29 ಜೂನ್ 2026
ಮಾನೌವ್ ವ್ಯಾಸ್
ಬೆಳಕು, ಉಷ್ಣತೆ, ಒತ್ತಡ, ಕಾಂತೀಯ ಹಾಗೂ ವಿದ್ಯುತ್ ಕ್ಷೇತ್ರಗಳಂತಹ ವಿವಿಧ ಬಾಹ್ಯ ಪ್ರಚೋದನೆಗಳಿಗೆ ಪ್ರತಿಕ್ರಿಯೆಯಾಗಿ ತಮ್ಮ ಭೌತಿಕ ಗುಣಗಳನ್ನು ಬದಲಿಸಿಕೊಳ್ಳಬಲ್ಲ ‘ಸ್ಮಾರ್ಟ್’ ವಸ್ತುಗಳಿಗೆ (ಚತುರ ವಸ್ತುಗಳಿಗೆ) ಬೇಡಿಕೆ ಹೆಚ್ಚುತ್ತಿದೆ. ಇಂತಹ ಭೌತಿಕ ಗುಣಗಳ ಪೈಕಿ ‘ವಸ್ತು-ಸಂಕೀರ್ಣ’ಗಳ (ಮಟೀರಿಯಲ್ ಕಾಂಪ್ಲೆಕ್ಸ್) ಕಾಂತೀಯ ಸ್ಥಿತಿಯೂ ಒಂದಾಗಿದೆ. ಇದು ಅವುಗಳ ಎಲೆಕ್ಟ್ರಾನಿಕ್ ಭ್ರಮಣ ಸ್ಥಿತಿಯನ್ನು (ಸ್ಪಿನ್ ಸ್ಟೇಟ್) ಅವಲಂಬಿಸಿರುತ್ತದೆ. ಈ ಸಂಕೀರ್ಣಗಳಲ್ಲಿರುವ ಲೋಹದ ಪರಮಾಣುಗಳು ಬೆಳಕು, ಉಷ್ಣತೆ ಅಥವಾ ಭೌತಿಕ ಒತ್ತಡಕ್ಕೆ ಪ್ರತಿಕ್ರಿಯೆಯಾಗಿ ತಮ್ಮ ಭ್ರಮಣ ಸ್ಥಿತಿಯನ್ನು ಬದಲಿಸಿಕೊಳ್ಳಬಲ್ಲವು. ಅಂದರೆ, ಕಾಂತೀಯ ಸ್ಥಿತಿ ಮತ್ತು ಕಾಂತೀಯವಲ್ಲದ ಸ್ಥಿತಿಗಳ ನಡುವೆ ಪರಿವರ್ತನೆಗೊಳ್ಳಬಲ್ಲವು.
ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಘನಸ್ಥಿತಿ ಮತ್ತು ರಾಚನಿಕ ರಸಾಯನಶಾಸ್ತ್ರ ಘಟಕದ (SSCU) ಸಹ ಪ್ರಾಧ್ಯಾಪಕ ಅಭಿಷೇಕ್ ಮೊಂಡಲ್ ಹಾಗೂ ಅವರ ತಂಡದವರು ಕಾಂತೀಯ-ಸ್ಥಿತಿ ಪರಿವರ್ತನೆಯು ಪುನರಾವರ್ತನೆಗೊಳ್ಳಬಲ್ಲ ಹೊಸ ಬಗೆಯ ರಾಸಾಯನಿಕ ಸಂರಚನೆಗಳನ್ನು ವಿನ್ಯಾಸಗೊಳಿಸಿರುವುದಾಗಿ ಹೊಸ ಅಧ್ಯಯನ ವರದಿಯಲ್ಲಿ ವಿವರಿಸಿದ್ದಾರೆ. ಇವು ಸ್ವಯಂ-ಜೋಡಣೆಗೊಳ್ಳುವ ಲೋಹ-ಸಾವಯವ ಪದರಗಳಿಂದ ರೂಪುಗೊಂಡ ಅತ್ಯಂತ ರಂಧ್ರಯುಕ್ತ ಹರಳುಗಳಾಗಿವೆ (ಸ್ಫಟಿಕಗಳು). ಮುಂದಿನ ತಲೆಮಾರಿನ ದತ್ತಾಂಶ ಸಂಗ್ರಹ ಘಟಕಗಳು, ಕ್ವಾಂಟಮ್ ಪ್ರೊಸೆಸರ್‌ಗಳು ಹಾಗೂ ಸುಧಾರಿತ ಕೈಗಾರಿಕಾ ಸಂವೇದಕಗಳ ನಿರ್ಮಾಣಕ್ಕೆ ಈ ವಸ್ತುಗಳು ಮೂಲ ಘಟಕಗಳಾಗಿ ಬಳಕೆಯಾಗುವ ಸಾಧ್ಯತೆಯಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
‘Angewandte Chemie’ಯಲ್ಲಿ ಪ್ರಕಟಗೊಂಡಿರುವ ಮೊದಲ ಅಧ್ಯಯನದ ಪ್ರಕಾರ, ‘ವಸ್ತು-ವಿಜ್ಞಾನ’ದಲ್ಲಿನ ಬಹುಕಾಲದ ಸವಾಲೊಂದಕ್ಕೆ ಈ ಮೂಲಕ ಪರಿಹಾರ ಕಂಡುಕೊಳ್ಳಲಾಗಿದೆ. ಅಂದರೆ, ಅನಿಲ ಅಥವಾ ದ್ರವಗಳನ್ನು ಪತ್ತೆಹಚ್ಚಲು ಸಂವೇದಕವಾಗಿ ಸಾಮಾನ್ಯವಾಗಿ ಬಳಸಲ್ಪಡುವ 3D ಜೇನುಗೂಡಿನ ಮಾದರಿಯ ರಂಧ್ರಯುಕ್ತ ವಸ್ತುಗಳಲ್ಲಿ ಇಡೀ ವಸ್ತುವಿನ ಕಾಂತೀಯ ಸ್ಥಿತಿಯನ್ನು ಪರಿಣಾಮಕಾರಿಯಾಗಿ ಬದಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರಿಯಾಗಿಸಿಕೊಂಡ ಅನಿಲ ಅಥವಾ ದ್ರವವು ವಸ್ತುವಿನೊಳಗೆ ಪ್ರವೇಶಿಸಿದಾಗ ಅಥವಾ ಹೊರಹೋದಾಗ, ಅದರ ಸ್ಫಟಿಕ ಜಾಲಕವು (ಕ್ರಿಸ್ಟಲ್ ಲ್ಯಾಟಿಸ್) ವಿಸ್ತರಿಸುತ್ತದೆ ಅಥವಾ ಕುಗ್ಗುತ್ತದೆ. ಇದು, ಪರಮಾಣುಗಳನ್ನು ತಮ್ಮ ಕಾಂತೀಯ ಸ್ಥಿತಿಯನ್ನು ಬದಲಿಸಿಕೊಳ್ಳಲು ಪ್ರಚೋದಿಸುತ್ತದೆ, ಆದಾಗ್ಯೂ, ಸಾಂಪ್ರದಾಯಿಕ ರಂಧ್ರಯುಕ್ತ ವಸ್ತುಗಳಲ್ಲಿ ಈ ವಿಸ್ತರಣೆ ಅಥವಾ ಕುಗ್ಗುವಿಕೆಯು ಸೀಮಿತವಾಗಿರುತ್ತದೆ. ಏಕೆಂದರೆ, ಜಾಲಕದಲ್ಲಿರುವ ಪರಮಾಣುವೊಂದು ತನ್ನ ನೆರೆಯ ಪರಮಾಣುಗಳ ಮೇಲೆ ಬೀರುವ ದೂಡು ಅಥವಾ ಎಳೆಯುವ ಬಲವನ್ನು ರಂಧ್ರಗಳು ಹೀರಿಕೊಳ್ಳುತ್ತವೆ. ಹೀಗಾಗಿ, ಆ ಬಲವು ಪರಮಾಣುವಿನ ಸುತ್ತಮುತ್ತಲಿನ ಪ್ರದೇಶಕ್ಕಷ್ಟೇ ಸೀಮಿತವಾಗುತ್ತದೆ. ಇದರಿಂದ ಇಂತಹ ಸಂವೇದಕಗಳ ಕಾರ್ಯಕ್ಷಮತೆ ಕುಂಠಿತವಾಗುತ್ತದೆ. ಏಕೆಂದರೆ, ಇಲ್ಲಿ ಇಡೀ ವಸ್ತುವು ಒಟ್ಟಾಗಿ ತನ್ನ ಕಾಂತೀಯ ಸ್ಥಿತಿಯನ್ನು ಬದಲಿಸಿಕೊಳ್ಳುವುದಿಲ್ಲ.
ಈ ಸವಾಲನ್ನು ನಿವಾರಿಸಲು ಮೊಂಡಲ್ ಮತ್ತು ಅವರ ತಂಡದವರು, ಹೆಚ್ಚು ರಂಧ್ರಯುಕ್ತವಾಗಿರುವುದರ ಜೊತೆಗೆ ಸ್ಥಿತಿಸ್ಥಾಪಕ ಅಧಿಸ್ತರವನ್ನು (elastic matrix) ಹೊಂದಿರುವ ಹೊಸ ರಾಸಾಯನಿಕ ಸಂಕೀರ್ಣವನ್ನು ವಿನ್ಯಾಸಗೊಳಿಸಿದರು. ಈ ಅಧಿಸ್ತರದಲ್ಲಿರುವ ಪ್ರತಿಯೊಂದು ಪರಮಾಣುವೂ ತನ್ನ ಭ್ರಮಣ ಸ್ಥಿತಿಯನ್ನು (ಸ್ಪಿನ್ ಸ್ಟೇಟ್) ಬದಲಿಸಿಕೊಂಡಾಗ, ಅದು ನೆರೆಯ ಪರಮಾಣುಗಳ ಮೇಲೆ ಬೀರುವ ದೂಡುಬಲವು ಸ್ಥಿತಿಸ್ಥಾಪಕ ಜಾಲಕದ ಮೂಲಕ ಯಾವುದೇ ಅಡೆತಡೆಯಿಲ್ಲದೆ ಮುಂದಕ್ಕೆ ಪ್ರವಹಿಸುತ್ತದೆ. ಇದರಿಂದಾಗಿ, ಒಂದರ ನಂತರ ಮತ್ತೊಂದು ಪರಮಾಣು ತನ್ನ ಸ್ಥಿತಿಯನ್ನು ಬದಲಿಸಿಕೊಳ್ಳುವ ಡೊಮಿನೊ ಪರಿಣಾಮ ಉಂಟಾಗುತ್ತದೆ. ಅಂತಿಮವಾಗಿ, ಇಡೀ ವಸ್ತುವೇ ತನ್ನ ಕಾಂತೀಯ ಸ್ಥಿತಿಯನ್ನು ಬದಲಿಸಿಕೊಳ್ಳುತ್ತದೆ. ಈ ವಿದ್ಯಮಾನವನ್ನು ‘ಸಹಕಾರಿ ವರ್ತನೆ’ (cooperative behaviour) ಎಂದು ಕರೆಯಲಾಗುತ್ತದೆ. ಮುಖ್ಯವಾಗಿ, ಈ ಕಾಂತೀಯ ಸ್ಥಿತಿಪರಿವರ್ತನೆಯನ್ನು ಸಂಪೂರ್ಣವಾಗಿ ಪುನರಾವರ್ತಿಸಬಹುದಾಗಿರುವುದರಿಂದ ಈ ವಸ್ತುಗಳ ಮರುಬಳಕೆ ಸಾಧ್ಯವಾಗುತ್ತದೆ. ಭೌತಿಕ ಒತ್ತಡದ ಜೊತೆಗೆ ಬೆಳಕು ಮತ್ತು ಉಷ್ಣತೆ ಕೂಡ ಭ್ರಮಣ ಸ್ಥಿತಿಯನ್ನು ಪರಿವರ್ತಿಸಬಹುದಾದ ರೀತಿಯಲ್ಲಿ ಪ್ರಚೋದಿಸಬಲ್ಲವು.
“ಉದ್ದಿಮೆಗಳಲ್ಲಿ CH₄, CO ಮತ್ತು CO₂ಯಂತಹ ಮಹತ್ವದ ಅನಿಲಗಳನ್ನು ಮಾತ್ರವೇ ಆಯ್ದ ರೀತಿಯಲ್ಲಿ ಹೀರಿಕೊಳ್ಳಬಲ್ಲ ಸ್ಮಾರ್ಟ್ ಅನಿಲ-ಹೀರುಕ ಸಂವೇದಕಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಸಂಕೀರ್ಣದ ಉತ್ಪಾದನೆಯನ್ನು ದೊಡ್ಡ ಪ್ರಮಾಣಕ್ಕೆ ವಿಸ್ತರಿಸುವ ಕಾರ್ಯದಲ್ಲಿ ನಾವು ಪ್ರಸ್ತುತ ತೊಡಗಿದ್ದೇವೆ” ಎನ್ನುತ್ತಾರೆ ಮೊಂಡಲ್.

ಇಂತಹ ವಸ್ತುಗಳು ಪರಿಸರ ಮತ್ತು ಜೈವಿಕ ಸಂವೇದನಾ ಕ್ಷೇತ್ರಗಳಲ್ಲಿ ಅತ್ಯಂತ ಉಪಯುಕ್ತವಾಗಬಹುದಾದರೂ, ಅವು ಕಾರ್ಯಾಚರಿಸಬಲ್ಲ ಉಷ್ಣತೆಯ ವ್ಯಾಪ್ತಿಯೇ ಪ್ರಮುಖ ಮಿತಿಯಾಗುತ್ತದೆ. “ಹೀಗಾಗಿ, ಸಾಮಾನ್ಯ ಉಷ್ಣತೆಯ ಆಚೀಚಿನ ತಾಪಮಾನದಲ್ಲೇ ಈ ಸ್ಥಿತಿ-ಪರಿವರ್ತನೆಗಳನ್ನು ಪ್ರದರ್ಶಿಸಬಲ್ಲ ರಾಸಾಯನಿಕ ವ್ಯವಸ್ಥೆಯನ್ನು ಸಂಶ್ಲೇಷಿಸುವುದು ನಮ್ಮ ಗುರಿಯಾಗಿತ್ತು” ಎಂದು ಎರಡೂ ಅಧ್ಯಯನಗಳ ಪ್ರಥಮ ಲೇಖಕರಾದ SSCUನ ಪಿಎಚ್.ಡಿ. ಸಂಶೋಧನಾರ್ಥಿ ಕೃಷ್ಣ ಕೌಶಿಕ್ ವಿವರಿಸುತ್ತಾರೆ. “ಪ್ರಸ್ತುತ ಲಭ್ಯವಿರುವ ವಸ್ತುಗಳು ಸಾಮಾನ್ಯವಾಗಿ 50 K (-223°C)ಗಿಂತ ಕಡಿಮೆ ಇರುವ ಅತ್ಯಂತ ಕಡಿಮೆ ಉಷ್ಣತೆಯಲ್ಲಷ್ಟೇ ಕಾರ್ಯಾಚರಿಸುತ್ತವೆ. ಅವು ಬಹಳ ಅಸ್ಥಿರವಾಗಿದ್ದು, ಉಷ್ಣತೆಯಲ್ಲಿ ಕೊಂಚ ಹೆಚ್ಚಳವಾದರೂ ಮತ್ತೆ ತಮ್ಮ ಮೂಲಸ್ಥಿತಿಗೆ (ground state) ಮರಳಿಬಿಡುತ್ತವೆ.” ಹೀಗಾಗಿ, ಇಂತಹ ಅತ್ಯಂತ ಕಡಿಮೆ ಉಷ್ಣತೆಯನ್ನು ಕಾಯ್ದುಕೊಳ್ಳಲು ಹೆಚ್ಚಿನ ಶಕ್ತಿಯನ್ನು ಬಳಸುವ ದುಬಾರಿ ಶೀತಲೀಕರಣ ವ್ಯವಸ್ಥೆಗಳ ಅಗತ್ಯವಿರುತ್ತದೆ.
ಈ ಮಿತಿಯನ್ನು ನಿವಾರಿಸುವ ಸಲುವಾಗಿ ತಂಡದವರು ಸಾಮಾನ್ಯ ಉಷ್ಣತೆಯ ಆಚೀಚಿನ ಮಟ್ಟದಲ್ಲೇ ಬೆಳಕು, ಉಷ್ಣತೆ ಮತ್ತು ದ್ರಾವಕ-ಪ್ರೇರಿತ ಕಾಂತೀಯ ಸ್ಥಿತಿಪರಿವರ್ತನೆಗಳನ್ನು ಸಾಧಿಸಬಲ್ಲ 2D ಷಟ್ಕೋನೀಯ ಸಂರಚನೆಯನ್ನು ವಿನ್ಯಾಸಗೊಳಿಸಿದರು ಎಂದು ‘Small’ ಜರ್ನಲ್‌ನಲ್ಲಿ ಪ್ರಕಟಿಸಲಾಗಿರುವ ಮತ್ತೊಂದು ಅಧ್ಯಯನದಲ್ಲಿ ವಿವರಿಸಲಾಗಿದೆ. ಮೊದಲಿಗೆ ಸಂಶೋಧಕರು ಒಂದ ಆರಂಭಿಕ-ಸಂಕೀರ್ಣವನ್ನು (precursor complex) ಸಂಶ್ಲೇಷಿಸಿದರು. ಈ ಸಂಕೀರ್ಣವನ್ನು ಅದರ ದ್ರಾವಣದಲ್ಲೇ ಇರಿಸಿದಾಗ, ಸುತ್ತಮುತ್ತಲಿನ ದ್ರಾವಕ ಅಣುಗಳು ಹಾಗೂ ವಾತಾವರಣದಲ್ಲಿರುವ ತೇವಾಂಶದೊಂದಿಗೆ ಅದು ರಾಸಾಯನಿಕವಾಗಿ ಪ್ರತಿಕ್ರಿಯಿಸಿ ಅತ್ಯಂತ ಸ್ಥಿರವಾದ ಹೊಸ ಸಂಕೀರ್ಣವಾಗಿ ಪರಿವರ್ತನೆಯಾಗುತ್ತದೆ. ಆರಂಭಿಕ-ಜಾಲವು 176 K (ಸುಮಾರು -97°C)ನಷ್ಟು ತೀವ್ರ ಶೀತೋಷ್ಣದಲ್ಲಿ ತನ್ನ ಭ್ರಮಣ ಮತ್ತು ಎಲೆಕ್ಟ್ರಾನಿಕ್ ಸ್ಥಿತಿಗಳನ್ನು ಬದಲಿಸಿಕೊಳ್ಳುತ್ತದೆ. ಆದರೆ, ಪರಿವರ್ತನೆಯಾದ ಹೊಸ ಸಂಕೀರ್ಣವು ಸುಮಾರು 240 K ಮತ್ತು 310 K (ಕ್ರಮವಾಗಿ -33°C ಮತ್ತು 37°C) ಉಷ್ಣತೆಯಲ್ಲಿ ಎರಡು ವಿಭಿನ್ನ ಸ್ಥಿತಿಪರಿವರ್ತನೆಗಳನ್ನು ಪ್ರದರ್ಶಿಸುತ್ತದೆ. ಹೀಗೆ, ಕಾಂತೀಯ ಸ್ಥಿತಿಪರಿವರ್ತನೆಯನ್ನು ಸಾಮಾನ್ಯ ಕೊಠಡಿ ಉಷ್ಣತೆಯ ವ್ಯಾಪ್ತಿಗೆ ಯಶಸ್ವಿಯಾಗಿ ತರಲಾಯಿತು. ಈ ಸ್ಥಿತಿಪರಿವರ್ತನೆಯ ಸಂದರ್ಭದಲ್ಲಿ ಬಣ್ಣದಲ್ಲಿಯೂ ಸ್ಪಷ್ಟವಾದ ಬದಲಾವಣೆ ಕಂಡುಬರುತ್ತದೆ. ಇದರಿಂದ ಈ ಪರಿವರ್ತನೆಯನ್ನು ಬರಿಗಣ್ಣಿನಿಂದಲೇ ನೇರವಾಗಿ ಗುರುತಿಸಬಹುದಾದ ದೃಶ್ಯ ಚಹರೆ ದೊರೆಯುತ್ತದೆ.
ಸಂವೇದಕ ಆನ್ವಯಿಕತೆಗಳಾಗಿ ಹೊರತಾಗಿ, ಈ ರೀತಿಯಾಗಿ ಸ್ಥಿತಿಯನ್ನು ಬದಲಿಸಿಕೊಳ್ಳಬಲ್ಲ ವಸ್ತುಗಳು ಭವಿಷ್ಯದ ಕ್ವಾಂಟಮ್ ತಂತ್ರಜ್ಞಾನಗಳಿಗೆ ಹೊಸ ಸಾಧ್ಯತೆಗಳನ್ನು ತೆರೆಯುತ್ತವೆ. ಬೆಳಕು, ಉಷ್ಣತೆ ಅಥವಾ ಒತ್ತಡದ ಸಂವೇದನೆಗೆ ಒಳಪಡಿಸಿದಾಗ ಈ ವಸ್ತುಗಳು ಒಂದು ಕಾಂತೀಯ ಸ್ಥಿತಿ ಹಾಗೂ ಮತ್ತೊಂದು ಕಾಂತೀಯ ಸ್ಥಿತಿಯ ನಡುವೆ ಪುನರಾವರ್ತಿಸಬಹುದಾದ ರೀತಿಯಲ್ಲಿ ಬದಲಾಗಬಲ್ಲವು. ಇದು ಒಂದು ಸಣ್ಣ ಅಣುಮಟ್ಟದ ಸ್ವಿಚ್‌ನಂತೆ ಕಾರ್ಯಾಚರಿಸುತ್ತದೆ. ಪರಮಾಣು ಮಟ್ಟದಲ್ಲಿ ಕಾಂತೀಯ ಸ್ಥಿತಿಗಳನ್ನು ನಿಯಂತ್ರಿಸುವ ಈ ಸಾಮರ್ಥ್ಯ ಮಹತ್ವದ್ದಾಗಿದೆ. ಏಕೆಂದರೆ, ಮಾಹಿತಿಯನ್ನು ಸಂಪೂರ್ಣವಾಗಿ ಹೊಸ ರೀತಿಯಲ್ಲಿ ಸಂಗ್ರಹಿಸಿ, ನಿಯಂತ್ರಿಸಿ ಮತ್ತು ಸಂಸ್ಕರಿಸುವ ಕ್ವಾಂಟಮ್ ತಂತ್ರಜ್ಞಾನಗಳ ಮೂಲತತ್ವಕ್ಕೆ ಇದು ಹೋಲಿಕೆಯಾಗುತ್ತದೆ. ಪ್ರಾಯೋಗಿಕ ಕ್ವಾಂಟಮ್ ಕಂಪ್ಯೂಟರ್‌ಗಳು ಇನ್ನೂ ಅಭಿವೃದ್ಧಿ ಹಂತದಲ್ಲಿರುವಾಗ ಇಂತಹ ಸಂಶೋಧನೆಗಳು ಮುಂದಿನ ತಲೆಮಾರಿನ ಸುಧಾರಿತ ಗಣಕ, ಸಂವಹನ ಮತ್ತು ಸಂವೇದನಾ ತಂತ್ರಜ್ಞಾನಗಳಿಗೆ ಅಗತ್ಯವಾಗಬಹುದಾದ ಮೂಲಭೂತ ನಿರ್ಮಾಣ ಘಟಕಗಳನ್ನು ಒದಗಿಸುತ್ತವೆ.
“ಈ ಆವಿಷ್ಕಾರಗಳು ಇನ್ನೂ ಮೂಲಭೂತ ಸಂಶೋಧನೆಯ ಹಂತದಲ್ಲಿದ್ದರೂ, ಜಾಗತಿಕ ಮಟ್ಟದ ಸವಾಲುಗಳಿಗೆ ಪರಿಹಾರ ಆಗಬಲ್ಲವು” ಎನ್ನುತ್ತಾರೆ ಮೊಂಡಲ್. “ಆಧುನಿಕ ದತ್ತಾಂಶ ಕೇಂದ್ರಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳು ಅಪಾರ ಪ್ರಮಾಣದ ಶಕ್ತಿಯನ್ನು ಬಳಸುತ್ತವೆ. ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯಾಚರಿಸಬಲ್ಲ ಪರ್ಯಾಯ ಭೌತಿಕ-ವಸ್ತುಗಳನ್ನು (ಮಟೀರಿಯಲ್ಸ್) ಅಭಿವೃದ್ಧಿಪಡಿಸುವುದರಿಂದ ಶಕ್ತಿಯ ಬೇಡಿಕೆಯನ್ನು ಕಡಿಮೆ ಮಾಡಬಹುದಾಗಿದೆ. ಇದರಿಂದ ಹೆಚ್ಚು ಸುಸ್ಥಿರ ತಂತ್ರಜ್ಞಾನಗಳ ಅಭಿವೃದ್ಧಿಗೂ ಕೊಡುಗೆ ನೀಡಬಹುದು. ಅದೇ ರೀತಿ, ಏಕಕಾಲದಲ್ಲಿ ಸಂವೇದಕ, ಸ್ವಿಚ್ ಮತ್ತು ಸ್ಮರಣ ಘಟಕವಾಗಿ ಕಾರ್ಯಾಚರಿಸಬಲ್ಲ ವಸ್ತುಗಳು ವಿನ್ಯಾಸವನ್ನು ಸರಳಗೊಳಿಸುವ ಜೊತೆಗೆ ಉತ್ಪಾದನಾ ವೆಚ್ಚವನ್ನೂ ಕಡಿಮೆಗೊಳಿಸಬಹುದು.”

ಉಲ್ಲೇಖಗಳು:
ಕೌಶಿಕ್ ಕೆ, ಮೊಂಡಲ್ ಪಿಕೆ, ಕಮಿಲ್ಯ ಎಸ್, ಪ್ರಧಾನ್ ಎಸ್, ಮೆಹ್ತಾ ಎಸ್, ಲೆಸ್ಕೌಜೆಕ್ ಆರ್, ರೌಜೆರೆಸ್ ಎಂ, ಪೆಚೌಸೆಕ್ ಜೆ, ಲಿ ವೈ, ಮೊಂಡಲ್ ಎ, Solvent-regulated lattice elasticity and pressure-induced multi-stimuli spin-state bistability in a porous hexagonal framework, Angewandte Chemie International Edition (2026).
https://onlinelibrary.wiley.com/doi/10.1002/anie.9883802
ಕೌಶಿಕ್ ಕೆ, ಮೆಹ್ತಾ ಎಸ್, ಕಮಿಲ್ಯ ಎಸ್, ಘೋಷ್ ಎಸ್, ಡ್ಯಾಫೆ ಎನ್, ಮೊಂಡಲ್ ಪಿಕೆ, ಪಂಜಿಕರ್ ಎಸ್, ಡ್ರೀಸರ್ ಜೆ, ಮೂನ್ ಡಿ, ಹೆರ್ಚೆಲ್ ಆರ್, ಲಿ ವೈ, ರೌಜೆರೆಸ್ ಎಂ, ಮೊಂಡಲ್ ಎ, Achieving ambient-temperature multiway bistability via electron-transfer-coupled spin-state switching in 2D hexagonal materials, Small (2026).
https://onlinelibrary.wiley.com/doi/10.1002/smll.74035
ಸಂಪರ್ಕ:
ಅಭಿಷೇಕ್ ಮೊಂಡಲ್
ಸಹ ಪ್ರಾಧ್ಯಾಪಕರು
ಘನಸ್ಥಿತಿ ಮತ್ತು ರಾಚನಿಕ ರಸಾಯನಶಾಸ್ತ್ರ ಘಟಕ (ಎಸ್ ಎಸ್ ಸಿ ಯು)
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)
ಇಮೇಲ್: mondal@iisc.ac.in ಫೋನ್: +91 80 2293 3310 ಪ್ರಯೋಗಾಲಯ ವೆಬ್ಸೈಟ್: https://m2ssscuiisc.in/
ಪರ್ತಕರ್ತರ ಗಮನಕ್ಕೆ:
ಎ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐಐಎಸ್‌ಸಿ ಹೆಸರಿನೊಂದಿಗೆ ಪ್ರಕಟಿಸಿ. ಬಿ) ಐಐಎಸ್‌ಸಿ ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ news@iisc.ac.in ಅಥವಾ pro@iisc.ac.in ಗೆ ಬರೆಯಿರಿ.