ಟಿ.ವಿ. ತಾಂತ್ರಿಕತೆಗೆ ಅಂತರರಾಷ್ಟ್ರೀಯ ಪ್ರಮಾಣೀಕರಣಗಳ ಅಳವಡಿಕೆ: ಸಭೆಯ ಆತಿಥ್ಯ ವಹಿಸಿದ ಭಾರತ


16ನೇ ಮೇ 2023

ದೂರಸಂಪರ್ಕ ಎಂಜಿನಿಯರಿಂಗ್ ಕೇಂದ್ರ (ಟಿಇಸಿ), ದೂರಸಂಪರ್ಕ ಇಲಾಖೆ (ಡಿಒಟಿ) ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ, ಬೆಂಗಳೂರು), ಇವುಗಳ ಆಶ್ರಯದಲ್ಲಿ “ಬ್ರಾಡ್ ಬ್ಯಾಂಡ್ ಕೇಬಲ್ ಹಾಗೂ ಟಿವಿ/ದೃಶ್ಯ ಶ್ರವಣ ವಸ್ತು ಪ್ರಸರಣ ಮತ್ತು ಸಮಗ್ರ ಕೇಬಲ್ ಜಾಲಗಳು” ಕುರಿತು ITU-T ಅಧ್ಯಯನ ಗುಂಪು 9ರ (SG-9) ಸಭೆ ಐಐಎಸ್‌ಸಿ ಕ್ಯಾಂಪಸ್ಸಿನಲ್ಲಿ ನಡೆಯಿತು.

ಕೋವಿಡ್ 19ರ ಮಹಾಸೋಂಕಿನ ನಂತರ SG-9ದ ಮೊದಲ ಭೌತಿಕ ಸ್ವರೂಪದ ಸಭೆ ಇದಾಗಿತ್ತು. ಭಾರತವು SG9 ಸಭೆಯ ಆತಿಥ್ಯ ವಹಿಸಿದ್ದು ಕೂಡ ಇದೇ ಮೊದಲ ಸಲ. ಬಾಂಗ್ಲಾದೇಶ, ಬ್ರೆಜಿಲ್, ಚೀನಾ, ಕಾಂಗೋ, ಈಜಿಪ್ಟ್, ಫ್ರಾನ್ಸ್, ಗ್ಯಾಂಬಿಯಾ, ಜರ್ಮನಿ, ಭಾರತ, ಜಪಾನ್, ಕೀನ್ಯಾ, ಕೊರಿಯಾ, ಮ್ಯಾನ್ಮಾರ್, ನೇಪಾಳ, ಪ್ಯಾಲೆಸ್ತೀನ್, ಶ್ರೀಲಂಕಾ, ಸಿರಿಯಾ, ಸ್ವಿಟ್ಜರ್ಲ್ಯಾಂಡ್, ತಾಂಜಾನಿಯಾ, ಥಾಯ್ಲೆಂಡ್, ಉಕ್ರೇನ್ ಮತ್ತಿತರ ರಾಷ್ಟ್ರಗಳ ನಿಯೋಗಗಳ ಸದಸ್ಯರು ಹಾಗೂ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಜೊತೆಗೆ, ವಿಶ್ವಸಂಸ್ಥೆಯ ಘಟಕವಾದ ಇಂಟರ್ ನ್ಯಾಷನಲ್ ಟೆಲಿ ಕಮ್ಯುನಿಕೇಶನ್ ಯೂನಿಯನ್ (ಐಟಿಯು) ಪ್ರತಿನಿಧಿಗಳು ಹಾಗೂ ಇತರ ತಜ್ಞರು ಕೂಡ ಭಾಗವಹಿಸಿದ್ದರು.

ಸಂವಹನ ಜಾಲಗಳಲ್ಲಿ ಅಂತರರಾಷ್ಟ್ರೀಯ ಸಂಪರ್ಕಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 1865ರಲ್ಲಿ ಸ್ಥಾಪನೆಯಾದ ಐಟಿಯು ವಿಶ್ವಸಂಸ್ಥೆಯ ಅತ್ಯಂತ ಹಳೆಯ ಘಟಕ ಸಂಸ್ಥೆಯಾಗಿದೆ. ಜಾಗತಿಕ ರೇಡಿಯೋ ತರಂಗಾಂತರ ಶ್ರೇಣಿ ಹಾಗೂ ಉಪಗ್ರಹ ಕಕ್ಷೆಗಳ ನಿಗದಿಪಡಿಸುವಿಕೆ, ನಿರಂತರ ಅಂತರ್ ಸಂಪರ್ಕ ಖಾತ್ರಿಗೊಳಿಸುವ ಜಾಲಗಳ ಹಾಗೂ ತಾಂತ್ರಿಕತೆಗಳ ಪ್ರಮಾಣೀಕರಣಗಳ ಅಭಿವೃದ್ಧಿ, ಹಾಗೂ ಪ್ರಪಂಚದಾದ್ಯಂತ ಸೌಲಭ್ಯ ವಂಚಿತ ಸಮುದಾಯಗಳಿಗೆ ಮಾಹಿತಿ ಮತ್ತು ಸಂಪರ್ಕ ತಾಂತ್ರಿಕತೆಗಳ ಲಭ್ಯತೆಯ ಸುಧಾರಣೆ (ಐಸಿಟಿ), ಇವುಗಳನ್ನು ಗಮನದಲ್ಲಿರಿಸಿಕೊಂಡು ಐಟಿಯು ಕಾರ್ಯನಿರ್ವಹಿಸುತ್ತದೆ. ದೃಶ್ಯ-ಶ್ರವಣ ವಸ್ತುವಿನ ಪ್ರಾಥಮಿಕ ಹಾಗೂ ಎರಡನೇ ಹಂತದ ವಿತರಣೆಗೆ ಅಗತ್ಯವಿರುವ ದೂರಸಂಪರ್ಕ ವ್ಯವಸ್ಥೆಗಳೂ ಐಟಿಯು ಅಧ್ಯಯನ ಗುಂಪು 9ರ ಜವಾಬ್ದಾರಿಯಾಗಿರುತ್ತದೆ. ಇದರ ಲಭ್ಯತೆಗೆ ಸಂಬಂಧಿಸಿದ ಸೇವೆಗಳು ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರತಿಸ್ಪಂದನ ಮಾಧ್ಯಮವನ್ನು (ಇಂಟರಾಕ್ಟಿವ್ ಮೀಡಿಯಾ) ಕೂಡ ಇದು ಒಳಗೊಳ್ಳುತ್ತದೆ.

ಐಐಎಸ್‌ಸಿ ಎಲೆಕ್ಟ್ರಿಕಲ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ಈ ITU SG9 ಸಭೆ ನಡೆಯಿತು. ಮೇ 9ರಂದು ನಡೆದ ಉದ್ಘಾಟನಾ ಗೋಷ್ಠಿಯಲ್ಲಿ ಶ್ರೀ ಅವಿನಾಶ್ ಅಗರ್ ವಾಲ್, ಡಿಡಿಜಿ (ಸಿ&ಬಿ), ಟಿಇಸಿ, ಡಾ. ಸತೋಷಿ ಮಿಯಾಜಿ, ITU-T SG9 ಅಧ್ಯಕ್ಷರು, ಐಐಎಸ್‍ಸಿ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮತ್ತು ಕಂಪ್ಯೂಟರ್ ಸೈನ್ಸ್ ನಿಕಾಯದ ಡೀನ್ ಪ್ರೊಫೆಸರ್ ರಾಜೇಶ್ ಸುಂದರೇಶನ್, ITU-T SG9 ಉಪಾಧ್ಯಕ್ಷರಾದ ಪ್ರೊಫೆಸರ್ ಪ್ರದೀಪ್ತ ಬಿಸ್ವಾಸ್, ಐಟಿಯು ಜಿನೀವಾದ ಟಿಎಸ್‌ಬಿ ತಂಡದವರು ಉಪಸ್ಥಿತರಿದ್ದರು.

ಈ ಹಿಂದೆ ನಡೆದಿದ್ದ ವಿಶ್ವ ದೂರಸಂಪರ್ಕ ಪ್ರಮಾಣೀಕರಣ ಸಮಾವೇಶದಲ್ಲಿ ಐಟಿಯು ಸದಸ್ಯರು ಮುಂದಿರಿಸಿದ್ದ 11 ಪ್ರಶ್ನೆಗಳ ಬಗ್ಗೆ ಚರ್ಚಿಸುವ ಉದ್ದೇಶದಿಂದ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಐಟಿಯು ಸದಸ್ಯತ್ವ ಘಟಕಗಳು ಸಲ್ಲಿಸಿದ ವಿವಿಧ ಕೊಡುಗೆಗಳನ್ಧು ಪರಿಗಣನೆಗೆ ತೆಗೆದುಕೊಂಡು ಕೇಬಲ್ ಮತ್ತು ಬ್ರಾಡ್ ಬ್ಯಾಂಡ್ ಟಿವಿಯ ಪ್ರಸರಣ, ವಿತರಣೆ ಮತ್ತು ಪ್ರಸ್ತುತಿಯ ವಿವಿಧ ಆಯಾಮಗಳ ಬಗ್ಗೆ SG9 ಅವಲೋಕಿಸುತ್ತದೆ. ಇದರಲ್ಲಿ ಹೆಚ್ಚಿನ ಪಾಲು ಭಾರತ ಮತ್ತು ಭಾರತದ ಪಾಲುದಾರರಿಂದ ಸಲ್ಲಿಕೆಯಾಗಿರುತ್ತದೆ. ಐಐಎಸ್‌ಸಿ ನೇತೃತ್ವದಲ್ಲಿ ಸಿದ್ಧವಾದ ಕಾಮನ್ ಯೂಸರ್ ಪ್ರೊಫೈಲ್ ಕರಡು ಶಿಫಾರಸು ಕೂಡ ಇದರಲ್ಲಿ ಸೇರಿದೆ ಎಂಬುದು ಇಲ್ಲಿ ಉಲ್ಲೇಖಿಸಬೇಕಾದ ಸಂಗತಿಯಾಗಿದೆ. ಮೇ 10,20230 ಬುಧವಾರದಂದು IRG-AVAದ ವರ್ಚುವಲ್ ಸಭೆ ನಡೆಯಿತು (ITU-D, ITU-R and ITU-T ವಲಯಗಳ ಪ್ರತಿನಿಧಿಗಳು ನೀಡುವ ಸಲಹೆ ಹಾಗೂ ಅಭಿಪ್ರಾಯಗಳನ್ನು ಸಮನ್ವಯಗೊಳಿಸಿ ದೃಶ್ಯ- ಶ್ರವಣ ಮಾಧ್ಯಮದ ಲಭ್ಯತೆಯನ್ನು ಸುಧಾರಿಸಲು ಪರಿಶ್ರಮಿಸುತ್ತಿರುವ ಐಟಿಯು ದ ಗುಂಪು ಇದಾಗಿದೆ).

11 ಮೇ 2023, ರಂದು ಕಾರ್ಯಕ್ರಮದ ಭಾಗವಾಗಿ ದಕ್ಷಿಣ ಏಷ್ಯಾ, ಅರಬ್ ಮತ್ತು ಆಫ್ರಿಕಾ ಪ್ರದೇಶಗಳಲ್ಲಿ ಭವಿಷ್ಯದ ಟೆಲಿವಿಜನ್ ಕುರಿತು ಕಾರ್ಯಗಾರ ನಡೆಯಿತು. ನಿಯಂತ್ರಣ ಮತ್ತು ಕಾರ್ಯನೀತಿ ರೂಪುರೇಷೆಗಳು, ಪ್ರವರ್ಧಮಾನಕ್ಕೆ ಬರುತ್ತಿರುವ ಹಾಗೂ ಏಕತ್ರಗೊಳ್ಳುತ್ತಿರುವ ಐಸಿಟಿ ಮೂಲಸೌಕರ್ಯಗಳು ಹಾಗೂ ಸೇವೆಗಳು, ಗ್ರಾಹಕ ಇಂಟರ್ ಫೇಸ್ ಗಳು ಮತ್ತು ಮನುಷ್ಯ ಸಂಬಂಧಿ ಅಂಶಗಳ ಕುರಿತು ಈ ಕಾರ್ಯಗಾರದಲ್ಲಿ ಸಮಾಲೋಚನೆ ನಡೆಸಲಾಯಿತು. ಹೈಬ್ರಿಡ್ ಸ್ವರೂಪದಲ್ಲಿ ನಡೆದ ಈ ಕಾರ್ಯಾಗಾರದಲ್ಲಿ 50ಕ್ಕೂ ಹೆಚ್ಚು ದೇಶಗಳ 200ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.‌ ದೂರಸಂಪರ್ಕ ಇಲಾಖೆಯ ಉಪ ಪ್ರಧಾನ ನಿರ್ದೇಶಕ (ಅಂತರರಾಷ್ಟ್ರೀಯ ಸಂಪರ್ಕಗಳು) ಪ್ರೇಮ್ ಜಿತ್ ಲಾಲ್, ಪ್ರೊಫೆಸರ್ ರಾಜೇಶ್ ಸುಂದರೇಶನ್, ಡಾ. ಸತೋಷಿ ಮಿಯಾಜಿ, ಐಟಿಯು ದೂರಸಂಪರ್ಕ ಪ್ರಮಾಣೀಕರಣ ಬ್ಯೂರೋ ನಿರ್ದೇಶಕ ಸೀಜೋ ಒನೋಇ ಮತ್ತಿತರ ಪರಿಣಿತರು ವಿಷಯ ಮಂಡಿಸಿದರು. ಸಿ-ಡಾಟ್, ಸಾಂಖ್ಯ ಲ್ಯಾಬ್ಸ್, ಐಟಿಐ, ಕ್ವಾಲ್ಕಾಮ್, ಎಕ್ಸಾಲ್ಟೊ, ದೂರದರ್ಶನ, ಐಐಎಸ್‌ಸಿ ಯ ಮೂರು ಪ್ರಯೋಗಾಲಯಗಳು (ಸೆಂಟರ್ ಫಾರ್ ನೆಟ್ವರ್ಕ್ಡ್ ಇಂಟೆಲಿಜೆನ್ಸ್, 5G ಟೆಸ್ಟ್ ಬೆಡ್ ಮತ್ತು I3D ಲ್ಯಾಬ್ಸ್) ಸೇರಿದಂತೆ ವಿವಿಧ ಕಂಪನಿಗಳು ಮತ್ತು ಸಂಶೋಧನಾ ಸಂಸ್ಥೆಗಳು ಈ ಸಂದರ್ಭದಲ್ಲಿ ಪ್ರಾತ್ಯಕ್ಷಿಕೆಗಳನ್ನು ನೀಡಿದವು.

ಟಿ‌.ಎಸ್.ಬಿ. ನಿರ್ದೇಶಕ ಸೀಜೋ ಒನೋಇ ಅವರು ಈ ಸಂದರ್ಭದಲ್ಲಿ ಮಾತನಾಡಿ, ಕಾರ್ಯಗಾರ ಆಯೋಜಿಸುವಲ್ಲಿ ಭಾರತ ಸರ್ಕಾರದ ದೂರಸಂಪರ್ಕ ಸಚಿವಾಲಯ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ ವಹಿಸಿದ ಪರಿಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದರು.

“ಡಿಜಿಟಲ್ ಪ್ರಸರಣದ ಭವಿಷ್ಯದ ತಾಂತ್ರಿಕತೆಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗಿದೆ. ಅದರೊಟ್ಟಿಗೆ, ಹಲವಾರು ರಾಷ್ಟ್ರಗಳು ಅನಲಾಗ್ ಪ್ರಸರಣದಿಂದ ಡಿಜಿಟಲ್ ಪ್ರಸರಣಕ್ಕೆ ಬದಲಾಗುತ್ತಿರುವ ಹಂತದಲ್ಲಿ ಈಗಲೂ ಸವಾಲುಗಳನ್ನು ಎದುರಿಸುತ್ತಿರುವ ಬಗ್ಗೆ ಗಮನ ಸೆಳೆಯಲಾಗಿದೆ. ಐಟಿಯು ಕಾರ್ಯಗಾರವು ಅತ್ಯುತ್ತಮ ವಿಧಾನಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ತಾಂತ್ರಿಕತೆಯ ಕಂದಕಗಳನ್ನು ಪರಿಹರಿಸಿಕೊಳ್ಳಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ ಎಂಬ ಆಶಯ ನನ್ನದಾಗಿದೆ” ಎಂದೂ ಅವರು ನುಡಿದರು.

ಸಂಬಂಧಿಸಿದ ಕೊಂಡಿಗಳು:

ITU Future of TV: ITU Workshop on “The Future of Television for South Asia, Arab and Africa Regions”
ITU SG 9: ITU-T SG9: Broadband cable and TV
ITU: ITU: Committed to connecting the world

ಸಂಪರ್ಕಿಸಿ:
ಸಂವಹನ ಕಚೇರಿ, ಐಐಎಸ್‌ಸಿ|
news@iisc.ac.in