12 ಡಿಸೆಂಬರ್ 2025

ಭಾರತ ಸರ್ಕಾರದ “ಭಾರತದಲ್ಲಿ ಎಐ ರೂಪಿಸಿ ಹಾಗೂ ಭಾರತಕ್ಕಾಗಿ ಎಐ ಕಾರ್ಯಾಚರಿಸುವಂತೆ ಮಾಡಿ’ (ಮೇಕ್ ಎಐ ಇನ್ ಇಂಡಿಯಾ ಅಂಡ್ ಮೇಕ್ ಎಐ ವರ್ಕ್ ಫಾರ್ ಇಂಡಿಯಾ) ಮುನ್ನೋಟಕ್ಕೆ ಅನುಗುಣವಾಗಿ ಶಿಕ್ಷಣ ಸಚಿವಾಲಯವು ನಾಲ್ಕು ಕೃತಕ ಬುದ್ಧಿಮತ್ತೆ ಉತ್ಕೃಷ್ಠತಾ ಕೇಂದ್ರಗಳನ್ನು (ಎಐ-ಸಿಒಇಗಳು) ಸ್ಥಾಪಿಸಿದ್ದು, ಈ ನಾಲ್ಕು ಕೇಂದ್ರಗಳ ಮೇಲ್ವಿಚಾರಣೆಯನ್ನು ಭಾರತದ ನಾಲ್ಕು ಬೇರೆ ಬೇರೆ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಿಗೆ ವಹಿಸಲಾಗಿದೆ.
ಈ ರಾಷ್ಟ್ರೀಯ ಉಪಕ್ರಮದ ಭಾಗವಾಗಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ‘ಟ್ರ್ಯಾನ್ಸ್ ಸ್ಲೇಷನಲ್ ಎಐ ಫಾರ್ ನೆಟ್ವರ್ಕ್ಡ್ ಯೂನಿವರ್ಸಲ್ ಹೆಲ್ತ್ ಕೇರ್’ (ಟಿ.ಎ.ಎನ್.ಯು.ಎಚ್) ಅನ್ನು ಸ್ಥಾಪಿಸಲಾಗಿದೆ. ದೇಶದಲ್ಲಿ ಎಐ-ನಿರ್ದೇಶಿತ ಆರೋಗ್ಯಸೇವಾ ನಾವೀನ್ಯತೆಗಳನ್ನು ವ್ಯಾಪಕ ಪ್ರಮಾಣದಲ್ಲಿ ಉನ್ನತೀಕರಿಸುವ ಉದ್ದೇಶವನ್ನು ಇದು ಹೊಂದಿದೆ.
ಟಿ.ಎ.ಎನ್.ಯು.ಎಚ್. ಎಐ-ಉತ್ಕೃಷ್ಠತಾ ಕೇಂದ್ರವು ಲಾಭದ ಉದ್ದೇಶವಿರದ ಸೆಕ್ಷನ್-8 ಕಂಪನಿಯಾಗಿದೆ. ಚಿಕಿತ್ಸಾ ಸ್ಥಳದಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳ (ಎನ್.ಸಿ.ಡಿ.ಗಳು) ಪರಿಣಾಮಕಾರಿ ನಿರ್ವಹಣೆಗೆ ವ್ಯಾಪಕವಾಗಿ ಬಳಸಬಹುದಾದ ಎಐ ಪರಿಹಾರಗಳ ಅಭಿವೃದ್ಧಿ ಹಾಗೂ ನಿಯೋಜನೆ ಬಗ್ಗೆ ಇದು ಗಮನ ಕೇಂದ್ರೀಕರಿಸಲಿದೆ. ಬಹುಶಿಸ್ತುಗಳ ಕೇಂದ್ರದಂತೆ ಕಾರ್ಯಾಚರಿಸಲಿರುವ ಈ ಕೇಂದ್ರವು ಚಿಕಿತ್ಸಕರು, ದತ್ತಾಂಶ ವಿಜ್ಞಾನಿಗಳು ಹಾಗೂ ಎಐ ಸಂಶೋಧಕರನ್ನು ಒಂದೇ ವೇದಿಕೆಯಡಿಗೆ ತರಲಿದೆ. ಡಿಜಿಟಲ್ ಆರೋಗ್ಯ, ಮಷೀನ್ ಲರ್ನಿಂಗ್ ಹಾಗೂ ಸಾರ್ವಜನಿಕ ಆರೋಗ್ಯ ಸೇರಿದಂತೆ ಒಂಬತ್ತು ವಿವಿಧ ವಿಭಾಗಗಳ ಸದಸ್ಯರು ಕೇಂದ್ರದ ಸಂಶೋಧನಾ ಕಾರ್ಯಕ್ರಮಗಳನ್ನು ನಿರ್ವಹಿಸಲಿದ್ದಾರೆ. ಉತ್ತಮವಾದ ಉದ್ಯಮ ಅನುಭವವುಳ್ಳ ಕಾರ್ಯನಿರ್ವಾಹಕರು, ಎಂಜಿನಿಯರುಗಳು, ಪ್ರೋಗ್ರಾಂ ಮ್ಯಾನೇಜರುಗಳು ಮತ್ತು ಸಂಶೋಧನಾ ಸಿಬ್ಬಂದಿ ಟಿ.ಎ.ಎನ್.ಯು.ಎಚ್.ದ ಪ್ರಧಾನ ತಂಡದಲ್ಲಿರಲಿದ್ದು, ಆರೋಗ್ಯ ಸಂಬಂಧಿ ಎಐ ತಾಂತ್ರಿಕತೆಗಳನ್ನು ಪ್ರಯೋಗಾಲಯ ಹಂತದಿಂದ ಸಾರ್ವಜನಿಕ ಚಿಕಿತ್ಸಾ ಹಂತಕ್ಕೆ ವರ್ಗಾವಣೆಗೊಳಿಸಲು ಅನುವು ಮಾಡಿಕೊಡಲಿದ್ದಾರೆ.
ಬಾಯಿಯ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಕಣ್ಣಿನಪೊರೆ (ಅಕ್ಷಿಪಟಲ) ಕಾಯಿಲೆಗಳು, ಸಕ್ಕರೆ ಕಾಯಿಲೆ ಹಾಗೂ ಮಾನಸಿಕ ಆರೋಗ್ಯದಂತಹ ಅಧಿಕ ಸಂಕಷ್ಟದ ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು, ಅವುಗಳ ಅಪಾಯ ಸಾಧ್ಯತೆ ಅಂದಾಜಿಸುವುದು, ನಿಗಾ ವಹಿಸುವುದು ಮತ್ತು ವ್ಯಕ್ತಿನಿರ್ದಿಷ್ಟ ಪರಿಹಾರಗಳನ್ನು ರೂಪಿಸಿ ನಿಯೋಜಿಸುವುದು ಟಿ.ಎ.ಎನ್.ಯು.ಎಚ್. ಉದ್ದೇಶವಾಗಿದೆ. ಈ ಸಾಧನಗಳು ಮುಂಚೂಣಿ ಆರೋಗ್ಯಸೇವಾ ಸಿಬ್ಬಂದಿಗೆ ನೆರವು ನೀಡಿ ಪ್ರಾಥಮಿಕ ಮತ್ತು ಆಸ್ಪತ್ರೆ ಶುಶ್ರೂಷೆಯನ್ನು ಸುಧಾರಣೆಗೊಳಿಸಲು ಸಹಾಯಕವಾಗುತ್ತವೆ. ಸುರಕ್ಷಿತ ಮತ್ತು ಪರಿಣಾಮಕಾರಿ ಆರೋಗ್ಯಸೇವೆಯನ್ನು ಖಾತರಿಗೊಳಿಸಲು ನಿರ್ಧಾರ ತಳೆಯುವಿಕೆಯಲ್ಲಿ ಮನುಷ್ಯರ ಪಾತ್ರವನ್ನೂ ಒಳಗೊಂಡಿರುತ್ತವೆ. ಬಾಧಿತರಿಗೆ ಎಲ್ಲಿ ಚಿಕಿತ್ಸೆ ನೀಡಲಾಗುತ್ತದೋ ಆ ಸ್ಥಳದಲ್ಲಿಯೇ ಬಳಸಬಹುದಾದ ರೀತಿಯಲ್ಲಿ ಈ ಪರಿಹಾರಗಳನ್ನು ರೂಪಿಸಲಾಗುತ್ತದೆ; ಇವು ಜವಾಬ್ದಾರಿಯುತ ಎಐ ಪ್ರಮಾಣೀಕರಣಗಳನ್ನು ಅನುಸರಿಸುತ್ತವೆ. ಅಲ್ಲದೆ, ನವದೆಹಲಿಯ ಏಮ್ಸ್ ನಂತಹ ಉನ್ನತ ರಾಷ್ಟ್ರೀಯ ಸಂಸ್ಥೆಗಳಲ್ಲಿ ವೈದ್ಯರು ಹಾಗೂ ಸಂಶೋಧಕರ ಸಮ್ಮುಖದಲ್ಲಿ ಇವುಗಳನ್ನು ರೂಪಿಸಿ ಪರೀಕ್ಷಿಸಲಾಗುತ್ತದೆ.
“ಆರೋಗ್ಯಸೇವಾ ಎಐ ಉತ್ಕೃಷ್ಠತಾ ಕೇಂದ್ರವಾದ ಟಿ.ಎ.ಎನ್.ಯು.ಎಚ್. ಅನ್ನು ಸ್ಥಾಪಿಸಲು ನಮಗೆ ತುಂಬಾ ಸಂತೋಷವಾಗುತ್ತಿದೆ. ನಮ್ಮ ಪ್ರಶಸ್ತಿ ಪುರಸ್ಕೃತ ಆರೋಗ್ಯ ಆರೋಹಣ್ ಆಪ್ ನಂತೆಯೇ ಈ ಬಹುಶಿಸ್ತುಗಳ ಕೇಂದ್ರವು ಬಾಯಿ ಮತ್ತು ಸ್ತನ ಕ್ಯಾನ್ಸರ್ ನಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ವ್ಯಾಪಕವಾಗಿ ಬಳಸಬಹುದಾದ ಎಐ ಪರಿಹಾರಗಳನ್ನು ಲಭ್ಯವಾಗಿಸಲಿದೆ. ‘ಮೇಕ್ ಎಐ ಇನ್ ಇಂಡಿಯಾ, ಮೇಕ್ ಎಐ ವರ್ಕ್ ಫಾರ್ ಇಂಡಿಯಾ’ ಮುನ್ನೋಟಕ್ಕೆ ಅನುಗುಣವಾಗಿರುವ ಟಿ.ಎ.ಎನ್.ಯು.ಎಚ್ ದೇಶದಾದ್ಯಂತ ಆರೋಗ್ಯಸೇವಾ ಲಭ್ಯತೆಯನ್ನು ಸುಲಭಗೊಳಿಸಲು ಬಯಸುತ್ತದೆ” ಎಂದು ಐಐಎಸ್ ಸಿ ನಿರ್ದೇಶಕ ಹಾಗೂ ಟಿ.ಎ.ಎನ್.ಯು.ಎಚ್. ಆಡಳಿತ ಮಂಡಳಿ ಅಧ್ಯಕ್ಷರಾದ ಪ್ರೊ.ಜಿ.ರಂಗರಾಜನ್ ವಿವರಿಸಿದರು.
ಆರೋಗ್ಯ ಆರೋಹಣ್ ಆಪ್ ಅನ್ನು ಟಿ.ಎ.ಎನ್.ಯು.ಎಚ್. ಈಗಾಗಲೇ ಲೋಕಾರ್ಪಣೆ ಮಾಡಿದೆ. ಉತ್ಕೃಷ್ಠತಾ ಕೇಂದ್ರದ ಬಾಯಿಯ ಕ್ಯಾನ್ಸರ್ ಸ್ಕ್ರೀನಿಂಗ್ ತಂಡವು ಬಾಯಿಯ ಕ್ಯಾನ್ಸರ್ ಗೆ ಸಂಬಂಧಿಸಿದ ಕಾರ್ಯಪಡೆಯ ಮಾರ್ಗದರ್ಶನದಲ್ಲಿ ಏಮ್ಸ್, ಆರ್ಟ್ ಪಾರ್ಕ್, ಬಯೋಕಾನ್ ಫೌಂಡೇಷನ್, ಬಿಟ್ಸ್ ಪಿಲಾನಿ (ಗೋವಾ), ಕೆ.ಎಲ್.ಇ. ಸೊಸೈಟಿಯ ದಂತ ವಿಜ್ಞಾನಗಳ ಸಂಸ್ಥೆ, ಟ್ರವಿಯಸ್ ಹಾಗೂ ಇತರ ಕ್ಲಿನಿಕಲ್ ಮತ್ತು ಉದ್ದಿಮೆ ಪಾಲುದಾರರ ಸಹಭಾಗಿತ್ವದಲ್ಲಿ ಇದನ್ನು ಅಭಿವೃದ್ಧಿಪಡಿಸಿದೆ. ಒಪಿಎಂಡಿ ಹಾಗೂ ಬಾಯಿಯ ಕ್ಯಾನ್ಸರ್ ಗಳ ಆರಂಭಿಕ ಹಂತದ ಪತ್ತೆಗಾಗಿ ರೂಪಿಸಿರುವ ಆರೋಗ್ಯ ಆರೋಹಣ್, ಚಿಕಿತ್ಸಾ ಸ್ಥಳದಲ್ಲಿ ಬಳಸಬಹುದಾದ, ಎಐ ಚಾಲಿತವಾದ, ಸಾದಾ ಬೆಳಕಿನಲ್ಲಿ ಕಾರ್ಯಾಚರಿಸಬಲ್ಲ ಮೊಬೈಲ್ ಫೋನ್ ಆಧಾರಿತ ಸಾಧನವಾಗಿದೆ. ಎಐ ಆಧಾರಿತ ಬಾಯಿ ಕ್ಯಾನ್ಸರ್ ಸ್ಕ್ರೀನಿಂಗ್ ಸಾಧನವಾಗಿ ಇದರಲ್ಲಿನ ನಾವೀನ್ಯತೆಗಾಗಿ 2025ರ ಅಕ್ಟೋಬರ್ ನಲ್ಲಿ ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ (ಐಎಂಸಿ) ಶೈಕ್ಷಣಿಕ ಸಂಸ್ಥೆಯ ಅತ್ಯುತ್ತಮ ಪ್ರದರ್ಶಿಕೆ ಎಂಬ ಪುರಸ್ಕಾರಕ್ಕೆ ಇದು ಪಾತ್ರವಾಗಿದೆ.
ವ್ಯಾಪಕ ಪ್ರಮಾಣದಲ್ಲಿ ಅಳವಡಿಕೆಯನ್ನು ಬೆಂಬಲಿಸಲು ವಿಸ್ತೃತ ವ್ಯಾಪ್ತಿಯ ಆರೋಗ್ಯಸೇವಾದಾತರು, ಉದ್ದಿಮೆ ಪಾಲುದಾರರು ಹಾಗೂ ಸರ್ಕಾರದ ಸಂಸ್ಥೆಗಳೊಂದಿಗೆ ಟಿ.ಎ.ಎನ್.ಯು.ಎಚ್. ನಿಕಟವಾಗಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಕೃತಕ ಬುದ್ಧಿಮತ್ತೆಯ (ಎಐ) ಪ್ರಯೋಜನಗಳು ಡಿಜಿಟಿಲ್ ಸಾರ್ವಜನಿಕ ಮೂಲಸೌಕರ್ಯವಾಗಿ (ಡಿಪಿಐ) ದೇಶದಾದ್ಯಂತ
ಜನಸಮುದಾಯಗಳನ್ನು ತಲುಪುವುದನ್ನು ಖಾತರಿಗೊಳಿಸುವ ಉದ್ದೇಶವನ್ನೂ ಇದು ಹೊಂದಿದೆ. ಅಭಿವೃದ್ಧಿಯಾಗಲಿರುವ ಎಐ ಸಾಧನಗಳು ಚಿಕಿತ್ಸಕ ಹಾಗೂ ಮೊದಲ ಹಂತದ ಸೇವೆಯಲ್ಲಿ ಪರಿವರ್ತನೆ ತರಲು ಸಹಾಯಕವಾಗಲಿವೆ. ಆ ಮೂಲಕ, ಭಾರತದ ಪ್ರತಿಯೊಬ್ಬ ಪ್ರಜೆಗೂ ಆರೋಗ್ಯಸೇವೆಯನ್ನು ಸಕಾಲಿಕ, ಸುಲಭ ಲಭ್ಯ ಹಾಗೂ ಪರಿಣಾಮಕಾರಿಗೊಳಿಸಲಿವೆ.
ಸಂಪರ್ಕಿಸಿ:
ಇಮೇಲ್: info@tanuh.ai ವೆಬ್ ಸೈಟ್: https://www.tanuh.ai/