23 ಜುಲೈ 2026
– ಕವಿ ಭಾರತಿ ಆರ್
ವೈರಸ್‌ಗಳಿಗೆ ಪ್ರೋಟೀನ್‌ಗಳನ್ನು ನಿರ್ಮಿಸಲು ಅಗತ್ಯವಾದ ಸ್ವಂತ ಆಣ್ವಿಕ (ಮಾಲಿಕ್ಯುಲರ್) ವ್ಯವಸ್ಥೆ ಇರುವುದಿಲ್ಲ. ಬದಲಿಗೆ, ಅವು ಈ ಉದ್ದೇಶಕ್ಕಾಗಿ ಆಶ್ರಯದಾತ (Host) ಜೀವಕೋಶದಲ್ಲಿರುವ ಪ್ರೋಟೀನ್-ಉತ್ಪಾದನಾ ವ್ಯವಸ್ಥೆಯನ್ನೇ ತಮ್ಮ ಹತೋಟಿಗೆ ತೆಗೆದುಕೊಂಡುಬಿಡುತ್ತವೆ. ವಿಶೇಷವಾಗಿ ರೈಬೋಸೋಮ್‌ಗಳು ಹಾಗೂ ಪ್ರೋಟೀನ್ ನಿರ್ಮಾಣಕ್ಕೆ ಸಹಕಾರಿಯಾದ ಅಂಶಗಳನ್ನು (ಟ್ರಾನ್ಸ್‌ಲೇಷನಲ್ ಫ್ಯಾಕ್ಟರ್‌ಗಳನ್ನು) ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತವೆ. ವೈರಸ್‌ಗಳ ಸಂಖ್ಯಾವೃದ್ಧಿ ಹಾಗೂ ಸೋಂಕು ಹರಡುವಿಕೆಗೆ ಈ ಪ್ರಕ್ರಿಯೆಯು ಅತ್ಯಗತ್ಯವಾಗಿದೆ. ವೈರಸ್‌ಗಳ ಆರ್‌ಎನ್‌ಎ ಜಿನೋಮ್ ಅಥವಾ ಎಂಆರ್‌ಎನ್‌ಎಗಳಲ್ಲಿ ಇಂಟರ್ನಲ್ ರೈಬೋಸೋಮಲ್ ಎಂಟ್ರಿ ಸೈಟ್ಸ್ (Internal Ribosomal Entry Sites – IRES) ಎಂದು ಕರೆಯಲಾಗುವ ನಿರ್ದಿಷ್ಟ ರಚನೆಯಿಂದ ಕೂಡಿದ ಭಾಗಗಳಿರುತ್ತವೆ. ಆಶ್ರಯದಾತ ಜೀವಕೋಶದ ಜೀನ್‌ಗಳನ್ನು ಆಧರಿಸಿದ ಪ್ರೊಟೀನ್-ನಿರ್ಮಾಣ (Translation) ಪ್ರಕ್ರಿಯೆ ಸ್ಥಗಿತಗೊಂಡ ಸಂದರ್ಭದಲ್ಲಿಯೂ ಈ ಐಆರ್‌ಇಎಸ್‌ಗಳು ಆಶ್ರಯದಾತ ರೈಬೋಸೋಮ್‌ಗಳನ್ನು ಸೆಳೆದು ವೈರಸ್‌ನ ಜೀನ್‌ಗಳಿಂದ ಪ್ರೋಟೀನ್‌ಗಳನ್ನು ನಿರ್ಮಿಸಲು ನೆರವಾಗುತ್ತವೆ.
ಎನ್ಸೆಫಲೊಮಯೋಕಾರ್ಡೈಟಿಸ್ ವೈರಸ್ (EMCV) ತನ್ನ ಐಆರ್‌ಇಎಸ್ (IRES) ಮೂಲಕ ಆಶ್ರಯದಾತ ಜೀವಕೋಶದ ಪ್ರೋಟೀನ್-ನಿರ್ಮಾಣ ವ್ಯವಸ್ಥೆಯನ್ನು ಹೇಗೆ ತನ್ನ ಹತೋಟಿಗೆ ತೆಗೆದುಕೊಳ್ಳುತ್ತದೆ ಎಂಬುದನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಂಶೋಧಕರು ಕ್ರಯೊ-ಎಲೆಕ್ಟ್ರಾನ್ ಮೈಕ್ರೋಸ್ಕೋಪಿ (Cryo-Electron Microscopy – Cryo-EM) ತಂತ್ರಜ್ಞಾನವನ್ನು ಬಳಸಿ ಪತ್ತೆಹಚ್ಚಿದ್ದು, eLife ನಿಯತಕಾಲಿಕದಲ್ಲಿ ಈ ಕುರಿತು ಹೊಸ ಅಧ್ಯಯನ ವರದಿ ಪ್ರಕಟವಾಗಿದೆ. ಇಲಿಗಳು ಮತ್ತು ಇತರ ದಂಶಕ ಪ್ರಾಣಿಗಳಿಂದ ಹರಡುವ ಈ ವೈರಸ್ ಅನೇಕ ಸಸ್ತನಿಗಳಲ್ಲಿ ಹೃದಯ ಮತ್ತು ಮಿದುಳಿನ ಉರಿಯೂತ, ಸಂತಾನೋತ್ಪತ್ತಿ ಸಮಸ್ಯೆಗಳು ಹಾಗೂ ನರಮಂಡಲಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಐಆರ್‌ಇಎಸ್ ಅನ್ನು ಗುರಿಯಾಗಿಸಿಕೊಂಡು ಚಿಕಿತ್ಸೆ ಅಭಿವೃದ್ಧಿಪಡಿಸಲು ಸಾಧ್ಯವಾದರೆ, ಈ ವೈರಸ್ ಮಾತ್ರವಲ್ಲದೆ ಇದೇ ರೀತಿಯ ಕಾರ್ಯವಿಧಾನವನ್ನು ಬಳಸುವ ಪೋಲಿಯೊ ವೈರಸ್ ಸೇರಿದಂತೆ ಇತರ ವೈರಸ್‌ಗಳ ವಿರುದ್ಧವೂ ಹೊಸ ಚಿಕಿತ್ಸಾ ವಿಧಾನಗಳನ್ನು ರೂಪಿಸಲು ಸಾಧ್ಯವಾಗಬಹುದು.
ಐಆರ್‌ಇಎಸ್ ಅನ್ನು (IRES) ಒಂದು ದಶಕಕ್ಕೂ ಮುಂಚೆಯೇ ಎನ್ಸೆಫಲೊಮಯೋಕಾರ್ಡೈಟಿಸ್ ವೈರಸ್ ಹಾಗೂ ಪೋಲಿಯೊ ವೈರಸ್‌ಗಳಲ್ಲಿ ಗುರುತಿಸಲಾಗಿತ್ತು. ಆದರೆ, ಅದರ ನಿರ್ದಿಷ್ಟ ರಚನೆ ಹಾಗೂ ಅದು ಕಾರ್ಯನಿರ್ವಹಿಸುವ ನಿರ್ದಿಷ್ಟ ವಿಧಾನದ ಬಗ್ಗೆ ಇದುವರೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಿರಲಿಲ್ಲ. “ಪ್ರೋಟೀನ್ ನಿರ್ಮಾಣ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಅಂಶಗಳ ಬಗ್ಗೆ ಹೊರತುಪಡಿಸಿದರೆ, ವೈರಸ್ ಆಶ್ರಯದಾತನ ರೈಬೋಸೋಮ್ ಅನ್ನು ಹೇಗೆ ತನ್ನ ಹತೋಟಿಗೆ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ ಹಾಗೂ ಜೈವಿಕರಾಸಾಯನಿಕ ಪ್ರಕ್ರಿಯೆಯ ಮೂಲಕ ಯಾವ ರೀತಿಯಲ್ಲಿ ಇದನ್ನು ಸಾಧಿಸುತ್ತದೆ ಎಂಬ ಬಗ್ಗೆ ಏನೂ ತಿಳಿದಿರಲಿಲ್ಲ” ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಡೆವಲಪ್ ಮೆಂಟ್ ಬಯಾಲಜಿ ಮತ್ತು ಜೆನಿಟಿಕ್ಸ್ (Developmental Biology and Genetics – DBG) ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ಅಧ್ಯಯನ ವರದಿಯ ಸಂವಹನ ಲೇಖಕರಾದ ತನ್ವೀರ್ ಹುಸೇನ್ ವಿವರಿಸುತ್ತಾರೆ.
ಈ ಕೊರತೆಯನ್ನು ನಿವಾರಿಸುವ ಉದ್ದೇಶದಿಂದ ಹುಸೇನ್ ಅವರ ಪ್ರಯೋಗಾಲಯದ ಪಿಎಚ್.ಡಿ. ಸಂಶೋಧನಾರ್ಥಿ ಹಾಗೂ ಅಧ್ಯಯನದ ಪ್ರಥಮ ಲೇಖಕರಾದ ದೀಪಕಾಶ್ ದಾಸ್ ಅವರು EMCV IRES ಹೊಂದಿರುವ ಎಂಆರ್‌ಎನ್‌ಎಯನ್ನು ಬಳಸಿಕೊಂಡು ಪುಲ್‌ಡೌನ್ (Pulldown)
ಮಾರ್ಗೋಪಾಯವನ್ನು (ಕಾರ್ಯತಂತ್ರವನ್ನು) ರೂಪಿಸಿ, ಆ ಮೂಲಕ ಮೊಲದ ರೆಟಿಕ್ಯುಲೋಸೈಟ್‌ಗಳ (ಅಪಕ್ವ ಕೆಂಪು ರಕ್ತಕಣಗಳ) ಜೀವಕೋಶ ಸಾರದಿಂದ (Cell Lysate) EMCV IRES ಪ್ರೀ-ಇನಿಷಿಯೇಷನ್ ಕಾಂಪ್ಲೆಕ್ಸ್ ಅನ್ನು ಪ್ರತ್ಯೇಕಿಸಿದರು. ಈ ಪ್ರೀ-ಇನಿಷಿಯೇಷನ್ ಕಾಂಪ್ಲೆಕ್ಸ್ ಎಂಬುದು ವೈರಸ್‌ನ ಆರ್‌ಎನ್‌ಎ ಆಶ್ರಯದಾತ ರೈಬೋಸೋಮ್‌ನೊಂದಿಗೆ ಸೇರಿ ಅದನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವ ಮೊದಲ ಹಂತದ ರಚನೆಯಾಗಿರುತ್ತದೆ. ವೈರಲ್ ಪ್ರೋಟೀನ್‌ಗಳ ನಿರ್ಮಾಣದ ಆರಂಭಿಕ ಹೆಜ್ಜೆ ಇದಾಗಿರುತ್ತದೆ.
ವಿಶೇಷವಾಗಿ ವಿನ್ಯಾಸಗೊಳಿಸಲಾದ ಬೇಯ್ಟ್ ಪ್ರೋಟೀನ್ (Bait Protein) ಅನ್ನು ಬಳಸಿ ಜೀವಕೋಶ ಸಾರದಿಂದ (Cell Lysate) ಸಂಪೂರ್ಣ ಐಆರ್‌ಇಎಸ್ (IRES) ಕಾಂಪ್ಲೆಕ್ಸ್ ಅನ್ನು ಯಾವುದೇ ಹಾನಿಯಾಗದಂತೆ ಪ್ರತ್ಯೇಕಿಸುವಲ್ಲಿ ಸಂಶೋಧಕರು ಯಶಸ್ವಿಯಾದರು. 40S ರೈಬೋಸೋಮಲ್ ಉಪಘಟಕ (40S Ribosomal Subunit), ಇನಿಷಿಯೇಟರ್ ಟಿಆರ್‌ಎನ್‌ಎ (Initiator tRNA) ಹಾಗೂ eIF2 (ಯೂಕ್ಯಾರಿಯೋಟಿಕ್ ಇನಿಷಿಯೇಷನ್ ಫ್ಯಾಕ್ಟರ್-2) ಕಾಂಪ್ಲೆಕ್ಸ್ ಸೇರಿದಂತೆ ಪ್ರೊಟೀನ್ ನಿರ್ಮಾಣ ಪ್ರಕ್ರಿಯೆ ಆರಂಭಿಸಲು ಅಗತ್ಯವಾದ ಹಲವು ಪ್ರಮುಖ ಘಟಕಗಳನ್ನು ಈ ಕಾಂಪ್ಲೆಕ್ಸ್ ಒಳಗೊಂಡಿತ್ತು. ನಂತರ ಈ ಸಂಪೂರ್ಣ ರಚನೆಯನ್ನು ಕ್ರಯೊ-ಎಲೆಕ್ಟ್ರಾನ್ ಮೈಕ್ರೋಸ್ಕೋಪಿ (Cryo-EM) ಬಳಸಿ ಸೂಕ್ಷ್ಮವಾಗಿ ಪರಿಶೀಲಿಸಿದರು. “ಆರಂಭದಲ್ಲಿ ನಡೆಸಿದ ಪ್ರತ್ಯೇಕಗೊಳಿಸುವಿಕೆ (Purification) ಪ್ರಯತ್ನಗಳು ಉತ್ತಮ ಫಲಿತಾಂಶ ನೀಡಿದವು. ಅದನ್ನು ಆರಂಭಿಕ ಅದೃಷ್ಟ ಎನ್ನಬಹುದು. ಆದರೆ ನಂತರದ ಅನೇಕ ಪ್ರಯತ್ನಗಳಲ್ಲಿ ಉಪಯುಕ್ತ ಫಲಿತಾಂಶವನ್ನು ಪಡೆಯಲು ಸಾಧ್ಯವಾಗಲಿಲ್ಲ” ಎನ್ನುತ್ತಾರೆ ತನ್ವೀರ್ ಹುಸೇನ್ . “ರಚನೆಯನ್ನು ವಿಶ್ವಾಸಾರ್ಹವಾಗಿ ನಿರ್ಧರಿಸಲು ಅಗತ್ಯವಿರುವಷ್ಟು ಕಣಗಳನ್ನು ಲಭ್ಯವಾಗಿಸಲು ಕ್ರಯೊ-ಇಎಂ ಗ್ರಿಡ್‌ಗಳು ವಿಫಲವಾದವು. ಆದರೂ ನಾವು ಪ್ರಯತ್ನವನ್ನು ಕೈಬಿಡದೆ ಮುಂದುವರಿಸಿದೆವು” ಎಂದೂ ಅವರು ವಿವರಿಸುತ್ತಾರೆ.

ಅಂತಿಮವಾಗಿ, ಕ್ರಯೊ-ಇಎಂ ಚಿತ್ರಗಳು ಮಹತ್ವದ ಸಂಗತಿಯನ್ನು ಬಹಿರಂಗಪಡಿಸಿದವು. ಆಶ್ರಯದಾತ ಜೀವಕೋಶದ 40S ರೈಬೋಸೋಮಲ್ ಉಪಘಟಕ ಹಾಗೂ ಇನಿಷಿಯೇಟರ್ ಟಿಆರ್‌ಎನ್‌ಎಗಳೊಂದಿಗೆ EMCV IRES ನೇರವಾಗಿ ಪರಸ್ಪರ ಕ್ರಿಯೆಯಲ್ಲಿ ತೊಡಗುತ್ತದೆ ಎಂಬುದು ಅಧ್ಯಯನದಿಂದ ದೃಢಪಟ್ಟಿತು. ಆಶ್ರಯದಾತ ಪ್ರೋಟೀನ್-ನಿರ್ಮಾಣ ವ್ಯವಸ್ಥೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ವೈರಸ್ ಬಳಸುವ ಈ ಕಾರ್ಯವಿಧಾನವು ಇದುವರೆಗೆ ಬೇರೆ ಯಾವುದೇ ವೈರಸ್‌ನಲ್ಲಿ ಕಂಡುಬಂದಿರಲಿಲ್ಲ ಎನ್ನುತ್ತಾರೆ ಸಂಶೋಧಕರು.
“ಈ ಜಾಗವನ್ನು ಗುರಿಯಾಗಿಸಿಕೊಂಡು ಪ್ರತಿಬಂಧಕಗಳನ್ನು (Inhibitor) ವಿನ್ಯಾಸಗೊಳಿಸುವ ಸಲುವಾಗಿ IRES ಹಾಗೂ ರೈಬೋಸೋಮ್ ನಡುವಿನ ಪರಸ್ಪರ ಕ್ರಿಯೆಯ ಸಂಪೂರ್ಣ ಚಿತ್ರಣವನ್ನು ತಿಳಿದುಕೊಳ್ಳುವುದು ನಮ್ಮ ಉದ್ದೇಶವಾಗಿತ್ತು” ಎಂದು ದೀಪಕಾಶ್ ದಾಸ್ ವಿವರಿಸುತ್ತಾರೆ. “ಜೀವಕೋಶದಲ್ಲಿ ನಿಜವಾಗಿ ಏನು ನಡೆಯುತ್ತಿದೆ ಎಂಬುದನ್ನು ವಾಸ್ತವಿಕವಾಗಿ ನೋಡಲು ಸಾಧ್ಯವಾಗುವ ಅತ್ಯುತ್ತಮ ತಂತ್ರಜ್ಞಾನವೆಂದರೆ ಕ್ರಯೊ-ಎಲೆಕ್ಟ್ರಾನ್ ಮೈಕ್ರೋಸ್ಕೋಪಿ” ಎಂದೂ ಅವರು ಹೇಳುತ್ತಾರೆ.
ಈ ಅಧ್ಯಯನದಲ್ಲಿ ಮತ್ತೊಂದು ಸಂಗತಿಯೂ ಬೆಳಕಿಗೆ ಬಂದಿತು. ಆಶ್ರಯದಾತ ರೈಬೋಸೋಮ್‌ನ ಸ್ವಂತ ಆರ್‌ಎನ್‌ಎಯ ಒಂದಷ್ಟು ಭಾಗದ ರಚನೆಯನ್ನು ವೈರಸ್‌ನ ಆರ್‌ಎನ್‌ಎ ಅನುಕರಿಸುತ್ತದೆ (Structural Mimicry) ಹಾಗೂ ಈ ರಚನೆಯು ಪೋಲಿಯೊ ವೈರಸ್‌ನ IRES ಪ್ರದೇಶದ ಅನುಗುಣ ಭಾಗವನ್ನೂ ಅತ್ಯಂತ ನಿಕಟವಾಗಿ ಹೋಲುತ್ತದೆ ಎಂಬುದು ಸಂಶೋಧಕರಿಗೆ ದೃಢಪಟ್ಟಿತು. ಆ ಮೂಲಕ, ಈ ಎರಡೂ ವೈರಸ್ ಕುಟುಂಬಗಳು ಆಶ್ರಯದಾತ ಪ್ರೋಟೀನ್-ನಿರ್ಮಾಣ ವ್ಯವಸ್ಥೆಯನ್ನು ತಮ್ಮದಾಗಿಸಿಕೊಳ್ಳಲು ಬಹುತೇಕ ಒಂದೇ ಬಗೆಯ ಕಾರ್ಯತಂತ್ರವನ್ನು ಅನುಸರಿಸಬಹುದು ಎಂಬ ಸುಳಿವು ಕಂಡುಬಂದಿತು.
ವೈರಸ್‌ನ IRES ಬಳಸುವ ಈ ಸಂಪರ್ಕ ಸ್ತರವನ್ನು (Interface) ಆಶ್ರಯದಾತ ಜೀವಕೋಶದ ಸ್ವಂತ ಪ್ರೋಟೀನ್-ನಿರ್ಮಾಣ ವ್ಯವಸ್ಥೆಯು ಬಳಸುವುದಿಲ್ಲ. ಆದ್ದರಿಂದ, ಈ ಸ್ತರವನ್ನು ನಿರ್ದಿಷ್ಟವಾಗಿ ಪ್ರತಿಬಂಧಿಸುವ ಔಷಧಗಳನ್ನು ಅಭಿವೃದ್ಧಿಪಡಿಸಲು ಉತ್ತಮ ಅವಕಾಶವಿದೆ. “ಪ್ರೋಟೀನ್-
ನಿರ್ಮಾಣ ಮಾರ್ಗವನ್ನು ಮಾತ್ರ ಆಯ್ದ ರೀತಿಯಲ್ಲಿ ಪ್ರತಿಬಂಧಿಸುವ ಜೊತೆಗೆ ಆಶ್ರಯದಾತ ಜೀವಕೋಶದ ಪ್ರೋಟೀನ್-ನಿರ್ಮಾಣ ಪ್ರಕ್ರಿಯೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬೇಕೆಂಬುದು ನಮ್ಮ ಗುರಿಯಾಗಿದೆ” ಎನ್ನುವ ತನ್ವೀರ್ ಹುಸೇನ್, “ಮಿಮಿಕ್ಸ್ (Mimics) ಹಾಗೂ ಸಂಭಾವ್ಯ ಔಷಧ ಸಂಯುಕ್ತಗಳನ್ನು (Candidate Drug Compounds) ಬಳಸಿಕೊಂಡು ಅಧ್ಯಯನ ನಡೆಸುವುದು ನಮ್ಮ ಮುಂದಿನ ಹಂತದ ಯೋಜನೆಯಾಗಿದೆ” ಎಂದು ತಿಳಿಸುತ್ತಾರೆ.

ಉಲ್ಲೇಖ:
ದಾಸ್ ಡಿ, ಹುಸೇನ್ ಟಿ, Structural insights into the recruitment of viral type 2 IRES to ribosomal preinitiation complex for protein synthesis, eLife (2026). https://elifesciences.org/articles/107788
ಸಂಪರ್ಕ:
ತನ್ವೀರ್ ಹುಸೇನ್
ಸಹ ಪ್ರಾಧ್ಯಾಪಕರು
ಡೆವೆಲಪ್ ಮೆಂಟ್ ಬಯಾಲಜಿ ಅಂಡ್ ಜೆನೆಟಿಕ್ಸ್ (ಡಿಬಿಜಿ)
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಇಮೇಲ್: hussain@iisc.ac.in ಫೋನ್: +91-80-2293-3676/3262 ವೆಬ್ಸೈಟ್: https://dbg.iisc.ac.in/people/tanweer-hussain/
ಪರ್ತಕರ್ತರ ಗಮನಕ್ಕೆ:
ಎ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐಐಎಸ್‌ಸಿ ಹೆಸರಿನೊಂದಿಗೆ ಪ್ರಕಟಿಸಿ. ಬಿ) ಐಐಎಸ್‌ಸಿ ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ news@iisc.ac.in ಅಥವಾ pro@iisc.ac.in ಗೆ ಬರೆಯಿರಿ.