ನಾಗರಹಾವುಗಳ ಬಹುಬಗೆಯ ಮಾರಕ ವಿಷಗಳ ವಿರುದ್ಧ ವ್ಯಾಪಕ ರಕ್ಷಣೆ ನೀಡಲು ರೂಪುಗೊಂಡ ಪ್ರತಿಕಾಯಗಳು


09 ಸೆಪ್ಟೆಂಬರ್ 2026

– ರೋಹಿಣಿ ಸುಬ್ರಹ್ಮಣ್ಯಂ

ಹಾವು ಕಡಿತವು ಉಷ್ಣವಲಯದಲ್ಲಿ ಉದಾಸೀನಕ್ಕೆ ಒಳಗಾಗಿರುವ ಸವಾಲಾಗಿದ್ದು, ಪ್ರತಿವರ್ಷ ಲಕ್ಷಾಂತರ ಜನರ ಸಾವು ಮತ್ತು ಅಂಗವೈಕಲ್ಯಕ್ಕೆ ಕಾರಣವಾಗುತ್ತಿದೆ. ಭಾರತದಲ್ಲಿ ಪ್ರತಿವರ್ಷ ಸುಮಾರು 50,000 ಮಂದಿ ಹಾವು ಕಡಿತದಿಂದ ಸಾವಿಗೀಡಾಗುತ್ತಿದ್ದು, ಈ ಕಾರಣದಿಂದಾಗಿ ಪ್ರಪಂಚದಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸುವ ದೇಶವಾಗಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪರಿಸರ ವಿಜ್ಞಾನ ಕೇಂದ್ರದ (ಸಿಇಎಸ್) ಸಂಶೋಧಕರು, ಡೆನ್ಮಾರ್ಕ್ ತಾಂತ್ರಿಕ ವಿಶ್ವವಿದ್ಯಾಲಯದ (ಡಿಟಿಯು) ಸಹಯೋಗದೊಂದಿಗೆ, ಮರುಸಂಯೋಜಿತ ನ್ಯಾನೊಬಾಡಿ (ಪ್ರತಿಕಾಯದ ತುಣುಕು) ಆಧಾರಿತ ಹಾವಿನ ವಿಷನಿರೋಧಕವನ್ನು ರೂಪಿಸಿ ಮಹತ್ವದ ಬೆಳವಣಿಗೆ ಸಾಧಿಸಿದ್ದಾರೆ. ಇದು ಭಾರತದ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ಕಂಡುಬರುವ ವಿವಿಧ ಪ್ರಭೇದಗಳ ನಾಗರಹಾವು ಮತ್ತು ಕಾಳಿಂಗ ಸರ್ಪಗಳ ವಿಷದ ವಿರುದ್ಧ ವಿಶಾಲ ವ್ಯಾಪ್ತಿಯ ರಕ್ಷಣೆ ಒದಗಿಸುವ ಸಾಮರ್ಥ್ಯ ಹೊಂದಿದೆ. ಈ ಅಧ್ಯಯನವು ‘ಸೈನ್ಸ್ ಟ್ರ್ಯಾನ್ಸ್ಲೇಷನಲ್ ಮೆಡಿಸಿನ್’ (Science Translational Medicine) ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

ನರಗಳು, ರಕ್ತ ಅಥವಾ ದೇಹದ ಅಂಗಾಂಶಗಳ ಮೇಲೆ ದಾಳಿಯೆಸಗುವ ಹಾವಿನಲ್ಲಿ ಉತ್ಪತ್ತಿಯಾಗುವ ವಿಷಕಾರಿ ಅಂಶಗಳ ಮಿಶ್ರಣವು ಪ್ರತಿಯೊಂದು ಪ್ರಭೇದಕ್ಕೂ ವಿಭಿನ್ನವಾಗಿರುತ್ತದೆ. ಹೀಗಾಗಿ, ಎಲ್ಲ ಹಾವುಗಳ ವಿಷಕ್ಕೂ ಸಮಾನವಾಗಿ ಪರಿಣಾಮಕಾರಿಯಾದ ಒಂದೇ ರೀತಿಯ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸುವುದು ಕಷ್ಟಕರವಾಗಿದೆ. ಪ್ರಸ್ತುತ, ಪ್ರಾಣಿಗಳಿಂದ ಪಡೆಯಲಾಗುವ ಹಾವು ಪ್ರತಿವಿಷಗಳಲ್ಲಿ ಹಲವು ಮಿತಿಗಳು ಕೂಡ ಇವೆ- ಅವುಗಳ ಉತ್ಪಾದನೆಯ ಬೇರೆ ಬೇರೆ ಬ್ಯಾಚ್‌ಗಳ ಗುಣಮಟ್ಟದಲ್ಲಿ ವ್ಯತ್ಯಾಸವಿರುತ್ತದೆ; ಅಲ್ಲದೇ, ಅಡ್ಡಪರಿಣಾಮಗಳ ಅಪಾಯದ ಜೊತೆಗೆ ಅವು ಕೆಲವೇ ಪ್ರಭೇದಗಳ ವಿಷದ ವಿರುದ್ಧ ಪರಿಣಾಮಕಾರಿಯಾಗಿರುತ್ತವೆ; ಅವುಗಳ ಉತ್ಪಾದನೆಗೆ ಹಾವುಗಳಿಂದ ಸಂಗ್ರಹಿಸಿದ ವಿಷವನ್ನು ಪ್ರಾಣಿಗಳಿಗೆ ನೀಡಿ ಪ್ರತಿರಕ್ಷಣಾ ಪ್ರತಿಕ್ರಿಯೆ ಉಂಟುಮಾಡುವ ಹಳೆಯ ವಿಧಾನವನ್ನು ಅನುಸರಿಸಲಾಗುತ್ತಿದೆ. ಈ ಪ್ರಕ್ರಿಯೆ ದುಬಾರಿಯಾಗಿದ್ದು, ಪರಿಣಾಮಕಾರಿ ಪ್ರತಿಕಾಯಗಳ ಉತ್ಪಾದನೆಯ ಪ್ರಮಾಣ ಕೂಡ ಕಡಿಮೆಯಿರುತ್ತದೆ.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ, ಸಿ.ಇ.ಎಸ್.ನ ಸಹ-ಪ್ರಾಧ್ಯಾಪಕ ಕಾರ್ತಿಕ್ ಸುನಗಾರ್ ಅವರು ಡಿ.ಟಿ.ಯು. ಪ್ರಾಧ್ಯಾಪಕ ಆಂಡ್ರಿಯಾಸ್ ಲಾಸ್ಟ್ಸನ್ ಅವರ ಸಹಯೋಗದಲ್ಲಿ, ಭಾರತದ ವಿವಿಧ ನಾಗರಹಾವು ಪ್ರಭೇದಗಳ ವಿಷದ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲ ಪ್ರತಿಕಾಯಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮರುಸಂಯೋಜಿತ ಪ್ರತಿಕಾಯಗಳನ್ನು ಪ್ರಚಲಿತದಲ್ಲಿರುವ ಹಾವಿನ ಪ್ರತಿವಿಷಗಳಿಗಿಂತ ಭಿನ್ನವಾದ ರೀತಿಯಲ್ಲಿ ತಯಾರಿಸಬಹುದಾಗಿದೆ. ಈ ವಿಧಾನದಲ್ಲಿ, ಕುದುರೆಗಳಂತಹ ಪ್ರಾಣಿಗಳನ್ನು ಪದೇಪದೇ ಪ್ರತಿರಕ್ಷಣಾ ಪ್ರಕ್ರಿಯೆಗೆ ಒಳಪಡಿಸುವ ಅಗತ್ಯವಿಲ್ಲದೆ, ಸೂಕ್ಷ್ಮಾಣುಜೀವಿ ಆಧಾರಿತ ಉತ್ಪಾದನಾ ವಿಧಾನಗಳ ಮೂಲಕ ಮರುಸಂಯೋಜಿತ ಪ್ರತಿಕಾಯಗಳನ್ನು ತಯಾರಿಸಬಹುದು. ವೈದ್ಯಕೀಯವಾಗಿ ಸವಾಲಿನ ಪರಿಸ್ಥಿತಿ ಉಂಟುಮಾಡುವ ಇನ್ನಿತರ ಪ್ರಭೇದಗಳ ಹಾವುಗಳ ವಿಷದ ವಿರುದ್ಧ ರಕ್ಷಣೆ ಒದಗಿಸುವ ಸಲುವಾಗಿ ಹೆಚ್ಚುವರಿ ಪ್ರತಿಕಾಯ ಘಟಕಗಳನ್ನು ಕೂಡ ಸೇರಿಸಬಹುದು. ಇದರಿಂದ ಮುಂಬರುವ ದಿನಗಳಲ್ಲಿ ನಿರ್ದಿಷ್ಟ ಪ್ರದೇಶಗಳು ಅಥವಾ ಹಾವಿನ ಪ್ರಭೇದಗಳನ್ನು ಗುರಿಯಾಗಿಸಿಕೊಂಡು ಮರುಸಂಯೋಜಿತ ಹಾವು ವಿಷನಿರೋಧಕಗಳನ್ನು ರೂಪಿಸುವುದು ಸಾಧ್ಯವಾಗಬಹುದು.

“ಕಳೆದ 100 ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಹಾವು ಕಡಿತಕ್ಕೆ ನೀಡುವ ವಿಷನಿರೋಧಕ ಚಿಕಿತ್ಸೆಯು ಅಕ್ಷರಶಃ ಯಾವುದೇ ಬದಲಾವಣೆ ಕಾಣದೆ ಅದೇ ರೀತಿಯಲ್ಲಿ ಮುಂದುವರಿದಿದೆ. ಹೀಗಿರುವಾಗ, ನಾವು ಈಗ ರೂಪಿಸಿರುವ ಪ್ರತಿವಿಷವು ಭಾರತದಲ್ಲಿ ಹಾವು ಕಡಿತದ ಸಮಸ್ಯೆಯನ್ನು ಎದುರಿಸಲು ನೆರವಾಗಬಲ್ಲ ಭವಿಷ್ಯದ-ತಲೆಮಾರಿನ ವಿಷನಿರೋಧಕವಾಗಿದೆ” ಎಂದು ಸುನಾಗರ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಹಿಂದಿನ ಅಧ್ಯಯನವೊಂದರಲ್ಲಿ, ಲಾಸ್ಟ್ಸನ್ ಮತ್ತು ಅವರ ಸಹೋದ್ಯೋಗಿಗಳು ಆಫ್ರಿಕಾದ ವಿವಿಧ ಹಾವುಗಳ ವಿಷವನ್ನು ನೀಡಿ ಪ್ರತಿರಕ್ಷಣಾ ಪ್ರತಿಕ್ರಿಯೆ ಉಂಟುಮಾಡಲಾದ ಒಂಟೆ ಕುಟುಂಬದ ಪ್ರಾಣಿಗಳಾದ ಅಲ್ಪಾಕಾ ಮತ್ತು ಲಾಮಾಗಳ ರಕ್ತದಲ್ಲಿ ಉತ್ಪತ್ತಿಯಾದ ಪ್ರತಿಕಾಯಗಳನ್ನು ಪ್ರತ್ಯೇಕಿಸಿ, ಸೂಕ್ಷ್ಮಾಣುಜೀವಿ ಕೋಶಗಳ ನೆರವಿನಿಂದ ಪ್ರಯೋಗಾಲಯದಲ್ಲಿ ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿದ್ದರು. ನಂತರ ಈ ಪ್ರತಿಕಾಯಗಳನ್ನು ಬ್ಯಾಕ್ಟೀರಿಯೊಫೇಜ್‌ಗಳ (ಬ್ಯಾಕ್ಟೀರಿಯಾಗಳನ್ನು ಭಕ್ಷಿಸುವ ವೈರಸ್‌ಗಳು) ಮೇಲ್ಮೈಯಲ್ಲಿ ಪ್ರದರ್ಶಿಸಿ, ವಿವಿಧ ಹಾವುಗಳ ವಿಷದ ಸಂಪರ್ಕಕ್ಕೆ ಬರುವಂತೆ ಮಾಡಿದ್ದರು. ಆ ಮೂಲಕ ವಿಷಕಾರಿ ಅಂಶಗಳಿಗೆ ಅಂಟಿಕೊಳ್ಳುವ ಮತ್ತು ಅವುಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಹೊಂದಿರುವ ನಿರ್ದಿಷ್ಟ ಪ್ರತಿಕಾಯದ ತುಣುಕುಗಳನ್ನು ಪ್ರತ್ಯೇಕಿಸಿದ್ದರು.

ಪ್ರಸ್ತುತ ಅಧ್ಯಯನದಲ್ಲಿ, ಸುನಾಗರ್ ಮತ್ತು ಲಾಸ್ಟ್ಸನ್ ಅವರ ತಂಡಗಳ ತಜ್ಞರು ತಮ್ಮ ಸಂಶೋಧನೆಯ ವೇಳೆ ಇದೇ ಒಂಟೆ ಕುಟುಂಬದ ಪ್ರಾಣಿಗಳಿಂದ ಪಡೆದ ಪ್ರತಿಕಾಯಗಳ ಸಂಗ್ರಹವನ್ನು ಬಳಸಿದರು. ಆದರೆ, ಅವುಗಳನ್ನು ಭಾರತದ ವಿವಿಧ ನಾಗರಹಾವು ಪ್ರಭೇದಗಳ ವಿಷದೊಂದಿಗೆ ಸಂಪರ್ಕಕ್ಕೆ ಬರುವಂತೆ ಮಾಡಿದರು. ಹೀಗೆ ಮಾಡಿದಾಗ, ಈ ಪ್ರತಿಕಾಯಗಳು ಭಾರತೀಯ ಹಾವುಗಳು ಉತ್ಪಾದಿಸುವ ವಿಷಕಾರಿ ಅಂಶಗಳನ್ನೂ ನಿಷ್ಕ್ರಿಯಗೊಳಿಸಬಲ್ಲವು ಎಂಬುದು ಸಂಶೋಧಕರಿಗೆ ದೃಢಪಟ್ಟಿತು.

“ಸ್ಥಳೀಯ ಹಾವುಗಳ ಪ್ರಭೇದಗಳಲ್ಲಿನ ನಿರ್ದಿಷ್ಟ ವಿಷಕಾರಿ ಅಂಶಗಳನ್ನು ಗುರಿಯಾಗಿಸಿಕೊಂಡು ಪ್ರಪಂಚದ ವಿವಿಧ ಪ್ರದೇಶಗಳಿಗೆ ಸೂಕ್ತವೆನ್ನಿಸುವ ಮರುಸಂಯೋಜಿತ ಹಾವಿನ ವಿಷನಿರೋಧಕಗಳನ್ನು ಹೇಗೆ ರೂಪಿಸಬಹುದು ಎಂಬುದಕ್ಕೆ ಈ ಅಧ್ಯಯನ ಮಾರ್ಗದರ್ಶಿಯಾಗಿದೆ” ಎಂದು ಲಾಸ್ಟ್ಸನ್ ಅಭಿಪ್ರಾಯಪಡುತ್ತಾರೆ.

ಸಾಮಾನ್ಯವಾಗಿ ಪ್ರತಿಕಾಯಗಳು ಇಂಗ್ಲಿಷ್‌ನ ‘Y’ ಅಕ್ಷರದ ಆಕಾರದಲ್ಲಿದ್ದು, ಭಾರ ಮತ್ತು ಹಗುರ ಇವೆರಡೂ ಬಗೆಯ ಪ್ರೋಟೀನ್ ಸರಪಳಿಗಳಿಂದ ರೂಪುಗೊಂಡಿರುತ್ತವೆ. . ಸುನಾಗರ್ ಮತ್ತು ಅವರ ಸಹೋದ್ಯೋಗಿಗಳು ಹಾವಿನ ವಿಷದಲ್ಲಿರುವ ನಿರ್ದಿಷ್ಟ ವಿಷಕಾರಿ ಅಂಶಗಳಿಗೆ ಅಂಟಿಕೊಳ್ಳಬಲ್ಲ ಹಗುರು ಸರಪಳಿಯ ಪ್ರೋಟೀನ್ ಗಳಿಂದ ಮಾಡಲ್ಪಟ್ಟ ‘Y’ ಆಕಾರದ ತುದಿಯ ಭಾಗವನ್ನು ಬಳಸಿದರು. ತಾವು ಪರೀಕ್ಷಿಸಿದ ವಿವಿಧ ನಾಗರಹಾವು ಪ್ರಭೇದಗಳ ವಿಷಕಾರಿ ಅಂಶಗಳಿಗೆ ಅಂಟಿಕೊಳ್ಳಬಲ್ಲ ನ್ಯಾನೊಬಾಡಿಗಳು ಎಂದು ಕರೆಯಲ್ಪಡುವ ಐದು ಪ್ರತಿಕಾಯದ ತುಣುಕುಗಳನ್ನು ಸಂಶೋಧಕರು ಪ್ರತ್ಯೇಕಿಸಿ, ಅವುಗಳ ಮಿಶ್ರಣವನ್ನು ಸಿದ್ಧಪಡಿಸಿದರು. ಈ ಐದು ನ್ಯಾನೊಬಾಡಿಗಳ ಮಿಶ್ರಣವು ವಿಷದ ಕ್ರಿಯೆಯನ್ನು ನಿಷ್ಕ್ರಿಯಗೊಳಿಸುವ ಜೊತೆಗೆ ವಿಷಕಾರಿ ಅಂಶಗಳು ಮಾನವ ದೇಹದಲ್ಲಿನ ತಮ್ಮ ಗುರಿ ರಿಸೆಪ್ಟರ್‌ಗಳಿಗೆ ಅಂಟಿಕೊಳ್ಳುವುದನ್ನು ತಡೆಯುತ್ತವೆ ಎಂಬುದು ಸಂಶೋಧಕರಿಗೆ ಕಂಡುಬಂದಿತು.

ನಂತರ ಸಂಶೋಧಕರು, ಈ ಪ್ರತಿಕಾಯ ಮಿಶ್ರಣವನ್ನು ಹಾವಿನ ವಿಷವನ್ನು ಚುಚ್ಚಲಾಗಿದ್ದ ಇಲಿಗಳ ಮೇಲೆ ಪರೀಕ್ಷಿಸಿದರು. ಈ ಮಿಶ್ರಣವು ಕನ್ನಡಕ ನಾಗರಹಾವು (ಎರಡು ಮಸೂರದಂತಹ ರಚನೆ), ಮಾನೋಕಲ್ಡ್ ನಾಗರಹಾವು (ಒಂದು ಮಸೂರದಂತಹ ರಚನೆ) ಹಾಗೂ ಭಾರತದ ಎರಡೂ ಕಾಳಿಂಗ ಸರ್ಪ ಪ್ರಭೇದಗಳ ವಿಷಗಳನ್ನು ನಿಷ್ಕ್ರಿಯಗೊಳಿಸಿ ಇಲಿಗಳನ್ನು ರಕ್ಷಿಸಬಲ್ಲದು ಎಂಬುದು ಪರೀಕ್ಷೆಯಿಂದ ಸಾಬೀತಾಯಿತು. ಚುಚ್ಚುಮದಿನ ಮೂಲಕ ವಿಷವನ್ನು ಸೇರ್ಪಡೆಗೊಳಿಸಿದ 30 ನಿಮಿಷಗಳ ನಂತರ ಈ ಪ್ರತಿಕಾಯ ಮಿಶ್ರಣವನ್ನು ನೀಡಿದಾಗಲೂ ಇಲಿಗಳನ್ನು ಸಾವಿನಿಂದ ರಕ್ಷಿಸಲು ಸಾಧ್ಯವಾಯಿತು. ವಿಷದ ಪರಿಣಾಮವಾಗಿ ಪಾರ್ಶ್ವವಾಯುವಿಗೆ ಒಳಗಾಗಿದ್ದ ಅಥವಾ ನರಮಂಡಲದ ಮೇಲೆ ವಿಷದ ದಾಳಿಯಿಂದ ವಿಶಿಷ್ಟ ಲಕ್ಷಣಗಳನ್ನು ತೋರ್ಪಡಿಸುತ್ತಿದ್ದ ಇಲಿಗಳೂ ಸಂಪೂರ್ಣವಾಗಿ ಲಕ್ಷಣರಹಿತ ಸ್ಥಿತಿಗೆ ಮರಳಿದವು ಎಂದು ಸುನಾಗರ್ ವಿವರಿಸುತ್ತಾರೆ.

ಹಿಂದಿನ ಅಧ್ಯಯನಗಳಲ್ಲಿ ಇಲಿಗಳಲ್ಲಿನ ಹಾವಿನ ವಿಷವನ್ನು ನಿಷ್ಕ್ರಿಯಗೊಳಿಸಲು ತುಲನಾತ್ಮಕವಾಗಿ ಹೆಚ್ಚಿನ ಪ್ರಮಾಣದ ಏಕಸ್ವರೂಪದ ಪ್ರತಿಕಾಯಗಳ ಅಗತ್ಯವಿತ್ತು. ಹೀಗಾಗಿ, ಮನುಷ್ಯರಿಗೆ ನೀಡಬೇಕಾದರೆ ಇನ್ನೂ ಎಷ್ಟು ಅದೆಷ್ಟು ಪ್ರಮಾಣದಲ್ಲಿ ಡೋಸೇಜ್ ನೀಡಬೇಕಾಗುತ್ತದೋ ಎಂಬ ಪ್ರಶ್ನೆಯೂ ಇತ್ತು ಎಂದು ಸುನಾಗರ್ ವಿವರಿಸುತ್ತಾರೆ.

“ಆದರೆ, ಸೂಕ್ತವಾಗಿ ಆಯ್ಕೆ ಮಾಡಿ ರೂಪಿಸಿದ ಅತ್ಯಲ್ಪ ಪ್ರಮಾಣದ ಪ್ರತಿಕಾಯಗಳಿಂದಲೂ ವಿಷವನ್ನು ನಿಷ್ಕ್ರಿಯಗೊಳಿಸಬಹುದು ಎಂಬುದನ್ನು ನಾವು ತೋರಿಸಿದ್ದೇವೆ. ಹೆಚ್ಚಿನ ಪ್ರಮಾಣದ ಪ್ರತಿಕಾಯಗಳನ್ನು ನೀಡುವುದಕ್ಕೆ ತಗುಲುವ ವೆಚ್ಚ ಮತ್ತು ಸುರಕ್ಷತೆಗೆ ಸಂಬಂಧಿಸಿದ ಕೆಲವು ತೊಡಕುಗಳನ್ನು ನಿವಾರಿಸಲು ಇದು ಗಮನಾರ್ಹವಾಗಿ ನೆರವಾಗಬಹುದು” ಎಂದು ಅವರು ಹೇಳುತ್ತಾರೆ.

“ಈ ಕಾರ್ಯಯೋಜನೆಯಲ್ಲಿ ವಿಷಶಾಸ್ತ್ರ, ಪ್ರತಿಕಾಯ ವಿನ್ಯಾಸ ಮತ್ತು ಪ್ರೋಟೀನ್ ವಿಜ್ಞಾನ ಕ್ಷೇತ್ರಗಳ ಹಲವು ದೇಶಗಳ ತಜ್ಞರು ಪರಿಣತಿಯನ್ನು ಒಗ್ಗೂಡಿಸಲಾಗಿದೆ” ಎಂದು ಅಧ್ಯಯನದ ಸಹಲೇಖಕಿ ಹಾಗೂ ಡಿಟಿಯು ಹಿರಿಯ ಸಂಶೋಧಕಿ ಆನ್ ಲುಂಗಾರ್ಸ್ ಹೇಳುತ್ತಾರೆ. “ಹಾವು ಕಡಿತದಂತಹ ಜಾಗತಿಕ ಆರೋಗ್ಯ ಸವಾಲನ್ನು ಪರಿಹರಿಸಲು ಇಂತಹ ಬಹುಶಿಸ್ತೀಯ ಸಹಯೋಗ ಅತ್ಯಗತ್ಯ” ಎಂದೂ ಅವರು ಅಭಿಪ್ರಾಯಪಡುತ್ತಾರೆ.

ಸಂಪರ್ಕ:

ಕಾರ್ತಿಕ್ ಸುನಾಗರ್
ಸಹ ಪ್ರಾಧ್ಯಾಪಕ
ಜೀವಿಪರಿಸರ ವಿಜ್ಞಾನಗಳ ಸಂಸ್ಥೆ (ಸಿಇಎಸ್)
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಇಮೇಲ್: ksunagar@iisc.ac.in
ಫೋನ್: 080-2293-2896 ವೆಬ್ ಸೈಟ್: https://www.venomicslab.com/ | https://www.venomdetective.com/

ಆಂಡ್ರಿಯಾಸ್ ಎಚ್ ಲಾಸ್ಟ್ಸನ್-ಕೀಲ್
ಪ್ರಾಧ್ಯಾಪಕರು, ಬಯೋಟೆಕ್ನಾಲಜಿ ಅಂಡ್ ಬಯೋಮೆಡಿಸಿನ್ ವಿಭಾಗ
ಟೆಕ್ನಿಕಲ್ ಯೂನಿವರ್ಸಿಟಿ ಆಫ್ ಡೆನ್ಮಾರ್ಕ್ ಇಮೇಲ್: ahola@bio.dtu.dk ಫೋನ್: (+45) 29881134

ಆನ್ ಲುಂಗಾರ್ಸ್
ಹಿರಿಯ ಸಂಶೋಧಕಿ, ಬಯೋಟೆಕ್ನಾಲಜಿ ಅಂಡ್ ಬಯೋಮೆಡಿಸಿನ್ ವಿಭಾಗ
ಟೆಕ್ನಿಕಲ್ ಯೂನಿವರ್ಸಿಟಿ ಆಫ್ ಡೆನ್ಮಾರ್ಕ್ ಇಮೇಲ್: aellj@dtu.dk ಫೋನ್: (+46) 709606628

ಪರ್ತಕರ್ತರ ಗಮನಕ್ಕೆ:

ಎ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐಐಎಸ್‌ಸಿ ಹೆಸರಿನೊಂದಿಗೆ ಪ್ರಕಟಿಸಿ.
ಬಿ) ಐಐಎಸ್‌ಸಿ ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ news@iisc.ac.in ಅಥವಾ pro@iisc.ac.in ಗೆ ಬರೆಯಿರಿ.