30 ಜುಲೈ 2026
ವಿದ್ಯುತ್ ಪ್ರವಾಹದ ನೆರವಿನಿಂದ ಭೌತಿಕ ವಸ್ತುವೊಂದನ್ನು ಮೂಲಭೂತವಾಗಿ ಭಿನ್ನವಾದ ಎರಡು ಕಾಂತೀಯ ಸ್ಥಿತಿಗಳ ನಡುವೆ ಪರಿವರ್ತಿಸುವ ಹೊಸ ವಿಧಾನವನ್ನು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐ.ಐ.ಎಸ್ ಸಿ.) ನಡೆಸಲಾದ ಅಧ್ಯಯನದಲ್ಲಿ ಸಂಶೋಧಕರು ಕಂಡುಕೊಂಡಿದ್ದಾರೆ. ಈ ಸಂಶೋಧನೆಯು ಮಾಹಿತಿಯನ್ನು ಸಂಗ್ರಹಿಸಬಲ್ಲ, ತಾರ್ಕಿಕ (ಲಾಜಿಕ್) ಕಾರ್ಯಾಚರಣೆಗಳನ್ನು ನಿರ್ವಹಿಸಬಲ್ಲ ಹಾಗೂ ಭವಿಷ್ಯದ ಕ್ವಾಂಟಮ್ ಕಂಪ್ಯೂಟರ್‌ಗಳಿಗೆ ಸಂಪರ್ಕ ಸ್ತರವಾಗಬಲ್ಲ ಗಾತ್ರದಲ್ಲಿ ಸಣ್ಣದಾದ ಹಾಗೂ ಇಂಧನ-ದಕ್ಷತೆಯಿಂದ ಕೂಡಿದ ಎಲೆಕ್ಟ್ರಾನಿಕ್ ಸಾಧನಗಳ ಅಭಿವೃದ್ಧಿಗೆ ಹೊಸ ದಾರಿಯನ್ನು ತೆರೆಯುವ ಸಾಧ್ಯತೆ ಹೊಂದಿದೆ.
‘ನೇಚರ್ ಕಮ್ಯುನಿಕೇಷನ್ಸ್’ ನಿಯತಕಾಲಿಕದಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದ್ದು, ‘ಭೌತಿಕ ವಸ್ತು ಎಂಜಿನಿಯರಿಂಗ್’ (Materials Engineering) ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಭಗವತಿ ಪ್ರಸಾದ್ ಇದರ ನೇತೃತ್ವ ವಹಿಸಿದ್ದರು. ಪಿಎಚ್.ಡಿ. ಸಂಶೋಧನಾರ್ಥಿ ಹಾಗೂ ಪ್ರಥಮ ಲೇಖಕರಾದ ಸೂರ್ಯಕಾಂತ ಮೊಂಡಲ್ ಮತ್ತು ದೇಶ-ವಿದೇಶಗಳ ಹಲವು ಸಂಶೋಧಕರ ತಂಡದ ಸಹಭಾಗಿತ್ವದಲ್ಲಿ ಈ ಅಧ್ಯಯನ ನಡೆಸಲಾಗಿತ್ತು.
ಪ್ರಸ್ತುತ ಬಳಕೆಯಲ್ಲಿರುವ ಅನೇಕ ಕಾಂತೀಯ ಸ್ಮರಣೆ ತಂತ್ರಜ್ಞಾನಗಳು ವಸ್ತುವಿನ ಕಾಂತೀಕರಣದ (Magnetisation) ದಿಕ್ಕನ್ನು ಬದಲಿಸುವ ತತ್ತ್ವವನ್ನು ಅವಲಂಬಿಸಿವೆ. ಆದರೆ, ಈ ಅಧ್ಯಯನದಲ್ಲಿ ಸಂಶೋಧಕರು ಕಾಂತೀಕರಣದ ದಿಕ್ಕನ್ನು ಬದಲಿಸುವುದಕ್ಕಷ್ಟೇ ಸೀಮಿತವಾಗದೆ ವಿದ್ಯುತ್ ಪ್ರವಾಹದ ನೆರವಿನಿಂದ ವಸ್ತುವಿನ ಕಾಂತೀಯ ಸ್ಥಿತಿಯನ್ನೇ ಸಂಪೂರ್ಣವಾಗಿ ಮತ್ತೊಂದು ಸ್ಥಿತಿಗೆ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಶೋಧಕರು Sm₁₋ₓSrₓMnO₃ ಎಂಬ ಸಂಕೀರ್ಣ ಆಕ್ಸೈಡ್ ಅನ್ನು ತಮ್ಮ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡರು. ಇದು ಅನೇಕ ವಿಧದ ಕಾಂತೀಯ ಸ್ಥಿತಿಗಳನ್ನು ಹೊಂದಿರುವುದಕ್ಕೆ ಹೆಸರಾದ ಸಂಕೀರ್ಣ ಆಕ್ಸೈಡ್ ಆಗಿದೆ. .”ಪರಸ್ಪರ ಸ್ಪರ್ಧಾತ್ಮಕವಾದ ಈ ವಿಭಿನ್ನ ಕಾಂತೀಯ ಸ್ಥಿತಿಗಳನ್ನು ವಿದ್ಯುತ್ ಪ್ರವಾಹದ ಮೂಲಕ ನೇರವಾಗಿ ನಿಯಂತ್ರಿಸಲು ಸಾಧ್ಯವೇ ಎಂಬುದನ್ನು ತಿಳಿದುಕೊಳ್ಳುವುದೇ ನಮ್ಮ ಆರಂಭಿಕ ಉದ್ದೇಶವಾಗಿತ್ತು” ಎಂದು ಮೊಂಡಲ್ ವಿವರಿಸುತ್ತಾರೆ.
ಕಡಿಮೆ ಪ್ರಮಾಣದ ವಿದ್ಯುತ್ ಪ್ರವಾಹ ಹರಿಸಿದಾಗ ಈ ವಸ್ತುವು ಫೆರೋಮ್ಯಾಗ್ನೆಟಿಕ್ (Ferromagnetic) ಸ್ಥಿತಿಯಲ್ಲಿರುತ್ತದೆ. ಈ ಸ್ಥಿತಿಯಲ್ಲಿ ಅದರ ಪರಮಾಣುಗಳ ಕಾಂತೀಯ ಭ್ರ,ಮಣಾಂಕವು (Magnetic Moments) ಬಹುಮಟ್ಟಿಗೆ ಒಂದೇ ದಿಕ್ಕಿನಲ್ಲಿ ಜೋಡಣೆಗೊಂಡಿರುತ್ತವೆ. ಇದರಿಂದ ವಿದ್ಯುತ್ ಸುಲಭವಾಗಿ ಹರಿಯುತ್ತದೆ ಹಾಗೂ ವಿದ್ಯುತ್ ಪ್ರತಿರೋಧವೂ ಕಡಿಮೆ ಇರುತ್ತದೆ. ಆದರೆ, ಹರಿಸಲಾಗುವ ವಿದ್ಯುತ್ ಪ್ರವಾಹವು ಒಂದು ನಿರ್ಣಾಯಕ ಮಟ್ಟವನ್ನು ದಾಟಿದ ಕೂಡಲೇ, ಈ ವಸ್ತುವು ಹಠಾತ್ತನೆ ಆಂಟಿಫೆರೋಮ್ಯಾಗ್ನೆಟಿಕ್-ಸದೃಶ (Antiferromagnetic-like) ಸ್ಥಿತಿಗೆ ಪರಿವರ್ತನೆಯಾಗುತ್ತದೆ. ಈ ಸ್ಥಿತಿಯಲ್ಲಿ ಪರಸ್ಪರ ಸನಿಹದಲ್ಲಿರುವ ಕಾಂತೀಯ ಕ್ಷಣಗಳು ವಿರುದ್ಧ ದಿಕ್ಕುಗಳಲ್ಲಿ ಜೋಡಣೆಗೊಳ್ಳುತ್ತವೆ. ಪರಿಣಾಮವಾಗಿ ವಿದ್ಯುತ್ ಪ್ರತಿರೋಧವು ಗಣನೀಯವಾಗಿ ಹೆಚ್ಚುತ್ತದೆ.

ವಿದ್ಯುತ್ ಪ್ರವಾಹದಿಂದ ಉಂಟಾಗುವ ಈ ಪರಿವರ್ತನೆಯು ಪುನಃ ಆರಂಭಿಕ ಸ್ಥಿತಿಗೆ ಮರಳಬಹುದಾದ (Reversible) ಪ್ರಕ್ರಿಯೆ ಎಂಬುದನ್ನು ಸಂಶೋಧಕರ ತಂಡವು ದೃಢಪಡಿಸಿಕೊಂಡಿದೆ. ಈ ಪರಿವರ್ತನೆಯ ಸಂದರ್ಭದಲ್ಲಿ ದೀರ್ಘವ್ಯಾಪ್ತಿಯ ಫೆರೋಮ್ಯಾಗ್ನೆಟಿಕ್ (Long-range Ferromagnetic) ಕ್ರಮಬದ್ಧತೆ ಕುಸಿಯುತ್ತದೆ. ಇದೇ ವೇಳೆ, ವಸ್ತುವಿನ ಎಲೆಕ್ಟ್ರಾನಿಕ್ ಕಕ್ಷೆಗಳ (Electronic Orbitals) ವಿನ್ಯಾಸದಲ್ಲಿಯೂ ಮರುಜೋಡಣೆ ಸಂಭವಿಸುತ್ತದೆ. ಹೀಗಾಗಿ, ಈ ಪರಿವರ್ತನೆಯು ಸಾಮಾನ್ಯವಾಗಿ ಉಷ್ಣತೆಯಿಂದ ಉಂಟಾಗುವ ಬದಲಾವಣೆ ಅಥವಾ ವಿದ್ಯುತ್ ಪ್ರವಾಹದ ಮೂಲಕ ಕಾಂತೀಕರಣದ ದಿಕ್ಕನ್ನು ಮಾತ್ರ ಬದಲಿಸುವ ಸಾಂಪ್ರದಾಯಿಕ ವಿಧಾನಗಳಿಗಿಂತ ವಿಭಿನ್ನವಾಗಿದೆ.
“ವಿದ್ಯುತ್ ಪ್ರವಾಹವು ಕಾಂತೀಕರಣದ ದಿಕ್ಕನ್ನು ಮಾತ್ರವೇ ಬದಲಿಸುವುದಿಲ್ಲ; ಬದಲಾಗಿ, ವಸ್ತುವಿನ ಕಾಂತೀಯ ಅವಸ್ಥೆಯನ್ನೇ (Magnetic Phase) ಪರಿವರ್ತಿಸುತ್ತದೆ ಎಂಬುದನ್ನು ಕಂಡುಕೊಂಡಿರುವುದು ಈ ಸಂಶೋಧನೆಯ ಪ್ರಮುಖ ಹೊಸ ಅಂಶವಾಗಿದೆ ” ಎನ್ನುತ್ತಾರೆ ಭಗವತಿ ಪ್ರಸಾದ್. “ಇದರ ಪರಿಣಾಮವಾಗಿ, ಸ್ಪಷ್ಟವಾಗಿ ಪರಸ್ಪರ ಭಿನ್ನವಾಗಿರುವ ಎರಡು ವಿದ್ಯುತ್ ಪ್ರತಿರೋಧ ಸ್ಥಿತಿಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇದು ಕ್ರಯೋಜೆನಿಕ್ ಮೆಮೊರಿ ಹಾಗೂ ಲಾಜಿಕ್ ತಂತ್ರಜ್ಞಾನಗಳಲ್ಲಿ ಉಪಯುಕ್ತವಾಗುವ ಸಾಧ್ಯತೆ ಹೊಂದಿದೆ” ಎಂದು ಅವರು ವಿವರಿಸುತ್ತಾರೆ.
ನಂತರ ಸಂಶೋಧಕರು ಈ ವಸ್ತುವನ್ನು ಬಳಸಿಕೊಂಡು ಸುಮಾರು 250 × 250 ನ್ಯಾನೋಮೀಟರ್ ಗಾತ್ರದ ಟನಲ್ ಸಾಧನಗಳನ್ನು (Nanoscale Tunnel Devices) ನಿರ್ಮಿಸಿದರು. ಈ ಪುಟಾಣಿ ಸಾಧನಗಳು ಎರಡು ಸ್ಥಿರ ವಿದ್ಯುತ್ ಪ್ರತಿರೋಧ ಸ್ಥಿತಿಗಳನ್ನು ಪ್ರದರ್ಶಿಸಿದವು. ಅವುಗಳಲ್ಲಿ ಕಾಂತೀಯ-ರೋಧವು (Magnetoresistance) 200 ಶೇಕಡಕ್ಕಿಂತಲೂ ಹೆಚ್ಚಿರುವುದು ಕಂಡುಬಂದಿತು. ಜೊತೆಗೆ, ವಿದ್ಯುತ್ ಪ್ರವಾಹ, ಉಷ್ಣತೆ ಹಾಗೂ ಕಾಂತೀಯ ಕ್ಷೇತ್ರದ ಮೂಲಕ ಈ ಸ್ಥಿತಿಗಳ ನಡುವಿನ ಪರಿವರ್ತನೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂಬುದನ್ನೂ ಸಂಶೋಧಕರು ತೋರಿಸಿಕೊಟ್ಟಿದ್ದಾರೆ.
ಈ ಪರಿಣಾಮವು ಕಡಿಮೆ ಉಷ್ಣಾಂಶದಲ್ಲಿ ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದೇ ಕಾರಣಕ್ಕೆ ಈ ಸಂಶೋಧನೆಯು ಅತ್ಯಂತ ಕಡಿಮೆ ಉಷ್ಣಾಂಶದಲ್ಲಿ ಕಾರ್ಯನಿರ್ವಹಿಸುವ ಕ್ವಾಂಟಮ್ ಕಂಪ್ಯೂಟಿಂಗ್ ಪ್ಲ್ಯಾಟ್ ಫಾರ್ಮ್
ಗಳನ್ನು (Quantum Computing Platforms) ಬೆಂಬಲಿಸುವ ಕ್ರಯೋಜೆನಿಕ್ ಮೆಮೊರಿ ಹಾಗೂ ಲಾಜಿಕ್ ಸರ್ಕ್ಯೂಟ್‌ಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಶೇಷ ಭರವಸೆ ಮೂಡಿಸಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಈ ಪರಿವರ್ತನೆಗೆ ಅಗತ್ಯವಾಗುವ ವಿದ್ಯುತ್ ಪ್ರವಾಹ ಹಾಗೂ ಶಕ್ತಿಯ ಪ್ರಮಾಣವನ್ನು ಇನ್ನಷ್ಟು ಕಡಿಮೆಗೊಳಿಸುವತ್ತ ಗಮನ ನೀಡುವುದು ಸಂಶೋಧಕರ ಮುಂದಿನ ಯೋಜನೆಯಾಗಿದೆ. ಇದರ ಜೊತೆಗೆ, ವಿವಿಧ ಉಷ್ಣಾಂಶಗಳಲ್ಲಿ ಕಾರ್ಯನಿರ್ವಹಿಸುವಂತೆ ಸಾಧನವನ್ನು ರೂಪಿಸುವುದು ಹಾಗೂ ಈ ಸಾಧನಗಳನ್ನು ದೊಡ್ಡ ಪ್ರಮಾಣದ ಕ್ರಯೋಜೆನಿಕ್ ಮೆಮೊರಿ ಮತ್ತು ಲಾಜಿಕ್ ಸರ್ಕ್ಯೂಟ್‌ಗಳೊಂದಿಗೆ ಸಂಯೋಜಿಸುವ ದಿಸೆಯಲ್ಲಿಯೂ ಅವರು ಕೆಲಸ ಮುಂದುವರಿಸಲಿದ್ದಾರೆ. ಈ ಸಂಶೋಧನೆಯು ಭವಿಷ್ಯದಲ್ಲಿ ಅತ್ಯಲ್ಪ ವಿದ್ಯುತ್ ಬಳಕೆಯೊಂದಿಗೆ ಕಾರ್ಯನಿರ್ವಹಿಸಬಲ್ಲ ಹೊಸ ತಲೆಮಾರಿನ ಎಲೆಕ್ಟ್ರಾನಿಕ್ ಹಾಗೂ ಕ್ವಾಂಟಮ್ ಸಾಧನಗಳ ಅಭಿವೃದ್ಧಿಗೆ ದಾರಿ ಮಾಡಿಕೊಡಬಹುದು ಎಂಬ ವಿಶ್ವಾಸವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಉಲ್ಲೇಖ:
ಮೊಂಡಲ್ ಎಸ್, ಕುಮಾರ್ ವಿ, ಚೌಧರಿ ಎಸ್, ಗೋಧಾ ಎ, ಮಂಡಲ್ ಎಕೆ, ತಾಂಗ್ ಡಬ್ಲ್ಯು-ಎಸ್, ಕಲಿತ್ಸೋವ್ ಎ, ಒಮರ್ ಎ, ನಂದಿ ಎಸ್, ದೇ ಜೆಕೆ, ಪಾಂಚಾಲ್ ಜಿ, ಮಕಿನೆನಿ ಎಸ್ ಕೆ, ಮುಂಡಿ ಜೆ, ತಾಂಗ್ ವೈ-ಎಚ್, ಮಣಿಪತ್ರುನಿ ಎಸ್ ಬೈಬ್ಸ್ ಎಂ, ಬ್ಲಮೈರ್ ಎಂ, ಪ್ರಸಾದ್ ಬಿ, Electrically driven inverse metamagnetic transition in Sm₁₋ₓSrₓMnO₃, Nature Communications https://www.nature.com/articles/s41467-026-75886-w
ಸಂಪರ್ಕ:
ಭಗವತಿ ಪ್ರಸಾದ್
ಸಹಾಯಕ ಪ್ರಾಧ್ಯಾಪಕರು
ಮಟೀರಿಯಲ್ಸ್ ಎಂಜಿನಿಯರಿಂಗ್ (MatE) ವಿಭಾಗ
ಭಾರತೀಯ ವಿಜ್ಞಾನ ಸಂಸ್ಥೆ(ಐ.ಐ.ಎಸ್ ಸಿ.) ಇಮೇಲ್: bpjoshi@iisc.ac.in
ಫೋನ್: +91-80-2293 2679
ವೆಬ್ ಸೈಟ್: https://www.demandlab-iisc.com/
ಪರ್ತಕರ್ತರ ಗಮನಕ್ಕೆ:
ಅ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್ ಸಿ. ಹೆಸರಿನೊಂದಿಗೆ ಪ್ರಕಟಿಸಿ. ಆ) ಐ.ಐ.ಎಸ್ ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ news@iisc.ac.in ಅಥವಾ pro@iisc.ac.in ಗೆ ಬರೆಯಿರಿ.