2 ಜುಲೈ 2026
ಭಾರತದಲ್ಲಿ ಬಾಯಿಯ ಕ್ಯಾನ್ಸರ್ (Oral Cancer) ಒಂದು ಪ್ರಮುಖ ಸಾರ್ವಜನಿಕ ಆರೋಗ್ಯ ಸವಾಲಾಗಿದ್ದು, ತಂಬಾಕು ಹಾಗೂ ಅಡಿಕೆ ಸೇವನೆಯು ಈ ಕಾಯಿಲೆಯ ಪ್ರಮಾಣ ಹೆಚ್ಚಲು ಪ್ರಮುಖ ಕಾರಣಗಳಾಗಿವೆ. ಶಸ್ತ್ರಚಿಕಿತ್ಸೆ, ಕೀಮೋಥೆರಪಿ ಮತ್ತು ರೇಡಿಯೊಥೆರಪಿ ಚಿಕಿತ್ಸಾ ವಿಧಾನಗಳಲ್ಲಿ ಗಮನಾರ್ಹ ಸುಧಾರಣೆಯಾಗಿದ್ದರೂ ಇದಕ್ಕೆ ಚಿಕಿತ್ಸೆಯು ಇನ್ನೂ ಸಂಕೀರ್ಣವಾಗಿಯೇ ಉಳಿದಿದೆ. ಪ್ರಸ್ತುತ ಚಿಕಿತ್ಸಾ ವಿಧಾನಗಳು ಕ್ಯಾನ್ಸರ್ ಜೀವಕೋಶಗಳ ಜೊತೆಗೆ ಆರೋಗ್ಯಕರ ಅಂಗಾಂಶಗಳಿಗೂ ಹಾನಿ ಉಂಟುಮಾಡುವ ಸಾಧ್ಯತೆ ಹೊಂದಿದ್ದು, ಸಾಕಷ್ಟು ಪ್ರಕರಣಗಳಲ್ಲಿ ಬಾಧಿತರ ಜೀವನದ ಗುಣಮಟ್ಟದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುವುದೇ ಇದಕ್ಕೆ ಕಾರಣವಾಗಿದೆ.
ಇದಕ್ಕೆ ಪರಿಹಾರ ಹುಡುಕುವ ಸಲುವಾಗಿ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಂಶೋಧಕರು ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ವೈದ್ಯರ ಸಹಯೋಗದೊಂದಿಗೆ ಹೊಸ ಅಧ್ಯಯನ ಕೈಗೊಂಡಿದ್ದರು. ಅಧ್ಯಯನದ ವೇಳೆ, ಕಡಿಮೆ ಆವರ್ತನದ (Low-frequency) ಅಲ್ಟ್ರಾಸೌಂಡ್‌ನಿಂದ ಉಂಟಾಗುವ ‘ಯಾಂತ್ರಿಕ ಪ್ರಚೋದನೆ’ಯು (Mechanical Stimulation) ಬಾಯಿಯ ಕ್ಯಾನ್ಸರ್ ಜೀವಕೋಶಗಳನ್ನು ಮಾತ್ರ ನಾಶಪಡಿಸಬಹುದೇ ಎಂಬ ಬಗ್ಗೆ ಅವರು ಗಮನ ಕೇಂದ್ರೀಕರಿಸಿದರು. ಭಾರತೀಯ ರೋಗಿಗಳಲ್ಲಿರುವ ವೈವಿಧ್ಯತೆಯನ್ನು ಹೆಚ್ಚು ನಿಖರವಾಗಿ ಪ್ರತಿನಿಧಿಸುತ್ತವೆ ಎಂಬ ಕಾರಣದಿಂದಾಗಿ ಈ ಅಧ್ಯಯನಕ್ಕಾಗಿ ಭಾರತೀಯ ರೋಗಿಗಳಿಂದ ಸಂಗ್ರಹಿಸಲಾದ ಬಾಯಿ ಕ್ಯಾನ್ಸರ್ ಗಡ್ಡೆಯ (Oral Tumour) ಮಾದರಿಗಳನ್ನು ಬಳಸಲಾಗಿತ್ತು.
ಅಲ್ಟ್ರಾಸೌಂಡ್‌ನಿಂದ ಉಂಟಾಗುವ ಮಧ್ಯಮ ಪ್ರಮಾಣದ ಯಾಂತ್ರಿಕ ಪ್ರಚೋದನೆಗಳಿಂದ ಬಾಯಿಯ ಕ್ಯಾನ್ಸರ್ ಜೀವಕೋಶಗಳು ಆರ್ಶಯಕರ ರೀತಿಯಲ್ಲಿ ಸುಲಭವಾಗಿ ಹಾನಿಗೀಡಾಗುತ್ತವೆ ಎಂಬುದು ತಂಡದ ಸಂಶೋಧಕರಿಗೆಕಂಡುಬಂದಿತು. ದೇಹದ ಜೀವಕೋಶಗಳಿಗೆ ಯಾಂತ್ರಿಕ ಪ್ರಚೋದನೆಯನ್ನು ಗ್ರಹಿಸಿ ಅದನ್ನು ತಾಳಿಕೊಳ್ಳಲು ನೆರವಾಗುವ ‘ಟ್ರೊಪೊಮಯೊಸಿನ್ 2.1’ (Tropomyosin 2.1) ಎಂಬ ಮೆಕ್ಯಾನೋಸೆನ್ಸರಿ (Mechanosensory) ಪ್ರೋಟೀನ್‌ನ ಪ್ರಮಾಣವು ಕ್ಯಾನ್ಸರ್ ಜೀವಕೋಶಗಳಲ್ಲಿ ಕಡಿಮೆಯಾಗುವುದು ಇದಕ್ಕೆ ಕಾರಣವಾಗಿರುತ್ತದೆ. ಅಲ್ಟ್ರಾಸೌಂಡ್‌ನಿಂದ ಉಂಟಾಗುವ ಯಾಂತ್ರಿಕ ಪ್ರಚೋದನೆಗೆ ಒಳಪಡಿಸಿದಾಗ ಬಾಯಿಯ ಕ್ಯಾನ್ಸರ್ ಜೀವಕೋಶಗಳು ಮಾತ್ರವೇ ಆಯ್ದ ರೀತಿಯಲ್ಲಿ (Selective) ಸಾವಿಗೀಡಾದವು. ಆದರೆ ಬಾಯಿಯ ಆರೋಗ್ಯಕರ ಬಾಯಿಯ ಮೇಲ್ಪದರದ (Epithelial) ಜೀವಕೋಶಗಳಿಗೆ ಯಾವುದೇ ಹಾನಿಯಾಗಲಿಲ್ಲ ಎಂದು ಸಂಶೋಧಕರು ವಿವರಿಸಿದ್ದಾರೆ.

ಕ್ಯಾನ್ಸರ್ ಜೀವಕೋಶಗಳ ಈ ದುರ್ಬಲತೆಯನ್ನೇ ಅನುಕೂಲಕರ ರೀತಿಯಲ್ಲಿ ಬಳಸಿಕೊಂಡು ಅಲ್ಟ್ರಾಸೌಂಡ್ ಯಾಂತ್ರಿಕ-ಪ್ರಚೋದನೆಯು ಹೇಗೆ ಬಾಯಿಯ ಕ್ಯಾನ್ಸರ್ ಕೋಶಗಳ ಮೇಲಷ್ಟೇ ಗುರಿಯನ್ನು ಕೇಂದ್ರೀಕರಿಸಬಲ್ಲದು ಎಂಬುದನ್ನು ತೋರಿಸಿರುವುದೇ ಈ ಅಧ್ಯಯನದ ಹೊಸತನವಾಗಿದೆ” ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಬಯೋಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರೂ ಅಧ್ಯಯನದ ಸಂವಹನ ಲೇಖಕರ ಅಜಯ್ ತಿಜೋರೆ ವಿವರಿಸುತ್ತಾರೆ. “ಈ ವಿಧಾನದಲ್ಲಿ ಉಷ್ಣತೆ ಅಥವಾ ಔಷಧಗಳ ಬದಲಿಗೆ ಮಧ್ಯಮ ಪ್ರಮಾಣದ ಯಾಂತ್ರಿಕ ಬಲಗಳನ್ನು ಬಳಸಿಕೊಂಡು ಕ್ಯಾನ್ಸರ್ ಜೀವಕೋಶಗಳಿಗೆ ಪುನಃ ಚೇತರಿಸಿಕೊಳ್ಳಲಾಗದಷ್ಟು ಹಾನಿಯನ್ನು ಉಂಟುಮಾಡಲಾಗುತ್ತದೆ” ಎಂದೂ ಅವರು ಹೇಳುತ್ತಾರೆ.
ಕ್ಯಾನ್ಸರ್ ಜೀವಕೋಶಗಳ ಚಲಿಸಬಲ್ಲ (Migration) ಹಾಗೂ ಸುತ್ತಮುತ್ತಲಿನ ಅಂಗಾಂಶಗಳಿಗೆ ವ್ಯಾಪಿಸಬಲ್ಲ (Invasion) ಸಾಮರ್ಥ್ಯವನ್ನೂ ಅಲ್ಟ್ರಾಸೌಂಡ್ ಗಮನಾರ್ಹವಾಗಿ ತಗ್ಗಿಸುತ್ತದೆ ಎಂಬುದನ್ನು ತಂಡದ ತಜ್ಞರು ದೃಢಪಡಿಸಿಕೊಂಡಿದ್ದಾರೆ. ಇನ್ನೂ ವಿಶೇಷವೆಂದರೆ, ಬಾಯಿಯ ಕ್ಯಾನ್ಸರ್ ಗೆಡ್ಡೆಯ ಸೂಕ್ಷ್ಮ ಪರಿಸರವನ್ನು (Tumour Microenvironment) ಪ್ರತ್ಯನುಕರಿಸುವ ಥ್ರೀ-ಡಿ (3D)
ಕೋ-ಕಲ್ಚರ್ ಪ್ಲ್ಯಾಟ್ ಫಾರ್ಮ್ ಬಳಸಿ, ಗಡ್ಡೆಯ ಕೇಂದ್ರ ಭಾಗದ ಸುತ್ತ ಕ್ಯಾನ್ಸರ್-ಸಹವರ್ತಿ ಜೀವಕೋಶಗಳು ನಿರ್ಮಿಸುವ ದಟ್ಟ ಕ್ಯಾಪ್ಸೂಲ್ ಮಾದರಿಯ ತಡೆಗೋಡೆಯನ್ನು ಅಲ್ಟ್ರಾಸೌಂಡ್ ಭಂಗಗೊಳಿಸುತ್ತವೆ ಎಂಬುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ಇಂತಹ ತಡೆಗೋಡೆಗಳು ಔಷಧಗಳು ಹಾಗೂ ರೋಗನಿರೋಧಕ ಜೀವಕೋಶಗಳು ಗೆಡ್ಡೆಯ ಕೇಂದ್ರಭಾಗವನ್ನು ತಲುಪುವುದನ್ನು ತಡೆದು ಚಿಕಿತ್ಸೆಯ ಪರಿಣಾಮಕಾರಿತ್ವ ಕ್ಷೀಣಿಸುವಂತೆ ಮಾಡುತ್ತವೆ.
“ವಿವಿಧ ಹಂತಗಳ ಕ್ಯಾನ್ಸರ್ ನಿಂದ ಬಾಧಿತರಾಗಿದ್ದ ಹಲವಾರು ರೋಗಿಗಳಿಂದ ಪಡೆದ ಕ್ಯಾನ್ಸರ್ ಜೀವಕೋಶಗಳಲ್ಲಿ ಅಲ್ಟ್ರಾಸೌಂಡ್‌ಗೆ ಬಹುತೇಕ ಒಂದೇ ರೀತಿಯಲ್ಲಿ ಪ್ರತಿಕ್ರಿಯೆ ಕಂಡುಬಂದಿದ್ದು ನಮಗೆ ಅತ್ಯಂತ ಅಚ್ಚರಿ ಉಂಟುಮಾಡಿತು” ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ಜೈವಿಕಎಂಜಿನಿಯರಿಂಗ್ ವಿಭಾಗದ ಪಿಎಚ್.ಡಿ. ಸಂಶೋಧನಾರ್ಥಿನಿ ಹಾಗೂ ಅಧ್ಯಯನ ವರದಿಯ ಪ್ರಥಮ ಲೇಖಕಿ ರಶ್ಮಿತಾ ಲುಹಾ. “ಕ್ಯಾನ್ಸರ್ ಜೀವಕೋಶಗಳು ಅಲ್ಟ್ರಾಸೌಂಡ್ ನಿಂಬ ಬಹಳ ಸುಲಭವಾಗಿ ಹಾನಿಗೀಡಾದರೆ ಸಾಮಾನ್ಯ ಆರೋಗ್ಯವಂತ ಜೀವಕೋಶಗಳ ಮೇಲೆ ಅದರ ಪರಿಣಾಮ ತೀರಾ ಕಡಿಮೆಯಾಗಿತ್ತು” ಎಂದೂ ಅವರು ವಿವರಿಸುತ್ತಾರೆ.
ಅಲ್ಟ್ರಾಸೌಂಡ್ ದೇಹವನ್ನು ಛೇದಿಸದೆ ಬಳಸಬಹುದಾದ (Non-invasive) ತಂತ್ರಜ್ಞಾನವಾಗಿದ್ದು, ಈಗಾಗಲೇ ವಿವಿಧ ವೈದ್ಯಕೀಯ ಬಳಕೆಗಳಿಗೆ ಅನುಮೋದನೆ ಪಡೆದಿದೆ. ಆದ್ದರಿಂದ, ಈ ಅಧ್ಯಯನದ ಫಲಿತಾಂಶಗಳು ಬಾಯಿಯ ಕ್ಯಾನ್ಸರ್ ಜೀವಕೋಶಗಳ ಯಾಂತ್ರಿಕ ದುರ್ಬಲತೆಯನ್ನು ಬಳಸಿಕೊಂಡು ಅವುಗಳನ್ನು ಕೇಂದ್ರೀಕರಿಸಿದ ಹೊಸ ಚಿಕಿತ್ಸಾ ಸಾಧ್ಯತೆಯನ್ನು ಸೂಚಿಸುತ್ತವೆ. ಸುಧಾರಿತ ಚಿಕಿತ್ಸಾಪೂರ್ವ (Preclinical) ಮಾದರಿಗಳಲ್ಲಿ ಈ ವಿಧಾನದ ಪರಿಣಾಮಕಾರತ್ವವನ್ನು ಇನ್ನಷ್ಟು ದೃಢೀಕರಿಸಿದರೆ ಬಾಯಿಯ ಕ್ಯಾನ್ಸರ್‌ಗೆ ಮಾತ್ರವಲ್ಲದೆ ಸ್ತನ ಕ್ಯಾನ್ಸರ್ ಹಾಗೂ ಚರ್ಮದ ಕ್ಯಾನ್ಸರ್‌ನಂತಹ ಇತರ ಕ್ಯಾನ್ಸರ್‌ಗಳಿಗೂ ಹೆಚ್ಚು ಸುರಕ್ಷಿತ ಹಾಗೂ ಗುರಿ-ಕೇಂದ್ರಿತ ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸಲು ಇದು ನೆರವಾಗುವ ಸಾಧ್ಯತೆ ಇದೆ.
“ಈ ಅಧ್ಯಯನದಲ್ಲಿ ವೈದ್ಯಕೀಯ ತಜ್ಞರೊಂದಿಗಿನ ಸಹಯೋಗವು ಅತ್ಯಂತ ಮಹತ್ವದ್ದಾಗಿತ್ತು. ಇದರಿಂದಾಗಿ ಪಾಶ್ಚಾತ್ಯ ದೇಶಗಳಲ್ಲಿ ಅಭಿವೃದ್ಧಿಪಡಿಸಲಾದ ಪ್ರಮಾಣಿತ ಜೀವಕೋಶ ಸಂವರ್ಧಿತ ಮಾದರಿಗಳನ್ನಷ್ಟೇ (Standard Cell Lines) ಅವಲಂಬಿಸದೆ, ನೇರವಾಗಿ ರೋಗಿಗಳಿಂದ ಸಂಗ್ರಹಿಸಲಾದ ಬಾಯಿಯ ಕ್ಯಾನ್ಸರ್ ಗೆಡ್ಡೆಯ ಮಾದರಿಗಳನ್ನು ಬಳಸಿಕೊಂಡು ಅಧ್ಯಯನ ನಡೆಸಲು ಸಾಧ್ಯವಾಯಿತು” ಎಂದು ಅಜಯ್ ತಿಜೋರೆ ಹೇಳುತ್ತಾರೆ. “ಮುಂದಿನ ಹಂತದಲ್ಲಿ, ಈ ವಿಧಾನವನ್ನು ಇನ್ನಷ್ಟು ನೈಜ ಪ್ರಾಯೋಗಿಕ ಮಾದರಿಗಳಲ್ಲಿ ಪರೀಕ್ಷಿಸುವ ಉದ್ದೇಶ ನಮ್ಮದಾಗಿದೆ. ಜೊತೆಗೆ, ಅಲ್ಟ್ರಾಸೌಂಡ್ ಅನ್ನು ಈಗಾಗಲೇ ಬಳಕೆಯಲ್ಲಿರುವ ಚಿಕಿತ್ಸಾ ವಿಧಾನಗಳೊಂದಿಗೆ ಸಂಯೋಜಿಸಿ ಔಷಧಗಳನ್ನು ಗೆಡ್ಡೆಯ ಒಳಭಾಗಕ್ಕೆ ಇನ್ನಷ್ಟು ಪರಿಣಾಮಕಾರಿಯಾಗಿ ತಲುಪುವಂತೆ ಮಾಡಬಹುದೇ ಹಾಗೂ ಚಿಕಿತ್ಸೆಯ ಫಲಿತಾಂಶವನ್ನು ಇನ್ನಷ್ಟು ಉತ್ತಮಗೊಳಿಸಬಹುದೇ ಎಂಬುದನ್ನು ಅಧ್ಯಯನ ಮಾಡಲು ಯೋಜಿಸಿದ್ದೇವೆ” ಎಂದು ಅವರು ತಿಳಿಸುತ್ತಾರೆ.

ಉಲ್ಲೇಖ:
ಲುಹಾ ಆರ್, ಶಂಖರ್ ಜಿ, ಕುಮಾರ್ ಎ, ಕುಮಾರಿ ಎ, ಕುಲಕರ್ಣಿ ಕೆ, ಪ್ರತಾಪ್ ಆರ್, ಕಪಾಲಿ ಎ, ತಿಜೋರೆ ಎ, Revealing biomechanical vulnerabilities in oral cancer cells using 3D coculture platform and low-frequency ultrasound, Materials Today Bio (2026). https://www.sciencedirect.com/science/article/pii/S2590006426006204?via%3Dihub
ಸಂಪರ್ಕ:
ಅಜಯ್ ತಿಜೋರಿ
ಸಹಾಯಕ ಪ್ರಾಧ್ಯಾಪಕರು
ಜೈವಿಕಎಂಜಿನಿಯರಿಂಗ್ (ಬಿಇ) ವಿಭಾಗ
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)
ಇಮೇಲ್: ajaytijore@iisc.ac.in ಫೋನ್: +91-80-2293-3752 ವೆಬ್ ಸೈಟ್: http://tijorelab.com
ಪರ್ತಕರ್ತರ ಗಮನಕ್ಕೆ:
ಅ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐಐಎಸ್‌ಸಿ ಹೆಸರಿನೊಂದಿಗೆ ಪ್ರಕಟಿಸಿ.
ಆ) ಐಐಎಸ್‌ಸಿ ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ news@iisc.ac.in ಅಥವಾ pro@iisc.ac.in ಗೆ ಬರೆಯಿರಿ.