ವಿದ್ಯುತ್ ಇಲ್ಲದೆ ನೀರು ಪೂರೈಕೆ: ಛತ್ತೀಸ್ಗಢದ ನೀರಾವರಿ ಸವಾಲುಗಳಿಗೆ ಐಎಎಸ್ಸಿ ಸಂಶೋಧಕರ ಪರಿಹಾರ


07 ಡಿಸೆಂಬರ್ 2023

-ಅನಂತಪದ್ಮನಾಭನ್ ಎಂ.ಎಸ್

ಭಾರತದಲ್ಲಿ, ನೀರಾವರಿ ಸೌಲಭ್ಯ ಕಲ್ಪಿಸುವುದು ಒಂದು ಪ್ರಮುಖ ಸಮಸ್ಯೆಯಾಗಿದೆ. ಛತ್ತೀಸ್ಗಢದಲ್ಲಿ ಈ ನೀರಾವರಿ ಕೊರತೆಗೆ ಪರಿಹಾರ ಕಂಡುಹಿಡಿಯಲು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸುಸ್ಥಿರ ತಾಂತ್ರಿಕತೆಗಳ (ಸಿಎಸ್ಟಿ) ಕೇಂದ್ರದ ಸಹ ಪ್ರಾಧ್ಯಾಪಕ ಪುನೀತ್ ಸಿಂಗ್ ಅವರು ಛತ್ತೀಸ್ಗಡದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು 10 ವರ್ಷಗಳಿಂದ ಪ್ರಯತ್ನಶೀಲರಾಗಿದ್ದಾರೆ.

ಛತ್ತೀಸ್ಗಡವು ಗಂಗಾ, ಗೋದಾವರಿ ಮತ್ತು ಮಹಾನದಿ ಜಲಾನಯನ ಪ್ರದೇಶಗಳಿಂದ ನದಿ ನೀರನ್ನು ಪಡೆಯುತ್ತದೆ. ರಾಯಪುರದ ಉತ್ತರಕ್ಕಿರುವ ಪ್ರದೇಶದ ಗಣನೀಯ ಭಾಗಕ್ಕೆ ನೀರಾವರಿ ಒದಗಿಸಲು ಕಾಲುವೆ ಜಾಲಗಳನ್ನು ಅಭಿವೃದ್ಧಿಪಡಿಸಲಾಗಿದೆ, ಆದರೆ, ದಕ್ಷಿಣ ಛತ್ತೀಸ್ಗಡದ ಬುಡಕಟ್ಟು ಬಹುಸಂಖ್ಯಾತರಿರುವ ಪ್ರದೇಶಗಳ ಹೆಚ್ಚಿನ ಭಾಗವು ಜಲಾಶಯ ಆಧಾರಿತ ನೀರಾವರಿ ಸೌಲಭ್ಯ ಹೊಂದಿರುವುದಿಲ್ಲ. ಈ ಪ್ರದೇಶದ ಅನೇಕ ರೈತರು ಪ್ರಾಥಮಿಕವಾಗಿ ಮುಂಗಾರು ಬೆಳೆ ಫಸಲು ಅವಲಂಬಿಸಿದ್ದಾರೆ. ಪೈಪ್ ಆಧಾರಿತ ನೀರಾವರಿಯಂತಹ ಪರ್ಯಾಯ ವಿಧಾನಗಳನ್ನು ಅನ್ವೇಷಿಸಲಾಗಿದ್ದರೂ ಅವು ಹೆಚ್ಚು ಪ್ರಚಲಿತಕ್ಕೆ ಬಂದಿಲ್ಲ ಅಥವಾ ಜನರಿಂದ ಸ್ವೀಕಾರಗೊಂಡಿಲ್ಲ.

ಸಿಂಗ್ ಅವರ ಪ್ರಯತ್ನಗಳು, ಮೊದಲಿಗೆ, ಬಸ್ತರ್ ಜಿಲ್ಲೆಯ ತೈಪಾದರ್ ಗ್ರಾಮದಲ್ಲಿ ಆ ಪ್ರದೇಶದ ಮಣ್ಣು ಮತ್ತು ಭೂಪ್ರದೇಶ ಅರ್ಥಮಾಡಿಕೊಳ್ಳಲು ಕ್ಷೇತ್ರ ಸಮೀಕ್ಷೆಯೊಂದಿಗೆ ಪ್ರಾರಂಭವಾಯಿತು. ಅವರ ಪ್ರಯತ್ನದಿಂದಾಗಿ, ತೈಪದರ್ ಈಗ ವಿದ್ಯುತ್ ಅಗತ್ಯವಿಲ್ಲದ (ಶೂನ್ಯ ವಿದ್ಯುತ್) ಸುಸ್ಥಿರ ನೀರು ಪಂಪ್ ಮಾಡುವ ವ್ಯವಸ್ಥೆ ಹೊಂದಿದೆ. ಅವರ ಕಾರ್ಯಯೋಜನೆಯ ಭಾಗವಾಗಿ, ನದಿಗಳ ಉದ್ದಕ್ಕೂ ಇರುವ ಲೋ-ಹೆಡ್ ಚೆಕ್ ಡ್ಯಾಮ್ಗಳಲ್ಲಿ ಯಾವುದೇ ವಿದ್ಯುತ್ ಇಲ್ಲದೆ ನೀರು ಪಂಪ್ ಮಾಡಲು ಟರ್ಬೈನ್ ಪಂಪ್ಗಳನ್ನು ಅಳವಡಿಸಲಾಗಿದೆ.

ಲೋ- ಹೆಡ್ ನಲ್ಲಿ ಈ ಟರ್ಬೈನ್ ಗಳು ಸುಮಾರು 90% ನದಿಯ ನೀರಿನ ಹರಿವನ್ನು (ನಂತರ ಅದನ್ನು ನದಿಗೆ ಬಿಡಲಾಗುತ್ತದೆ) ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳುತ್ತದೆ. ಈ ವೇಳೆ ಉಂಟಾಗುವ ಟಾರ್ಕ್ ಮತ್ತು ವೇಗವನ್ನು ಪ್ರಮಾಣಿತ ಸಬ್ಮರ್ಸಿಬಲ್ ಬಹುಹಂತಗಳ ಪಂಪ್ಗಳನ್ನು ಚಾಲನೆಗೊಳಿಸಲು ಬಳಸಲಾಗುತ್ತದೆ. ಇದರ ಆಧುನಿಕತೆಯು ವ್ಯವಸ್ಥೆಯ ನಿಖರ ವಿನ್ಯಾಸದಲ್ಲಿ ಅಡಗಿದೆ. ವಾಟರ್ ಹೆಡ್ 2ರಿಂದ 4 ಮೀಟರ್ಗಳಿರುವ ವ್ಯಾಪ್ತಿಯಲ್ಲಿ ನಿರ್ದಿಷ್ಟ ಜಾಗದ ಪರಿಸ್ಥಿತಿಯನ್ನು ಆಧರಿಸಿ ಅಗತ್ಯಕ್ಕೆ ತಕ್ಕಂತೆ ಸಾಮಾನ್ಯವಾಗಿ 15 ರಿಂದ 25 ಮೀಟರ್ಗಳವರೆಗೆ ಅಥವಾ 30 ಮೀಟರ್ಗಳವರೆಗೂ ವಿವಿಧ ಎತ್ತರಗಳಿಗೆ ನೀರನ್ನು ಎತ್ತಿ ಸಾಗಿಸುವುದು ಇದರ ಉದ್ದೇಶವಾಗಿದೆ.

ಸಿಂಗ್ ಅವರು ಜರ್ಮನಿಯ ಕಾರ್ಲ್ಸ್ರುಹೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪಿಎಚ್.ಡಿ. ಅಧ್ಯಯನದ ಸಂದರ್ಭದಲ್ಲಿ ವಿದ್ಯುತ್ ಉತ್ಪಾದನೆಗಾಗಿ ಟರ್ಬೈನ್ ಪಂಪ್ಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಪ್ರಾರಂಭಿಸಿದರು. ಅವರು 2009ರಲ್ಲಿ ಭಾರತಕ್ಕೆ ಹಿಂದಿರುಗಿದಾಗ, ತೈಪದರ್ನಿಂದ ಆರಂಭಿಸಿ ಛತ್ತೀಸ್ಗಡದಲ್ಲಿ ರಾಮ್ ಪಂಪ್ಗಳ (ram pumps) ನಿಯೋಜನೆ ಬಗ್ಗೆ ಅನ್ವೇಷಿಸಲು ಶುರು ಮಾಡಿದರು “ವಿದ್ಯುತ್ ಉತ್ಪಾದಿಸಬಲ್ಲ ಎರಡು ಟರ್ಬೈನ್ ಪಂಪ್ಗಳನ್ನು ಜರ್ಮನಿಯ ಕೆಎಸ್ಬಿ ಪಂಪ್ಸ್ ಟ್ರಸ್ಟ್ ಉದಾರವಾಗಿ ಪ್ರಾಯೋಜಿಸಿತು. ನಾನು ಯು.ಎಸ್.ಎ.ದ ರೈಫ್ನಿಂದ ಪಡೆದ ರಾಮ್ ಪಂಪ್ ಗೆ ಹಾಗೂ ಮೂರು ವರ್ಷಗಳ ಕಾಲ ನಿರ್ಮಾಣ ಕಾರ್ಯಕ್ಕಾಗಿ ಸುಮಾರು 50 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದೇನೆ” ಎಂದು ಸಿಂಗ್ ವಿವರಿಸುತ್ತಾರೆ. ತೈಪದಾರ್ ಅಲ್ಲದೆ, ಸುಕ್ಮಾ ಜಿಲ್ಲೆಯ ಗಿರ್ದಾಲ್ ಪರದಲ್ಲಿ ಮತ್ತು ಗೌರೆಲ್ಲಾ-ಪೆಂಡ್ರಾ-ಮಾರ್ವಾಹಿ (ಜಿಪಿಎಂ) ಜಿಲ್ಲೆಯ ಕರ್ಹಾನಿಯಲ್ಲಿಯೂ ಇದೇ ರೀತಿಯ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದ್ದು, ಇದರ ಪರಿಣಾಮವನ್ನು ಈ ಸ್ಥಳಗಳಲ್ಲಿ ನೋಡಬಹುದಾಗಿದೆ ಎಂದು ಸಿಂಗ್ ಹೇಳುತ್ತಾರೆ.

ಡಿಸೆಂಬರ್ 2022ರಲ್ಲಿ, ಐ.ಐ.ಎಸ್.ಸಿ.ಯ ಫೌಂಡೇಶನ್ ಫಾರ್ ಸೈನ್ಸ್ ಇನ್ನೋವೇಷನ್ ಅಂಡ್ ಡೆವಲಪ್ಮೆಂಟ್ (FSID) ಛತ್ತೀಸ್ಗಡದಲ್ಲಿ ಜಲಸಂಪನ್ಮೂಲ ನಿರ್ವಹಣೆ ಮತ್ತು ನೀರಾವರಿ ಮೂಲಸೌಕರ್ಯ ಹೆಚ್ಚಿಸಲು ಛತ್ತೀಸ್ಗಡ ಜಲಸಂಪನ್ಮೂಲ ಇಲಾಖೆ (WRD)ಯೊಂದಿಗೆ ಕೈಜೋಡಿಸಿತು. ಕರ್ಹಾನಿ, ನೀಲಾವರಂ (ಸುಕ್ಮಾ ಜಿಲ್ಲೆ), ಮತ್ತು ಪೊಂಗ್ರೋ (ಜಷ್ಪುರ್ ಜಿಲ್ಲೆ) ಈ ಸಹಯೋಗದ ಅಡಿ ಒಳಗೊಳ್ಳುವ ಪ್ರದೇಶಗಳಾಗಿವೆ.

“ಈ ಸಹಯೋಗದಿಂದಾಗಿ ಕಾರ್ಯಯೋಜನೆಗೆ ಹೆಚ್ಚಿನ ಅನುಕೂಲವಾಗುತ್ತದೆ. ಉದಾಹರಣೆಗೆ, ಸೈಟ್ ಕಾರ್ಯ, ಸಿವಿಲ್ ಕಾಮಗಾರಿ ಮತ್ತು ಟರ್ಬೈನ್ನ ಸಾಗಣೆ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ನಿರ್ವಹಿಸುತ್ತದೆ. ಹೀಗಾಗಿ, ಟರ್ಬೈನ್ ವಿನ್ಯಾಸ ಮತ್ತು ಅಳವಡಿಸಲಾದ ಸ್ಥಳದಲ್ಲಿ ಟರ್ಬೈನಿನ ಸಮರ್ಪಕ ಕಾರ್ಯಾಚರಣೆ ಖಾತರಿಪಡಿಸಿಕೊಳ್ಳುವುದರ ಬಗ್ಗೆ ಐಎಎಸ್ಸಿ ಗಮನಹರಿಸಲು ಸಾಧ್ಯವಾಗುತ್ತದೆ. ಇದರ ಜೊತೆಗೆ ನಾವು ಈಗ ಅನುದಾನ ಸಂಗ್ರಹಿಸುವುದರಲ್ಲಿ ತೊಡಗಿಸಿಕೊಂಡು ಅದನ್ನು ವೆಂಡರ್ ಗಳಿಗೆ ನಿಯೋಜಿಸಬಹುದು,” ಎಂದೂ ಸಿಂಗ್ ಅಭಿಪ್ರಾಯಪಡುತ್ತಾರೆ.

ಈ ಸಹಯೋಗದ ಅಡಿಯಲ್ಲಿ, ವಿವಿಧ ವೆಂಡರ್ ಗಳು ತಯಾರಿಸಿದ ಟರ್ಬೈನ್ಗಳ ಗುಣಮಟ್ಟವನ್ನು ಐ.ಐ.ಎಸ್.ಸಿ. ನಿಯೋಜಿಸಿದ ಸಿಮ್ಯುಲೇಶನ್ ವ್ಯವಸ್ಥೆಯಲ್ಲಿ ಪರೀಕ್ಷಿಸಲಿದೆ. “ಈ ಪಾಲುದಾರಿಕೆಯು (ಸರ್ಕಾರಿ ಅಧಿಕಾರಿಗಳೊಂದಿಗೆ) ನೀರಾವರಿ ಯೋಜನೆಗಳ ಹಿಂದಿರುವ ಆಡಳಿತ ಪ್ರಕ್ರಿಯೆಯನ್ನು ಸುಲಭವಾಗಿಸುತ್ತದೆ. ನಾವು ಸರ್ಕಾರದಿಂದ ಹಣವನ್ನು ಪಡೆಯುತ್ತಿದಂತೆಯೇ, ನಮಗೆ ಸೇವೆಗಳನ್ನು ಒದಗಿಸುವ ನಮ್ಮ ಭಾಗೀದಾರರಿಗೆ ಹಣವನ್ನು ವಿತರಿಸಬಹುದು” ಎನ್ನುತ್ತಾರೆ ಐಐಎಸ್ಸಿ ಮೆಟೀರಿಯಲ್ಸ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ವಿಕ್ರಮ್ ಜಯರಾಮ್. “ಅಲ್ಲದೆ, ಪರೀಕ್ಷೆಗಳನ್ನು ಖುದ್ದು ವೀಕ್ಷಿಸಲು ನೀರಾವರಿ ಎಂಜಿನಿಯರ್ಗಳನ್ನು ಆಹ್ವಾನಿಸುವುದು ಮತ್ತು ಅವರಿಗೆ ಅಗತ್ಯ ತರಬೇತಿ ನೀಡುವುದು ಐಐಎಸ್ಸಿ ಕಾರ್ಯದ ಭಾಗವಾಗಿರುತ್ತದೆ. ಹೀಗೆ ತರಬೇತಿ ಪಡೆದ ಎಂಜಿನಿಯರುಗಳು ನಂತರ ನಿರ್ದಿಷ್ಟ ಯೋಜನಾ ಸ್ಥಳಗಳಲ್ಲಿ ಸ್ಥಳೀಯ ಸಂಪನ್ಮೂಲ ವ್ಯಕ್ತಿಗೆ ತರಬೇತಿ ನೀಡುತ್ತಾರೆ” ಎಂದೂ ಅವರು ಹೇಳುತ್ತಾರೆ.

ಈ ಯೋಜನೆಯಲ್ಲಿ ಭಾಗಿಯಾಗಿರುವ ಇತರರಲ್ಲಿ ಬಿ.ಗುರುಮೂರ್ತಿ (ಮುಖ್ಯ ಕಾರ್ಯನಿರ್ವಾಹಕ, ಎಫ್ಎಸ್ಐಡಿ), ಛತ್ತೀಸ್ಗಡ ಸರ್ಕಾರದ ಅಧಿಕಾರಿಗಳಾದ ಅನ್ಬಳಗನ್ ಪಿ, ಜಲಸಂಪನ್ಮೂಲ ಕಾರ್ಯದರ್ಶಿ (ಐಎಎಸ್), ರಿಚಾ ಪ್ರಕಾಶ್ ಚೌಧರಿ, ಜಿಲ್ಲಾಧಿಕಾರಿ (ಐಎಎಸ್), ಅಜಯ್ ಸೋಮವರ್, ಮುಖ್ಯ ಎಂಜಿನಿಯರ್; ಮತ್ತು ಮಧುಚಂದ್ರ, ಕಾರ್ಯಪಾಲಕ ಎಂಜಿನಿಯರ್ ರವರು ಸೇರಿದ್ದಾರೆ.

ಮುಂದಿನ ಕೆಲವು ವರ್ಷಗಳಲ್ಲಿ, ಪೈಪಿಂಗ್, ಸಂಗ್ರಹಣೆ ಮತ್ತು ಕಾಲುವೆ ಜಾಲಗಳ ವ್ಯವಸ್ಥೆಯೊಂದಿಗೆ ಪ್ರತಿ ಅಣೆಕಟ್ಟಿನಲ್ಲಿ ಒಂದು ಅಥವಾ ಎರಡು ಪಂಪುಗಳನ್ನು ಅಳವಡಿಸುವ ಕಾರ್ಯದ ಮೇಲೆ ಸಹಯೋಗವು ಗಮನಹರಿಸುತ್ತದೆ. “ವರ್ಷಕ್ಕೆ 25 ನಿರ್ಮಾಣವು ನಮ್ಮ ಮೊದಲ ಗುರಿಯಾಗಿದ್ದು, ಆಮೇಲೆ ಯಶಸ್ಸಿನ ಪ್ರಮಾಣ ಅವಲೋಕಿಸಿ ಈ ವ್ಯವಸ್ಥೆಯನ್ನು ಎಲ್ಲಾ 400 ಅಥವಾ ಹೆಚ್ಚಿನ ಅಣೆಕಟ್ಟುಗಳಿಗೆ ವಿಸ್ತರಿಸಬಹುದು” ಎಂದು ಸಿಂಗ್ ತಿಳಿಸುತ್ತಾರೆ. ಟರ್ಬೈನ್ ಮತ್ತು ಪಂಪುಗಳ ಸ್ಥಿತಿಗತಿ ಮತ್ತು ವಿನ್ಯಾಸವನ್ನು ಅವಲಂಬಿಸಿ ಪ್ರತಿಯೊಂದು ಯೋಜನೆಯೂ ಹಿಂಗಾರು ಮತ್ತು ಬೇಸಿಗೆ ಬೆಳೆಗಳನ್ನು ಬೆಳೆಯಲು ಸುಮಾರು 100-150 ಎಕರೆಗಳಿಗೆ ನೀರಾವರಿ ಒದಗಿಸುತ್ತದೆ. ದಂಡೆಯ ಬಳಿಯಿರುವ ರೈತರೂ ಅಂತರ್ಜಲ ಬಳಸುವುದನ್ನು ತಪ್ಪಿಸುವುದು. ಇದು ಅಂತರ್ಜಲ ಮಟ್ಟ ಹೆಚ್ಚಿಸಲು ಅನುವು ಮಾಡಿಕೊಡುತ್ತದೆ” ಎಂದು ಸಿಂಗ್ ಹೇಳುತ್ತಾರೆ. ಮತ್ತೊಂದು ಗಮನಾರ್ಹ ಆಂಶವೆಂದರೆ, ಶಾಶ್ವತ ನೀರಿನ ಹರಿವು ಹೊಂದಿರುವ ಭಾರತದ ಹೆಚ್ಚಿನ ಪ್ರದೇಶಗಳಲ್ಲಿ ಈ ತಂತ್ರಜ್ಞಾನವನ್ನು ಯಥಾವತ್ ಅಳವಡಿಸಬಹುದಾಗಿದೆ.

ಸಂಪರ್ಕ:
ಪುನೀತ್ ಸಿಂಗ್
ಸಹ ಪ್ರಾಧ್ಯಾಪಕರು,
ಸುಸ್ಥಿರ ತಾಂತ್ರಿಕತೆಗಳ ಕೇಂದ್ರ (ಸಿಎಸ್ಟಿ),
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)
ಇ-ಮೇಲ್: punitsingh@iisc.ac.in

ಪರ್ತಕರ್ತರಿಗೆ ಸೂಚನೆ:

ಅ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ.

ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ ದಯವಿಟ್ಟು news@iisc.ac.in ಅಥವಾ pro@iisc.ac.in ಗೆ ಬರೆಯಿರಿ.