
ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ), ವಾಧ್ವಾನಿ–ಐಐಎಸ್‌ಸಿ ಇನ್ನೋವೇಷನ್ ಕೇಂದ್ರದ ಉದ್ಘಾಟನೆ ಹಾಗೂ ಕ್ವಾಂಟಮ್ ಪಿಚ್ ಫೆಸ್ಟ್ 2026 ಅನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಭಾರತದ ನಾವೀನ್ಯತಾ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಈ ಮೂಲಕ ಡೀಪ್-ಟೆಕ್ ಸಂಶೋಧನೆ, ಸಂಶೋಧನಾ ಫಲಿತಾಂಶಗಳನ್ನು ಪ್ರಾಯೋಗಿಕ ಆನ್ವಯಿಕತೆಗಳಿಗೆ ಪರಿವರ್ತಿಸುವ ನಾವೀನ್ಯತೆ ಹಾಗೂ ಉದ್ಯಮಶೀಲತೆಯನ್ನು ಮುನ್ನಡೆಸಲು ಸಂಸ್ಥೆ ಹೊಂದಿರುವ ಬದ್ಧತೆಯು ಮತ್ತಷ್ಟು ದೃಢಗೊಂಡಿದೆ.
ಇಸ್ರೊದ ಮಾಜಿ ಅಧ್ಯಕ್ಷ ಹಾಗೂ ಇಸ್ರೊ ಅಪೆಕ್ಸ್ ಕಮಿಟಿಯ ಅಧ್ಯಕ್ಷರಾದ ಶ್ರೀ ಎ.ಎಸ್. ಕಿರಣ್ ಕುಮಾರ್ ಅವರು ವಾಧ್ವಾನಿ–ಐಐಎಸ್‌ಸಿ ಇನ್ನೋವೇಷನ್ ಸೆಂಟರ್ ಅನ್ನು ಮೇ 22, 2026ರಂದು ಉದ್ಘಾಟಿಸಿದರು. ವಾಧ್ವಾನಿ ಫೌಂಡೇಷನ್‌ನ ಸಿಇಒ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಡಾ. ಅಜಯ್ ಕೇಲಾ ಮತ್ತು ವಾಧ್ವಾನಿ ಇನ್ನೋವೇಷನ್ ನೆಟ್‌ವರ್ಕ್ (WIN) ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಶಿರ್ಷೇಂದು ಮುಖರ್ಜಿ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಡೀಪ್-ಟೆಕ್ ನಾವೀನ್ಯತೆ, ಸ್ಟಾರ್ಟ್‌ಅಪ್‌ಗಳ ಪರಿಪೋಷಣೆ (ಇನ್‌ಕ್ಯುಬೇಷನ್) ಹಾಗೂ ಕೈಗಾರಿಕೆಗಳ ಸಹಯೋಗಕ್ಕೆ ವೇಗ ನೀಡುವ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದರಿಂದ ವೈಜ್ಞಾನಿಕ ಸಂಶೋಧನೆ, ಸಂಶೋಧನಾ ಫಲಿತಾಂಶಗಳನ್ನು ಪ್ರಾಯೋಗಿಕ ಆನ್ವಯಿಕತೆಗಳಿಗೆ ಪರಿವರ್ತಿಸುವ ನಾವೀನ್ಯತೆ ಹಾಗೂ ಉದ್ಯಮಶೀಲತೆಯಲ್ಲಿನ ಶ್ರೇಷ್ಠತೆಗೆ ಪ್ರಮುಖ ಕೇಂದ್ರವಾಗಿ ಐಐಎಸ್‌ಸಿಯ ಸ್ಥಾನ ಮತ್ತಷ್ಟು ಬಲಗೊಳ್ಳಲಿದೆ.
ವಾಧ್ವಾನಿ–ಐಐಎಸ್‌ಸಿ ಇನ್ನೋವೇಷನ್ ಕೇಂದ್ರವು ವಾಧ್ವಾನಿ ಇನ್ನೋವೇಷನ್ ನೆಟ್‌ವರ್ಕ್ ನ (WIN) ಭಾಗವಾಗಿದೆ. ಭಾರತದ ಡೀಪ್-ಟೆಕ್ ನಾವೀನ್ಯತೆ ಹಾಗೂ ಸಂಶೋಧನೆಯ ವಾಣಿಜ್ಯೀಕರಣದ ಕಾರ್ಯಪರಿಸರವನ್ನು ಬಲಪಡಿಸುವ ಉದ್ದೇಶದಿಂದ ವಾಧ್ವಾನಿ ಫೌಂಡೇಷನ್, ಎಎನ್‌ಆರ್‌ಎಫ್, ಪ್ರಮುಖ ಶೈಕ್ಷಣಿಕ ಸಂಸ್ಥೆಗಳು ಹಾಗೂ ಸರ್ಕಾರಿ ಪಾಲುದಾರರ ಸಹಯೋಗದಲ್ಲಿ ಕಳೆದ ವರ್ಷ ಘೋಷಿಸಲಾದ ₹1,400 ಕೋಟಿಗೂ ಅಧಿಕ ಮೊತ್ತದ ಹೂಡಿಕೆಯ ಭಾಗವಾಗಿ ಆರಂಭಿಸಲಾಗಿರುವ ರಾಷ್ಟ್ರೀಯ ಉಪಕ್ರಮ ಇದಾಗಿದೆ.

“ಕ್ವಾಂಟಮ್ ತಂತ್ರಜ್ಞಾನಗಳು ವಿಜ್ಞಾನ ಮತ್ತು ನಾವೀನ್ಯತೆಯ ಅತ್ಯಂತ ಪರಿವರ್ತನಾತ್ಮಕ ಕ್ಷೇತ್ರಗಳಲ್ಲಿ ಒಂದಾಗಿವೆ. ವಾಧ್ವಾನಿ–ಐಐಎಸ್‌ಸಿ ಇನ್ನೋವೇಷನ್ ಸೆಂಟರ್, ಕ್ವಾಂಟಮ್ ಪಿಚ್ ಫೆಸ್ಟ್ ಹಾಗೂ ಇನ್‌ಕ್ಯುಬೇಟ್ ವೇದಿಕೆಯ ಮೂಲಕ ಅತ್ಯಾಧುನಿಕ ಕ್ವಾಂಟಮ್ ಸಂಶೋಧನೆಯನ್ನು ವಿಸ್ತರಣೆಗೆ ಅನುಕೂಲವಾಗುವ ತಂತ್ರಜ್ಞಾನಗಳು ಹಾಗೂ ಜಾಗತಿಕವಾಗಿ ಸ್ಪರ್ಧಾತ್ಮಕವಾದ ಉದ್ಯಮಗಳಾಗಿ ಪರಿವರ್ತಿಸಲು ಸಂಶೋಧಕರು ಮತ್ತು ಉದ್ಯಮಿಗಳಿಗೆ ನೆರವಾಗುವ ಸಹಯೋಗಾತ್ಮಕ ಕಾರ್ಯಪರಿಸರವನ್ನು ಐಐಎಸ್‌ಸಿ ರೂಪಿಸುತ್ತಿದೆ” ಎಂದು ಐಐಎಸ್‌ಸಿಯ ಫೌಂಡೇಷನ್ ಫಾರ್ ಸೈನ್ಸ್, ಇನ್ನೋವೇಷನ್ ಅಂಡ್ ಡೆವಲಪ್‌ಮೆಂಟ್ (ಎಫ್‌ಎಸ್‌ಐಡಿ) ನಿರ್ದೇಶಕರಾದ ಬಿ. ಗುರುಮೂರ್ತಿ ಹೇಳಿದರು.
“ಭಾರತವು ವಿಶ್ವದರ್ಜೆಯ ಸಂಶೋಧನಾ ಪ್ರತಿಭೆ ಹಾಗೂ ವೈಜ್ಞಾನಿಕ ಸಾಮರ್ಥ್ಯವನ್ನು ಹೊಂದಿದೆ. ಸಂಶೋಧನೆಯನ್ನು ವಿಸ್ತರಣೆಗೆ ಅನುಕೂಲವಾಗುವ ಉತ್ಪನ್ನಗಳು, ಸ್ಟಾರ್ಟ್‌ಅಪ್‌ಗಳು ಹಾಗೂ ಸಮಾಜದಲ್ಲಿ ಪರಿಣಾಮ ಬೀರುವ ರೀತಿಯಲ್ಲಿ ವೇಗವಾಗಿ ಪರಿವರ್ತಿಸುವುದು ಮುಂದಿನ ಪ್ರಮುಖ ಹೆಜ್ಜೆಯಾಗಿದೆ. ವಾಧ್ವಾನಿ ಇನ್ನೋವೇಷನ್ ನೆಟ್‌ವರ್ಕ್ ಮೂಲಕ ಐಐಎಸ್‌ಸಿಯಂತಹ ಪ್ರಮುಖ ಸಂಸ್ಥೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಪ್ರಯೋಗಾಲಯದಲ್ಲಿ ಮೂಡಿದ ಮಹತ್ವದ ಹೊಸ ಪರಿಕಲ್ಪನೆಗಳನ್ನು ತ್ವರಿತವಾಗಿ ಮಾರುಕಟ್ಟೆಗೆ ತಲುಪಿಸುವ ಸಾಮರ್ಥ್ಯ ಹೊಂದಿರುವ ಬಲಿಷ್ಠ ನಾವೀನ್ಯತಾ ಕಾರ್ಯಪರಿಸರವನ್ನು ನಿರ್ಮಿಸುವುದು ಇದರ ಉದ್ದೇಶವಾಗಿದೆ” ಎಂದು ವಾಧ್ವಾನಿ ಫೌಂಡೇಷನ್‌ನ ಸಿಇಒ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಡಾ. ಅಜಯ್ ಕೇಲಾ ವಿವರಿಸಿದರು.
ಶ್ರೀ ಎ.ಎಸ್. ಕಿರಣ್ ಕುಮಾರ್ ಅವರು ಮಾತನಾಡಿ, “ತಂತ್ರಜ್ಞಾನವೊಂದೇ ಮುಖ್ಯವಲ್ಲ; ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಈ ತಾಂತ್ರಿಕ ಸಾಮರ್ಥ್ಯಗಳನ್ನು ಹೇಗೆ ಬಳಸಲಾಗುತ್ತದೆ ಎಂಬುದು ಹೆಚ್ಚು ಮಹತ್ವದ್ದಾಗಿದೆ” ಎಂದರು. ಸಂಶೋಧನೆಯನ್ನು ಸ್ಪಷ್ಟವಾದ ಫಲಿತಾಂಶಗಳಾಗಿ ಪರಿವರ್ತಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಕ್ವಾಂಟಮ್ ತಂತ್ರಜ್ಞಾನದಲ್ಲಿ ದೇಶೀಯವಾದ ಹಾಗೂ ಪ್ರಾಯೋಗಿಕವಾಗಿ ಪ್ರದರ್ಶಿಸಬಹುದಾದ ಪರಿಣತಿ ಮತ್ತು ಸಾಮರ್ಥ್ಯಗಳನ್ನು ಬೆಳೆಸುವಲ್ಲಿ ಸರ್ಕಾರ ಹಾಗೂ ದಾನಿಗಳ ನಿರ್ಣಾಯಕ ಬೆಂಬಲವನ್ನು ಅವರು ಶ್ಲಾಘಿಸಿದರು. ಡಾ. ವಿಕ್ರಮ್ ಸಾರಾಭಾಯಿ ಅವರ ನೇತೃತ್ವದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹಾಗೂ ಡಾ. ಹೋಮಿ ಭಾಭಾ ಅವರ ನೇತೃತ್ವದಲ್ಲಿ ಪರಮಾಣು ಇಂಧನ ಕ್ಷೇತ್ರದಲ್ಲಿ ಭಾರತ ಸಾಧಿಸಿದ ಗಮನಾರ್ಹ ಪ್ರಗತಿಯನ್ನು ಉಲ್ಲೇಖಿಸುವ ಮೂಲಕ ಈ ದೃಷ್ಟಿಕೋನದ ಕುರಿತು ವಿವರಿಸಿದರು. ದೂರದೃಷ್ಟಿಯ ನಾಯಕತ್ವ ಹಾಗೂ ನಿರಂತರ ಬೆಂಬಲವು ಜಾಗತಿಕ ಮಹತ್ವ ಹೊಂದಿರುವ ರಾಷ್ಟ್ರೀಯ ಸಾಮರ್ಥ್ಯಗಳನ್ನು ಹೇಗೆ ನಿರ್ಮಿಸಬಲ್ಲದು ಎಂಬ ಬಗ್ಗೆ ಗಮನಸೆಳೆದರು.

ಇದೇ ಸಂದರ್ಭದಲ್ಲಿ, ಐಐಎಸ್‌ಸಿ ವತಿಯಿಂದ ಕ್ವಾಂಟಮ್ ಪಿಚ್ ಫೆಸ್ಟ್ 2026 ಅನ್ನು ಆಯೋಜಿಸಲಾಗಿತ್ತು. ಇದರಲ್ಲಿ ಸಂಶೋಧಕರು, ಸ್ಟಾರ್ಟ್‌ಅಪ್‌ಗಳು ಹಾಗೂ ನಾವೀನ್ಯತಾಕಾರರು ಕ್ವಾಂಟಮ್ ಕಂಪ್ಯೂಟಿಂಗ್, ಸಂವಹನ ಮತ್ತು ಸಂವೇದನಾ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಮಹತ್ವದ ಹೊಸ ಪರಿಕಲ್ಪನೆಗಳನ್ನು ಪ್ರಸ್ತುತಪಡಿಸಿದರು. ತಜ್ಞರು ಮತ್ತು ಹೂಡಿಕೆದಾರರು ಈ ಪ್ರಸ್ತುತಿಗಳನ್ನು ಮೌಲ್ಯಮಾಪನ ಮಾಡಿದರು. ಆಯ್ದ ತಂಡಗಳಿಗೆ ಐಐಎಸ್‌ಸಿಯ ಉದ್ಯಮಶೀಲತಾ ಕಾರ್ಯಕ್ರಮಗಳ ಮೂಲಕ ಮಾರ್ಗದರ್ಶನ ಹಾಗೂ ಇನ್‌ಕ್ಯುಬೇಷನ್ ಅವಕಾಶಗಳು ಲಭ್ಯವಾಗಲಿವೆ.
ಇದೇ ಸಂದರ್ಭದಲ್ಲಿ, ಆರಂಭಿಕ ಹಂತದ ಪರಿಕಲ್ಪನೆಗಳನ್ನು ಉತ್ತೇಜಿಸಿ, ಅವುಗಳನ್ನು ಪರಿಣಾಮಕಾರಿ ಉದ್ಯಮಗಳಾಗಿ ರೂಪಿಸುವ ಉದ್ದೇಶದ ಸಮಗ್ರ ಕ್ವಾಂಟಮ್ ಸ್ಟಾರ್ಟ್‌ಅಪ್ ವೇಗವರ್ಧನಾ ವೇದಿಕೆಯಾದ ಇನ್‌ಕ್ಯುಬೇಟ್ ಅನ್ನೂ ಉದ್ಘಾಟಿಸಲಾಯಿತು. ಐಐಎಸ್‌ಸಿಯ ಕ್ವಾಡ್ ಕಾರ್ಯಪರಿಸರ ವ್ಯವಸ್ಥೆಯಾದ ಕ್ವಾಂಟಮ್ ರಿಸರ್ಚ್ ಪಾರ್ಕ್ (QuRP), ವಾಧ್ವಾನಿ–ಐಐಎಸ್‌ಸಿ ಇನ್ನೋವೇಷನ್ ಸೆಂಟರ್, ಎಫ್‌ಕ್ಯುಸಿಐ ಮತ್ತು ಐಎನ್‌ಯುಪಿ ಇವುಗಳ ಸಹಯೋಗದ ಇನ್‌ಕ್ಯುಬೇಟ್ ಮುನ್ನಡೆಸಲಿದ್ದು, ಪ್ರಯೋಗಾಲಯದಿಂದ ಮಾರುಕಟ್ಟೆಯ ಹಂತದವರೆಗೆ ನಿರಂತರ ಸಂಪರ್ಕವನ್ನು ಕಲ್ಪಿಸಲಿದೆ. ವಿಶ್ವದರ್ಜೆಯ ಮಾರ್ಗದರ್ಶನ, ಮೂಲಸೌಕರ್ಯ ಹಾಗೂ ಸಹಯೋಗದ ಅವಕಾಶಗಳನ್ನು ಒದಗಿಸುವ ಉದ್ದೇಶ ಹೊಂದಿರುವ ಇನ್‌ಕ್ಯುಬೇಟ್, ಕ್ವಾಂಟಮ್ ಪರಿಕಲ್ಪನೆಗಳನ್ನು ಮಾರುಕಟ್ಟೆಗೆ ಸಿದ್ಧವಾಗಿರುವ ಪರಿಹಾರಗಳಾಗಿ ಪರಿವರ್ತಿಸಲು ನಾವೀನ್ಯತಾಕಾರರಿಗೆ ನೆರವಾಗಲಿದೆ. ಇದರೊಂದಿಗೆ, ಡೀಪ್-ಟೆಕ್ ಉದ್ಯಮಶೀಲತೆಗೆ ಭಾರತವನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ಕೇಂದ್ರವನ್ನಾಗಿ ರೂಪಿಸುವ ಗುರಿಯನ್ನೂ ಹೊಂದಿದೆ.
ಈ ಎಲ್ಲ ಉಪಕ್ರಮಗಳು ಮೂಲಭೂತ ಸಂಶೋಧನೆ ಮತ್ತು ಸಾಂಸ್ಥಿಕ ಮೂಲಸೌಕರ್ಯದಿಂದ ಹಿಡಿದು ಸ್ಟಾರ್ಟ್‌ಅಪ್‌ಗಳ ಸೃಷ್ಟಿ ಹಾಗೂ ಕೈಗಾರಿಕೆಗಳ ಸಹಯೋಗದವರೆಗೆ ಸದೃಢ ನಾವೀನ್ಯತಾ ಸರಪಳಿಯನ್ನು ನಿರ್ಮಿಸುವ ಐಐಎಸ್‌ಸಿಯ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ಇದರ ಮೂಲಕ ಡೀಪ್-ಟೆಕ್ ಮತ್ತು ಕ್ವಾಂಟಮ್ ನಾವೀನ್ಯತೆಯ ಕ್ಷೇತ್ರದಲ್ಲಿ ಭಾರತವನ್ನು ಮುಂಚೂಣಿ ರಾಷ್ಟ್ರವನ್ನಾಗಿ ರೂಪಿಸುವ ಗುರಿಯನ್ನು ಹೊಂದಲಾಗಿದೆ.

ಸಂಪರ್ಕ:
ಐಐಎಸ್‌ಸಿ: ಐಐಎಸ್‌ಸಿ ಸಂವಹನದ ವಿಭಾಗ ಕಚೇರಿ | news@iisc.ac.in ವಾಧ್ವಾನಿ ಫೌಂಡೇಷನ್: anupama.mukherjee@wadhwanifoundation.org
ಐಐಎಸ್‌ಸಿ ಬಗ್ಗೆ:
ಉದ್ಯಮಿ ಜಮ್ ಷೇಟ್ ಜಿ ನಸರ್ ವಾಂಜಿ ಟಾಟಾ, ಮೈಸೂರು ರಾಜಸಂಸ್ಥಾನ ಮತ್ತು ಭಾರತ ಸರ್ಕಾರಗಳ ದೂರದರ್ಶಿತ್ವದ ಪಾಲುದಾರಿಕೆಯಲ್ಲಿ ಭಾರತ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) 1909ರಲ್ಲಿ ಸ್ಥಾಪನೆಗೊಂಡಿತು. ಕಳೆದ 117 ವರ್ಷಗಳಲ್ಲಿ ಐ.ಐ.ಎಸ್.ಸಿ.ಯು ಆಧುನಿಕ ವಿಜ್ಞಾನ ಹಾಗೂ ತಾಂತ್ರಿಕ ಸಂಶೋಧನೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಭಾರತದ ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ. ಭಾರತದ ಭೌತಿಕ ಮತ್ತು ಕೈಗಾರಿಕಾ ಪ್ರಗತಿಗೆ ಕಾರಣವಾಗುವಂತಹ ಉನ್ನತ ಬೋಧನೆಗೆ ಹಾಗೂ ಸ್ವೋಪಜ್ಞ ಪರಿವೀಕ್ಷಣೆಗಳಿಗೆ ಎಲ್ಲಾ ಜ್ಞಾನಶಾಖೆಗಳಲ್ಲಿ ಅವಕಾಶ ಕಲ್ಪಿಸಲು ಸಂಸ್ಥೆಯು ಕಟಿಬದ್ಧವಾಗಿದೆ. ಸಂಸ್ಥೆಯು ಭಾರತ ಸರ್ಕಾರದಿಂದ 2018ರಲ್ಲಿ “ಇನ್ಸ್ ಟಿಟ್ಯೂಟ್ ಆಫ್ ಎಮಿನೆನ್ಸ್” ಎಂದು ಆಯ್ಕೆಯಾಗಿದೆ. ಜಾಗತಿಕ ವಿಶ್ವವಿದ್ಯಾಲಯಗಳ ಶ್ರೇಯಾಂಕದಲ್ಲಿ (ranking) ಭಾರತದ ಅಗ್ರಮಾನ್ಯ ಸಂಸ್ಥೆ ಎಂಬ ಹಿರಿಮೆಗೆ ಸತತವಾಗಿ ಪಾತ್ರವಾಗುತ್ತಿದೆ. https://iisc.ac.in/
ವಾಧ್ವಾನಿ ಫೌಂಡೇಷನ್ ಬಗ್ಗೆ:
ವಾಧ್ವಾನಿ ಫೌಂಡೇಷನ್ ಸಾಮಾಜಿಕ ಒಳಿತಿಗಾಗಿ ಕಾರ್ಯನಿರ್ವಹಿಸುವ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಸಂಸ್ಥೆಯಾಗಿದೆ. ಕೌಶಲಾಭಿವೃದ್ಧಿ, ಉದ್ಯಮಶೀಲತೆ, ಸರ್ಕಾರಿ ಡಿಜಿಟಲ್ ಪರಿವರ್ತನೆ ಹಾಗೂ ನಾವೀನ್ಯತೆ ಮತ್ತು ಸಂಶೋಧನೆ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ ಉಪಕ್ರಮಗಳ ಮೂಲಕ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಿ ಆರ್ಥಿಕ ಅಭಿವೃದ್ಧಿಯನ್ನು ತ್ವರಿತಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಲಾಭರಹಿತ ಸಂಸ್ಥೆಯಾಗಿದ್ದು, ಸಿಲಿಕಾನ್ ವ್ಯಾಲಿಯ ಉದ್ಯಮಿ ಡಾ. ರೋಮೇಶ್ ವಾಧ್ವಾನಿ ಅವರಿಂದ ಸ್ಥಾಪನೆಗೊಂಡು ಈ ಸಂಸ್ಥೆಯು ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ಹಲವು ದೇಶಗಳಲ್ಲಿ ತನ್ನ ಕಾರ್ಯಚಟುವಟಿಕೆಗಳ ಪರಿಣಾಮವನ್ನು ವಿಸ್ತರಿಸುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವಿಸ್ತೃತ ಜಾಗತಿಕ ಜಾಲಗಳನ್ನು ಬಳಸಿಕೊಳ್ಳುವ ನವೀನ ಕಾರ್ಯಕ್ರಮಗಳ ಮೂಲಕ ಜನರ ಜೀವನೋಪಾಯ ಸುಧಾರಿಸಲು ಹಾಗೂ ಅವರ ಬದುಕಿನಲ್ಲಿ ಬದಲಾವಣೆ ತರಲು ಅಗತ್ಯವಿರುವ ವಿಶ್ವದರ್ಜೆಯ ಸಂಪನ್ಮೂಲಗಳನ್ನು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತಿದೆ. www.wadhwanifoundation.org