
ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಕಲಿಕೆ ಹಾಗೂ ಸಂಶೋಧನೆಗೆ ಉತ್ತೇಜನ ನೀಡುವ ಸಲುವಾಗಿ ಸಮಾಜಸೇವಾಸಕ್ತ ಡಾ. ಕಾಚಿಗೆರೆ ಕೃಷ್ಣಪ್ಪ ಅವರು ಭಾರತೀಯ ವಿಜ್ಞಾನ ಸಂಸ್ಥೆಗೆ (ಐಐಎಸ್‌ಸಿ) ಉದಾರ ಕೊಡುಗೆ ನೀಡಿದ್ದಾರೆ.
ಸಂಸ್ಥೆಯ ಎರಡು ಮಹತ್ವದ ಉಪಕ್ರಮಗಳಿಗೆ ಬೆಂಬಲ ನೀಡುವ ಜೊತೆಗೆ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ‘ಶ್ರೀಮತಿ ಮೀನಾಕುಮಾರಿ ಮತ್ತು ಡಾ. ಸಿದ್ದೇಗೌಡ ಕೃಷ್ಣಪ್ಪ ಪುಟ್ಟಾಚಿ ಪ್ರಶಸ್ತಿ’ ಎಂಬ ಎರಡು ಪ್ರಶಸ್ತಿಗಳನ್ನು ಅವರು ಸ್ಥಾಪಿಸಿದ್ದಾರೆ. ಈ ಪೈಕಿ, ಒಂದು ಪ್ರಶಸ್ತಿಯು ಪಿಎಚ್.ಡಿ. ವಿದ್ಯಾರ್ಥಿಗಳಿಗಾಗಿ ಹಾಗೂ ಇನ್ನೊಂದು ಪ್ರಶಸ್ತಿಯು ಐಐಎಸ್‌ಸಿಯ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಇರುತ್ತದೆ. ವಿದ್ಯಾರ್ಥಿಗಳ ಸೈದ್ಧಾಂತಿಕ ಜ್ಞಾನವನ್ನು ಹೆಚ್ಚಿಸುವ ಜೊತೆಗೆ ಆ ಜ್ಞಾನವನ್ನು ಬಾಹ್ಯಾಕಾಶ ಅನ್ವೇಷಣೆ ಹಾಗೂ ಬ್ರಹ್ಮಾಂಡದ ಕುರಿತು ಮಾನವನ ಅರಿವು ವಿಸ್ತರಿಸಲು ನೆರವಾಗುವ ಯಂತ್ರಗಳು, ವಸ್ತುಗಳು ಮತ್ತು ಉಪಕರಣಗಳನ್ನು ಅಭಿವೃದ್ಧಿಪಡಿಸಲು ಅನ್ವಯಿಸುವುದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಮತ್ತು ಸಂಶೋಧನೆಯನ್ನು ಬೆಂಬಲಿಸಿ ಉತ್ತೇಜಿಸುವುದು ಈ ಪ್ರಶಸ್ತಿಗಳ ಧ್ಯೇಯವಾಗಿದೆ.

ಈ ಪ್ರಶಸ್ತಿಗಳ ವಿಧ್ಯುಕ್ತ ಉದ್ಘಾಟನೆ ಕಾರ್ಯಕ್ರಮದ ಭಾಗವಾಗಿ ಐಐಎಸ್‌ಸಿ ಇತ್ತೀಚೆಗೆ ವಿಶೇಷ ಸ್ಮರಣಾರ್ಥ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿದ್ದ ಹೆಸರಾಂತ ವಿಜ್ಞಾನಿ ಹಾಗೂ ಇಸ್ರೊದ ಮಾಜಿ ವೈಜ್ಞಾನಿಕ ಕಾರ್ಯದರ್ಶಿ ಡಾ. ಪಿ.ಜಿ. ದಿವಾಕರ್ ಅವರು ‘ಭಾರತದ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಅಭಿವೃದ್ಧಿ’ ಕುರಿತು ವಿಶೇಷ ಆಹ್ವಾನಿತ ಉಪನ್ಯಾಸ ನೀಡಿದರು. ಉಪನ್ಯಾಸದ ಬಳಿಕ ಪ್ರಶಸ್ತಿ ಪಡೆದ ಮೊದಲ ಇಬ್ಬರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಒಬ್ಬ ಎಂ.ಟೆಕ್. ವಿದ್ಯಾರ್ಥಿ ಹಾಗೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಒಬ್ಬ ಪಿಎಚ್.ಡಿ. ವಿದ್ಯಾರ್ಥಿ ಪ್ರಶಸ್ತಿಗೆ ಪಾತ್ರರಾದವರು.

ಇದಲ್ಲದೆ, ಉನ್ನತ ಬಾಹ್ಯಾಕಾಶ ಸಂಶೋಧನೆ ಮತ್ತು ಶಿಕ್ಷಣವನ್ನು ಬೆಂಬಲಿಸುವ ಎರಡು ಮಹತ್ವದ ಉಪಕ್ರಮಗಳಿಗೆ ಡಾ.ಕೆ.ಕೃಷ್ಣಪ್ಪ ನೆರವಾಗಲಿದ್ದಾರೆ. ಇವುಗಳಲ್ಲಿ ಒಂದು ಆವಿಷ್ಕಾರ್ ಪ್ರಯೋಗಾಲಯ (AVISHKAR lab). ಇದು ಎಲ್ಲರಿಗೂ ಮುಕ್ತ ಪ್ರವೇಶಾವಕಾಶವಿರುವ, ಆರು ವಿವಿಧ ನಾವೀನ್ಯತಾ ಕ್ಷೇತ್ರಗಳ ಪ್ರಾಯೋಗಿಕ ಫ್ಯಾಬ್ರಿಕೇಷನ್ ಮತ್ತು ಪರೀಕ್ಷಾ ಕೇಂದ್ರವಾಗಿದೆ, ಕಾಂಪೊಸಿಟ್‌ಗಳು, UAVಗಳು, ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್, ಜೈವಿಕ-ಪ್ರೇರಿತ ವಿನ್ಯಾಸ, ಪರ್ಯಾಯ ಇಂಧನಗಳು ಮತ್ತು ಸ್ವಾಯತ್ತ ನಿಯಂತ್ರಣ ಈ ಆರು ನಾವೀನ್ಯತಾ ಕ್ಷೇತ್ರಗಳನ್ನು ಇದು ಒಳಗೊಂಡಿರುತ್ತದೆ. AVISHKARದೊಂದಿಗೆ ಸಮನ್ವಯದಲ್ಲಿ ಕಾರ್ಯನಿರ್ವಹಿಸುವ INALA (Active Learning Architecture) ಭಾರತದ ಮೊದಲ ಸಿನ್ಯಾಪ್ಟಿಕ್ (ಏಕತ್ರಗೊಳಿಸಿದ) ಏರೋಸ್ಪೇಸ್ ತರಗತಿಯಾಗಿದೆ. ಇದು ಐಐಎಸ್‌ಸಿಯ ಎಂಟು ವಿಭಾಗಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುತ್ತದೆ. ಇಲ್ಲಿ ನೈಜ ಜಗತ್ತಿನ ವಿನ್ಯಾಸ–ತಯಾರಿಕೆ–ಪರೀಕ್ಷೆ–ಹಾರಾಟಕ್ಕೆ (design-build-test-fly) ಸಂಬಂಧಿಸಿದ ಆರು ಯೋಜನೆಗಳ ಮೇಲೆ ಏಕಕಾಲದಲ್ಲಿ ಕಲಿಕೆ ನಡೆಯುತ್ತದೆ. ಪ್ರತಿಯೊಂದು ಕಲಿಕಾ ಅವಧಿಗೂ ಕೃತಕ ಬುದ್ಧಿಮತ್ತೆ (AI), ಸಿಮ್ಯುಲೇಶನ್ ಮತ್ತು ಡಿಜಿಟಲ್ ಟ್ವಿನ್‌ಗಳನ್ನು ಅಳವಡಿಸಲಾಗಿದೆ. AVISHKAR ಮತ್ತು INALA ಎರಡೂ ಸೇರಿ ರಾಷ್ಟ್ರೀಯ ಮಟ್ಟದಲ್ಲಿ ಮಾದರಿ ಮಾನದಂಡವನ್ನು ಸ್ಥಾಪಿಸುವ, ಉದ್ಯಮ ಕ್ಷೇತ್ರದ ಅಗತ್ಯಗಳಿಗೆ ಸಿದ್ಧಗೊಂಡ ಪದವೀಧರರನ್ನು ರೂಪಿಸುವ ಹಾಗೂ ಮೊದಲ ಶ್ರೇಣಿಯ ಶಿಕ್ಷಣ ಸಂಸ್ಥೆಗಳು ಅಳವಡಿಸಿಕೊಳ್ಳಬಹುದಾದ ಪುನರಾವರ್ತಿಸಗೊಳಿಸಬಲ್ಲ ಮಾದರಿಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿವೆ.
ಮತ್ತೊಂದು, ಐಐಎಸ್‌ಸಿಯ ಚಳ್ಳಕೆರೆಯ ಆವರಣದಲ್ಲಿ ಸ್ಥಾಪಿಸಲಾಗುತ್ತಿರುವ ವಿಶ್ವದರ್ಜೆಯ ಆಪ್ಟಿಕಲ್ ವೀಕ್ಷಣಾಲಯ. ವಿದ್ಯಾರ್ಥಿಗಳು ಹಾಗೂ ಬಾಹ್ಯ ಬಳಕೆದಾರರು ಇಲ್ಲಿ ಖಗೋಳ ವೀಕ್ಷಣೆ ಮತ್ತು ಆಸ್ಟ್ರೋಫೋಟೋಗ್ರಫಿ ನಡೆಸಲು ಆವಕಾಶವಿರಲಿದೆ. ಡಾ. ಕೃಷ್ಣಪ್ಪ ಅವರ ಅನುದಾನದ ನೆರವಿನಿಂದ ಉತ್ತಮ ಗುಣಮಟ್ಟದ ದೂರದರ್ಶಕಗಳು, ಅವುಗಳ ಮೌಂಟ್‌ಗಳು, ಸೆನ್ಸರ್‌ಗಳು, ಕೂಲ್ಡ್ ಕ್ಯಾಮೆರಾಗಳು, ಫಿಲ್ಟರ್‌ಗಳು ಹಾಗೂ ಇತರ ಉಪಕರಣಗಳನ್ನು ಇಲ್ಲಿ ಸ್ಥಾಪಿಸಲಾಗುವುದು. ಭಾರತದಲ್ಲಿ STEM ಶಿಕ್ಷಣದ ಬಗ್ಗೆ ಆಸಕ್ತಿ ಬೆಳೆಸುವ ಜನಸಂಪರ್ಕ ಮತ್ತು ಜಾಗೃತಿ ಕಾರ್ಯಕ್ರಮಗಳಿಗೆ ಈ ಸೌಲಭ್ಯವನ್ನು ಬಳಸಿಕೊಳ್ಳಲಾಗುವುದು. ಜೊತೆಗೆ, ಸಂಶೋಧಕರಿಗೆ ಬಾಹ್ಯಾಕಾಶ ತ್ಯಾಜ್ಯ ನಿಗಾ (space debris tracking) ಸೇರಿದಂತೆ ಇತರ ಪ್ರಯೋಗಗಳನ್ನು ನಡೆಸಲು ಈ ವೀಕ್ಷಣಾಲಯ ನೆರವಾಗಲಿದೆ.

1951ರಲ್ಲಿ ಮಂಡ್ಯದಲ್ಲಿ ಜನಿಸಿದ ಡಾ. ಕೃಷ್ಣಪ್ಪ ಅವರು ಕಸ್ತೂರಬಾ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದ ಬಳಿಕ 1976ರಲ್ಲಿ ಅಮೆರಿಕಕ್ಕೆ ತೆರಳಿದರು. ಆಲ್ಬನಿ ಮೆಡಿಕಲ್ ಸೆಂಟರ್‌ನಲ್ಲಿ ಮನೋವೈದ್ಯಶಾಸ್ತ್ರದ ಪ್ರಾಧ್ಯಾಪಕರಾಗಿ ಹಾಗೂ ಕ್ಯಾಪಿಟಲ್ ಡಿಸ್ಟ್ರಿಕ್ಟ್ ಸೈಕಿಯಾಟ್ರಿಕ್ ಸೆಂಟರ್‌ನ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿ 2014ರಲ್ಲಿ ನಿವೃತ್ತರಾದರು. ಕನ್ನಡದ ಉತ್ಸಾಹಿ ಬರಹಗಾರರೂ ಹಾಗೂ ಮಹಾತ್ಮ ಗಾಂಧೀಜಿಯವರ ಸಬರಮತಿ ಆಶ್ರಮದ ನಿವಾಸಿಯೂ ಆಗಿದ್ದ ತಂದೆ ಸಿದ್ದೇಗೌಡ ಅವರು ಕೃಷ್ಣಪ್ಪ ಅವರ ಸಮಾಜಸೇವಾಸಕ್ತಿಯ ಕಾರ್ಯಗಳಿಗೆ ದೊಡ್ಡ ಪ್ರೇರಣೆಯಾಗಿದ್ದಾರೆ. ಕುಟುಂಬಸ್ಥರು 1999ರಲ್ಲಿ ಸ್ಥಾಪಿಸಿದ ‘ದೇವಮ್ಮ ಪುಟ್ಟಾಚಿ ಸಿದ್ದೇಗೌಡ ಟ್ರಸ್ಟ್’ ಮೂಲಕ ಸಕಾರಾತ್ಮಕ ಪರಿಣಾಮ ಬೀರುವಂತಹ ಸಮಾಜಸೇವಾ ಉಪಕ್ರಮಗಳನ್ನು ಉತ್ತೇಜಿಸಲಾಗುತ್ತಿದೆ.
ಸಂಪರ್ಕ:
ಅಭಿವೃದ್ಧಿ ಮತ್ತು ಹಿಂದಿನ ವಿದ್ಯಾರ್ಥಿಗಳ ಕಾರ್ಯಕ್ರಮಗಳ ಕಚೇರಿ, ಐಐಎಸ್‌ಸಿ| development.odaa@iisc.ac.in ಸಂವಹನಗಳ ಕಚೇರಿ, ಐಐಎಸ್‌ಸಿ| news@iisc.ac.in