20 ಫೆಬ್ರುವರಿ 2025
-ರಂಜಿನಿ ರಘುನಾಥ್
ನೈಸರ್ಗಿಕ ಪರಿಸರದಲ್ಲಿ ಸಸ್ಯಾಹಾರಿ ಪ್ರಾಣಿಗಳ ಬದಲಿಗೆ ಸಾಕುಪ್ರಾಣಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಪ್ರಪಂಚದೆಲ್ಲೆಡೆ ಕಂಡುಬರುತ್ತಿರುವ ವಿದ್ಯಮಾನವಾಗಿದೆ. ಇದು ಮಣ್ಣಿನ ಲಕ್ಷಣಗಳು ಹಾಸೂ ಸಸ್ಯ ಸಂಕುಲದ ನಮೂನೆಗಳಲ್ಲಿ ಹಾನಿಕಾರಕ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಈ ಬದಲಾವಣೆಯು ಜೇಡದಂತಹ ನೆಲವಾಸಿ ಸಂಧಿಪದಿಗಳ ಸಂಖ್ಯೆ ಮತ್ತು ಕ್ರಿಮಿಕೀಟ ಜನ್ಯ ರೋಗಗಳನ್ನು ಹರಡುವ ಉಣ್ಣೆ ಹಾಗೂ ನುಸಿಗಳ ಸಂಖ್ಯೆಯನ್ನು ತೀವ್ರವಾಗಿ ಪ್ರಭಾವಿಸಬಹುದು ಎಂಬುದನ್ನು ಹಿಮಾಲಯದ ಸ್ಪೀತಿ ಕಣಿವೆಯಲ್ಲಿ ನಡೆಸಲಾದ ದೀರ್ಘಾವಧಿ ಅಧ್ಯಯನವು ದೃಢಪಡಿಸಿದೆ.
ಸಾಕುಜಾತಿಯ ಜಾನುವಾರುಗಳಿಂದ ಮೇಯಲ್ಪಡುವ ಪ್ರದೇಶಗಳಲ್ಲಿ ಜೇಡಗಳ ಸಂಖ್ಯೆಯು ಬಹಳವಾಗಿ ತಗ್ಗುವ ಜೊತೆಗೆ ಮಿಡತೆ ಹಾಗೂ ರೋಗವಾಹಕಗಳಾದ ಉಣ್ಣೆ ಮತ್ತು ನುಸಿಗಳ ಸಂಖ್ಯೆ ಹೆಚ್ಚುತ್ತದೆ ಎಂಬುದು ಅಧ್ಯಯನದಿಂದ ದೃಢಪಟ್ಟಿದೆ.
“ಜೇಡಗಳು ಪರಭಕ್ಷಕ ವರ್ಗಕ್ಕೆ ಸೇರಿದವು; ಜೀವವೈವಿಧ್ಯ ಪರಿಸರದಲ್ಲಿ ಅವು ನಿರ್ವಹಿಸುವ ಪಾತ್ರವು ತೋಳಗಳು, ಸಿಂಹಗಳು ಮತ್ತು ಹುಲಿಗಳ ಪಾತ್ರವನ್ನು ಹೋಲುತ್ತದೆ. ಜೇಡಗಳ ಸಂಖ್ಯೆ ಕಡಿಮೆಯಾದರೆ ಮಿಡತೆಗಳ ಸಂಖ್ಯೆಯು ಪರಭಕ್ಷಕ ನಿಯಂತ್ರಣವನ್ನು ಮೀರಿ ಸಂಬಂಧಿಸಿದ ಜೀವವೈವಿಧ್ಯ ಸರಪಳಿಯಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ. ಒಟ್ಟಾರೆ, ಇದು ಸಂಪನ್ಮೂಲಗಳು ಹಾಗೂ ಆಹಾರ ಮೂಲಗಳ ಹರಿವನ್ನು ಮಾರ್ಪಾಡುಗೊಳಿಸುತ್ತದೆ” ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್.ಸಿ) ಜೀವವೈವಿಧ್ಯ ವಿಜ್ಞಾನಗಳ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಹಾಗೂ ಎಕಲಾಜಿಕಲ್ ಪಬ್ಲಿಕೇಷನ್ಸ್ ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯ ಸಹಲೇಖಕರಾದ ಸುಮಂತ ಬಗಚಿ.
ಬಗಚಿ ಮತ್ತು ಅವರ ತಂಡದವರು ಚಮರೀಮೃಗ ಮತ್ತು ಕಾಡುಮೇಕೆಯಂತಹ ವನಮೂಲದ ಸಸ್ಯಾಹಾರಿ ಪ್ರಾಣಿಗಳಿರುವ ಜಾಗದಲ್ಲಿ ದನಕರುಗಳು ಹಾಗೂ ಕುರಿಯಂತಹ ಸಾಕುಪ್ರಾಣಿಗಳು ಅಧಿಕಗೊಂಡರೆ ಅದರಿಂದಾಗುವ ಪರಿಣಾಮಗಳ ಕುರಿತು ಸ್ಪೀತಿ ಕಣಿವೆಯಲ್ಲಿ 15ಕ್ಕೂ ಹೆಚ್ಚು ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದಾರೆ. “ಈ ಹಿಂದೆ ವನಮೂಲದ ಶಾಖಾಹಾರಿ ಪ್ರಾಣಿಗಳು ಭೂಗ್ರಹದ ಮೇಲೆ ಸಾರ್ವತ್ರಿಕವಾಗಿ ವ್ಯಾಪಿಸಿದ್ದವು. ಸದ್ಯ ಅವು ಕೆಲವೇ ಉದ್ಯಾನಗಳು ಹಾಗೂ ಮೀಸಲು ಅರಣ್ಯಗಳಿಗೆ ಸೀಮಿತಗೊಂಡಿವೆ. ಬೇರೆಲ್ಲಾ ಕಡೆಗಳಲ್ಲಿ ಸಾಕುಪ್ರಾಣಿಗಳ ಸಂಖ್ಯೆ ಮೇಲುಗೈ ಸಾಧಿಸಿದೆ “ ಎಂದು ಬಗಚಿ ವಿವರಿಸುತ್ತಾರೆ.
ಪ್ರಸ್ತುತ ಅಧ್ಯಯನಕ್ಕಾಗಿ ತಜ್ಞರ ತಂಡದವರು, ಜೇಡಗಳು, ಉಣ್ಣೆಗಳು, ನುಸಿಗಳು, ದುಂಬಿಗಳು, ಕಡಜಗಳು, ಮಿಡತೆಗಳನ್ನು ಒಳಗೊಂಡಂತೆ 88 ವಿವಿಧ ಪ್ರಭೇದಗಳಿಗೆ ಸೇರಿದ 25,000ಕ್ಕೂ ಹೆಚ್ಚು ಸಂಧಿಪದಿಗಳ ಉಪಸ್ಥಿತಿಯನ್ನು ಸಾಕುಪ್ರಾಣಿಗಳು ಹಾಗೂ ವನಮೂಲದ ಶಾಖಾಹಾರಿ ಪ್ರಾಣಿಗಳಿಂದ ಪ್ರತ್ಯೇಕವಾಗಿ ಮೇಯಿಸ್ಪಲ್ಪಟ್ಟ ಬೇಲಿಹಾಕಲಾದ ಪ್ಲಾಟ್ ಗಳಲ್ಲಿ ಅವಲೋಕಿಸಿದರು. ಜೊತೆಗೆ, ಅಲ್ಲಿನ ಸಸ್ಯರಾಶಿಯ ಜೈವಿಕತ್ಯಾಜ್ಯ ಮತ್ತು ತೇವಾಂಶ ಹಾಗೂ ಪಿ.ಎಚ್.ದಂತಹ ಮಣ್ಣಿನ ಸ್ಥಿತಿಗಳನ್ನು ಕೂಡ ಅವರು ವಿಶ್ಲೇಷಣೆಗೆ ಒಳಪಡಿಸಿದರು.
“ಸಸ್ಯ ಸಂಕುಲ ಮತ್ತು ಮಣ್ಣಿನ ಜೈವಿಕ ಹಾಗೂ ಅಜೈವಿಕ ವ್ಯತ್ಯಯನಗಳು ಬಹಳ ಸಂಕೀರ್ಣವಾದ ರೀತಿಗಳಲ್ಲಿ ಪರಸ್ಪರ ಹೆಣೆದುಕೊಂಡಿದ್ದು, ಅದಕ್ಕೆ ಸಂಬಂಧಿಸಿದಂತೆ ಹೊಸ ಸಂಗತಿಗಳನ್ನು ಅರ್ಥೈಸಿಕೊಳ್ಳುತ್ತಲೇ ಇದ್ದೇವೆ. ಸಂಧಿಪದಿಗಳು ತಮ್ಮ ಆಹಾರ ಹಾಗೂ ನೆಲೆಗಾಗಿ ಈ ಘಟಕಾಂಶಗಳ ಮೇಲೆ ಬಹಳವಾಗಿ ಅವಲಂಬಿತವಾಗಿವೆ. ಇದು, ಜೀವವೈವಿಧ್ಯ ಪರಿಸರದಲ್ಲಿನ ಸ್ಥಳೀಯ ಮೇವುಪ್ರಾಣಿಗಳೊಂದಿಗೆ ಶತಮಾನಗಳಷ್ಟು ಅವಧಿಯಲ್ಲಿ ಬೆಳೆದಿರುವ ಸಾಹಚರ್ಯವಾಗಿದೆ” ಎಂಬುದು ಸಿ.ಇ.ಎಸ್.ನಲ್ಲಿ ಪಿಎಚ್.ಡಿ. ವಿದ್ಯಾರ್ಥಿಯಾಗಿದ್ದ ಮೊದಲ ಸಹಲೇಖಕರಾದ ಶರ್ಮಿಕ್ ರಾಯ್ ಅವರ ಪ್ರತಿಪಾದನೆಯಾಗಿದೆ.
ಕೆಲವು ಸಂಧಿಪದಿಗಳ ಸಂಖ್ಯೆಗಳು, ಮುಖ್ಯವಾಗಿ, ಜೇಡಗಳು, ಉಣ್ಣೆಗಳು ಹಾಗೂ ನುಸಿಗಳ ಸಂಖ್ಯೆಗಳು ಆಯಾ ಪ್ರದೇಶದಲ್ಲಿ ಯಾವ ಮೇವುಪ್ರಾಣಿಗಳಿವೆ ಎಂಬುದರೊಂದಿಗೆ ಪ್ರಬಲ ಸಂಬಂಧ ಹೊಂದಿರುತ್ತದೆ ಎನ್ನುವುದನ್ನು ಅಧ್ಯಯನಕಾರರು ದೃಢಪಡಿಸಿಕೊಂಡಿದ್ದಾರೆ. ಜಾನುವಾರು ಮೇಯವಿಕೆಯು ಜೇಡಗಳ ಸಂಖ್ಯೆಯನ್ನು ತಗ್ಗಿಸಿದರೆ, ಇದೇ ವೇಳೆ ಉಣ್ಣೆ ಹಾಗೂ ನುಸಿಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬರುತ್ತದೆ. ಜೇಡಗಳ ಸಂಖ್ಯೆಯು ಕುಸಿಯಲು ನಿಖರವಾದ ಕಾರಣವೇನೆಂಬುದು ಇನ್ನೂ ಪೂರ್ತಿ ಸ್ಪಷ್ಟವಾಗಿಲ್ಲವಾದರೂ ಜೇಡಗಳಿಗೆ ಅಗತ್ಯವಿರುವ ಆಹಾರ-ಆಕರಗಳಲ್ಲಿ ಇಳಿಮುಖತೆ ಹಾಗೂ ಪ್ರದೇಶದಲ್ಲಿನ ಸಸ್ಯ ನಮೂನೆಗಳಲ್ಲಿನ ಬದಲಾವಣೆಯು ಇದಕ್ಕೆ ಕಾರಣವಿರಬಹುದು ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.
“ಸ್ಥಳೀಯ ನೈಸರ್ಗಿಕ ಮೇವುಪ್ರಾಣಿ ಪ್ರದೇಶಗಳು ಹಾಗೂ ಜಾನುವಾರು ಪ್ರದೇಶಗಳ ನಡುವೆ ಉಣ್ಣೆ ಮತ್ತು ನುಸಿ ಸಂತತಿಗಳಲ್ಲಿ ಕಂಡುಬರುವ ಭಾರಿ ವ್ಯತ್ಯಾಸವು ಅವಲೋಕಿಸಲಾದ ಅತ್ಯಂತ ಅಚ್ಚರಿದಾಯಕ ಅಂಶಗಳಲ್ಲಿಒಂದಾಗಿದೆ” ಎನ್ನುತ್ತಾರೆ ಸಿ.ಇ.ಎಸ್.ನಲ್ಲಿ ಪಿಎಚ್.ಡಿ. ವಿದ್ಯಾರ್ಥಿಯಾಗಿದ್ದ ಮೊದಲ ಸಹಲೇಖಕ ಪ್ರಣಯ್ ಬೈದ್ಯ. ಪ್ರಪಂಚದಾದ್ಯಂತ ಶೇಕಡಾ 80ಕ್ಕಿಂತ ಹೆಚ್ಚು ಜಾನುವಾರುಗಳು, ಪ್ರಾಣಿ ಹಾಗೂ ಮಾನವ ಆರೋಗ್ಯಕ್ಕೆ ಭಂಗ ತರಬಲ್ಲ ಉಣ್ಣೆಗಳಿಗೆ ಆಶ್ರಯ ಕಲ್ಲಿಸುತ್ತವೆ. ಇದು ಪ್ರಾಣಿಜನ್ಯ ಪ್ರಸರಣ ರೋಗಗಳಗೆ ಎಡೆಮಾಡಿಕೊಟ್ಟು ಸಮಗ್ರ ಆರೋಗ್ಯಕ್ಕೆ (ಒನ್ ಹೆಲ್ತ್) ಬಹುದೊಡ್ಡ ಭೀತಿಯೊಡ್ಡುತ್ತದೆ“ ಎಂದೂ ಬೈದ್ಯ ಮುಂದುವರಿಸುತ್ತಾರೆ.
ಸಂಧಿಪದಿಗಳ ಸಂಖ್ಯೆಯಲ್ಲಿನ ಈ ಬದಲಾವಣೆಗಳ ಪರಿಣಾಮಗಳನ್ನು ಪ್ರತಿರೋಧಿಸುವ ದಿಸೆಯಲ್ಲಿ ಸ್ಥಳೀಯ ವನಮೂಲದ ಶಾಖಾಹಾರಿ ಪ್ರಾಣಿಗಳ ಸಂಖ್ಯೆಯನ್ನು ಪುನರ್ ವೃದ್ಧಿಸಲು ಮತ್ತು ಪ್ರಾಣಿಗಳು ಹಾಗೂ ಮಾನವರು ಸಹಬಾಳ್ವೆಯಿಂದಿರುವ ಪ್ರದೇಶಗಳಲ್ಲಿ ಕ್ರಿಮಿಕೀಟ-ಜನ್ಯ ರೋಗಗಳ ಅಪಾಯಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ
ಸಂಶೋಧಕರು ಸಲಹೆ ನೀಡಿದ್ದಾರೆ. ಜಾನುವಾರುಗಳಿಂದ ಬೃಹತ್ ಪ್ರಮಾಣದಲ್ಲಿ ಮೇಯಲ್ಪಡುವ ಪ್ರದೇಶಗಳಲ್ಲಿ ಪರಿಣಾಮಕಾರಿ ಪರಿಸರ ಸಂರಕ್ಷಣಾ ನೀತಿಗಳ ಅಗತ್ಯದ ಬಗ್ಗೆಯೂ ಅಧ್ಯಯನದಲ್ಲಿ ಒತ್ತಿ ಹೇಳಲಾಗಿದೆ.
ಬೈದ್ಯ ಅವರ ಪ್ರಕಾರ, “ಪ್ರಸ್ತುತ, ಬಹುತೇಕ ಪ್ರಾಕೃತಿಕ ಸಂಪನ್ಮೂಲವನ್ನು ಅಸಮರ್ಪಕ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ. ಗ್ರಾಮೀಣ ಜನರಿಗೆ ತಮ್ಮ ಜೀವನೋಪಾಯಗಳಿಗಾಗಿ ಈ ಸಂಪನ್ಮೂಲಗಳನ್ನು ಸುಸ್ಥಿರವಲ್ಲದ ರೀತಿಯಲ್ಲಿ ಬಳಸಿಕೊಳ್ಳಲು ಆಸ್ಪದ ಮಾಡಿಕೊಡಲಾಗಿದೆ. ಇದರ ಪರಿಣಾಮವಾಗಿ ಸ್ಥಳೀಯ ವನಮೂಲದ ಸಸ್ಯಾಹಾರಿ ಪ್ರಾಣಿಗಳಿಗೆ ಅವುಗಳ ಮೇವಿನ ಪ್ರದೇಶಗಳನ್ನು ಅಲಭ್ಯಗೊಳಿಸಲಾಗಿದೆ”. ನಮ್ಮ ಅಧ್ಯಯನವು, ಮೊದಲಿಗೆ ನೈಸರ್ಗಿಕ ಸಂಪನ್ಮೂಲಗಳನ್ನು ತನ್ನ ಸುಪರ್ದಿಗೆ ಒಳಪಡಿಸಿಕೊಂಡು, ನಂತರ ಅಂತಹ ಪ್ರದೇಶಗಳಲ್ಲಿ ಸಮರ್ಪಕ ರೀತಿಯಲ್ಲಿ ಜೀವವೈವಿಧ್ಯ ಪುನಶ್ಚೇತನ ಪುನರ್ ಸ್ಥಾಪನೆಗೆ ಮುಂದಾಗಲು ಸರ್ಕಾರಗಳನ್ನು ಉತ್ತೇಜಿಸಬಹುದು” ಎಂದೂ ಅವರು ಅಭಿಪ್ರಾಯಪಡುತ್ತಾರೆ.
ಉಲ್ಲೇಖ:
ಬೈದ್ಯ ಪಿ, ರಾಯ್ ಎಸ್, ಕರಪುರ್ಕರ್ ಜೆ, ಬಗಚಿ ಎಸ್, Replacing native grazers with livestock influences arthropods to have implications for ecosystem functions and disease, Ecological Applications (2025). https://esajournals.onlinelibrary.wiley.com/doi/10.1002/eap.3091
ಸಂಪರ್ಕ:
ಸುಮಂತಾ ಬಗಚಿ
ಸಹಾಯಕ ಪ್ರಾಧ್ಯಾಪಕರು
ಜೀವವೈವಿಧ್ಯ ವಿಜ್ಞಾನಗಳ (ಸಿಇಎಸ್) ಕೇಂದ್ರ
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ)
ಇಮೇಲ್: sbagchi@iisc.ac.in ಫೋನ್: 080-22933528 ವೆಬ್ ಸೈಟ್: https://sumantabagchi.weebly.com/
ಪರ್ತಕರ್ತರ ಗಮನಕ್ಕೆ:
ಅ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ
ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ.
ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ ದಯವಿಟ್ಟು news@iisc.ac.in
ಅಥವಾ pro@iisc.ac.in ಗೆ ಬರೆಯಿರಿ.