21ಮೇ 2025
-ಪಾರ್ಥ್ ಕುಮಾರ್
ಬೆಳಕನ್ನು ಹಾಯಿಸಿದ ನಂತರ ಮಿನುಗುವ ಫಾಸ್ಫೋರೆಸೆಂಟ್ ಭೌತಿಕ-ಸಾಮಗ್ರಿಗಳು ಭದ್ರತೆ ಹಾಗೂ ಸುಳಿವು ಪತ್ತೆಹಚ್ಚುವ (ಸೆನ್ಸಿಂಗ್) ಆನ್ವಯಿಕತೆಗಳಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಹೀಗಾಗಿ, ನಕಲುಪತ್ತೆ ಶಾಯಿಗಳಿಂದ ಹಿಡಿದು ಜೈವಿಕ ಚಹರೆ ಮಧ್ಯವರ್ತಿಗಳವರೆಗೆ ಇವುಗಳ ಬಳಕೆ ವ್ಯಾಪಕವಾಗಿದೆ. ಆದರೆ, ಪ್ರಚಲಿತದಲ್ಲಿರುವ ಬಹುತೇಕ ವಿಧಾನಗಳು ನಿರವಯವ ರಂಜಕ ಅಥವಾ ಭಾರಲೋಹದ ಸಂಕೀರ್ಣ ಸಮ್ಮಿಶ್ರಗಳನ್ನು ಆಧರಿಸಿವೆ. ಆದರೆ, ಇವು ದುಬಾರಿ, ಜೈವಿಕವಾಗಿ ಸಹವರ್ತನೀಯವಲ್ಲದವು ಹಾಗೂ ಪರಿಸರ ಸ್ನೇಹಿಯಲ್ಲದವೂ ಆಗಿವೆ. ಇನ್ನು, ಸಾವಯವ ಭೌತಿಕ-ವಸ್ತುಗಳನ್ನು ಬಳಸಿ ಸಾಮಾನ್ಯ ತಾಪಮಾನದಲ್ಲಿ (ಕೊಠಡಿ ತಾಪಮಾನ) ಹೆಚ್ಚು ಅವಧಿಯವರೆಗಿನ ಅನುದೀಪ್ತತೆಯನ್ನು (ಫಾಸ್ಫೋರೆಸೆನ್ಸ್) ಸಾಧಿಸುವ ಅವಕಾಶ ತುಂಬಾ ಅಪರೂಪ. ಅಲ್ಲದೇ, ಸಣ್ಣ ಸಾವಯವ ಸಂಯುಕ್ತ ಕಣಗಳಲ್ಲಿ ಅನುದೀಪ್ತತೆಯೊಂದಿಗೆ ಸುಧಾರಿತವಾದ ಪ್ರದರ್ಶಕ ಹಾಗೂ ಗೂಢಲಿಪಿ ತಾಂತ್ರಿಕತೆಗಳಿಗೆ ಉಪಯುಕ್ತವಾದ ವೃತ್ತೀಯ ಧ್ರುವೀಕೃತ ದೀಪ್ತಶೀಲತೆಯನ್ನು (ಸರ್ಕ್ಯುಲರ್ಲಿ ಪೊಲರೆಸ್ಡ್ ಲ್ಯುಮಿನಿಸೆನ್ಸ್-ಸಿಪಿಎಲ್) ಸಂಯೋಜನೆಗೊಳಿಸುವ ಸಾಧ್ಯತೆ ನಿಲುಕದ ಮರೀಚಿಕೆಯಾಗಿಯೇ ಉಳಿದಿದೆ.
ಇದೀಗ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ ಸಿ) ನಿರವಯವ ಮತ್ತು ಭೌತ ರಾಸಾಯನಿಕ (ಐಪಿಸಿ) ಸಂಶೋಧಕರ ತಂಡವು ಹೊಸ ಅಸಮಮಿತಿಯ (ಕೈರಲ್) ಅಮಿನೊಬೊರೇನ್ ಸಂಯುಕ್ತ ಕಣವನ್ನು ಕೃತಕವಾಗಿ ಅಭಿವೃದ್ಧಿಪಡಿಸುವ ಮೂಲಕ ಈ ತೊಡಕುಗಳಿಗೆ ಪರಿಹಾರ ಕಂಡುಕೊಂಡಿದೆ. ಈ ಹೊಸ ಸಂಯುಕ್ತ ಕಣವು ಸಾಮಾನ್ಯ ತಾಪಮಾನದಲ್ಲಿ ನಿರಂತರ ಅನುದೀಪ್ತತೆಯನ್ನು ಮತ್ತು ಸಿಪಿಎಲ್ ಅನ್ನು ಪ್ರದರ್ಶಿಸುತ್ತದೆ. ಇದು ಲೋಹಮುಕ್ತವಾದ, ಹಗುರವಾದ ಹಾಗೂ ರಾಚನಿಕವಾಗಿ ಮಾರ್ಪಾಡುಗೊಳಿಸಬಹುದಾದ ಮುಂಬರುವ ತಲೆಮಾರಿನ ಫೋಟೋನಿಕ್ ಭೌತಿಕ-ಸಾಮಗ್ರಿಗಳ ಬಗ್ಗೆ ಭರವಸೆ ಮೂಡಿಸಿದೆ.
ನಕಲು-ತಡೆಯಲ್ಲಿ (ಆಂಟಿ -ಕೌಂಟರ್ ಫೀಟಿಂಗ್) ಈ ಹೊಸ ಸಂಯುಕ್ತ ಕಣಗಳ ಸಾಮರ್ಥ್ಯವೇನು ಎಂಬುದನ್ನು ತಜ್ಞರು ‘ಕಮ್ಯುನಿಕೇಷನ್ಸ್ ಕೆಮಿಸ್ಟ್ರಿ’ ಎಂಬ ನಿಯತಕಾಲಿಕದಲ್ಲಿ ಪ್ರಕಟಿಸಿರುವ ಅಧ್ಯಯನ ವರದಿಯಲ್ಲಿ ವಿವರಿಸಿದ್ದಾರೆ.

ಫಾಸ್ಫೋರೆಸೆಂಟ್ ಸಂಯುಕ್ತ ಕಣಗಳನ್ನು ಬಳಸಿ ಶಾಯಿಗಳನ್ನು ಸಿದ್ಧಪಡಿಸಿದ ಸಂಶೋಧಕರ ತಂಡದವರು ಗೂಢಮಾಹಿತಿಯ ರೂಪದಲ್ಲಿರುವ ನೈಜ ಮಾಹಿತಿಯನ್ನು ಹೇಗೆ ಕಂಡುಕೊಳ್ಳಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಉದಾಹರಣೆಗೆ, ನೇರಳಾತೀತ (ಯುವಿ) ಬೆಳಕನ್ನು ಹಾಯಿಸಿದಾಗ ಪ್ರತಿದೀಪ್ತತೆಯಿಂದಾಗಿ ಮಾದರಿ ಪಠ್ಯಮಾಹಿತಿಯು ‘1180’ ಎಂಬುದಾಗಿ ಕಾಣುತ್ತದೆ. ಆದರೆ, ಬೆಳಕಿನ ಮೂಲವನ್ನು ನಂದಿಸಿ ಕತ್ತಲೆ ಕವಿಯುವಂತೆ ಮಾಡಿದಾಗ ಹೊಸ ಸಂಯುಕ್ತ ಕಣದಿಂದ ಉಂಟಾಗುವ ಮುಂದುವರಿದ ಮಿನುಗುವಿಕೆಯೊಂದಿಗೆ (ಪರ್ಸಿಸ್ಟೆಂಟ್ ಆಫ್ಟರ್ ಗ್ಲೋ’) ಅದೇ ಮಾಹಿತಿಯು ‘ಐಐಎಸ್.ಸಿ’ ಎಂಬುದಾಗಿ ಗೋಚರಿಸುತ್ತದೆ. ಈ ‘ಟೈಮ್-ಗೇಟೆಡ್’ ಗೋಚರತೆಯು ಅಂತಹ ಸಂಯುಕ್ತ ಕಣಗಳನ್ನು ಭದ್ರತಾ ಟ್ಯಾಗ್ ಗಳು, ಗೂಢಲಿಪಿ ಲೇಬಲ್ ಗಳು ಹಾಗೂ ನಕಲು-ನಿರೋಧಕ ದೃಢೀಕರಣ ತಾಂತ್ರಿಕತೆಗಳಲ್ಲಿ ಬಳಸಲು ಸೂಕ್ತವನ್ನಾಗಿಸುತ್ತದೆ.
ಸ್ಥಿರವಾದ ತಟಸ್ಥ (ಗ್ರೌಂಡ್) ಸ್ಥಿತಿಯಲ್ಲಿರುವ ಸಂಯುಕ್ತ ಕಣದ ಮೇಲೆ ಬೆಳಕು ಹಾಯಿಸಿದಾಗ ಆ ಕಣಗಳು ಶಕ್ತಿಯನ್ನು ಪಡೆದು ಉತ್ತೇಜಿತಗೊಳ್ಳುತ್ತವೆ. ಹೀಗಾದಾಗ, ಕಣಗಳು ಚಲಿಸುವ ಮೂಲಕ
ಅಥವಾ ಇತರ ಕಣಗಳಿಗೆ ಡಿಕ್ಕಿಯಾಗುವ ಮೂಲಕ ಬೆಳಕನ್ನು ಸೂಸದೇ ಈ ಶಕ್ತಿಯನ್ನು ಕಳೆದುಕೊಳ್ಳಬಹುದು. ಇಲ್ಲವೇ, ‘ಅನುದೀಪ್ತತೆ’ ಎಂಬ ಪ್ರಕ್ರಿಯೆಯ ಮೂಲಕ ಬೆಳಕು ಸೂಸಿ ಕ್ಷಿಪ್ರವಾಗಿ ‘ತಟಸ್ಥ’ ಸ್ಥಿತಿಗೆ ಮರಳಬಹುದು. ಕೆಲವೊಮ್ಮೆ, ಕಣಗಳು ‘ಇಂಟರ್ ಸಿಸ್ಟಮ್ ಕ್ರಾಸಿಂಗ್’ ಎಂಬ ವಿದ್ಯಮಾನದ ಮೂಲಕ ಬೆಳಕನ್ನು ಸೂಸಿ ‘ತಟಸ್ಥ’ ಸ್ಥಿತಿಗೆ ಮರಳುವ ಮುನ್ನ ‘ಸಿಂಗ್ಲೆಟ್’ ಅವಸ್ಥೆಯಿಂದ ‘ಟ್ರಿಪ್ಲೆಟ್’ ಅವಸ್ಥೆಗೆ ವರ್ಗಾವಣೆಗೊಳ್ಳಬಹುದು. ಸಿಂಗ್ಲೆಟ್ ಅವಸ್ಥೆಯಲ್ಲಿ ಎಲೆಕ್ಟ್ರಾನ್ ಸ್ಪಿನ್ ಗಳು ‘ಜೋಡಿ’ಯಾಗಿದ್ದರೆ ಟ್ರಿಪ್ಲೆಟ್ ಸ್ಥಿತಿಯಲ್ಲಿ ಅವು ‘ಜೋಡಿರಹಿತ’ವಾಗಿದ್ದು ಹೆಚ್ಚಿನ ಶಕ್ತಿ ಮಟ್ಟದಲ್ಲಿರುತ್ತವೆ. ಈ ವರ್ಗಾವಣೆಯು ಸ್ಪಿನ್ ನಲ್ಲಿ ಬದಲಾವಣೆಯನ್ನು ಒಳಗೊಂಡಿರುತ್ತಾದ್ದರಿಂದ, ಪ್ರಕ್ರಿಯೆಯು ವಿಳಂಬ ಗತಿಯಿಂದ ಕೂಡಿದ್ದು, ಹೊರಸೂಸುವ ಬೆಳಕು ಹೆಚ್ಚಿನ ಅವಧಿಯವರೆಗೂ ಉಳಿಯುತ್ತದೆ. ಇಂತಹ ಸೂಸುವಿಕೆಯ ವಿಧಾನವನ್ನು ಅನುದೀಪ್ತತೆ (ಫಾಸ್ಫೊರೆಸೆನ್ಸ್) ಎನ್ನಲಾಗುತ್ತದೆ.
ಅನುದೀಪ್ತತೆಯು ಎಲೆಕ್ಟ್ರಾನುಗಳ ಸ್ಪಿನ್ ಸ್ಥಿತಿಯ ಬದಲಾವಣೆಯನ್ನು ಹಾಗೂ ಮಾಲಿಕ್ಯುಲರ್ ಚಲನೆಯಿಂದಾಗಿ ಗಣನೀಯ ಪ್ರಮಾಣದಲ್ಲಿ ಶಕ್ತಿಯ ನಷ್ಟವನ್ನು ಒಳಗೊಂಡಿರುತ್ತದೆ. ಹೀಗಾಗಿ, ಸಾಮಾನ್ಯ ಉಷ್ಣತೆಯಲ್ಲಿ ಅನುದೀಪ್ತತೆಯನ್ನು ಸಾಧಿಸುವುದು ಕಷ್ಟಕರ. ಆದ್ದರಿಂದ, ಬರಿಗಣ್ಣಿನಲ್ಲಿ ಫಾಸ್ಫೋರೆಸೆನ್ಸ್ ವೀಕ್ಷಿಸಲು ಕ್ರಯೋಜೆನಿಕ್ ಪರಿಸ್ಥಿತಿಗಳ ಅಗತ್ಯವಿರುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಐಐಎಸ್ ಸಿ ತಜ್ಞರು ಬೋರಾನ್ ಹಾಗೂ ನೈಟ್ರೋಜನ್ ಹೊಂದಿರುವ ಅಮಿನೊಬೊರೇನ್ ಎಂಬ ಸಾವಯವ ಸಂಯುಕ್ತ ಕಣವನ್ನು ಅಭಿವೃದ್ಧಿಪಡಿಸಿದರು. ಜಾಗ್ರತೆವಹಿಸಿ ಇದಕ್ಕೆ ಗಡುಸು ರಚನೆ ದಕ್ಕುವಂತೆ ಮಾಡಿದರು. ಕೇಂದ್ರ ಅಕ್ಷದ ಸುತ್ತ ಎರಡು ನ್ಯಾಫ್ತಲೀನ್ ಆಧಾರಿತ ವರ್ಣಧಾರಿಗಳನ್ನು (ಕ್ರೋಮೋಫೋರ್) ಬಂಧಿಸುವ ಮೂಲಕ ವಿಕಿರಣಶೀಲವಲ್ಲದ ಕ್ಷಯಿಸುವಿಕೆಯನ್ನು ಹತ್ತಿಕ್ಕಿದ ಸಂಶೋಧಕರು, ಹೆಚ್ಚು ಅವಧಿಯವರೆಗೆ ಉಳಿಯುವ ಅನುದೀಪ್ತತೆಯನ್ನು ಸಾಧ್ಯವಾಗಿಸಿದರು.
‘ಬಿ-ಎನ್ ಬಂಧವು ಸಿ-ಸಿ ಬಂಧದಲ್ಲಿರುವ ರಾಚನಿಕ ಗುಣಲಕ್ಷಣಗಳನ್ನೇ ಹೊಂದಿರುತ್ತದೆ. ಆದರೆ, ಇದು ಸಂಯುಕ್ತ ಕಣಕ್ಕೆ ವಿಭಿನ್ನ ಸಮಮಿತಿಗಳಿಂದ ಕೂಡಿದ ಉದ್ರೇಕಿತ ಸ್ಥಿತಿಗಳನ್ನು ಲಭ್ಯವಾಗಿಸುತ್ತದೆ” ಎನ್ನುತ್ತಾರೆ ಐಪಿಸಿ ಪ್ರಾಧ್ಯಾಪಕ ಹಾಗೂ ಅಧ್ಯಯನ ವರದಿಯ ಸಹಲೇಖಕ ಪಿ.ತಿಲಗರ್. “ಇದು, ಸ್ಪಿನ್ ಮಗುಚುವಿಕೆಯನ್ನು (ಸ್ಪಿನ್ ಫ್ಲಿಪ್ಪಿಂಗ್) ಅಧಿಕಗೊಳಿಸಿ ಇಂಟರ್ ಸಿಸ್ಟಮ್ ಕ್ರಾಸಿಂಗ್ ಅನ್ನು ಉತ್ತೇಜಿಸುವ ಮೂಲಕ ಸಾಮಾನ್ಯ ತಾಪಮಾನದಲ್ಲಿ ದಕ್ಷತೆಯಿಂದ ಕೂಡಿದ ಅನುದೀಪ್ತತೆಗೆ ಅನುವು ಮಾಡಿಕೊಡುತ್ತದೆ” ಎಂದೂ ವಿವರಿಸುತ್ತಾರೆ.
ಗಡುಸಾದ ಅಸಮಮಿತಿಯ ಅಟ್ಟಣಿಗೆಯು ಹೆಚ್ಚು ಅವಧಿಯವರೆಗಿನ ಸೂಸುವಿಕೆಗೆ ಅನುಕೂಲ ಕಲ್ಪಿಸುತ್ತದೆ. ಜೊತೆಗೆ, ಸಿಪಿಎಲ್ ಗೆ ಎಡೆಮಾಡಿಕೊಡುತ್ತದೆ. ಇದು, ಸಾವಯವ ಭೌತಿಕ-ಸಾಮಗ್ರಿಗಳಲ್ಲಿ ಹೆಚ್ಚು ಅಪೇಕ್ಷಿಣೀಯವಾದರೂ ಬಹಳ ಅಪರೂಪವಾದ ಗುಣಲಕ್ಷಣವಾಗಿದೆ. “ಸಿಪಿಎಲ್, ಈ ಸಂಯುಕ್ತ ಕಣದ ಅತ್ಯಂತ ಕುತೂಹಲಕರ ಸಂಗತಿಯಾಗಿದೆ” ಎನ್ನುತ್ತಾರೆ ಐಪಿಸಿ ಪಿಎಚ್.ಡಿ. ಸಂಶೋಧನಾರ್ಥಿ ಹಾಗೂ ಅಧ್ಯಯನ ವರದಿಯ ಮೊದಲ ಲೇಖಕರಾದ ಜುಸೈನಾ ಎಯ್ಯಾತಿಯಿಲ್. “ಸಾವಯವ ವ್ಯವಸ್ಥೆಗಳಲ್ಲಿ ಈ ವಿದ್ಯಮಾನ ಸಾಧ್ಯವಾಗಿಸುವುದು ಕಷ್ಟಕರ. ಅವುಗಳ ಸೂಸುವಿಕೆಯ ದಕ್ಷತೆಯು ಕಡಿಮೆ ಇರುವುದು ಇದಕ್ಕೆ ಕಾರಣ. ಆದರೆ, ನಮ್ಮ ಸಹಭಾಗಿಗಳ ಬೆಂಬಲದಿಂದಾಗಿ ನಾವು ಇದನ್ನು ಸಾಧಿಸುವುದು ಸಾಧ್ಯವಾಯಿತು” ಎಂದು ತಿಳಿಸುತ್ತಾರೆ.
ಈ ಸಂಯುಕ್ತ ಕಣದ ಸಂಶ್ಲೇಷಣೆಯು (ಕೃತಕ ಅಭಿವೃದ್ಧಿ) ಸುಲಭದ ಸವಾಲಾಗಿರಲಿಲ್ಲ. “ಬಿ-ಎನ್ ಬಂಧದ ರಚನೆಯು ತೇವಾಂಶ ಹಾಗೂ ಆಮ್ಲಜನಕಕ್ಕೆ ಅಧಿಕವಾಗಿ ಸೂಕ್ಷ್ಮಸಂವೇದಿ ಆಗಿರುತ್ತದೆ. ಜೊತೆಗೆ, ಕಟ್ಟುನಿಟ್ಟಿನ ನಿಯಂತ್ರಕ ಪರಿಸ್ಥಿತಿಗಳ ಅಗತ್ಯವಿರುತ್ತದೆ” ಎನ್ನುತ್ತಾರೆ ಎಯ್ಯಾತಿಯಿಲ್. “ನಾವು ದಹನಶೀಲ ರೀಏಜೆಂಟ್ ಆದ ಎನ್-ಬ್ಯುಟಿಲಿಥಿಯಂ ಬಳಸಿ -78 ಡಿಗ್ರಿ (ಮೈನಸ್ 78 ಡಿಗ್ರಿ) ಸೆಲ್ಸಿಯಸ್ ಶೀತಲ ತಾಪಮಾನದ ಆಮ್ಲಜನರ-ರಹಿತ ಪರಿಸ್ಥಿತಿಯಲ್ಲಿ ರಾಸಾಯನಿಕ ವರ್ತನೆಯನ್ನು ನಡೆಸಿದೆವು”. ಸಂಯುಕ್ತ ಕಣದ ರಚನೆಯನ್ನು ವಿಶ್ಲೇಷಿಸಲು ಅದನ್ನು
ಸ್ಫಟಿಕೀಕರಣಗೊಳಿಸುವುದು ಕೂಡ ಸವಾಲಾಗಿತ್ತು. ಸ್ಫಟಿಕ ಸಂರಚನೆ ದೃಢೀಕರಣಕ್ಕಾಗಿ ಸಿಂಕ್ರೊಟ್ರಾನ್ ಸೌಲಭ್ಯಗಳ ಅನುಕೂಲತೆಯನ್ನು ಕಲ್ಪಿಸಿಕೊಳ್ಳುವ ಉದ್ದೇಶದಿಂದ ತಜ್ಞರ ತಂಡದವರು ಇಟಲಿಯ ಟ್ರಿಎಸ್ಟ್ ವಿಶ್ವವಿದ್ಯಾಲಯದಲ್ಲಿ ನೀಲ್ ಹಿಕಿ ತಂಡದೊಂದಿಗೆ ಸಹಭಾಗಿತ್ವ ಮಾಡಿಕೊಂಡಿದ್ದರು.
ಇದೀಗ ತಜ್ಞರು ಈ ವ್ಯವಸ್ಥೆಯ ಸೂಸುವಿಕೆಯ ದಕ್ಷತೆಯನ್ನು ಸುಧಾರಣೆಗೊಳಿಸುವ ಗುರಿ ಹೊಂದಿದ್ದಾರೆ. ಇದು ಸಾಧ್ಯವಾದರೆ, ಬಯೊಇಮೇಜಿಂಗ್ ಮತ್ತು ಫೋಟೋನಿಕ್ ಮಟೀರಿಯಲ್ ಗಳಲ್ಲಿ ಇವುಗಳ ಉಪಯುಕ್ತತೆ ಇನ್ನೂ ಹೆಚ್ಚಾಗುವ ಅವಕಾಶಗಳಿವೆ. “ಸಂಯುಕ್ತ ಕಣದ ನಿಖರ ವಿನ್ಯಾಸದಿಂದ ರಾಚನಿಕ ಗಡುಸುತನ ಹಾಗೂ ಬಹು-ಕಾರ್ಯಾತ್ಮಕ ಸೂಸುವಿಕೆಯ ನಡುವಿನ ಕೊರತೆಯನ್ನು ನಿವಾರಿಸುವ ಪ್ರಯತ್ನಗಳಿಗೆ ನಾವು ಚಾಲನೆ ನೀಡಿದ್ದೇವೆ” ಎನ್ನುವ ತಿಲಗರ್, ಇದು ಪುಟ್ಣ ಸಾವಯವ ರಂಜಕ ಕಣಗಳನ್ನು ಆಧರಿಸಿದ ಸಂಶೋಧನೆಗಳಿಗೆ ಹೊಸ ಅಧ್ಯಾಯವನ್ನು ಸೇರ್ಪಡೆಗೊಳಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಉಲ್ಲೇಖ:
ಎಯ್ಯಾತಿಯಿಲ್ ಜೆ, ಘೋಷ್ ಎಸ್, ಚೇರನ್ ಎ, ಜೆರಿಮಿಯಾ ಎಸ್, ಕುಮಾರ್ ಜೆ, ಹಿಕಿ ಎನ್, ತಿಲಗರ್ ಪಿ, Axial chirality-induced rigidification in aminoboranes enhances persistent room-temperature phosphorescence and circularly polarized luminescence, Communications Chemistry (2025). https://www.nature.com/articles/s42004-025-01529-8
ಸಂಪರ್ಕ:
ಪಿ.ತಿಲಗರ್
ಪ್ರಾಧ್ಯಾಪಕರು
ನಿರವಯವ ಮತ್ತು ಭೌತ ರಾಸಾಯನಿಕ (ಐಪಿಸಿ) ವಿಭಾಗ
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ) ಇಮೇಲ್: thilagar@iisc.ac.in
ಫೋನ್: +91 80 2293-3353 ವೆಬ್ ಸೈಟ್: https://sites.google.com/view/ptlab-ipc-iisc
ಪರ್ತಕರ್ತರ ಗಮನಕ್ಕೆ:
ಅ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ.
ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ news@iisc.ac.in ಅಥವಾ pro@iisc.ac.in ಗೆ ಬರೆಯಿರಿ.