ವಿಜ್ಞಾನ 20 ಮತ್ತು ಭಾರತ- ಮುಂಬರುವ ವರ್ಷ


26 ಡಿಸೆಂಬರ್ 2022

ಪ್ರಪಂಚದ 20 ದೇಶಗಳ ಗುಂಪು ಎಲ್ಲೆಡೆ ಹೆಚ್ಚಾಗಿ G20 ಎಂದೇ ಹೆಸರಾಗಿದೆ. ಇದು 19 ದೇಶಗಳು ಹಾಗೂ ಐರೋಪ್ಯ ಒಕ್ಕೂಟವನ್ನು ಒಳಗೊಂಡ ಅಂತರಸರ್ಕಾರ ವೇದಿಕೆಯಾಗಿದೆ. ಕೈಗಾರಿಕೀಕರಣಗೊಂಡ ಹಾಗೂ ಅಭಿವೃದ್ಧಿಶೀಲ, ಈ ಎರಡೂ ರೀತಿಯ ದೇಶಗಳು ಈ ಗುಂಪಿನಲ್ಲಿವೆ. ಜಾಗತಿಕ ಆರ್ಥಿಕತೆಯ ನಿರ್ವಹಣೆ ಇದರ ಪ್ರಮುಖ ಉದ್ದೇಶವಾಗಿದೆ. ಆದರೆ ಕೆಲವಾರು ವರ್ಷಗಳಿಂದೀಚೆಗೆ G20 ವೇದಿಕೆಯು ಸಂಬಂಧಿಸಿದ ಇನ್ನಿತರ ಜಾಗತಿಕ ಸವಾಲುಗಳಿಗೆ ಪರಿಹಾರ ಹುಡುಕುವುದರಲ್ಲಿ ಕೂಡ ತೊಡಗಿಸಿಕೊಂಡಿದೆ. ಹವಾಮಾನ ವೈಪರೀತ್ಯದ ದುಷ್ಪರಿಣಾಮಗಳಿಗೆ ತಡೆಯೊಡ್ಡುವುದು ಹಾಗೂ ಸುಸ್ಥಿರ ಬೆಳವಣಿಗೆ ಸಾಧಿಸುವುದು ಇಂತಹ ಸವಾಲುಗಳಲ್ಲಿ ಕೆಲವಾಗಿವೆ. ಈ ಗುರಿಯನ್ನು ಸಾಧಿಸುವ ಸಲುವಾಗಿ ಅದು ಹಲವಾರು ಸಕ್ರಿಯ ತಂಡಗಳನ್ನು ರಚಿಸಿದೆ. ವಿಜ್ಞಾನ 20 (ಸೈನ್ಸ್ 20 ಅಥವಾ S20) ಅಂತಹ ಗುಂಪುಗಳ ಪೈಕಿ ಒಂದಾಗಿದೆ.

G20 ಕಾರ್ಯಸೂಚಿಯನ್ನು ಮುನ್ನಡೆಸುವುದರಲ್ಲಿ S20 ಪಾತ್ರವು ಅತ್ಯಂತ ಮಹತ್ವದ್ದಾಗಿದೆ. ನಾವು ಕೋಟ್ಯಂತರ ಜನರ ಬಡತನ ನಿವಾರಣೆಗಾಗಿ ಅಗತ್ಯವಾದ ಆರ್ಥಿಕ ಬೆಳವಣಿಗೆ ಸಾಧಿಸುವ ಜೊತೆಜೊತೆಗೆ ಅದು ಎಲ್ಲರನ್ನೂ ಒಳಗೊಳ್ಳುವಂತದ್ದು ಹಾಗೂ ಸುಸ್ಥಿರವಾದದದ್ದು ಎಂಬುದನ್ನು ಖಾತ್ರಿಗೊಳಿಸಬೇಕೆಂದರೆ ವಿಜ್ಞಾನ ಪ್ರಮುಖ ಪಾತ್ರವನ್ನು ವಹಿಸಬೇಕಾಗುತ್ತದೆ. ಆದರೆ ಇದನ್ನು ಸಾಕಾರಗೊಳಿಸಲು ಕೇವಲ ವೈಜ್ಞಾನಿಕ ಸುಧಾರಣೆಗಳು ಸಾಕಾಗುವುದಿಲ್ಲ. ಅರ್ಥಪೂರ್ಣ ಬೆಳವಣಿಗೆಗೆ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರ ಅತ್ಯಗತ್ಯವಾಗಿರುತ್ತದೆ. ಹೀಗಾದಾಗ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಮಹತ್ವದ ಅನ್ವೇಷಣೆಗಳಿಗೆ ಬಗ್ಗೆ ಪರಸ್ಪರ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಗುರಿಯನ್ನು ಸಾಧಿಸಲು S20 ಒಂದು ಮಾದರಿ ವೇದಿಕೆಯಾಗಿದೆ.

ಭಾರತವು 2023ರಲ್ಲಿ S20 ಹಾಗೂ G20 ಅಧ್ಯಕ್ಷತೆಯನ್ನು ವಹಿಸಲಿದೆ. ಅಂದಹಾಗೆ, “ಆವಿಷ್ಕಾರಿ ಮತ್ತು ಸುಸ್ಥಿರ ಬೆಳವಣಿಗೆಗೆ ಪಲ್ಲಟ ವಿಜ್ಞಾನ” ಎಂಬುದು 2023ರ S20 ವಸ್ತು-ವಿಷಯವಾಗಿರುತ್ತದೆ. ಭಾರತದ ಬೇರೆ ಬೇರೆ ಕಡೆಗಳಲ್ಲಿ (ಅಗರ್ತಲ, ಲಕ್ಷದ್ವೀಪ ಮತ್ತು ಭೋಪಾಲ್) ಈ ವರ್ಷ ನಡೆಯಲಿರುವ ಚರ್ಚೆ ಹಾಗೂ ಸಂವಾದಗಳಲ್ಲಿ ಈ ವಿಸ್ತೃತ ವಿಷಯವನ್ನು ಕೇಂದ್ರವಾಗಿಸಿಕೊಂಡು ಮೂರು ಅಂಶಗಳ ಕುರಿತು ಚರ್ಚಿಸಲಾಗುತ್ತದೆ. ಸಾರ್ವತ್ರಿಕ ಸಮಷ್ಠಿ ಆರೋಗ್ಯ, ಹಸಿರಿನಿಂದ ಕೂಡಿದ ಭವಿಷ್ಯಕ್ಕಾಗಿ ಶುದ್ಧ ಇಂಧನ ಮತ್ತು ಸಮಾಜ ಹಾಗೂ ಸಂಸ್ಕೃತಿಯೊಂದಿಗೆ ವಿಜ್ಞಾನದ ಬೆಸುಗೆ- ಇವು ಆ ಮೂರು ವಿಷಯಗಳಾಗಿವೆ.

ಪಾಂಡಿಚೇರಿಯಲ್ಲಿ ನಡೆಯಲಿರುವ ಆರಂಭಿಕ ಸಭೆ ಮತ್ತು ಕೊಯಮತ್ತೂರಿನಲ್ಲಿ ನಡೆಯಲಿರುವ ಶೃಂಗ ಸಭೆಗಳು ಈ ಸಮಾಲೋಚನೆಗಳ ಭಾಗವಾಗಿರಲಿವೆ. ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) S20ಯ ಸಚಿವಾಲಯವಾಗಿ ಕಾರ್ಯನಿರ್ವಹಿಸಲಿದೆ. ಈ ಸಂದರ್ಭದಲ್ಲಿ S20 ಯನ್ನು ಮುನ್ನಡೆಸಬೇಕಾದ ಭಾರತವು ಅದಕ್ಕೆ ಪೂರಕವಾದ ವಿಶಿಷ್ಟ ಸ್ಥಾನಮಾನ ಹೊಂದಿದೆ ಎಂಬುದು ಉಲ್ಲೇಖಿಸಬೇಕಾದ ಸಂಗತಿಯಾಗಿದೆ. ಐತಿಹಾಸಿಕ ದೃಷ್ಟಿಯಿಂದ ನೋಡಿದರೆ, ನಮ್ಮ ದೇಶವು ಮಾನವ ಬದುಕಿನ ವಿವಿಧ ರಂಗಗಳಿಗೆ ಸಂಬಂಧಿಸಿದ ಪರಿಕಲ್ಪನೆಗಳನ್ನು ಪರಿಪೋಷಿಸಿದ ಸಮೃದ್ಧ ಹಿನ್ನೆಲೆಯನ್ನು ಹೊಂದಿದೆ. ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ, ಈ ಎಲ್ಲಾ ವಲಯಗಳಿಗೂ ಇದು ಅನ್ವಯಿಸುತ್ತದೆ.

ಈ ಹಿಂದಿನ ಶತಮಾನಗಳಲ್ಲಿ ಇಲ್ಲಿ ಆಗಿರುವ ಆವಿಷ್ಕಾರಗಳು ಹಾಗೂ ನಾವೀನ್ಯತೆಗಳು ದೇಶದ ವೈಜ್ಞಾನಿಕ ಪರಂಪರೆಯ‌ ಶ್ರೀಮಂತಿಕೆಯನ್ನು ಅನಾವರಣಗೊಳಿಸುತ್ತವೆ. ವಾಸ್ತುಶಿಲ್ಪ, ಖಗೋಳ ವಿಜ್ಞಾನ, ಗಣಿತಶಾಸ್ತ್ರ, ವೈದ್ಯಕೀಯ, ಲೋಹ ಶಾಸ್ತ್ರ, ಜವಳಿ, ಹಡಗು ನಿರ್ಮಾಣ, ನಗರ ಯೋಜನೆ ಇತ್ಯಾದಿ ಹಲವಾರು ಕ್ಷೇತ್ರಗಳನ್ನು ಇದಕ್ಕೆ ಉದಾರಿಸಬಹುದು. ಹಲವಾರು ಶತಮಾನಗಳಿಂದ ರಸಾಯನ ವಿಜ್ಞಾನದಲ್ಲಿ ನಾವು ಸಿದ್ದಿಸಿಕೊಂಡಿದ್ದ ಜ್ಞಾನದಿಂದಾಗಿ ಪ್ರಪಂಚದಲ್ಲೇ ಮಿಗಿಲಾದ ಅತ್ಯುತ್ತಮ ದರ್ಜೆಯ ಲೋಹಗಳನ್ನು ಮತ್ತು ಮಿಶ್ರಲೋಹಗಳನ್ನು ಉತ್ಪಾದಿಸಲು ಸಾಧ್ಯವಾಗಿದ್ದು ಇದಕ್ಕೆ ಒಂದು ನಿದರ್ಶನವಷ್ಟೆ.. ತನ್ನ ಬೌದ್ಧಿಕ ಪರಂಪರೆ, ಪ್ರಸ್ತುತ ವಿಜ್ಞಾನ ಮತ್ತು ಎಂಜಿನಿಯರಿಂಗ್ ನಲ್ಲಿ ಹೊಂದಿರುವ ಸಾಮರ್ಥ್ಯ ಹಾಗೂ ಸುಸ್ಥಿರತೆಯೊಂದಿಗಿನ ಆವಿಷ್ಕಾರಿ ಮನೋಧೋರಣೆಗೆ ಹೆಸರಾದ ಭಾರತ ದೇಶಕ್ಕೆ “ಪ್ರಗತಿಗಾಗಿ ಪಲ್ಲಟ ವಿಜ್ಞಾನ”ದ ಅಗ್ರಗಣ್ಯ ದೇಶವಾಗಿ ಹೊರಹೊಮ್ಮಲು ಅವಕಾಶವಿದೆ. S20 ಶೃಂಗಸಭೆಯು ಸುಧಾರಣೆಯ ಹೊಸಮಾರ್ಗ ರೂಪಿಸುವಲ್ಲಿ ಭಾರತದ ಪಯಣದ ಮೈಲುಗಲ್ಲಾಗಲಿದೆ.

ಸಂಪರ್ಕಿಸಿ:

ಸೈನ್ಸ್ 20 ಸಚಿವಾಲಯ
ಭಾರತೀಯ ವಿಜ್ಞಾನ ಸಂಸ್ಥೆ ಐಐಎಸ್‌ಸಿ
secretariat.s20@iisc.ac.in