ಆಂಟಿಬಯಾಟಿಕ್ ಬಳಸದಿದ್ದರೂ ಮಣ್ಣಿನ ಬ್ಯಾಕ್ಟೀರಿಯಾದಲ್ಲಿ ಆಂಟಿಮೈಕ್ರೋಬಿಯಲ್ ನಿರೋಧಕತೆ


05 ಮಾರ್ಚ್ 2025

-ಚಂದನಾ ವಲಬೋಜು

ಪ್ರಸ್ತುತ ಆಂಟಿ ಬಯಾಟಿಕ್ ಗಳ (ಬ್ಯಾಕ್ಟೀರಿಯಾ ಕೊಲ್ಲುವ ಔಷಧಗಳು) ವಿಪರೀತ ಬಳಕೆಯು ಆಂಟಿಮೈಕ್ರೋಬಿಯಲ್ ನಿರೋಧಕತೆಯ (ಎಎಂಆರ್) ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಇದೀಗ ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ) ಮತ್ತು ಕೀಲ್ ವಿಶ್ವವಿದ್ಯಾಲಯದ ಸಂಶೋಧಕರು, ಮೈಕ್ರೋಬಿಯಲ್ ಪ್ರತಿವರ್ತನೆಗಳ ಕಾರಣದಿಂದಾಗಿಯೂ ಮಣ್ಣಿನ ಬ್ಯಾಕ್ಟೀರಿಯಾ ಸಮೂಹಗಳಲ್ಲಿ ಎಎಂಆರ್ ಉಂಟಾಗುತ್ತದೆ ಎಂಬ ಅಚ್ಚರಿದಾಯಕ ಸಂಗತಿಯನ್ನು ದೃಢಪಡಿಸಿದ್ದಾರೆ.

ಈ ಕುರಿತ ಅಧ್ಯಯನ ವರದಿಯು ‘ಕರೆಂಟ್ ಬಯಾಲಜಿ’ಯಲ್ಲಿ ಪ್ರಕಟವಾಗಿದೆ. ಮಣ್ಣಿನ ಮಾದರಿಗಳಲ್ಲಿ ಮೈಕ್ಸೊಕಾಕಸ್ ಕ್ಸಾಂಥಸ್ ಬ್ಯಾಕ್ಟೀರಿಯಾಗಳ ಉಪಸ್ಥಿತಿಯು ಆಂಟಿಮೈಕ್ರೋಬಿಯಲ್-ನಿರೋಧಕ ಬ್ಯಾಕ್ಟೀರಿಯಾದ ಸಂಖ್ಯೆಯ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಈ ಅಧ್ಯಯನವು ಅವಲೋಕಿಸಿದೆ. ಎಂ.ಕ್ಸಾಂಥಸ್ ಎಂಬುದು ಪರಭಕ್ಷಕ ಪ್ರಭೇದವಾಗಿದ್ದು, ಇದು ತನ್ನ ಬೇಟೆಯನ್ನು ಕೊಲ್ಲಲು ಆಂಟಿಮೈಕ್ರೋಬಿಯಲ್ ಗಳು ಮತ್ತು ಇತರ ಕಣಗಳನ್ನು ಬಿಡುಗಡೆಗೊಳಿಸುವುದಕ್ಕೆ ಹೆಸರಾಗಿದೆ. ಮಣ್ಣಿನ ಮೈಕ್ರೋಬಿಯಲ್ ಸಮೂಹಗಳಲ್ಲಿ ಈ ಬ್ಯಾಕ್ಟೀರಿಯಾದ ಉಪಸ್ಥಿತಿಯ ಕಾರಣದಿಂದಾಗಿ “ಎಂ.ಕ್ಸಾಂಥಸ್ ನ ಸಹಜೀವಿಗಳಾಗಿರುವ ಇತರ ಬ್ಯಾಕ್ಟೀರಿಯಾಗಳು ಕಾಲಾನುಕ್ರಮದಲ್ಲಿ ಈ ಕಣಗಳಿಗೆ ನಿರೋಧಕತೆಯನ್ನು ಬೆಳೆಸಿಕೊಳ್ಳುತ್ತವೆಯೇ? “ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.

“ಮಾನವ-ನಿರ್ದೇಶಿತ ನಿರೋಧಕತೆಯು (ಆಂಟಿಬಯಾಟಿಕ್) ಬಹಳ ದೊಡ್ಡ ಸವಾಲಾಗಿದೆ. ಆದರೆ “ನಾವು ಸಂಪೂರ್ಣ ಅಲಕ್ಷ್ಯ ಮಾಡಿರುವ ಬೇರೆ ಅಂಶಗಳೇನಾದರೂ ಇವೆಯೇ?” ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದರ ಬಗೆಗಿನ ಶೋಧನೆಯು ನಮಗೆ ಬಹಳ ಕುತೂಹಲಕರವೆನ್ನಿಸಿತು” ಎಂದು ವಿವರಿಸುತ್ತಾರೆ ಐ.ಐ.ಎಸ್.ಸಿ. ಸೂಕ್ಷ್ಮಾಣು ಜೀವಿಶಾಸ್ತ್ರ ಮತ್ತು ಕೋಶ ಜೀವಶಾಸ್ತ್ರ (ಎಂಸಿಬಿ) ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಈ ಅಧ್ಯಯನದ ಸಹ-ಲೇಖಕರಾದ ಸಮಯ್ ಪಾಂಡೆ.

ಮಣ್ಣಿನ ಬ್ಯಾಕ್ಟೀರಿಯಾ ಸಮೂಹಗಳಲ್ಲಿ ಎಂ.ಕ್ಸಾಂಥಸ್ ನ ಅವಸಾನವು ಮಣ್ಣಿನ ಬ್ಯಾಕ್ಟೀರಿಯಾದ ಹಲವು ಪ್ರಭೇದಗಳಲ್ಲಿ ನಿರೋಧಕ ಸೂಕ್ಷ್ಮಾಣುಜೀವಿಗಳ, ಅಂದರೆ, ಆಂಟಿಬಯಾಟಿಕ್ ಗಳಿಗೆ ನಿರೋಧತೆ ಹೊಂದಿದ ಬ್ಯಾಕ್ಟೀರಿಯಲ್ ಕೋಶಗಳ ಇರುವಿಕೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ಪಾಂಡೆ ಹಾಗೂ ಇತರ ತಜ್ಞರು ಪತ್ತೆಹಚ್ಚಿದರು. ಈ ಜೀವಕೋಶಗಳು ಸಂಬಂಧಿಸಿದ ಔಷಧಗಳ ಸಂಪರ್ಕಕ್ಕೆ ಬಾರದ ಹೊರತಾಗಿಯೂ ನಿರ್ದಿಷ್ಟ ಆಂಟಿಬಯಾಟಿಕ್ ಗಳಿಗೆ ನಿರೋಧಕತೆ ಪ್ರಕಟಿಸಿದವು.

ಉಪವಾಸ ಪರಿಸ್ಥಿತಿ ಎದುರಾದ ಸನ್ನಿವೇಶದಲ್ಲಿ ಎಂ.ಕ್ಸಾಂಥಸ್ ಗಳು ಸಾಮೂಹಿಕವಾಗಿ ಅವಸಾನಗೊಳ್ಳುತ್ತವೆ. ಮಣ್ಣಿಗೆ ಸಂಬಂಧಪಟ್ಟಂತೆ ಅತ್ಯಂತ ಸಾಮಾನ್ಯವೆನ್ನಬಹುದಾದ ಕ್ಷಾಮದಂತಹ ಪರಿಸ್ಥಿತಿಯಲ್ಲಿ ಈ ಬ್ಯಾಕ್ಟೀರಿಯಲ್ ಕೋಶಗಳು ‘ಫ್ರೂಟಿಂಗ್ ಬಾಡೀಸ್’ ಎನ್ನಲಾಗುವ ‘ಸ್ಪೋರ್’ಗಳಿಂದ ತುಂಬಿದ ಒತ್ತಡ ನಿರೋಧಕ ಸಂರಚನೆಗಳನ್ನು ಸೃಷ್ಟಿಸುತ್ತವೆ. ಹೀಗೆ, ‘ಫ್ರೂಟಿಂಗ್ ಬಾಡೀಸ್’ ಬೆಳವಣಿಗೆ ಹೊಂದುವ ಹಂತದಲ್ಲಿ ಅಲ್ಪಪ್ರಮಾಣದ ಕೋಶಗಳು ಮಾತ್ರ ‘ಸ್ಪೋರ್’ಗಳಾಗುವಲ್ಲಿ ಯಶಸ್ವಿಯಾಗುತ್ತವೆ; ಮಿಕ್ಕುಳಿದ ಬಹಳಷ್ಟು ಬ್ಯಾಕ್ಟೀರಿಯಲ್ ಕೋಶಗಳು ಈ ಹಂತದಲ್ಲಿ ‘ಲೈಸಿಸ್’ಗೆ (ಹರಿದು ಹೋಗುವುದು) ಒಳಗಾಗಿ ಬೆಳವಣಿಗೆಯನ್ನು ಪ್ರತಿರೋಧಿಸುವ ಅಂಶಗಳನ್ನು ಪರಿಸರಕ್ಕೆ ಹೊರಸೂಸುತ್ತವೆ. ಈ ಬೆಳವಣಿಗೆ-ಪ್ರತಿಬಂಧಕ ಕಣಗಳೊಂದಿಗಿನ ಸಂಪರ್ಕವೇ ಮಣ್ಣಿನ ಬ್ಯಾಕ್ಟೀರಿಯಾ ಸಮೂಹದಲ್ಲಿ ನಿರೋಧಕ ಸೂಕ್ಷ್ಮಾಣುಜೀವಿಗಳ ಹೆಚ್ಚಿದ ಉಪಸ್ಥಿತಿಗೆ ಕಾರಣ ಎಂಬುದು ಸಂಶೋಧಕರ ದೃಢ ಅಭಿಪ್ರಾಯವಾಗಿದೆ. ಆಸಕ್ತಿಕರ ಸಂಗತಿಯೆಂದರೆ, ಎಂ.ಕ್ಸಾಂಥಸ್ ನ ಎಲ್ಲಾ ರೂಪಾಂತರಗಳು ನಿರೋಧಕತೆಯ ಹೆಚ್ಚಳವನ್ನು ಪ್ರಚೋದಿಸುತ್ತವೆ ಎಂಬುದು ಅಧ್ಯಯನದಲ್ಲಿ ಕಂಡುಬರಲಿಲ್ಲ; ಆದರೆ, ಬಯೋಸಿಂಥಟಿಕ್ ಕ್ಲಸ್ಟರ್ ಗಳ ಹೆಚ್ಚಿನ ವೈವಿಧ್ಯತೆಯಿಂದ ಕೂಡಿದ ರೂಪಾಂತರಗಳು ಇದನ್ನು ನಿರ್ದೇಶಿಸುತ್ತವೆ ಎಂಬಂತೆ ತೋರಿಬಂದಿತು.

“ಈ ಪ್ರತಿಬಂಧಕ ಕಣಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ತಜ್ಞರಿಗೆ ಮತ್ತಷ್ಟು ಆಸಕ್ತಿದಾಯಕ ಅಂಶವು ಗೋಚರಿಸಿತು. ಬಹುವಿಧದ ಕಣಗಳನ್ನು ನಾವು ಪತ್ತೆಹಚ್ಚಿದೆವು ಹಾಗೂ ಬಹಳ ಸ್ಥೂಲವಾದ ವರ್ಗೀಕರಣವನ್ನು ಮಾಡಿದೆವು” ಎನ್ನುತ್ತಾರೆ ಎಂಸಿಬಿಯಲ್ಲಿ ಪಿಎಚ್.ಡಿ. ಸಂಶೋಧನಾರ್ಥಿ ಹಾಗೂ ಅಧ್ಯಯನ ವರದಿಯ ಮೊದಲ ಲೇಖಕರಾದ ಸಹೇಲಿ ಸಹಾ. “ಬಿಡಿ ಬಿಡಿಯಾಗಿರುವಾಗ ಈ ಕಣಗಳು ಏನನ್ನೂ ಮಾಡದಿರಬಹುದು. ಆದರೆ, ಎಲ್ಲವೂ ಗುಂಪುಗೂಡಿದಾಗ ಆಶ್ಚರ್ಯಕರ ರೀತಿಯಲ್ಲಿ ಇನ್ನಿತರ ನಿರೋಧಕ ಸೂಕ್ಷ್ಮಾಣು-ಜೀವಿಗಳು ವೃದ್ಧಿಯಾಗುವಂತೆ ಮಾಡುತ್ತವೆ” ಎಂದು ಅವರು ಮುಂದುವರಿಸುತ್ತಾರೆ. ಸಾಮಾನ್ಯವಾಗಿ ಬಳಕೆಯಾಗುವ ಔಷಧಗಳಾದ ಟೆಟ್ರಾಸೈಕ್ಲಿನ್ ಮತ್ತು ರಿಫ್ಯಾಂಪಿಸಿನ್ ಸೇರಿದಂತೆ ಹಲವಾರು ಆಂಟಿಬಯಾಟಿಕ್ ಗಳ ವಿರುದ್ಧ ನಿರೋಧಕತೆ ಅಧಿಕಗೊಳ್ಳುವುದನ್ನು ಸಂಶೋಧಕರು ತಮ್ಮ ಅಧ್ಯಯನದ ವೇಳೆ ದೃಢಪಡಿಸಿಕೊಂಡಿದ್ದಾರೆ.

“ಪ್ರಯೋಗಾಲಯದಲ್ಲಿ ಬೆಳೆಸಲಾದ (ಕಲ್ಚರಬಲ್) ಬ್ಯಾಕ್ಟೀರಿಯಾ ಆಧರಿಸಿ ಅವಲೋಕಿಸಿದ ಅಂಶಗಳು ಪ್ರಯೋಗಾಲಯದಲ್ಲಿ ಬೆಳೆಸಲಾಗದ (ಅನ್-ಕಲ್ಚರಬಲ್) ಸೂಕ್ಷ್ಷಾಣುಜೀವಿಗಳಿಗೂ ಅನ್ವಯವಾಗುತ್ತವೆಯೇ ಎಂಬುದನ್ನು ಪರೀಕ್ಷಿಸುವುದು ಮುಖ್ಯ” ಎನ್ನುತ್ತಾರೆ ಎಂಸಿಬಿ ಪಿಎಚ್.ಡಿ. ಸಂಶೋಧನಾರ್ಥಿ ಹಾಗೂ ಅಧ್ಯಯನದ ಲೇಖಕರಲ್ಲಿ ಒಬ್ಬರಾದ ಜ್ಯೋತ್ಸ್ನಾ ಕಲಥೇರಾ. ಆದ್ದರಿಂದ, ತಂಡದ ತಜ್ಞರು ಮಣ್ಣಿನಲ್ಲಿನ ಬ್ಯಾಕ್ಟೀರಿಯಾ ಸಮೂಹಗಳ ಜೀನೋಮ್ ಗಳನ್ನು (ತಳಿ ಅನುಕ್ರಮಣಿಕೆಗಳನ್ನು) ಕೂಡ ವಿಶ್ಲೇಷಣೆಗೆ ಒಳಪಡಿಸಿದರು. ಈ ಪ್ರಕ್ರಿಯೆಯ ಮೂಲಕ ವೃದ್ಧಿಗೊಳಿಸಲಾದ ಎಎಂಆರ್ ಅನ್ನು ಬೆಳವಣಿಗೆ-ಪ್ರತಿಬಂಧಕ ಕಣಗಳ ಸಂಪರ್ಕಕ್ಕೆ ಬರುವಂತೆ ಮಾಡಿ ಅನ್-ಕಲ್ಚರಬಲ್ ಬ್ಯಾಕ್ಟೀರಿಯಾ ಪ್ರಭೇದಗಳಿಗೂ ವಿಸ್ತರಿಸಬಹುದು ಎಂಬುದನ್ನು ದೃಢಪಡಿಸಿಕೊಂಡರು.

ಮಾನವ-ನಿರ್ದೇಶಿತ ಆಂಟಿಬಯಾಟಿಕ್ ಕಲಬೆರಕೆಯ ಅನುಪಸ್ಥಿತಿಯಲ್ಲಿ ಕೂಡ ಮೈಕ್ರೋಬಿಯಲ್ ನಿರೋಧಕತೆಯಿಂದ ಎಎಂಆರ್ ಅನ್ನು ಕಾಯ್ದುಕೊಳ್ಳಬಹುದು ಎಂಬುದು ಕಂಡುಕೊಳ್ಳಲಾಗಿರುವ ಹೊಸ ಅಂಶವಾಗಿದ್ದು, ಅನಿರೀಕ್ಷಿತ ಶೋಧನೆಯೂ ಆಗಿದೆ ಎಂಬುದು

ಸಂಶೋಧಕರ ಅಭಿಪ್ರಾಯವಾಗಿದೆ. “ನಾವು ಇನ್ನಷ್ಟು ಪರಿಶೋಧನೆ ನಡೆಸಿ ಇದು ಸರ್ವೇಸಾಮಾನ್ಯವೇ ಎಂಬುದನ್ನು ಕಂಡುಕೊಳ್ಳಬೇಕಾಗಿದೆ” ಎನ್ನುತ್ತಾರೆ ಪಾಂಡೆ.

ಈ ಪ್ರಕ್ರಿಯೆಯನ್ನು ಉತ್ತಮವಾಗಿ ಅರ್ಥ ಮಾಡಿಕೊಂಡರೆ ಪ್ರಕೃತಿಯಲ್ಲಿ ಅಂತಹ ಆಂಟಿಬಯಾಟಿಕ್ ನಿರೋಧಕ ಬ್ಯಾಕ್ಟೀರಿಯಾಗಳು ಎಲ್ಲಿ ಜೀವಿಸುತ್ತವೆ ಎಂಬುದನ್ನು ಊಹಿಸಲು ಸಹಾಯಕವಾಗಬಹುದು ಎಂದೂ ಅಭಿಪ್ರಾಯಪಡುತ್ತಾರೆ ಸಹಾ. “ಇದನ್ನು ನಾವು ಈಗ ಭಾರತದ ಮಣ್ಣಿನ ಮಾದರಿಗಳಲ್ಲಿ ಮಾತ್ರ ಪರೀಕ್ಷಿಸಿದ್ದೇವೆ. ಇತರೆಡೆಗಳ ಮಣ್ಣಿನ ಮಾದರಿಗಳಲ್ಲಿ ಪರೀಕ್ಷಿಸುವುದರಿಂದ ನಮಗೆ ಪ್ರಕ್ರಿಯೆಯ ಬಗ್ಗೆ ಹೆಚ್ಚು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ” ಎಂದೂ ಅವರು ಹೇಳುತ್ತಾರೆ.

ಉಲ್ಲೇಖ:

ಸಾಹಾ ಎಸ್, ಕಲತೇರಾ ಜೆ, ಸುಮಿ ಟಿಎಸ್, ಮಾನೆ ವಿ, ಝಿಮ್ಮರ್ ಮ್ಯಾನ್ ಎಸ್, ವಾಸ್ಚಿನಾ ಎಸ್, ಪಾಂಡೆ ಎಸ್, Mass lysis of predatory bacteria drives the enrichment of antibiotic resistance in soil microbial communities, Current Biology (2025). https://www.sciencedirect.com/science/article/pii/S0960982225001319

ಸಂಪರ್ಕ:

ಸಮಯ್ ಪಾಂಡೆ
ಸಹಾಯಕ ಪ್ರಾಧ್ಯಾಪಕರು
ಸೂಕ್ಷ್ಮಾಣು ಜೀವಿಶಾಸ್ತ್ರ ಮತ್ತು ಕೋಶ ಜೀವಶಾಸ್ತ್ರ (ಎಂಸಿಬಿ) ವಿಭಾಗ
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ) ಇಮೇಲ್: samayp@iisc.ac.in
ಫೋನ್: : 080-22932415 ವೆಬ್ ಸೈಟ್: https://www.redqueenlab.com/

ಪರ್ತಕರ್ತರ ಗಮನಕ್ಕೆ:

ಅ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ
ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ.