ಸ್ವಯಂ-ಫಲವಂತಿಕೆಯ (self-fertilisation) ಮೂಲಕ ಸಂತಾನೋತ್ಪತ್ತಿ ಮಾಡಿಕೊಳ್ಳಬಲ್ಲ ಸಸ್ಯವೊಂದರ ಸಾಮರ್ಥ್ಯವು ಅದು ದಂಡಿಯಾಗಿ (ಅಂಕೆಶಂಕೆಯಿಲ್ಲದೆ) ವ್ಯಾಪಿಸುವ ಸಸ್ಯವಾಗಿ ರೂಪುಗೊಳ್ಳಲು ನೆರವಾಗುವ ಪ್ರಮುಖ ಗುಣಲಕ್ಷಣಗಳಲ್ಲೊಂದು ಎಂಬುದಕ್ಕೆ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಜೀವಪರಿಸರ ವಿಜ್ಞಾನಗಳ ಕೇಂದ್ರ (ಸಿಇಎಸ್) ನಡೆಸಿರುವ ಇತ್ತೀಚಿನ ಅಧ್ಯಯನವು ಬಲವಾದ ಪುರಾವೆಗಳನ್ನು ಒದಗಿಸಿದೆ.
ಬಹುತೇಕ ಹೂಬಿಡುವ ಸಸ್ಯಗಳಿಗೆ ಬೀಜಗಳನ್ನು ಉತ್ಪತ್ತಿಗೊಳಿಸಲು ಅದೇ ಪ್ರಭೇದದ ಮತ್ತೊಂದು ಸಸ್ಯದಿಂದ ಪರಾಗರೇಣುವಿನ ಅತ್ಯಗತ್ಯ. ಆದರೆ, ಕೆಲವು ಪ್ರಭೇದಗಳ ಸಸ್ಯಗಳು ತಮ್ಮದೇ ಪರಾಗರೇಣುವನ್ನು ಬಳಸಿಕೊಂಡು ಅಥವಾ ಪರಾಗರೇಣುವಿನ ಅಗತ್ಯವಿಲ್ಲದೆಯೇ ಸಂತಾನೋತ್ಪತ್ತಿ ಮಾಡಿಕೊಳ್ಳಬಲ್ಲವು. ಇದರಿಂದ ಅಂತಹ ಪ್ರಭೇದಗಳ ಕೇವಲ ಒಂದು ಸಸ್ಯಕ್ಕೂ ಹೊಸ ಸಸ್ಯಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ‘ಬೇಕರ್ ನಿಯಮ’ (Baker’s law) ಎಂದು ಕರೆಯಲಾಗುವ ಈ ಪರಿಕಲ್ಪನೆಯ ಪ್ರಕಾರ, ಈ ರೀತಿಯ ‘ಏಕಪೋಷಕ ಸಂತಾನೋತ್ಪತ್ತಿ’ (uniparental reproduction) ಅಥವಾ ‘ಸ್ವಯಂ-ಫಲವಂತಿಕೆ’ಯ ಸಾಮರ್ಥ್ಯ ಹೊಂದಿರುವ ಸಸ್ಯಗಳು ದಂಡಿಯಾಗಿ (ಅಂಕೆಶಂಕೆಯಿಲ್ಲದೆ ಆವರಿಸುವುದು) ವ್ಯಾಪಿಸಬಲ್ಲವಾಗಿರುತ್ತವೆ.

ಈ ಪರಿಕಲ್ಪನೆಯನ್ನು ಪರೀಕ್ಷಿಸಲೆಂದು ಜೀವಪರಿಸರ ವಿಜ್ಞಾನಗಳ ಕೇಂದ್ರದ (ಸಿಇಎಸ್) ಸಹಾಯಕ ಪ್ರಾಧ್ಯಾಪಕರಾದ ಸಾಸ್ಕ್ಯಾ ವಾನ್ ನೌಹಯ್ಸ್ ಮತ್ತು ಇದೇ ವಿಭಾಗದಲ್ಲಿ ಈ ಹಿಂದೆ ಎಂ.ಎಸ್ಸಿ. ವಿದ್ಯಾರ್ಥಿಯಾಗಿದ್ದ ನರಸಿಂಹನ್ ನಾಗೇಂದ್ರ ರಾವ್ ಅವರು ಡೈಸಿ ಕುಟುಂಬಕ್ಕೆ (Asteraceae) ಸೇರಿದ 28 ಸಸ್ಯ ಪ್ರಭೇದಗಳನ್ನು ಅಧ್ಯಯನಕ್ಕೆ ಒಳಪಡಿಸಿದರು.

ಇವುಗಳಲ್ಲಿ 11 ಆಕ್ರಮಣಕಾರಿ ಪ್ರಭೇದಗಳು, ಎಂಟು (08) ದಂಡಿಯಾಗಿ ವ್ಯಾಪಿಸದ ಸ್ಥಳೀಯವಲ್ಲದ ಪ್ರಭೇದಗಳು ಮತ್ತು ಒಂಬತ್ತು ಸ್ಥಳೀಯ ಪ್ರಭೇದಗಳು ಸೇರಿದ್ದವು. ಕರ್ನಾಟಕ ಮತ್ತು ತಮಿಳುನಾಡಿನ ವಿವಿಧೆಡೆಗಳಲ್ಲಿ ಮಾನವ ಚಟುವಟಿಕೆಗಳಿಂದ ಅಥವಾ ಇತರ ಕಾರಣಗಳಿಂದ ನೈಸರ್ಗಿಕ ಪರಿಸರದಲ್ಲಿ ಬದಲಾವಣೆ ಉಂಟಾಗಿರುವ ರಸ್ತೆಗಳ ಬದಿಗಳು, ತೆರೆದ ಪ್ರದೇಶಗಳು ಸೇರಿದಂತೆ ಸ್ಥಳಗಳಿಂದ ಒಂದು ವರ್ಷದ ಅವಧಿಯಲ್ಲಿ ಈ ಸಸ್ಯಗಳನ್ನು ಸಂಗ್ರಹಿಸಲಾಗಿತ್ತು. ಪ್ರತಿಯೊಂದು ಪ್ರಭೇದದ ಕನಿಷ್ಠ ಐದು ಸಸ್ಯಗಳಿಂದ ಸಂಗ್ರಹಿಸಲಾದ ಬೀಜಗಳು ಅಥವಾ ಕತ್ತರಿಸಿದ ಸಸ್ಯಭಾಗಗಳನ್ನ ಸಂಸ್ಥೆಯ ಆವರಣದಲ್ಲಿ ಬೆಳೆಸಲಾಯಿತು. ಇಲ್ಲಿ ಬೆಳೆಸಲು ಕಷ್ಟಕರವೆನ್ನಿಸಿದ ಕೆಲವು ಸ್ಥಳೀಯ ಪ್ರಭೇದಗಳನ್ನು ಅವುಗಳ ನೈಸರ್ಗಿಕ ಪರಿಸರದಲ್ಲಿಯೇ ಅಧ್ಯಯನ ಮಾಡಲಾಯಿತು. ಒಟ್ಟಾರೆ, ಸುಮಾರು 900 ಸಸ್ಯಗಳನ್ನು ಈ ಅಧ್ಯಯನದಲ್ಲಿ ಅವಲೋಕಿಸಲಾಯಿತು.

ದಂಡಿಯಾಗಿ (ಅಂಕೆಶಂಕೆಯಿಲ್ಲದೆ) ವ್ಯಾಪಿಸುವ ಸಸ್ಯ ಪ್ರಭೇದಗಳು ಪ್ರಪಂಚದೆಲ್ಲೆಡೆ ನಿರಂತರವಾಗಿ ಆವರಿಸುತ್ತಿರುವ ಹಿನ್ನೆಲೆಯಲ್ಲಿ, ಹೊಸದಾಗಿ ಪರಿಚಯಿಸಲಾಗುವ ಯಾವ ಸಸ್ಯಗಳು ಭವಿಷ್ಯದಲ್ಲಿ ದಂಡಿಯಾಗಿ ವ್ಯಾಪಿಸಬಲ್ಲ ಪ್ರಭೇದಗಳಾಗಿ ರೂಪುಗೊಳ್ಳುವ ಹೆಚ್ಚಿನ ಸಾಧ್ಯತೆ ಹೊಂದಿರುತ್ತವೆ ಎಂಬುದನ್ನು ಊಹಿಸಲು ಕಳೆ-ಅಪಾಯ ಮೌಲ್ಯಮಾಪನ (weed-risk assessment) ಕಾರ್ಯಕ್ರಮಗಳಲ್ಲಿ ಪರಿಗಣಿಸಲ್ಪಡುವ ಸಾಮಾನ್ಯ ಅಂಶಗಳಲ್ಲಿ ಸಂತಾನೋತ್ಪತ್ತಿ ತಂತ್ರವು ಒಂದಾಗಬೇಕು ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.

“ಇಂತಹ ಪ್ರಭೇದಗಳನ್ನು ‘ದಂಡಿಯಾಗಿ ವ್ಯಾಪಿಸಬಲ್ಲ ಪ್ರಭೇದಗಳು’ ಎಂದು ಕರೆಯುವುದಕ್ಕೆ ನಿರ್ದಿಷ್ಟ ಕಾರಣವಿದೆ. ಅವು ಹೊಸ ಪ್ರದೇಶದಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿಕೊಂಡು ಬಳಿಕ ಅಲ್ಲಿ ಯಾವುದೇ ಅಂಕೆಶಂಕೆಯಿಲ್ಲದೆ ವ್ಯಾಪಕವಾಗಿ ಬೆಳೆಯುತ್ತವೆ. ಹೀಗಾದಾಗ, ಈಗಾಗಲೇ ಅಲ್ಲಿ ಅಸ್ತಿತ್ವದಲ್ಲಿದ್ದ ಸಸ್ಯ ಪ್ರಭೇದಗಳ ಸಂಖ್ಯೆ ಕಡಿಮೆಯಾಗುತ್ತದೆ ಅಥವಾ ಅವು ಸಂಪೂರ್ಣವಾಗಿ ಕಣ್ಮರೆಯಾಗುತ್ತವೆ. ಇದರಿಂದಾಗಿ ಇಡೀ ಭೂಪ್ರದೇಶದ ಚಿತ್ರಣವೇ ಬದಲಾಗುತ್ತದೆ” ಎಂದು ವಾನ್ ನೌಹಯ್ಸ್ ವಿವರಿಸುತ್ತಾರೆ.
ಉಲ್ಲೇಖ:
ನಾಗೇಂದ್ರ ರಾವ್ ಎನ್, ವಾನ್ ನೌಹಾಯ್ಸ್ ಎಸ್, More invasive than non-invasive Asteraceae plants can reproduce uniparentally, Biological Invasions (2026). https://link.springer.com/article/10.1007/s10530-026-03834-2
ಸಂಪರ್ಕ:
ಸಾಸ್ಕ್ಯಾ ವಾನ್ ನೌಹಯ್ಸ್
ಸಹ ಪ್ರಾಧ್ಯಾಪಕರು
ಜೀವಪರಿಸರ ವಿಜ್ಞಾನಗಳ ಕೇಂದ್ರ (ಸಿಇಎಸ್)
ಭಾರತೀಯ ವಿಜ್ಞಾನ ಸಂಸ್ಥೆ
ಇಮೇಲ್: saskya@iisc.ac.in ಫೋನ್: +91-80-22933728 ವೆಬ್ಸೈಟ್: https://www.saskyavn.blog/
ನರಸಿಂಹನ್ ನಾಗೇಂದ್ರ ರಾವ್
ಎಂ.ಎಸ್ಸಿ. (ಜೀವ ವಿಜ್ಞಾನಗಳು) ಹಿಂದಿನ ವಿದ್ಯಾರ್ಥಿ
ಜೀವಪರಿಸರ ವಿಜ್ಞಾನಗಳ ಕೇಂದ್ರ (ಸಿಇಎಸ್)
ಭಾರತೀಯ ವಿಜ್ಞಾನ ಸಂಸ್ಥೆ
ಇಮೇಲ್: narasimhannagendrarao@gmail.com