ವಿಜ್ಞಾನ ಮತ್ತು ತಂತ್ರಜ್ಞಾನ ದಿಗಂತಗಳ ವಿಸ್ತರಣೆ: ಐಐಎಸ್‌ಸಿ- ಒಪ್ಸ ಸಮಾವೇಶ


19 ನವೆಂಬರ್, 2023

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮತ್ತು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ (ಒ.ಪಿ.ಎಸ್.ಎ) ವತಿಯಿಂದ 2023ರ ನವೆಂಬರ್ 18ರಂದು ಬೆಂಗಳೂರಿನಲ್ಲಿ “ಡೈಲಾಗ್ 2023: ಎಕ್ಸ್ಪಾಂಡಿಂಗ್ ಸೈನ್ಸ್ ಅಂಡ್ ಟೆಕ್ನಾಲಜಿ ಹೊರೈಜಾನ್ಸ್” (ಸಂವಾದ 2023: ವಿಜ್ಞಾನ ಮತ್ತು ತಂತ್ರಜ್ಞಾನದ ದಿಗಂತಗಳ ವಿಸ್ತರಣೆ) ಕುರಿತು ಒಂದು ದಿನದ ಸಮಾವೇಶ ನಡೆಸಲಾಯಿತು.

ಹವಾಮಾನ ಬದಲಾವಣೆಯಂತಹ ಸಮಾಜೋ-ಆರ್ಥಿಕ ಸವಾಲುಗಳು ಮತ್ತು ಅಸ್ತಿತ್ವವಾದದ ಭೀತಿಗಳನ್ನು ಎದುರಿಸುವಲ್ಲಿ ವಿಜ್ಞಾನ, ತಂತ್ರಜ್ಞಾನ ಹಾಗೂ ನಾವೀನ್ಯತೆಗಳ ಪ್ರಾಮುಖ್ಯ ದೃಷ್ಟಿಯಲ್ಲಿರಿಸಿಕೊಂಡು ಪಲ್ಲಟಗೊಳಿಸಬಲ್ಲ ತಂತ್ರಜ್ಞಾನಗಳಿಗೆ ಸಂಬಂಧಿಸಿದ ನೈತಿಕ ಸವಾಲುಗಳು, ಅಂತರರಾಷ್ಟ್ರೀಯ ಸಹಯೋಗಗಳ ಪಾತ್ರ ಮತ್ತು ವೈವಿಧ್ಯಮಯ ಜ್ಞಾನ ವ್ಯವಸ್ಥೆಗಳನ್ನು ಗುರುತಿಸುವ ಅಗತ್ಯದ ಮೇಲೆ ಸಮಾವೇಶದಲ್ಲಿ ಮುಖ್ಯವಾಗಿ ಚರ್ಚಿಸಲಾಯಿತು.

ಐಐಎಸ್ಸಿ ನಿರ್ದೇಶಕ ಪ್ರೊ.ಜಿ.ರಂಗರಾಜನ್ ಅವರ ಸ್ವಾಗತ ಭಾಷಣದೊಂದಿಗೆ ಮೊದಲ ಗೋಷ್ಠಿ “ತಾಂತ್ರಿಕ ಭವಿಷ್ಯ ರೂಪಿಸುವುದು” ಪ್ರಾರಂಭವಾಯಿತು. ಸಮಕಾಲೀನ ನೀತಿ ವಿಷಯಗಳ ಕುರಿತು ಸಮಾಲೋಚನೆ ನಡೆಸಲು ವಿಶಾಲ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆ ವ್ಯಾಪ್ತಿಗೆ ಒಳಪಟ್ಟ ಭಾಗೀದಾರರನ್ನು/ಹಿತಾಸಕ್ತಿದಾರರನ್ನು ಒಂದೆಡೆ ಸೇರಿಸುವಲ್ಲಿ ಇಂತಹ ಸಮಾವೇಶಗಳ ಪ್ರಾಮುಖ್ಯದ ಬಗ್ಗೆ ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು. “ಭಾರತದ ಪ್ರಮುಖ ವಿಜ್ಞಾನ ಸಂಸ್ಥೆಯಾಗಿ ಭಾರತೀಯ ವಿಜ್ಞಾನ ಸಂಸ್ಥೆಯು ಸರ್ಕಾರಕ್ಕೆ ಜ್ಞಾನ ಬೆಂಬಲ ನೀಡುವಲ್ಲಿ, ರಾಷ್ಟ್ರೀಯ ಪರಿಸರ ಮತ್ತು ತಂತ್ರಜ್ಞಾನ ಮಿಷನ್ಗಳಲ್ಲಿ ಮತ್ತು ಕಾರ್ಯನೀತಿಗಳು ಹಾಗೂ ಕಾರ್ಯಕ್ರಮಗಳನ್ನು ಅಳವಡಿಸುವಲ್ಲಿ ಗಮನಾರ್ಹ ಪಾತ್ರ ವಹಿಸಿದೆ” ಎಂದು ವಿವರಿಸಿದರು. ಈ ಕಾರ್ಯಕ್ರಮಗಳಲ್ಲಿ ಭಾರತೀಯ ವಿಜ್ಞಾನ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಸೌಲಭ್ಯಗಳ ನಕ್ಷೆ (I-STEM), ಬೆಂಗಳೂರು ವಿಜ್ಞಾನ ಮತ್ತು ತಂತ್ರಜ್ಞಾನ (BEST) ಕ್ಲಸ್ಟರ್, ಇಂಡಿಯಾ ಅರ್ಬನ್ ಡಾಟಾ ಎಕ್ಸ್ಚೇಂಜ್ (UOX) ವೇದಿಕೆ, ಎ ಐ ಮತ್ತು ರೊಬೊಟಿಕ್ಸ್ ಟೆಕ್ನಾಲಜಿ ಪಾರ್ಕ್ (ARTPARK), OPSA ಪಾಲಿಸಿ ಅನಲಿಟಿಕ್ಸ್ ಮತ್ತು ಇನ್ಸೈಟ್ಸ್ ಘಟಕ. , ಮತ್ತು ಮತ್ತು ಐಸಿಎಂಆರ್ ಸಹಭಾಗಿತ್ವದಲ್ಲಿ ಉತ್ಕೃಷ್ಟ ಗುಣಮಟ್ಟದ ಆರೋಗ್ಯ ಸಂಬಂಧಿ ಡೇಟಾ ಸೆಟ್ ಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳನ್ನು ಇದು ಒಳಗೊಂಡಿದೆ.

ಇದೇ ಗೋಷ್ಠಿಯಲ್ಲಿ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾದ ಐಐಎಸ್ಸಿ ಭೌತಶಾಸ್ತ್ರ ವಿಭಾಗದ ರಾಷ್ಟ್ರೀಯ ವಿಜ್ಞಾನ ಅಧ್ಯಯನ ಪೀಠದ ಪ್ರಾಧ್ಯಾಪಕ ಪ್ರೊ.ಅಜಯ್ ಕುಮಾರ್ ಸೂದ್ ಅವರು ಮುಖ್ಯ ಆಶಯ ಭಾಷಣ/ದಿಕ್ಸೂಚಿ ಭಾಷಣ ಮಾಡಿದರು. ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಸಂವಹನದಂತಹ ಉದಯೋನ್ಮುಖ ತಂತ್ರಜ್ಞಾನಗಳ ಅಪಾರ ಸಾಮರ್ಥ್ಯದ ಬಗ್ಗೆ ಅವರು ಪ್ರಸ್ತುತ ಪಡಿಸಿದರು. ಭಾರತವು ತನ್ನ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದಂತೆ ಗಣನೀಯವಾಗಿ ಮುನ್ನಡೆದಿದೆ ಎಂದು ಅವರು ಇದೆ ವೇಳೆ ಹೇಳಿದರು. “ತಂತ್ರಜ್ಞಾನಯುಕ್ತ ಭವಿಷ್ಯ ರೂಪಿಸುವುದು ಎಂಬುದು ತಂತ್ರಜ್ಞಾನದ ಅಭಿವೃದ್ಧಿಯನ್ನು ಮಾತ್ರವಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಅವುಗಳ ಅಳವಡಿಕೆಯನ್ನೂ ಒಳಗೊಂಡಿರುತ್ತದೆ.” ಈ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಾಗ ನೈತಿಕ ಮೌಲ್ಯಗಳು ಮತ್ತು ಸುಸ್ಥಿರತೆಯನ್ನು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯದ ಕುರಿತಾಗಿಯೂ ಅವರು ಒತ್ತಿ ಹೇಳಿದರು. ಮೆಟೀರಿಯಲ್ಸ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಮತ್ತು ಐಐಎಸ್ಸಿ ಡಿಎಸ್ಟಿ ಸೆಂಟರ್ ಫಾರ್ ಪಾಲಿಸಿ ರೀಸರ್ಚ್ನ ಸಂಯೋಜಕರಾದ ಪ್ರೊ.ಟಿ.ಎ.ಅಬಿನಂದನ್ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

ಎರಡನೇ ಗೋಷ್ಠಿಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ನಂತಹ ಪಲ್ಲಟ ಸಾಮರ್ಥ್ಯದ ತಂತ್ರಜ್ಞಾನಗಳಿಗೆ ಸಂಬಂಧಿಸಿದ ನೈತಿಕ ಸವಾಲುಗಳು ಮತ್ತು ತತ್ವಗಳ ಕುರಿತು ಚರ್ಚಿಸಲಾಯಿತು. ತಂತ್ರಜ್ಞಾನ, ನೈತಿಕತೆ ಮತ್ತು ಸಮಾಜ ಇವುಗಳು ಏಕತ್ರಗೊಳ್ಳುವ ಬಗ್ಗೆ ಗಮನ ಕೇಂದ್ರೀಕರಿಸಿದ ಚರ್ಚೆಯು ಉದಯೋನ್ಮುಖ ತಂತ್ರಜ್ಞಾನಗಳ ನಿಯಂತ್ರಣದ ಅಗತ್ಯದ ಕುರಿತು ಗಮನ ಸೆಳೆಯಿತು. ಇನ್ನು, ಮೂರನೇ ಗೋಷ್ಠಿಯು, ಭಾರತದ ಡಿಜಿಟಲ್ ಬೆಳವಣಿಗೆ ಮತ್ತು ಯು.ಪಿ.ಐ.ನಂತಹ ಡಿಜಿಟಲ್ ಸೇವೆಗಳ ಪ್ರಭಾವದ ಬಗ್ಗೆ ವಿವರಿಸಿದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (Meity) ಹೆಚ್ಚುವರಿ ಕಾರ್ಯದರ್ಶಿ ಶ್ರೀ ಅಭಿಷೇಕ್ ಸಿಂಗ್ ಅವರ ವಿಶೇಷ ಭಾಷಣದೊಂದಿಗೆ ಪ್ರಾರಂಭವಾಯಿತು. ಇದಾದ ಮೇಲೆ, ಜಾಗತಿಕ ತಂತ್ರಜ್ಞಾನ ಸ್ಪರ್ಧಾತ್ಮಕತೆ ಹೆಚ್ಚಿಸುವ ವಿಧಾನಗಳು ಮತ್ತು ತಂತ್ರಜ್ಞಾನ ಅಭಿವೃದ್ಧಿಯ ವಿಷಯಕ್ಕೆ ಬಂದಾಗ ರಾಷ್ಟ್ರೀಯ ಆದ್ಯತೆಗಳೊಂದಿಗೆ ಅಂತರರಾಷ್ಟ್ರೀಯ ಸಹಕಾರವನ್ನು ಸಮತೋಲನಗೊಳಿಸುವ ವಿಧಾನಗಳ ಕುರಿತು ವಿದ್ವಾಂಸರ ಸಂವಾದ ಗೋಷ್ಠಿ ನಡೆಯಿತು.

ಮಧ್ಯಾಹ್ನದ ಕಲಾಪವು “ವಿಜ್ಞಾನ, ತಂತ್ರಜ್ಞಾನ ಮತ್ತು ಸಮಾಜ” ಕುರಿತು ಕೇಂದ್ರೀಕೃತವಾಗಿತ್ತು. ಈ ಕಲಾಪದಲ್ಲಿ ಮೊದಲಿಗೆ “ಜ್ಞಾನ ವೈವಿಧ್ಯ: ಅಭ್ಯಾಸಗಳು” ಬಗ್ಗೆ ಪ್ರಸ್ತಾಪಿಸಲಾಯಿತು. ಕೈಮಗ್ಗ ಉದ್ಯಮವನ್ನು ಉದಾಹರಣೆಯಾಗಿ ತೆಗೆದುಕೊಂಡ ಭಾಷಣಕಾರರು, ವಿಜ್ಞಾನವು ಇತರ ರೀತಿಯ ಜ್ಞಾನಗಳಿಗಿಂತ ಮೇಲು ಎಂಬ ರೂಢಿಗತ ದೃಷ್ಟಿಕೋನದಿಂದ ನಾವು ಹೊರಬಂದು ಸ್ಥಳೀಯ ಜ್ಞಾನ ವ್ಯವಸ್ಥೆಗಳ ಪ್ರಾಮುಖ್ಯ ಗುರುತಿಸಬೇಕಾಗಿದೆ ಎಂದು ಪ್ರತಿಪಾದಿಸಿದರು. ನಂತರ, “ಜ್ಞಾನ ವೈವಿಧ್ಯ: ಜನರು” ಬಗ್ಗೆ ಭಾಷಣಕಾರರು ವಿಷಯ ಮಂಡಿಸಿ, ಕಾರ್ಯನೀತಿಗಳಲ್ಲಿ ಇರುವ ಕಂದಕಗಳು ಕೊರತೆಗಳು ಮತ್ತು ಸಾಂಪ್ರದಾಯಿಕ ಪಾರಂಪರಿಕ ಜ್ಞಾನದ ಲಭ್ಯತೆ ಗೆ ಸಂಬಂಧಿಸಿದಂತೆ ಸಂಭಾವ್ಯ/ಸಮರ್ಥ ಮಾರ್ಗೋಪಾಯಗಳ ಮಾರ್ಗಗಳನ್ನು ಚರ್ಚಿಸಿದರು. ಮಹಿಳೆಯರನ್ನು ಜ್ಞಾನಶಾಲಿಗಳು ಹಾಗೂ ಜ್ಞಾನದ ಸೃಷ್ಟಿಕರ್ತರು ಎಂದು ಗುರುತಿಸುವಲ್ಲಿ ಆಗಿರುವ ಐತಿಹಾಸಿಕ ಲೋಪ ದ ಬಗ್ಗೆಯೂ ಗಮನ ಸೆಳೆಯಲಾಯಿತು.

ಕೊನೆಯ ಗೋಷ್ಠಿಯಲ್ಲಿ ಹಿರಿಯ ಪ್ರಾಧ್ಯಾಪಕರು ಹಾಗೂ ಮುಂಬೈನ ಮೂಲಭೂತ ಸಂಶೋಧನಾ ಕೇಂದ್ರದ ಗ್ರಾಜುಯೇಟ್ ಸ್ಟಡೀಸ್ ನ ಡೀನ್ ಪ್ರೊ.ಶುಭಾ ತೋಲೆ ಅವರು “ವಿಜ್ಞಾನದ ಸಾರ್ವಜನಿಕ ಗ್ರಹಿಕೆ” ಕುರಿತು ವಿಷಯ ಮಂಡಿಸಿದರು. ಐಐಎಸ್ ಸಿ ಅಂತರಶಿಸ್ತೀಯ ವಿಜ್ಞಾನಗಳ ವಿಭಾಗದ ಡೀನ್ ಪ್ರೊ.ನವಕಾಂತ ಭಟ್ ಅಧ್ಯಕ್ಷತೆ ವಹಿಸಿದ್ದರು. “ಸಾರ್ವಜನಿಕರು ವಿಜ್ಞಾನವನ್ನು ಪ್ರಮುಖ ಮತ್ತು ಮೌಲ್ಯಯುತ ಉದ್ಯಮವೆಂದು ಗ್ರಹಿಸುತ್ಯವುದು ಬಹಳ ನಿರ್ಣಾಯಕ” ಎಂದು ಪ್ರೊ.ತೋಲೆ ಅಭಿಪ್ರಾಯಪಟ್ಟರು. ಸಂಸ್ಥೆಗಳು ವಿಜ್ಞಾನವನ್ನು ಹೆಚ್ಚಿನ ಮಟ್ಟದಲ್ಲಿ ಜನರಿಗೆ ತಲುಪಿಸಲು ಅನಿಸರಿಸಬೇಕಾದ ಕ್ರಮಗಳ ಬಗ್ಗೆಯೂ ಅವರು ಸಲಹೆ ನೀಡಿದರು. ವಿಜ್ಞಾನಿಗಳು ವಿಜ್ಞಾನವನ್ನು ಜನರಿಗೆ ತಲುಪಿಸುವುದರ ಆಚೆಗೆ ಆಲೋಚಿಸಬೇಕಾದ ಅಗತ್ಯದ ಬಗ್ಗೆ ಒತ್ತಿ ಹೇಳಿದ ಅವರು, ವಿಜ್ಞಾನದ ಪಯಣ ಹಾಗೂ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಜನರೊಂದಿಗೆ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದರು.

ಸಂಪರ್ಕ:
ಸಂವಹನ ಕಚೇರಿ | news@lisc.ac.in