ವಯಸ್ಸಾದ ಜೀವಕೋಶಗಳಿಂದ ಅಂಡಾಶಯದ ಕ್ಯಾನ್ಸರ್ ಉಲ್ಬಣ


16-01-2024
-ಪ್ರತಿಭಾ ಗೋಪಾಲಕೃಷ್ಣ

ಅಂಡಾಶಯದ ಕ್ಯಾನ್ಸರ್ ಬಹುತೇಕ ಪ್ರಕರಣಗಳಲ್ಲಿ ಆ ಅಂಗವನ್ನು ದಾಟಿ ಹರಡುವ ತನಕ ಗೊತ್ತಾಗುವುದಿಲ್ಲವಾದ್ದರಿಂದ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಜೊತೆಗೆ, ಇನ್ನಿತರ ಕಾರಣಗಳೂ ಈ ರೋಗಬಾಧೆಗೆ ಎಡೆಮಾಡಿಕೊಡಬಹುದು. ವಯಸ್ಸಾಗುವಿಕೆಯು ಅಂಡಾಶಯದ ಕ್ಯಾನ್ಸರ್ ಹಾಗೂ ಇನ್ನಿತರ ಕ್ಯಾನ್ಸರ್ ಗಳ ಹರಡುವಿಕೆಯನ್ನು ಹೆಚ್ಚಿಸುವ ಸಾಧ್ಯತೆಯಿರುತ್ತದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಆದರೆ, ಇದಕ್ಕೆ ಕಾರಣವಾಗುವ ಅಂತರ್ಗತ ಪ್ರಕ್ರಿಯೆ ಏನು ಎಂಬುದು ಇದುವರೆಗೆ ಸ್ಪಷ್ಟವಾಗಿರಲಿಲ್ಲ. ಇದೀಗ, ಭಾರತೀಯ ವಿಜ್ಞಾನ ಸಂಸ್ಥೆಯ (ಐಐ ಎಸ್ ಸಿ) ಸಂಶೋಧಕರು, ವಯಸ್ಸಾದ ಅಂಗಾಂಶಗಳು ಕ್ಯಾನ್ಸರ್ ಅನ್ನು ತನ್ನೆಡೆಗೆ ಸೆಳೆಯುವ ವಿಶಿಷ್ಟವಾದ ಕೋಶೇತರ ಮ್ಯಾಟ್ರಿಕ್ಸ್ (ಎಕ್ಸ್ ಟ್ರಾ ಸೆಲ್ಯೂಲಾರ್ ಮ್ಯಾಟ್ರಿಕ್ಸ್) ಸ್ರವಿಸುವುದರಿಂದ ಇಂತಹ ಅಂಗಾಂಶಗಳಲ್ಲಿ ಅಂಡಾಶಯದ ಕ್ಯಾನ್ಸರ್ ಹೆಚ್ಚು ಸುಲಭವಾಗಿ ಹರಡುತ್ತದೆ ಎಂಬುದನ್ನು ಅಧ್ಯಯನದಿಂದ ಪತ್ತೆಹಚ್ಚಿದ್ದಾರೆ.

ಕೆಮೋಥೆರಪಿ ಪ್ರೇರಿತ ಸೆನೆಸೆಂಟ್ ಮಾದರಿ ಬಳಸಿ ತಜ್ಞರು ಈ ಅಧ್ಯಯನ ನಡೆಸಿದ್ದಾರೆ. ಮೊದಲಿಗೆ, ಅವರು ಇಲಿಗಳ ದೇಹದ ಕುಹರಗಳಿಗೆ ಹೊಂದಿಕೊಂಡ ಪದರಗಳಿಂದ ಅಂಗಾಂಶಗಳನ್ನು ಹೊರತೆಗೆದರು. ನಂತರ, ಇವುಗಳಲ್ಲಿ ಅರ್ಧದಷ್ಟು ಅಂಗಾಂಶಗಳನ್ನು ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುವ ಕೆಮ್ಮೋಥೆರಪ್ಯೂಟಿಕ್ಸ್ ಗೆ ಒಳಪಡಿಸಲಾಯಿತು. ಈ ಮೂಲಕ, ಈ ಅಂಗಾಂಶಗಳನ್ನು ಸೆನೆಸೆನ್ಸ್ ಎಂಬ ಸ್ಥಿತಿಗೆ ದೂಡಲಾಯಿತು (ಜೀವಕೋಶಗಳು ಅವಸಾನಗೊಳ್ಳದ, ಆದರೆ ಅವುಗಳ ಪ್ರತಿಸೃಷ್ಟಿ ಸ್ಥಗಿತಗೊಳ್ಳುವ ಸ್ಥಿತಿಗೆ ಸೆನೆಸೆನ್ಸ್ ಎನ್ನಲಾಗುತ್ತದೆ). ದೇಹದ ವಿಷಯಕ್ಕೆ ಬಂದರೆ ವಯಸ್ಸಾಗುವುದು ಎಂಬುದನ್ನು ನಾವು ಯಾವ ಅರ್ಥದಲ್ಲಿ ಬಳಸುತ್ತೇವೆಯೋ ಅದನ್ನೇ ಜೀವಕೋಶ ಅಥವಾ ಅಂಗಾಂಶದ ವಿಷಯದಲ್ಲಿ ಸೆನೆಸೆನ್ಸ್ ಎಂದು ಕರೆಯಲಾಗುತ್ತದೆ ಎಂದು ವಿವರಿಸುತ್ತಾರೆ ಡೆವಲಪ್ ಮೆಂಟಲ್ ಬಯಾಲಜಿ ಮತ್ತು ಜೆನೆಟಿಕ್ಸ್ (ಡಿಬಿಜಿ) ವಿಭಾಗದ ಸಹಪ್ರಾಧ್ಯಾಪಕ ಹಾಗೂ “ಸೆಲ್ಯುಲಾರ್ ಅಂಡ್ ಮಾಲಿಕ್ಯುಲಾರ್ ಲೈಫ್ ಸೈನ್ಸಸ್”ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯ ಸಹಲೇಖಕರಾದ ರಾಮ್ ರೇ ಭಟ್.

ಮುಂದುವರಿದು, ಸಂಶೋಧಕರು ಇಲಿಯ ದೇಹದ ಪ್ರಾಯಾವಸ್ಥೆಯ ಹಾಗೂ ವಯಸ್ಸಾದ ಅಂಗಾಂಶ ಮಾದರಿಗಳನ್ನು ಮತ್ತು ಮನುಷ್ಯನ ಅಂಗಾಂಶವನ್ನು ಹೋಲುವ ಸೆಲ್ ಶೀಟ್ ಗಳನ್ನು ಅಂಡಾಶಯ ಕ್ಯಾನ್ಸರ್ ಜೀವಕೋಶಗಳ ಸಂಪರ್ಕಕ್ಕೆ ಒಡ್ಡಿಕೊಳ್ಳುವಂತೆ ಮಾಡಿದರು. ಸೂಕ್ಷ್ಮದರ್ಶಕದಡಿ ದೀರ್ಘಾವಧಿ ಅಧ್ಯಯನಕ್ಕೆ ಅನುಕೂಲವಾಗಲೆಂದು ತಜ್ಞರು ಸಾಮಾನ್ಯ ಜೀವಕೋಶಗಳು ಮತ್ತು ಕ್ಯಾನ್ಸರ್ ಜೀವಕೋಶಗಳನ್ನು ವಿವಿಧ ಫ್ಲೋರೋಸೆಂಟ್ ಮಾರ್ಕರ್ ಗಳಿಗೆ ಪೋಣಿಸಲು ಟೈಮ್- ಲ್ಯಾಪ್ಸ್ ಇಮೇಜಿಂಗ್ ಬಳಸಿದರು. “ಸೆಲ್ ಲೈನ್ ಗಳಿಗೆ ಹೋಲಿಸಿದರೆ ಅಂಗಾಂಶಗಳ ಚಿತ್ರ ಸೆರೆಹಿಡಿಯುವುದು ತುಸು ಕಷ್ಟಕರ. ಸೆಲ್ ಲೈನ್ ಗಳಲ್ಲಿ ಒಂದೇ ಬಗೆಯ ಜೀವಕೋಶಗಳ ಬೆಳವಣಿಗೆ ಇರುವುದು ಇದಕ್ಕೆ ಕಾರಣ” ಎನ್ನುತ್ತಾರೆ ಮೊದಲ ಲೇಖಕರಾದ ಹಾಗೂ ಐಐಎಸ್‌ಸಿ ಯ‌ಲ್ಲಿ ಈ ಹಿಂದೆ ಜೀವಶಾಸ್ತ್ರದ ಮಾಜಿ ವಿದ್ಯಾರ್ಥಿಯಾಗಿದ್ದ ಹಾಗೂ ಪ್ರಸ್ತುತ ಅಮೆರಿಕದ ವ್ಯಾಂಡೆರ್ ಬಿಲ್ಟ್  ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ವ್ಯಾಸಂಗ ಮಾಡುತ್ತಿರುವ ಭರತ್ ಥಾಪ.

ಅಧ್ಯಯನದ ವೇಳೆ ಕ್ಯಾನ್ಸರ್ ಜೀವಕೋಶಗಳು ಹೆಚ್ಚಾಗಿ ವಯಸ್ಸಾದ ಅಂಗಾಂಶಗಳನ್ನು ತಮ್ಮ ನೆಲೆಯಾಗಿಸಿಕೊಳ್ಳಲು‌ ಆದ್ಯತೆಯ ಮೇಲೆ ಆಯ್ಕೆ ಮಾಡಿಕೊಳ್ಳುತ್ತವೆ ಎಂಬುದು ದೃಢಪಟ್ಟಿತು. ಅಷ್ಟೇ ಅಲ್ಲದೆ, ಸೆಲ್ ಶೀಟ್ ಗಳಲ್ಲಿ ಅವು ವಯಸ್ಸಾದ ಸಾಮಾನ್ಯ ಜೀವಕೋಶಗಳ ಸನಿಹದಲ್ಲಿ ನೆಲೆ ಕಂಡುಕೊಂಡವು ಎಂಬುದೂ ಗೊತ್ತಾಯಿತು.

ಇದರಿಂದ, ಕ್ಯಾನ್ಸರ್ ಜೀವಕೋಶಗಳನ್ನು ವಯಸ್ಸಾದ ಜೀವಕೋಶಗಳೆಡೆಗೆ ಸೆಳೆಯುವ ಅಂಶವಾದರೂ ಏನು?- ಎಂಬ ಪ್ರಶ್ನೆ ತಜ್ಞರಲ್ಲಿ ಉಂಟಾಯಿತು. ವಯಸ್ಸಾದ ಜೀವಕೋಶಗಳಿಂದ ಸ್ರವಣಗೊಂಡು ಹೆಚ್ಚು ದೂರದವರೆಗೆ ವಿಸರಣಗೊಳ್ಳುವ ಸಂಕೇತ ಕಣಗಳು (ಸಿಗ್ನಲಿಂಗ್ ಮಾಲಿಕ್ಯೂಲ್ ಗಳು) ಇದಕ್ಕೆ ಕಾರಣವಿರಬಹುದೇ ಎಂಬುದು ಆರಂಭದಲ್ಲಿ ವಿಜ್ಞಾನಿಗಳ ಊಹೆಯಾಗಿತ್ತು. ಇದಕ್ಕೆ ಪೂರಕವಾಗಿ, ಕ್ಯಾನ್ಸರ್ ಜೀವಕೋಶಗಳು ಹಾಗೂ ವಯಸ್ಸಾದ ಜೀವಕೋಶಗಳ ನಡುವಿನ ಪ್ರತಿವರ್ತನೆಗಳನ್ನು ಅಧ್ಯಯನ ಮಾಡಲು ತಜ್ಞರು ಕಂಪ್ಯೂಟರ್ ಮಾಡೆಲ್ ಗಳನ್ನು ಕೂಡ ಅಭಿವೃದ್ಧಿಪಡಿಸಿದರು.

ಅಧ್ಯಯನವನ್ನು ಮುಂದುವರಿಸಿದಾಗ ಅವರಿಗೆ ಅಚ್ಚರಿಯ ಅಂಶ ಕಂಡುಬಂತು. ಕ್ಯಾನ್ಸರ್ ಜೀವಕೋಶಗಳನ್ನು ಸೆಳೆಯುವುದು ವಿಸರಣಗೊಳ್ಳುವ ಕಣಗಳಲ್ಲ; ಬದಲಿಗೆ, ವಯಸ್ಸಾದ ಜೀವಕೋಶಗಳಿಂದ ಸ್ರವಣಗೊಂಡು ಕೋಶೇತರ ಮ್ಯಾಟ್ರಿಕ್ಸ್ (ಇಸಿಎಂ) ಆಗಿ ನೆಲೆಯಾಗುವ ಪ್ರೋಟೀನುಗಳು ಕ್ಯಾನ್ಸರ್ ಜೀವಕೋಶಗಳನ್ನು ಸೆಳೆಯುತ್ತವೆ (ಜೀವಕೋಶಗಳು ಅಂಟಿಕೊಂಡು ಬೆಳೆಯುವ ಮೂಲಾಧಾರವನ್ನು ಇಸಿಎಂ ಎನ್ನಲಾಗುತ್ತದೆ). “ಕ್ಯಾನ್ಸರ್ ಜೀವಕೋಶಗಳನ್ನು ಅಲ್ಲಿಗೆ ಸೆಳೆಯುವುದು, ವಯಸ್ಸಾದ ಜೀವಕೋಶಗಳಿಗೆ ಬಿಗಿಯಾಗಿ ಅಂಟಿಕೊಳ್ಳಲು ಹಾಗೂ ವೇಗವಾಗಿ ಹರಡಲು ಅನುಮತಿಸುವುದು ಎಕ್ಸ್ಟ್ ಟ್ರಾ ಸೆಲ್ಯುಲರ್ ಮ್ಯಾಟ್ರಿಕ್ಸ್ ಎಂಬುದು ಭಟ್ ಅವರ ವಿವರಣೆಯಾಗಿದೆ.

ಕಂಪ್ಯೂಟರ್ ಪ್ರತ್ಯನುಕರಣೆಗಳನ್ನು (ಸಿಮ್ಯುಲೇಷನ್ ಗಳನ್ನು) ನಕಲು ಮಾಡಲು ತಜ್ಞರು ಮನುಷ್ಯ ಸೆಲ್ ಲೈನ್ ಗಳ ಮೇಲೂ‌ ಪ್ರಯೋಗಗಳನ್ನು ನಡೆಸಿದರು. ಕ್ಯಾನ್ಸರ್ ಕೋಶಗಳು ವಯಸ್ಸಾದ ಜೀವಕೋಶಗಳ ಸುತ್ತಲ ಕೋಶೇತರ ಮ್ಯಾಟ್ರಿಕ್ಸ್ ಗೆ ಬಿಗಿಯಾಗಿ ಅಂಟಿಕೊಳ್ಳುವುದು ಹಾಗೂ ಕೊನೆಗೆ ವಯಸ್ಸಾದ ಜೀವಕೋಶಗಳನ್ನು ನಾಶಗೊಳಿಸುವುದು ಅವರ ಗಮನಕ್ಕೆ ಬಂತು. ಅಲ್ಲದೇ, ಪ್ರಾಯದ ಜೀವಕೋಶಗಳಿರುವ ಇಸಿಎಂ ಗೆ ಹೋಲಿಸಿದರೆ ವಯಸ್ಸಾದ ಇಸಿಎಂ ನಲ್ಲಿ ಫೈಬ್ರೋ ನೆಕ್ಟೀನ್, ಲ್ಯಾಮಿನಿನ್ ಮತ್ತು ಹ್ಯಾಲುರೊನಾನ್ ನಂತಹ ಪ್ರೋಟೀನುಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ ಹಾಗೂ ಇವು ಕ್ಯಾನ್ಸರ್ ಜೀವಕೋಶಗಳಿಗೆ ಬಿಗಿಯಾಗಿ ಅಂಟಿಕೊಳ್ಳಲು ಅನುಮತಿಸುತ್ತವೆ ಎಂಬುದು ಕಂಡುಬಂದಿತು.

ತಮ್ಮ ಈ ಅಧ್ಯಯನದಲ್ಲಿ‌ ಕಂಡು ಬಂದ ಅಂಶಗಳನ್ನು ಆಧರಿಸಿ, ಪ್ರಾಯಾವಸ್ಥೆಯವರಿಗೆ ಕಂಡುಬರುವ ಕ್ಯಾನ್ಸರ್ ಗಿಂತ ವಯಸ್ಸಾದವರಲ್ಲಿನ ಕ್ಯಾನ್ಸರ್ ಹೆಚ್ಚು ಕಳವಳಕಾರಿಯಾಗಿ ಪರಿಣಮಿಸಲು ಇದೇ ಪ್ರಮುಖ ಕಾರಣವಿರಬಹುದು ಎಂದು ಸಂಶೋಧಕರು ಊಹಿಸಿದ್ದಾರೆ. ಅಂಡಾಶಯದ ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಉತ್ತಮ ಫಲಿತಾಂಶಗಳನ್ನು ಪಡೆಯುವಲ್ಲಿ ಕೆಮೋಥೆರಪಿಯ ಸೂಕ್ತ ಬಳಕೆಯು ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವ ಭಟ್ ಅವರು. ವಾಸ್ತವವಾಗಿ, ಕೆಮೋಥೆರಪಿ ಕೂಡ ಸೆನೆಸೆನ್ಸ್ ಅನ್ನು ಪ್ರಚೋದಿಸುತ್ತದೆ ಹಾಗೂ ಈ ಅವಸ್ಥೆಯು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸುವ ಸಾಧ್ಯತೆ ಇರುತ್ತದೆ ಎಂಬ ಅಂಶದ ಬಗ್ಗೆ ಗಮನ ಸೆಳೆಯುತ್ತಾರೆ.

ಕ್ಯಾನ್ಸರ್ ಜೀವಕೋಶಗಳು ಅಂಗಾಂಶಗಳಲ್ಲಿ ಯಾವ ವಲಯದಲ್ಲಿ ನೆಲೆಯಾಗುತ್ತವೆ ಎಂದು ಅಂದಾಜಿಸಲು ನೆರವಾಗುವ ಕೆಲವು ಮ್ಯಾಟ್ರಿಕ್ಸ್ ಪ್ರೋಟೀನ್ ಗಳ‌ನ್ನು ಪತ್ತೆಹಚ್ಚಲು ಗಮನ ಕೇಂದ್ರೀಕರಿಸಿ ಈ ಅಧ್ಯಯನವನ್ನು ಮುಂದುವರಿಸಬಹುದು ಎನ್ನುತ್ತಾರೆ ಭಟ್. ಭವಿಷ್ಯದ ಅಧ್ಯಯನಗಳು ಸೆನೋಲಿಟಿಕ್ಸ್ ಬಗ್ಗೆ, ಅಂದರೆ, ಸೆನೆಸೆಂಟ್ ಜೀವಕೋಶಗಳನ್ನು ಕೊಲ್ಲುವ ಔಷಧಗಳ ಅಭಿವೃದ್ಧಿ ಕುರಿತು. ಗಮನಹರಿಸಬಹುದು. ಕ್ಯಾನ್ಸರ್ ಉಲ್ಬಣವಾಗುವುದನ್ನು ತಡೆಯಲು ಕೆಮೋಥೆರಾಪ್ಯುಟಿಕ್ಸ್ ದೊಂದಿಗೆ ಸೆನೋಲಿಟಿಕ್ಸ್ ಸಂಯೋಜಿತ ಥೆರಪಿಯಾಗಿ ಪ್ರಚಲಿತಕ್ಕೆ ಬರಬಹುದು ಎಂದು ಥಾಪಾ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಉಲ್ಲೇಖ:
ಥಾಪಾ ಬಿ.ವಿ., ಬ್ಯಾನರ್ಜಿ ಎಂ, ಗ್ಲಿಮ್ ಟಿ, ಸೈನಿ ಡಿಕೆ, ಭಟ್ ಆರ್.,
The senescent mesothelial matrix accentuates colonization by ovarian cancer cells, Cellular and Molecular Life Sciences (2024).

ಇಂಡಿಯಾ ಅಲಯನ್ಸ್ ಡಿ.ಬಿ.ಟಿ. ವೆಲ್ ಕಮ್ ಟ್ರಸ್ಟ್ ಮತ್ತು ದಿ ಜಾನ್ ಟೆಂಪಲ್ ಟನ್ ಫೌಂಡೇಷನ್ ಗಳ ಅನುದಾನದ ನೆರವಿನಿಂದ ಈ ಅಧ್ಯಯನ ನಡೆಸಲಾಯಿತು.

ಸಂಪರ್ಕ:
ರಾಮ್ ರೇ ಭಟ್
ಸಹ ಪ್ರಾಧ್ಯಾಪಕರು
ಡೆವಲಪ್ ಮೆಂಟಲ್ ಬಯಾಲಜಿ ಅಂಡ್ ಜೆನೆಟಿಕ್ಸ್ (ಡಿಬಿಜಿ) ವಿಭಾಗ
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)
ಇಮೇಲ್: ramray@iisc.ac.in
Phone: +91-80-22932764
Website: https://morphogenesisiisc.wixsite.com/home

ಭರತ್ ವಿವನ್ ಥಾಪಾ
ಹಿಂದಿನ ಪದವಿ ವಿದ್ಯಾರ್ಥಿ (ಮಾಸ್ಟರ್ ಆಫ್ ಸೈನ್ಸ್)
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)
ಪಿಎಚ್.ಡಿ. ಅಧ್ಯಯನಾರ್ಥಿ, ವ್ಯಾಂಡೆರ್ ಬಿಲ್ಟ್ ವಿಶ್ವವಿದ್ಯಾಲಯ
ಇ-ಮೇಲ್: bharat.v.thapa@vanderbilt.edu

ಪರ್ತಕರ್ತರಿಗೆ ಸೂಚನೆ:

ಅ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ.

ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ ದಯವಿಟ್ಟು news@iisc.ac.in ಅಥವಾ pro@iisc.ac.in ಗೆ ಬರೆಯಿರಿ.

——000—-