿದ್ದಾಗ ಮಾತ್ರ ಬಿಎಸ್ಐಎಸ್ಒ ಉತ್ತರ ದಿಕ್ಕಿನೆಡೆಗೆ ಸಶಕ್ತವಾಗಿ ಸಾಗಲಿದೆ ಎಂಬುದು ಅವರಿಗೆ ಕಂಡುಬಂದಿತು. ಈ ಸಶಕ್ತ ಮೋಡರಾಶಿಯು ಪ್ರಬಲ ಗಾಳಿಯ ನೆರವಿನಿಂದ ಉಪಖಂಡ ಪ್ರದೇಶದ ಮೇಲಿನ ವಾತಾವರಣದಲ್ಲಿ ತೇವಾಂಶವನ್ನು ಹೆಚ್ಚಳಗೊಳಿಸಿ ಉತ್ತರ ದಿಕ್ಕಿನೆಡೆಗೆ ಚಲನೆಯನ್ನು ಪ್ರಚೋದಿಸುತ್ತದೆ.

“ಸಿಎಒಎಸ್ ಸಂಶೋಧಕರ ತಂಡದವರು ಸಾಗರ ಹಾಗೂ ವಾತಾವರಣದ ನಡುವಿನ ಪ್ರತಿವರ್ತನೆಯ ಕುರಿತು ದತ್ತಾಂಶಗಳು ಮತ್ತು ಮಾಡೆಲ್ ಸಿಮ್ಯುಲೇಷನ್ ಬಳಸಿ ಹಲವು ವರ್ಷಗಳಿಂದ ಅಧ್ಯಯನ ನಿರತರಾಗಿದ್ದಾರೆ” ಎನ್ನುತ್ತಾರೆ ಸಿಎಒಎಸ್ ಮುಖ್ಯಸ್ಥರಾದ ಹಾಗೂ ಅಧ್ಯಯನ ವರದಿಯ ಸಹ-ಲೇಖಕರಾದ ಪ್ರೊಫೆಸರ್ ವಿನಯಚಂದ್ರನ್. “ಅರಬ್ಬೀ ಸಮುದ್ರದ ಸಮಭಾಜಕ ಪ್ರದೇಶದಲ್ಲಿ ವಾಯು ಹಾಗೂ ಸಾಗರದ ಪ್ರತಿವರ್ತನೆಯು ಭಾರತದಲ್ಲಿ ಮಳೆಸಹಿತ ದಿನಗಳ ಅವಧಿಯನ್ನು ನಿರ್ದೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ನಾವು ದೃಢಪಡಿಸಿಕೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ವಾತಾವರಣವು ಬಿಸಿಯಾಗಲಿರುವುದರಿಂದ ಭವಿಷ್ಯದಲ್ಲಿ ಇದರಲ್ಲಿ ಬದಲಾವಣೆ ಉಂಟಾಗಬಹುದು” ಎಂದೂ ಅವರು ಅಭಿಪ್ರಾಯಪಡುತ್ತಾರೆ.

ಭವಿಷ್ಯದಲ್ಲಿ, ಹವಾಮಾನದಲ್ಲಿನ ತೇವಾಂಶವು, ಅಂದರೆ, ಮಳೆ ಸುರಿಯುವ ಮುನ್ನ ಅದಾಗಲೇ ವಾತಾವರಣದಲ್ಲಿರುವ ನೀರಾವಿಯ ಪ್ರಮಾಣವು ಈ ಪ್ರದೇಶದ ಬಹುತೇಕ ಕಡೆಗಳಲ್ಲಿ ಅಧಿಕಗೊಳ್ಳಲಿದ್ದು, ಪ್ರಬಲ ಮಳೆಸಹಿತ ಅವಧಿಯನ್ನು ಉಂಟುಮಾಡಬಹುದು. ಈ ಮಳೆಸಹಿತ ಅವಧಿಗಳ ವೇಳೆ ಸುರಿಯಲಿರುವ ಮಳೆ ಪ್ರಮಾಣವು ಭಾರತ ಹಾಗೂ ಅದಕ್ಕೆ ಹೊಂದಿಕೊಂಡ ಸಾಗರ ವ್ಯಾಪ್ತಿಯಲ್ಲಿ ಶೇಕಡಾ 42ರಿಂದ ಶೇಕಡಾ 63ರಷ್ಟು ಹೆಚ್ಚಾಗಬಹುದು ಎಂಬುದು ತಜ್ಞರ ಊಹೆಯಾಗಿದೆ.

ಹೊಸದಾಗಿ ದೃಢಪಡಿಸಿಕೊಂಡಿರುವ ಈ ಅಂಶಗಳು ಋತುಕಾಲೀನ (ಸೀಸನಲ್) ಹಾಗೂ ಉಪ-ಋತುಕಾಲೀನ (ಸಬ್- ಸೀಸನಲ್) ಮಳೆ ಸುರಿಯುವಿಕೆಯ ಮುನ್ಸೂಚನೆಗೆ ಬಳಸಲಾಗುತ್ತಿರುವ ಪ್ರಸ್ತತದ ಹವಾಮಾನ ಮಾದರಿಗಳ ದಕ್ಷತೆಯನ್ನು ಸುಧಾರಣೆಗೊಳಿಸಲು ಸಹಾಯಕವಾಗುತ್ತವೆ ಎಂಬುದು ಸಂಶೋಧಕರ ವಿಶ್ವಾಸವಾಗಿದೆ.

ಉಲ್ಲೇಖ:

ಕೊಟ್ಟಪಲ್ಲಿ ಎ, ವಿನಯಚಂದ್ರನ್ ಪಿಎನ್, Equatorial convection controls boreal summer intraseasonal oscillations in the present and future climates, npj climate and atmospheric science (2025). https://www.nature.com/articles/s41612-025-00959-4

ಸಂಪರ್ಕ:

ಪಿಎನ್ ವಿನಯಚಂದ್ರನ್
ಪ್ರಾಧ್ಯಾಪಕರು ಮತ್ತು ವಾತಾವರಣ ಹಾಗೂ ಸಾಗರ ವಿಜ್ಞಾನಿಗಳ ಕೇಂದ್ರದ (ಸಿಎಒಎಸ್) ಮುಖ್ಯಸ್ಥರು
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ) ಇಮೇಲ್: vinay@iisc.ac.in ಫೋನ್: +91-80-2293 3065 ವೆಬ್ ಸೈಟ್: https://caos.iisc.ac.in/vinay.html

ಪರ್ತಕರ್ತರ ಗಮನಕ್ಕೆ:

ಅ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ
ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ.

ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ ದಯವಿಟ್ಟು news@iisc.ac.in
ಅಥವಾ pro@iisc.ac.in ಗೆ ಬರೆಯಿರಿ.