2026ರ ಅಕ್ಟೋಬರ್ 28
– ಅಶ್ಮಿತಾ ಗುಪ್ತಾ

ಅಂಟಾರ್ಕ್ಟಿಕ್ ಸಾಗರದ ಮಧ್ಯಮ ಆಳದ ಜಲರಾಶಿಯ (ಅಂಟಾರ್ಕ್ಟಿಕ್ ಇಂಟರ್ಮೀಡಿಯೇಟ್ ವಾಟರ್-AAIW) ಲವಣಾಂಶ ಮತ್ತು ಸಾಂದ್ರತೆ 2015ರಿಂದ ಈಚೆಗೆ ಹೆಚ್ಚಾಗಿದೆ ಎಂದು ನೇಚರ್ ಕ್ಲೈಮೇಟ್ ಚೇಂಜ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಹೊಸ ಅಧ್ಯಯನ ತಿಳಿಸಿದೆ . ಇದು ಸಾಗರದ ಪದರಗಳ ರಚನೆ ಮತ್ತು ಜಲ ಪರಿಚಲನೆಯ ಮೇಲೆ ಪರಿಣಾಮ ಬೀರಿರುವುದು ಕಂಡುಬಂದಿದೆ.
ಪ್ರತಿವರ್ಷದ ಮೇ ಮತ್ತು ಜುಲೈ ತಿಂಗಳುಗಳ ನಡುವೆ ಅಂಟಾರ್ಕ್ಟಿಕಾದ (ಆಸ್ಟ್ರಲ್) ಚಳಿಗಾಲದಲ್ಲಿ ದಕ್ಷಿಣ ಸಾಗರದಾದ್ಯಂತ ಸಮುದ್ರ-ಹಿಮ ರೂಪುಗೊಳ್ಳುತ್ತದೆ. ತಾಪಮಾನ ಹೆಚ್ಚಾದಾಗ ಈ ಹಿಮದ ಬಹುಭಾಗ ಕರಗುವ ಮೂಲಕ ಸಿಹಿನೀರು ಸಾಗರವನ್ನು ಸೇರುತ್ತದೆ. ಈ ಋತುಮಾನ ಚಕ್ರವು ಸಮುದ್ರದ ಮೇಲ್ಮೈನ ಅಡಿಭಾಗದಲ್ಲಿನ ನೀರಿನ ಗುಣಲಕ್ಷಣಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಶೇಷವಾಗಿ, ದಕ್ಷಿಣ ಸಾಗರದ ಪ್ರಭಾವವನ್ನು ಉಪ-ಉಷ್ಣವಲಯದ ಸಾಗರಗಳವರೆಗೆ ಕೊಂಡೊಯ್ಯುವ ಪ್ರಮುಖ ಜಲರಾಶಿಯಾದ ಎಎಐಡಬ್ಲ್ಯು (AAIW) ಮೇಲೆ ಇದು ಪರಿಣಾಮ ಬೀರುತ್ತದೆ.
ಆದರೆ, ಈ ಸಂಬಂಧದಲ್ಲಿ ಈಗ ಬದಲಾವಣೆ ಕಂಡುಬರುತ್ತಿದೆ. 2015ಕ್ಕೂ ಮುಂಚೆ ಹಲವು ದಶಕಗಳಿಂದ ಎಎಐಡಬ್ಲ್ಯುಗೆ ಸಿಹಿನೀರು ಸೇರ್ಪಡೆಗೊಳ್ಳುತ್ತಿತ್ತು. ಆದರೆ, 2015ರ ನಂತರ ಅಂಟಾರ್ಕ್ಟಿಕಾ ಸಮುದ್ರ-ಹಿಮದ ಪ್ರಮಾಣದಲ್ಲಿ ತೀವ್ರ ಇಳಿಕೆಯಾಗಿರುವುದರಿಂದ ಜಲರಾಶಿಯಲ್ಲಿ ಲವಣಾಂಶ ಹೆಚ್ಚಾಗುತ್ತಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ), ಮೆಲ್ಬರ್ನ್ ವಿಶ್ವವಿದ್ಯಾಲಯ ಮತ್ತು ಸೌಥಾಂಪ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.
ಎ.ಎ.ಐ.ಡಬ್ಲ್ಯು.ದಲ್ಲಿ ಲವಣಾಂಶ ಹೆಚ್ಚಾದಾಗ ಸಾಗರದ ವಿವಿಧ ಜಲಪದರಗಳ ಸ್ತರೀಕರಣ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಇದರಿಂದ ಸಾಗರದ ಆಳದಲ್ಲಿ ಸಂಗ್ರಹವಾಗಿರುವ ಇಂಗಾಲವು ವಾತಾವರಣಕ್ಕೆ ಸುಲಭವಾಗಿ ಬಿಡುಗಡೆಯಾಗಲು ಅವಕಾಶವಾಗುತ್ತದೆ. ಆ ಮೂಲಕ, ಇದು ಜಾಗತಿಕ ತಾಪಮಾನ ಏರಿಕೆ ಮತ್ತಷ್ಟು ಹೆಚ್ಚಲು ಕಾರಣವಾಗುತ್ತದೆ.
ದಕ್ಷಿಣ ಸಾಗರದಲ್ಲಿ ರೂಪುಗೊಳ್ಳುವ ಎಎಐಡಬ್ಲ್ಯು (AAIW) ಅಟ್ಲಾಂಟಿಕ್, ಹಿಂದೂ ಮತ್ತು ಪೆಸಿಫಿಕ್ ಸಾಗರಗಳ ಮೂಲಕ ಉತ್ತರದತ್ತ ಹರಡುತ್ತದೆ. ಸಾಮಾನ್ಯವಾಗಿ ಇದು ಸಮುದ್ರದ ಮೇಲ್ಮೈನಿಂದ ನೂರಾರು ಮೀಟರ್ ಆಳದಲ್ಲಿ ಹರಿಯುತ್ತದೆ. ಈ ಜಲರಾಶಿಯು ಸಾಗರದ ಲಂಬ ರಚನೆ, (ವಿಭಿನ್ನ ತಾಪಮಾನ ಹೊಂದಿರುವ ಜಲಪದರಗಳ ಜೋಡಣೆ), ಲವಣಾಂಶ ಮತ್ತು ಸಾಂದ್ರತೆಯಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತದೆ. “ಈ ಜಲರಾಶಿಯಲ್ಲಿ ಉಂಟಾಗುವ ಬದಲಾವಣೆಗಳು ಅಂಟಾರ್ಕ್ಟಿಕಾ ಸಮೀಪದ ಸಾಗರದಲ್ಲಾಗುವ ಬದಲಾವಣೆಗಳ ಪರಿಣಾಮಗಳನ್ನು ಧ್ರುವ ಪ್ರದೇಶದಿಂದ ದೂರದಲ್ಲಿರುವ ಪ್ರದೇಶಗಳಿಗೂ ಕೊಂಡೊಯ್ಯಬಲ್ಲವು” ಎಂದು ಅಧ್ಯಯನದ ಪ್ರಮುಖ ಲೇಖಕ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ವಾತಾವರಣ ಮತ್ತು ಸಾಗರ ವಿಜ್ಞಾನಗಳ ಕೇಂದ್ರದ (CAOS) ಪಿಎಚ್.ಡಿ. ಸಂಶೋಧಕ ಕೌಶಿಕ್ ಮಿಶ್ರಾ ವಿವರಿಸುತ್ತಾರೆ.
ಸಮುದ್ರ-ಹಿಮ ಕರಗುವಿಕೆಯಿಂದ ಸಾಗರಕ್ಕೆ ಸೇರಬೇಕಾದ ಸಿಹಿನೀರಿನ ಪ್ರಮಾಣ ಕಡಿಮೆಯಾಗಿರುವುದಕ್ಕೂ ಎಎಐಡಬ್ಲ್ಯು ಲವಣಾಂಶದಲ್ಲಿ ಕಂಡುಬಂದಿರುವ ಹೆಚ್ಚಳಕ್ಕೂ ನೇರವಾದ ಸಂಬಂಧವಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಇದರ ಜತೆಗೆ, ಸಾಗರದ ಆಳದಲ್ಲಿರುವ ಹೆಚ್ಚು ಬೆಚ್ಚಗಿನ ಮತ್ತು ಅಧಿಕ ಲವಣಾಂಶದ ನೀರು ಮೇಲ್ಮುಖವಾಗಿ ಚಲಿಸುವ ಪ್ರಮಾಣ ಜಾಸ್ತಿಯಾಗುವುದಕ್ಕೂ ಇದು ಕಾರಣವಾಗಿದೆ.

ಅಂಟಾರ್ಕ್ಟಿಕಾದ ಸಮುದ್ರ-ಹಿಮ ಕರಗಿ ಸಿಹಿನೀರು ಬಿಡುಗಡೆಯಾದರೆ ಸಾಗರದ ಮೇಲ್ಮೈ ಸನಿಹದಲ್ಲಿ ತಣ್ಣನೆಯ ನೀರಿನ ಹೊಸ ಪದರವನ್ನು ಕಾಪಾಡಲು ಅದು ನೆರವಾಗುತ್ತದೆ. ಈ ನೀರು ಆಳದ ನೀರಿನೊಂದಿಗೆ ಬೆರೆತು ಮೇಲ್ಮೈನಿಂದ ಕೆಳಕ್ಕೆ ಇಳಿಯುತ್ತದೆ. ಬಳಿಕ ಉತ್ತರದತ್ತ ಹರಿಯುವಾಗ ಎಎಐಡಬ್ಲ್ಯು ರೂಪುಗೊಳ್ಳಲು ಕೊಡುಗೆ ನೀಡುತ್ತದೆ. ಅಂಟಾರ್ಕ್ಟಿಕಾದ ಚಳಿಗಾಲದಲ್ಲಿ ರೂಪುಗೊಳ್ಳುವ ‘ವಿಂಟರ್ ವಾಟರ್’ ಎಂದು ಕರೆಯಲ್ಪಡುವ ತಣ್ಣನೆಯ ನೀರಿನ ಪದರವು ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಹಿಮ ಕರಗುವಿಕೆಯಿಂದ ಬಿಡುಗಡೆಯಾಗಬೇಕಾದ ಸಿಹಿನೀರಿನ ಪ್ರಮಾಣ ಕಡಿಮೆಯಾದಾಗ ಮತ್ತು ಹೆಚ್ಚು ಲವಣಾಂಶದಿಂದ ಕೂಡಿದ ಆಳ ಸಾಗರದ ನೀರು ಜಲರಾಶಿಯ ಮೇಲಿನ ಪದರಗಳನ್ನು ತಲುಪಿದಾಗ ಈ ಸಮತೋಲನ ಬದಲಾಗುತ್ತದೆ. ಪರಿಣಾಮವಾಗಿ, ಎಎಐಡಬ್ಲ್ಯು ರೂಪುಗೊಳ್ಳಲು ಸೇರ್ಪಡೆಗೊಳ್ಳುವ ನೀರಿನಲ್ಲಿನ ಲವಣಾಂಶ ಮತ್ತು ಸಾಂದ್ರತೆ ಹೆಚ್ಚಾಗುತ್ತದೆ.
“ಹಿಂದೂ ಮಹಾಸಾಗರ ವಲಯದಲ್ಲಿ ಮಧ್ಯಮ ಆಳದ ಜಲರಾಶಿಯು (ಇಂಟರ್ಮೀಡಿಯೇಟ್ ವಾಟರ್) ಹೇಗೆ ಹರಿಯುತ್ತದೆ, ಇತರ ಜಲರಾಶಿಗಳೊಂದಿಗೆ ಹೇಗೆ ಬೆರೆಯುತ್ತದೆ ಮತ್ತು ದೀರ್ಘಾವಧಿಯಲ್ಲಿ ಅದು ಯಾವ ರೀತಿಯಲ್ಲಿ ಬದಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದು ನಮ್ಮ ಆರಂಭಿಕ ಆಸಕ್ತಿಯಾಗಿತ್ತು” ಎಂದು ಅಧ್ಯಯನದ ಸಂವಹನ ಲೇಖಕ ಹಾಗೂ ಸಿಎಓಎಸ್ ನ (CAOS) ಸಹ ಪ್ರಾಧ್ಯಾಪಕ ಬಿಶಾಖ್ ದತ್ತ ಗಯೇನ್ ಹೇಳುತ್ತಾರೆ. ಲಭ್ಯ ದತ್ತಾಂಶ ಮತ್ತು ಅವಲೋಕನಗಳನ್ನು ಪರಿಶೀಲಿಸಿದಾಗ ತಂಡದ ತಜ್ಞರಿಗೆ ಎ.ಎ.ಐ.ಡಬ್ಲ್ಯು.ದಲ್ಲಿ (AAIW) ಬದಲಾವಣೆಗಳು ಕಂಡುಬಂದವು. ನಂತರ, ಸಮುದ್ರ-ಹಿಮದ ಸ್ಥಿತಿಗತಿಗಳಲ್ಲಿನ ಬದಲಾವಣೆಗಳು ಹಾಗೂ ಎಎಐಡಬ್ಲ್ಯುದಲ್ಲಿನ ವ್ಯತ್ಯಾಸಗಳಿಗೆ ಇರುವ ಸಂಬಂಧವನ್ನು ಅಧ್ಯಯನಕಾರರು ದೃಢಪಡಿಸಿಕೊಂಡರು.
ಸಂಶೋಧಕರ ತಂಡದವರು ಸಾಗರದ ತಾಪಮಾನ ಮತ್ತು ಲವಣಾಂಶದ ಮಾಪನಗಳ ವಿಶ್ಲೇಷಣೆಯನ್ನೂ ನಡೆಸಿದರು. ಸಾಗರದ ಮೇಲ್ಮೈನ ಅಡಿಭಾಗದಲ್ಲಿನ ಪರಿಸ್ಥಿತಿಗಳನ್ನು ಅಳೆಯುವ ರೊಬೊಟಿಕ್ ಫ್ಲೋಟ್ಗಳ ಅಂತರರಾಷ್ಟ್ರೀಯ ಜಾಲವಾದ ‘ಆರ್ಗೊ’ದಿಂದ (Argo) ಸಂಗ್ರಹಿಸಿದ ದತ್ತಾಂಶವನ್ನೂ ಇದರಲ್ಲಿ ಬಳಸಿಕೊಂಡರು. ಇದರ ಜತೆಗೆ, ಸಮುದ್ರ-ಹಿಮದ ಕುರಿತು ಉಪಗ್ರಹಗಳ ಮೂಲಕ ನಡೆಸಿದ ಅವಲೋಕನಗಳು ಮತ್ತು ಸಾಗರಕ್ಕೆ ಸಂಬಂಧಿಸಿದ ಇತರ ದತ್ತಾಂಶಗಳನ್ನೂ ಪರಿಶೀಲಿಸಿದರು. ದಕ್ಷಿಣ ಸಾಗರದ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಪ್ರತಿ ಹತ್ತು ವರ್ಷಗಳ ಅವಧಿಯಲ್ಲಿ ಪ್ರತಿ ಕಿಲೋಗ್ರಾಂ ಎಎಐಡಬ್ಲ್ಯು ಜಲರಾಶಿಯ ಲವಣಾಂಶ ಪ್ರಮಾಣವು ಸುಮಾರು 0.0048 ಗ್ರಾಂನಷ್ಟು ಹೆಚ್ಚಾಗಿದೆ ಹಾಗೂ ಕೆಲವು ಪ್ರದೇಶಗಳಲ್ಲಿ ಈ ಬದಲಾವಣೆಯ ಪ್ರಮಾಣ ಇನ್ನೂ ಹೆಚ್ಚಾಗಿದೆ ಎಂಬುದನ್ನು ಕಂಡುಕೊಂಡರು.
ಅಂಟಾರ್ಕ್ಟಿಕಾ ಸಮುದ್ರ-ಹಿಮದ ಅಡಿಭಾಗದಲ್ಲಿನ ಸಾಗರದ ಸ್ಥಿತಿಗತಿಗಳನ್ನು ನಿಕಟವಾಗಿ ಗಮನಿಸುವ ಅಗತ್ಯವನ್ನೂ ಈ ಅಧ್ಯಯನದಲ್ಲಿ ಕಂಡುಕೊಂಡಿರುವ ಸಂಗತಿಗಳು ಒತ್ತಿಹೇಳುತ್ತವೆ. “ಈ ಜಲರಾಶಿಗಳು ಧ್ರುವ ಪ್ರದೇಶದ ಸಾಗರವನ್ನು ಅಂಟಾರ್ಕ್ಟಿಕಾದಿಂದ
ಬಹಳ ದೂರದಲ್ಲಿರುವ ಉಷ್ಣವಲಯದ ಸಾಗರಗಳೊಂದಿಗೆ ಸಂಪರ್ಕಿಸುತ್ತವೆ” ಎಂದು ಮಿಶ್ರಾ ಅಭಿಪ್ರಾಯಪಡುತ್ತಾರೆ.

ಉಲ್ಲೇಖ:
ಮಿಶ್ರಾ ಕೆ, ಗಯೇನ್ ಬಿ, ಗರಬತೊ ಎಸಿಎನ್, Reversal of Antarctic Intermediate Water trends triggered by sea ice decline, Nature Climate Change (2026). https://www.nature.com/articles/s41558-026-02758-y
ಸಂಪರ್ಕ:
ಕೌಶಿಕ್ ಮಿಶ್ರಾ
ಪಿಎಚ್.ಡಿ. ಸಂಶೋಧನಾರ್ಥಿ
ವಾತಾವರಣ ಮತ್ತು ಸಾಗರ ವಿಜ್ಞಾನಗಳ ಕೇಂದ್ರ (ಸಿಎಓಎಸ್)
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ
ಇಮೇಲ್: kaushikm@iisc.ac.in
ಬಿಶಾಖ್ ದತ್ತ ಗಯೇನ್
ಸಹ ಪ್ರಾಧ್ಯಾಪಕರು
ವಾತಾವರಣ ಮತ್ತು ಸಾಗರ ವಿಜ್ಞಾನಗಳ ಕೇಂದ್ರ (ಸಿಎಓಎಸ್)
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಇಮೇಲ್: bgayen@iisc.ac.in
ಫೋನ್: +91 8105737648 ವೆಬ್ಸೈಟ್: https://caos.iisc.ac.in/bgayen.html
ಪರ್ತಕರ್ತರ ಗಮನಕ್ಕೆ:
ಎ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐಐಎಸ್ಸಿ ಹೆಸರಿನೊಂದಿಗೆ ಪ್ರಕಟಿಸಿ.
ಬಿ) ಐಐಎಸ್ಸಿ ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ news@iisc.ac.in ಅಥವಾ pro@iisc.ac.in ಗೆ ಬರೆಯಿರಿ.