29 ಸೆಪ್ಟೆಂಬರ್ 2026
– ಹರ್ಷ್ ಶ್ರೀವಾಸ್ತವ
ಕೋಶ ವಿಭಜನೆಯು ಅತ್ಯಂತ ಸಂಕೀರ್ಣ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯ ಕೇಂದ್ರಬಿಂದುವಿನಲ್ಲಿ 200ಕ್ಕೂ ಹೆಚ್ಚು ಘಟಕಗಳಿಂದ ಕೂಡಿರುವ, ಪೊರೆಯಿಲ್ಲದ ಅಂಗಕವಾದ ‘ಸೆಂಟ್ರೋಸೋಮ್’ (ಕೋಶಧ್ರುವ ಕಾಯ) ಇರುತ್ತದೆ. ಆನುವಂಶಿಕ ವಸ್ತುವನ್ನು ಪ್ರತ್ಯೇಕಿಸಲು ಅಗತ್ಯವಾದ ನೂಲಿನ ಎಳೆಗಳಂತಹ ರಚನೆಗಳಾದ ಮೈಟಾಟಿಕ್ ಸ್ಪಿಂಡಲ್ಗಳ ಜೋಡಣೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಸ್ಪಿಂಡಲ್ಗಳ ಈ ಜೋಡಣೆಗೆ ಸೆಂಟ್ರೋಸೋಮ್ನ ಯಾವ ಘಟಕಗಳು ಅಗತ್ಯ ಮತ್ತು ಯಾವ ಘಟಕಗಳು ಮಾತ್ರವೇ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಕಾಗುತ್ತವೆ ಎಂಬುದು ಬಹುಕಾಲದಿಂದ ವಿಜ್ಞಾನಿಗಳಿಗೆ ನಿಗೂಢವಾಗಿಯೇ ಉಳಿದಿತ್ತು.
ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸೂಕ್ಷ್ಮಾಣುಜೀವಶಾಸ್ತ್ರ ಮತ್ತು ಕೋಶ ಜೀವಶಾಸ್ತ್ರ (ಎಂಸಿಬಿ) ವಿಭಾಗದ ಸಂಶೋಧಕರು ಇದೀಗ ‘ದ್ಯುತಿ ಪ್ರೇರಿತ ಸ್ಪಿಂಡಲ್ ಸಕ್ರಿಯತೆ’ (ಲೈಟ್-ಇಂಡ್ಯೂಸ್ಡ್ ಸ್ಪಿಂಡಲ್ ಆಕ್ಟಿವೇಷನ್-LISA) ಎಂಬ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಸ್ಪಿಂಡಲ್ಗಳ ಜೋಡಣೆಗೆ ಅತ್ಯಂತ ನಿರ್ಣಾಯಕವಾಗಿರುವ, ಸೆಂಟ್ರೋಸೋಮ್ನ ಪ್ರಮುಖ ಕಿಣ್ವವಾದ ‘ಔರೋರಾ ಎ ಕೈನೇಸ್’ ಅನ್ನು ಈ ತಂತ್ರಜ್ಞಾನದ ಮೂಲಕ ಬೆಳಕಿನ ಸಹಾಯದಿಂದ ಸಕ್ರಿಯಗೊಳಿಸಬಹುದು. ಅಲ್ಲದೆ, ಈ ಸಕ್ರಿಯಗೊಳಿಸುವಿಕೆಯನ್ನು ಮೊದಲಿಗೆ ಸ್ಥಿತಿಗೆ ಮರಳಿಸಲೂ ಸಾಧ್ಯ. ಈ ತಂತ್ರಜ್ಞಾನವು ಸೆಂಟ್ರೋಸೋಮ್ಗಳು ಮತ್ತು ಸ್ಪಿಂಡಲ್ಗಳ ಜೋಡಣೆಯ ಪ್ರಕ್ರಿಯೆಯನ್ನು ಹೆಚ್ಚು ವಿವರವಾಗಿ ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ನೆರವಾಗುತ್ತದೆ. ಈ ಘಟಕಗಳು ಅಥವಾ ಪ್ರಕ್ರಿಯೆಗಳು ಸರಿಯಾಗಿ ಕಾರ್ಯನಿರ್ವಹಿಸದ ಸಂದರ್ಭಗಳಲ್ಲಿ, ಅವುಗಳನ್ನು ಕೃತಕವಾಗಿ ನಿಯಂತ್ರಿಸುವ ಮೂಲಕ ಕೋಶ ವಿಭಜನೆಯನ್ನು ಮತ್ತೆ ಸರಿಯಾದ ಸ್ಥಿತಿಗೆ ತರುವ ಸಾಧ್ಯತೆಯನ್ನೂ ಇದು ತೆರೆದಿಟ್ಟಿದೆ. ಈ ಅಧ್ಯಯನ ವರದಿಯು EMBO Reports ನಿಯತಕಾಲಿಕದಲ್ಲಿ ಪ್ರಕಟವಾಗಿದೆ.
ಔರೋರಾ ಎ ಕೈನೇಸ್ ಒಂದುಗೂಡಿ ಗುಂಪು ರೂಪುಗೊಳ್ಳುವ (ಕ್ಲಸ್ಟರಿಂಗ್) ಪ್ರಕ್ರಿಯೆಯ ಮೂಲಕ ಸಕ್ರಿಯಗೊಳ್ಳುತ್ತದೆ ಎಂಬುದು ವಿಜ್ಞಾನಿಗಳಿಗೆ ಮೊದಲೇ ತಿಳಿದಿತ್ತು. ಜೀವಕೋಶಗಳಲ್ಲಿ ಈ ಪ್ರಕ್ರಿಯೆಗೆ ‘ಸೆಪ್192’ (Cep192) ಎಂಬ ಸಂಘಟಕ ಪ್ರೋಟೀನು (ಸ್ಕ್ಯಾಫೋಲ್ಡ್ ಪ್ರೋಟೀನ್) ನೆರವಾಗುತ್ತದೆ. ವಿಕಾಸದ ಹಾದಿಯಲ್ಲಿ ಸಂರಕ್ಷಿಸಲ್ಪಟ್ಟಿರುವ ಈ ಪ್ರೋಟೀನು, ಔರೋರಾ ಎ ಕೈನೇಸ್ನ ಘಟಕಗಳು ಒಂದೆಡೆ ಗುಂಪುಗೂಡುವಂತೆ ಮಾಡುತ್ತದೆ. ಹಿಂದಿನ ಸಂಶೋಧನೆಗಳ ಪ್ರಕಾರ, ಔರೋರಾ ಎ ಲೇಪಿತ ಮಣಿಗಳು (ಬೀಡ್ಸ್) ಕಪ್ಪೆಯ ಮೊಟ್ಟೆಯ ಕೋಶಗಳಿಂದ ಪಡೆದ ಸಾರದಲ್ಲಿ ಮೈಕ್ರೊಟ್ಯೂಬ್ಯೂಲ್ಗಳ ಉಗಮ (ಸೂಕ್ಷ್ಮನಳಿಕೆಗಳು ರೂಪುಗೊಳ್ಳುವ ಮೊದಲ ಹಂತ) ಪ್ರಕ್ರಿಯೆಯನ್ನು ಪ್ರಚೋದಿಸಬಲ್ಲವು. ಆದರೆ, ಈ ವ್ಯವಸ್ಥೆಯಲ್ಲಿ ಔರೋರಾ ಎ ಸಕ್ರಿಯಗೊಳ್ಳಲು ಸೆಪ್192 ಅಗತ್ಯವಾಗಿರುತ್ತದೆ. ಇದೀಗ ಸಂಶೋಧಕರು ‘ಲಿಸಾ’ ತಂತ್ರಜ್ಞಾನದ ಮೂಲಕ ನೀಲಿ ಬೆಳಕನ್ನು ಬಳಸಿ ಸೆಪ್192ನ ಅವಲಂಬನೆಯಿಲ್ಲದೆ ವಿವಿಧ ಬಗೆಯ ಜೀವಕೋಶಗಳಲ್ಲಿ ಔರೋರಾ ಎ ಗುಂಪುಗೂಡುವ ಪ್ರಕ್ರಿಯೆಯನ್ನು ಪ್ರಚೋದಿಸಬಹುದು ಹಾಗೂ ಅಧ್ಯಯನ ಮಾಡಬಹುದು. ಅಲ್ಲದೆ, ಈ ಪ್ರಕ್ರಿಯೆಯನ್ನು ಮತ್ತೆ ಮೊದಲಿನ ಸ್ಥಿತಿಗೆ ತರಲೂ ಸಾಧ್ಯವಾಗುತ್ತದೆ. ಮುಖ್ಯವಾಗಿ, ಜೀವಕೋಶಗಳಿಂದ ಪಡೆದ ಸಾರಕ್ಕೆ ಮಾತ್ರ ಸೀಮಿತವಾಗಿರುವ ಬೀಡ್-ಆಧಾರಿತ ವಿಧಾನಕ್ಕಿಂತ ಭಿನ್ನವಾಗಿ, ‘ಲಿಸಾ’ ತಂತ್ರಜ್ಞಾನವನ್ನು ಜೀವಂತ ಜೀವಕೋಶಗಳಲ್ಲಿಯೇ ನೇರವಾಗಿ ಅನ್ವಯಿಸಬಹುದು.
ಈ ಹೊಸ ವಿಧಾನವನ್ನು ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ, ಎಂಸಿಬಿ ವಿಭಾಗದ ಸಹ ಪ್ರಾಧ್ಯಾಪಕರಾದ ಸಚಿನ್ ಕೋಟಕ್ ಮತ್ತು ಅವರ ತಂಡವು ಈಗಾಗಲೇ ಅಸ್ತಿತ್ವದಲ್ಲಿದ್ದ ‘ಲಾರಿಯಟ್’ (LARIAT) ಎಂಬ ತಂತ್ರಜ್ಞಾನಕ್ಕೆ ಹೊಸ ಆನ್ವಯಿಕತೆಯನ್ನು ಕಂಡುಕೊಂಡರು. ಸಾಮಾನ್ಯವಾಗಿ, ಬೆಳಕಿನ ಮೂಲಕ ಪ್ರೋಟೀನುಗಳನ್ನು ಒಂದೆಡೆ ಗುಂಪುಗೂಡಿಸಿ ಅವುಗಳ
ಕಾರ್ಯಚಟುವಟಿಕೆಯನ್ನು ತಡೆಯಲು ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಆದರೆ, ಬೆಳಕಿನಿಂದ ಪ್ರಚೋದಿತವಾಗುವ ಈ ಗುಂಪುಗೂಡುವ ಪ್ರಕ್ರಿಯೆಯನ್ನೇ ಔರೋರಾ ಎ ಕೈನೇಸ್ ಅನ್ನು ಸಕ್ರಿಯಗೊಳಿಸಲು ಬಳಸಬಹುದು ಎಂಬುದನ್ನು ಕೋಟಕ್ ಅವರ ತಂಡ ಗುರುತಿಸಿತು. ನೀಲಿ ಬೆಳಕನ್ನು ಹಾಯಿಸಿದಾಗ ಒಂದೆಡೆ ಗುಂಪುಗೂಡುವಿಕೆಯನ್ನು ಪ್ರಚೋದಿಸಬಹುದಾದ ಸಸ್ಯಗಳಿಂದ ಪಡೆದ CRY2 ಮತ್ತು CIB1 ಎಂಬ ಎರಡು ಪ್ರೋಟೀನುಗಳನ್ನು LARIAT ತಂತ್ರಜ್ಞಾನದಲ್ಲಿ ಬಳಸಲಾಗುತ್ತದೆ.

ಸಂಶೋಧಕರು ಮೊದಲಿಗೆ, ಔರೋರಾ ಎ ಕೈನೇಸ್ ಅನ್ನು CRY2 ಪ್ರೋಟೀನಿನೊಂದಿಗೆ ಸಂಯೋಜನೆಗೊಳಿಸಿ ರೂಪಿಸಿದ ‘ಫ್ಯೂಷನ್ ಪ್ರೋಟೀನ್’ ಅನ್ನು ಉತ್ಪಾದಿಸುವಂತೆ ಮಾನವ ಜೀವಕೋಶಗಳನ್ನು ವಿನ್ಯಾಸಗೊಳಿಸಿದರು. ಈ ಫ್ಯೂಷನ್ ಪ್ರೋಟೀನ್ ಮೇಲೆ ನೀಲಿ ಬೆಳಕನ್ನು ಹಾಯಿಸಿದಾಗ, CRY2 ತನ್ನ ಸಂರಚನೆಯಲ್ಲಿ CIB1 ಪ್ರೋಟೀನಿನೊಂದಿಗೆ ಸಂವಹನ ಸಾಧ್ಯವಾಗುವ ರೀತಿಯಲ್ಲಿ ಬದಲಾವಣೆ ಹೊಂದುತ್ತದೆ. ಪರಿಣಾಮವಾಗಿ, ಔರೋರಾ ಎ ಹೊಂದಿರುವ ಹಲವು ಘಟಕಗಳು ಒಂದೆಡೆ ಗುಂಪುಗೂಡುತ್ತವೆ ಎಂದು ಕೋಟಕ್ ಅವರ ಪ್ರಯೋಗಾಲಯದಲ್ಲಿ ಪಿಎಚ್.ಡಿ. ಅಧ್ಯಯನ ನಡೆಸುತ್ತಿರುವ ಹಾಗೂ ಈ ಸಂಶೋಧನಾ ವರದಿಯ ಮೊದಲ ಲೇಖಕರಾದ ವಿಘ್ಲೇಶ್ ಒಲಕ್ಕಲ್ ವಿವರಿಸುತ್ತಾರೆ. “ಬೆಳಕಿಗೆ ಸಂವೇದನಾಶೀಲವಾದ ಸಸ್ಯ ಪ್ರೋಟೀನುಗಳೊಂದಿಗೆ ಔರೋರಾ ಎ ಅನ್ನು ಸಂಯೋಜನೆಗೊಳಿಸಿದ ಕೃತಕ ಔರೋರಾ ಎ ಕೈನೇಸ್ ಸಂಕೀರ್ಣವನ್ನು ರೂಪಿಸುವ ಮೂಲಕ ಅದನ್ನು ಪ್ರಚೋದಿಸಿ ಸಕ್ರಿಯಗೊಳಿಸಲು ಈ ವಿಧಾನವು ಹೊಸ ಅವಕಾಶ ಕಲ್ಪಿಸುತ್ತದೆ. ಮೈಕ್ರೊಟ್ಯೂಬ್ಯೂಲ್ಗಳ ನ್ಯೂಕ್ಲಿಯೇಷನ್ ಪ್ರಕ್ರಿಯೆಯನ್ನು ಆರಂಭಿಸಲು ಈ ಸಂಕೀರ್ಣವೊಂದೇ ಸಾಕಾಗುತ್ತದೆ” ಎಂದು ಅವರು ಹೇಳುತ್ತಾರೆ.
ಸೆಂಟ್ರೋಸೋಮ್ಗಳಿಲ್ಲದ ಜೀವಕೋಶಗಳಲ್ಲಿ ಸಾಮಾನ್ಯವಾಗಿ ಸ್ಪಿಂಡಲ್ಗಳ ಜೋಡಣೆಯಲ್ಲಿ ದೋಷಗಳು ಕಂಡುಬರುತ್ತವೆ. ಇದರಿಂದ ಕೋಶ ವಿಭಜನೆಯ ಪ್ರಕ್ರಿಯೆಯಲ್ಲಿಯೂ ಏರುಪೇರುಗಳು ಉಂಟಾಗುತ್ತವೆ. ‘ಲಿಸಾ’ ತಂತ್ರಜ್ಞಾನವು ಇಂತಹ ದೋಷಗಳನ್ನು ಸರಿಪಡಿಸಬಲ್ಲದೇ ಎಂಬುದನ್ನು ಪರೀಕ್ಷಿಸಲು ಕೋಟಕ್ ಅವರ ತಂಡ ಬಯಸಿತು. ಇದಕ್ಕಾಗಿ, ರಾಸಾಯನಿಕ ವಿಧಾನ ಬಳಸಿ ಮೊದಲಿಗೆ ಮಾನವ ಜೀವಕೋಶಗಳಿಂದ ಸೆಂಟ್ರೋಸೋಮ್ಗಳನ್ನು ತೆಗೆದುಹಾಕಲಾಯಿತು. ಬಳಿಕ, ಔರೋರಾ ಎ ಗುಂಪುಗೂಡುವಂತೆ ವಿನ್ಯಾಸಗೊಳಿಸಿದ್ದ ವ್ಯವಸ್ಥೆಯನ್ನು ಆ ಜೀವಕೋಶಗಳಲ್ಲಿ ಅಳವಡಿಸಲಾಯಿತು. ಕೋಶ ವಿಭಜನೆಯ ಮೈಟಾಸಿಸ್ ಹಂತದಲ್ಲಿ ನೀಲಿ ಬೆಳಕನ್ನು ಹಾಯಿಸಿದಾಗ ಔರೋರಾ ಎ ಗುಂಪುಗೂಡುವ ಪ್ರಕ್ರಿಯೆ ಪ್ರಚೋದಿತವಾಯಿತು. ಇದರಿಂದ ಮೈಕ್ರೊಟ್ಯೂಬ್ಯೂಲ್ಗಳ ನ್ಯೂಕ್ಲಿಯೇಷನ್ ಪ್ರಕ್ರಿಯೆಯೂ ಪರಿಣಾಮಕಾರಿಯಾಗಿ ಆರಂಭಗೊಂಡಿತು. ಗಮನಾರ್ಹ ಸಂಗತಿಯೆಂದರೆ, ಬೆಳಕಿನ ಮೂಲಕ ಔರೋರಾ ಎ ಅನ್ನು ಸಕ್ರಿಯಗೊಳಿಸುವುದರಿಂದ ಸ್ಪಿಂಡಲ್ಗಳ ಜೋಡಣೆ ಮತ್ತೆ ಸಾಧ್ಯವಾಯಿತು ಹಾಗೂ ಸೆಂಟ್ರೋಸೋಮ್ಗಳ ನಷ್ಟದಿಂದ ಉಂಟಾಗಿದ್ದ ಕೋಶ ವಿಭಜನೆಯ ದೋಷಗಳನ್ನೂ ಈ ವಿಧಾನವು ಸರಿಪಡಿಸಿತು.
‘ಲಿಸಾ’ ತಂತ್ರಜ್ಞಾನವು ಚಿಕಿತ್ಸಾ ಕ್ಷೇತ್ರದಲ್ಲಿಯೂ ಮಹತ್ವದ ಸಾಧ್ಯತೆಗಳನ್ನು ಹೊಂದಿದೆ ಎಂಬುದು ಸಂಶೋಧಕರು ಅಭಿಪ್ರಾಯವಾಗಿದೆ. “ಬಹಳಷ್ಟು ಸಾಂದ್ರೀಕೃತ ಗೆಡ್ಡೆಗಳಲ್ಲಿ (ಸಾಲಿಡ್ ಟ್ಯೂಮರ್ಸ್) ಔರೋರಾ ಎ ಕೈನೇಸ್ ಅತಿಯಾಗಿ ಉತ್ಪತ್ತಿಯಾಗುತ್ತದೆ. ಹೀಗಾಗಿಯೇ ಅದನ್ನು ಗುರಿಯಾಗಿಸಿಕೊಂಡ ಔಷಧಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ಔರೋರಾ ಎ ಕೈನೇಸ್ ಹಲವು ನೆಲೆಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ನಮ್ಮ ಈ ಹೊಸ ತಂತ್ರದ ಮೂಲಕ, ಮೈಕ್ರೊಟ್ಯೂಬ್ಯೂಲ್ಗಳ ನ್ಯೂಕ್ಲಿಯೇಷನ್ಗೆ ಸಂಬಂಧಿಸಿದಂತೆ ಸೆಂಟ್ರೋಸೋಮ್ನ ಅವಲಂಬನೆಯಿಲ್ಲದೆ ಔರೋರಾ ಎ ಕೈನೇಸ್ ನಿರ್ದಿಷ್ಟವಾಗಿ ಯಾವ ನೆಲೆಗಳ ಮೇಲೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತದೆ. ಇದರ ಆಧಾರದ ಮೇಲೆ, ಔರೋರಾ ಎ ಕೈನೇಸ್ನ ಇತರ ನೆಲೆಗಳನ್ನು ಪತ್ತೆಹಚ್ಚಿ, ಅವುಗಳನ್ನು ಗುರಿಯಾಗಿಸಿಕೊಂಡು ಔಷಧಗಳನ್ನು ವಿನ್ಯಾಸಗೊಳಿಸಲು ಸಾಧ್ಯವಾಗಬಹುದು” ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಉಲ್ಲೇಖ:
ಒಲಕ್ಕಲ್ ವಿ, ಬಾಲಕೃಷ್ಣನ್ ಎಂ, ಕೋಟಕ್ ಎಸ್, Light-induced spindle assembly through Aurora A clustering, EMBO Reports (2026). https://link.springer.com/article/10.1038/s44319-026-00928-9
ಸಂಪರ್ಕ:
ಸಚಿನ್ ಕೋಟಕ್
ಸಹ ಪ್ರಾಧ್ಯಾಪಕ
ಸೂಕ್ಷ್ಮಾಣುಜೀವಶಾಸ್ತ್ರ ಮತ್ತು ಕೋಶ ಜೀವಶಾಸ್ತ್ರ ವಿಭಾಗ (ಎಂಸಿಬಿ)
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)
ಇಮೇಲ್: sachinkotak@iisc.ac.in
ಫೋನ್: +91-80-22932292
ವೆಬ್ಸೈಟ್: https://kotakcellbiology.wixsite.com/spindlebehaviour
ಪರ್ತಕರ್ತರ ಗಮನಕ್ಕೆ:
ಎ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐಐಎಸ್ಸಿ ಹೆಸರಿನೊಂದಿಗೆ ಪ್ರಕಟಿಸಿ.
ಬಿ) ಐಐಎಸ್ಸಿ ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ news@iisc.ac.in ಅಥವಾ pro@iisc.ac.in ಗೆ ಬರೆಯಿರಿ.