ನಿರ್ದೇಶಕರ ಮುನ್ನುಡಿ

ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ ಅಥವಾ ‘ಇನ್ಸ್ಟಿಟ್ಯೂಟ್) ಉದ್ಯಮಿ ಜಮ್‌ಷೇಟ್‌ಜಿ ನುಸ್ಸೆರ್‌ವಾನ್ ಜಿ ಟಾಟಾ, ಮೈಸೂರು ಮಹಾರಾಜರು ಮತ್ತು ಭಾರತ ಸರ್ಕಾರದ ದೂರದರ್ಶಿ ಸಹಭಾಗಿತ್ವದೊಂದಿಗೆ 1909ರಲ್ಲಿ ಸ್ಥಾಪನೆಗೊಂಡಿತು. ಸಂಸ್ಥೆಯು ಸ್ಥಾಪನೆಯಾದ ನಂತರದ 107 ವರ್ಷಗಳ ಅವಧಿಯಲ್ಲಿ, ರಾಷ್ಟ್ರದ ಆಧುನಿಕ ವಿಜ್ಞಾನ ಮತ್ತು ತಾಂತ್ರಿಕ ವ್ಯಾಸಂಗ ಹಾಗೂ ಸಂಶೋಧನೆಯ ಮುಂಚೂಣಿ ಸಂಸ್ಥೆಯಾಗಿ ರೂಪು ತಳೆದಿದೆ. ಸಂಸ್ಥೆಯು ಆರಂಭದಿಂದಲೂ ವಿಜ್ಞಾನ ಮತ್ತು ಎಂಜಿನಿಯರಿಂಗ್ ಜ್ಞಾನದ ಅನುಸಂಧಾನಕ್ಕೆ ಹಾಗೂ ತನ್ನ ಸಂಶೋಧನಾ ಜ್ಞಾನದ ಔದ್ಯಮಿಕ ಹಾಗೂ ಸಾಮಾಜಿಕ ಉಪಯೋಗಗಳ ಆನ್ವಯಿಕತೆಗೆ ಸಮತೋಲಿತ ಆದ್ಯತೆ ನೀಡುತ್ತಾ ಬಂದಿದೆ. ಸಂಸ್ಥೆಯ ಸ್ಥಾಪಕರಾದ ದಿವಂಗತ ಜೆ.ಎನ್.ಟಾಟಾ ಅವರ ಮಾತುಗಳನ್ನು ಇಲ್ಲಿ ನೆನೆದು ಹೇಳಬೇಕೆಂದರೆ- ಭಾರತದ ಭೌತಿಕ ಮತ್ತು ಔದ್ಯಮಿಕ ಕಲ್ಯಾಣ ಉತ್ತೇಜಿಸುವ ಆಧುನಿಕ ಜ್ಞಾನ ಲಭ್ಯವಾಗಿಸುವುದು ಹಾಗೂ ಸಕಲ ಜ್ಞಾನ ಶಾಖೆಗಳಲ್ಲಿ ಸೃಜನಶೀಲ ಶೋಧನೆಗಳನ್ನು ನಡೆಸುವುದು ಸಂಸ್ಥೆಯ ಧ್ಯೇಯವಾಗಿದೆ.
ಸಂಸ್ಥೆಯು 2015-16ನೇ ಅವಧಿಯಲ್ಲಿ ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್ ಮೌಲ್ಯಾಂಕನ (ಎನ್‌ಐಆರ್‌ಎಫ್- ರಾಷ್ಟ್ರೀಯ) ಮತ್ತು ಅಂತರರಾಷ್ಟ್ರೀಯ ರ‍್ಯಾಂಕಿಂಗ್ (ಕ್ಯೂಎಸ್ ಮತ್ತು ಟಿಎಚ್‌ಇ-ದಿ) ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದು, ಭಾರತದಲ್ಲಿ ಉನ್ನತ ಶಿಕ್ಷಣ ಸಂಸ್ಥೆಯಾಗಿ ನಿರಂತರವಾಗಿ ಅಗ್ರಸ್ಥಾನ ಗಳಿಸುತ್ತಾ ಬಂದಿದೆ. ಸಂಸ್ಥೆಯು ತನ್ನ ಎಲ್ಲಾ ಚಟುವಟಿಕೆಗಳಲ್ಲಿ ಶೈಕ್ಷಣಿಕ ಉತ್ಕೃಷ್ಠತೆ ಸಾಧಿಸುವ ನಿಟ್ಟಿನಲ್ಲಿ ನೈಜವಾದ ಶೈಕ್ಷಣಿಕ ಸ್ವಾತಂತ್ರ್ಯವನ್ನು ಸಕ್ರಿಯವಾಗಿ ಅನುಸರಿಸಿಕೊಂಡು ಬಂದಿದೆ. ಸಂಸ್ಥೆಯಲ್ಲಿ ಸುಮಾರು 500ರಷ್ಟಿರುವ ಬೋಧಕ ವರ್ಗದವರು ವಿಜ್ಞಾನ ಮತ್ತು ಎಂಜಿನಿಯರಿಂಗ್ನ ವಿಸ್ತೃತ ಕ್ಷೇತ್ರಗಳಲ್ಲಿ ಸಂಶೋಧನೆಯಲ್ಲಿ ಸಕ್ರಿಯವಾಗಿ ತೊಡಗಿದ್ದು ವಾರ್ಷಿಕವಾಗಿ ಉನ್ನತ ಮಟ್ಟದ ಪ್ರಬಂಧಗಳನ್ನು ಪ್ರಕಟಿಸುತ್ತಾ ಬಂದಿದ್ದಾರೆ. ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದ ಜ್ಞಾನದ ಬೆಳವಣಿಗೆಗಾಗಿ ನೀಡಿದ ಕೊಡುಗೆಗಾಗಿ ಸಂಸ್ಥೆಯ ಹಲವು ಬೋಧಕರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳಿಗೆ ಹಾಗೂ ಗೌರವಾದರಗಳಿಗೆ ಪಾತ್ರರಾಗಿದ್ದಾರೆ. ಈಗಿರುವ ಬೋಧಕ ವರ್ಗದಲ್ಲಿ 93 ಗಣ್ಯರು ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಪುರಸ್ಕೃತರಾಗಿದ್ದರೆ, 114 ಐಎನ್‌ಎಸ್‌ಎ (ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ), 117 ಐಎಎಸ್ (ಇಂಡಿಯನ್‌ ಅಕಾಡೆಮಿ ಆಫ್ ಸೈನ್ಸಸ್), 81 ಎನ್‌ಎಎಸ್‌ಐ (ನ್ಯಾಷನಲ್‌ ಅಕಾಡೆಮಿ ಆಫ್ ಸೈನ್ಸಸ್), 71 ಐಎನ್‌ಎಇ ಮತ್ತು 70 ಜೆ.ಸಿ. ಬೋಸ್ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿರುವುದು ಇಲ್ಲಿನ ಅಧ್ಯಾಪನ ವಿಭಾಗದ ಶೈಕ್ಷಣಿಕ ಹಿರಿಮೆಯ ದ್ಯೋತಕವಾಗಿದೆ. ಇನ್ನು 4000ದಷ್ಟಿರುವ ವಿದ್ಯಾರ್ಥಿಗಳಲ್ಲಿ ಸುಮಾರು 2200 ವಿದ್ಯಾರ್ಥಿಗಳು ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗಗಳಲ್ಲಿ ಪಿಎಚ್.ಡಿ. ವ್ಯಾಸಂಗದಲ್ಲಿ ನಿರತವಾಗಿದ್ದಾರೆ. ಸಂಸ್ಥೆಯು 2011ರಲ್ಲಿ ಪ್ರತ್ಯೇಕ ಡೀನ್ ನೇತೃತ್ವದಲ್ಲಿ ಪ್ರತ್ಯೇಕ ತರಗತಿಗಳು ಮತ್ತು ಪ್ರಯೋಗಾಲಯಗಳಿಂದ ಕೂಡಿದ ಪದವಿ ಶಿಕ್ಷಣ (ಅಂಡರ್ ಗ್ರ್ಯಾಜುಯೇಟ್) ವನ್ನು ಆರಂಭಿಸಿತು. ಈ ಪದವಿ ಶಿಕ್ಷಣವು ನಾಲ್ಕು ವರ್ಷಗಳ ವಿಜ್ಞಾನ ಪದವಿ (ಬ್ಯಾಚಲರ್‌ ಆಫ್ ಸೈನ್ಸ್ ಇನ್‌ ರಿಸರ್ಚ್- ಸಂಶೋಧನೆ) ಆಗಿದ್ದು, ಇಲ್ಲಿ ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮ ಮತ್ತು ಪ್ರಯೋಗಾಲಯಗಳ ಜತೆಗೆ ಸಂಸ್ಥೆಯ ಇನ್ನಿತರ ಪ್ರಯೋಗಾಲಯಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ಅರಿಯುವುದಕ್ಕೂ ಅವಕಾಶ ಕಲ್ಪಿಸುತ್ತದೆ. ಜತೆಗೆ 4ನೇ ವರ್ಷದ ಬಿ.ಎಸ್ಸಿ. (ಸಂಶೋಧನೆ) ವ್ಯಾಸಂಗ ಮಾಡುತ್ತಿರುವ ಅವಧಿಯಲ್ಲಿ ಮತ್ತೊಂದು ವರ್ಷ ಅಧ್ಯಯನ ಮುಂದುವರಿಸಿ ವಿದ್ಯಾರ್ಥಿಗಳಿಗೆ ಎರಡು ಪದವಿಗಳನ್ನು ಪಡೆಯಲು (ಪದವಿ ಹಾಗೂ ಸ್ನಾತಕೋತ್ತರ ಪದವಿ) ಅವಕಾಶ ಕಲ್ಪಿಸಲಾಗಿದೆ. ಸುಮಾರು 500 ವಿದ್ಯಾರ್ಥಿಗಳು ಈ ಪದವಿ ಶಿಕ್ಷಣದಲ್ಲಿ ಅಧ್ಯಯನ ನಿರತರಾಗಿದ್ದಾರೆ. ಸಂಸ್ಥೆಯು ಎಂಜಿನಿಯರಿಂಗ್ ವಿಭಾಗದಲ್ಲೂ ಹಲವು ಸ್ನಾತಕೋತ್ತರ ಕೋರ್ಸುಗಳನ್ನು ಹೊಂದಿದ್ದು (ಎಂ.ಟೆಕ್, ಎಂ.ಟೆಕ್-ರಿಸರ್ಚ್, ಎಂ.ಡಿ.ಇ.ಎಸ್ ಮತ್ತು ಎಂ.ಎಂ.ಜಿ.ಟಿ), ಸುಮಾರು 1000 ವಿದ್ಯಾರ್ಥಿಗಳು ಇವುಗಳ ಅಧ್ಯಯನದಲ್ಲಿ ಮಗ್ನರಾಗಿದ್ದಾರೆ.
ಸಂಸ್ಥೆಯ ಆವರ್ತಕ ವೆಚ್ಚದ ಜೊತೆಗೆ ವಾರ್ಷಿಕ ಸಂಶೋಧನಾ ವೆಚ್ಚದ ಆಂಶಿಕ ಭಾಗವನ್ನು ಭಾರತ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯ ಭರಿಸುತ್ತದೆ. ಇದರ ಜತೆಗೆ ಸಂಸ್ಥೆಯ ಬೋಧಕರು ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ), ವೈಜ್ಞಾನಿಕ ಮತ್ತು ಔದ್ಯಮಿಕ ಸಂಶೋಧನಾ ಪರಿಷತ್ (ಸಿಎಸ್‌ಐಆರ್), ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೇರಿದಂತೆ ಸಾರ್ವಜನಿಕ ಹಾಗೂ ಖಾಸಗಿ ವಲಯದ ಹಲವಾರು ಸಂಸ್ಥೆಗಳ ನಿಧಿಗಳ ನೆರವಿನಿಂದ ಇನ್ನೂ ಹಲವಾರು ಸಂಶೋಧನೆಗಳಲ್ಲಿ ಭಾಗಿಯಾಗಿದ್ದಾರೆ. ಕಳೆದ 10 ವರ್ಷಗಳ ಅವಧಿಯಲ್ಲಿ ಸಂಸ್ಥೆಯ ಸಂಶೋಧನೆಗಳಿಗಾಗಿ ಬಂದಿರುವ ಬಾಹ್ಯ ನಿಧಿಯ ಮೊತ್ತವು ವಾರ್ಷಿಕ 19.5% ಪ್ರಮಾಣದಲ್ಲಿ ವೃದ್ಧಿಯಾಗಿದೆ. ವೈಜ್ಞಾನಿಕ ಮತ್ತು ಔದ್ಯಮಿಕ ಸಮಾಲೋಚನಾ ಕೇಂದ್ರ (ಸಿಎಸ್‌ಐಸಿ), ಆವಿಷ್ಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಎಸ್‌ಐಡಿ) ಹಾಗೂ ಸರ್ಕಾರ-ಸಂಸ್ಥೆ-ಉದ್ಯಮದ ನಡುವಿನ ಸಮಾಲೋಚನೆಗಾಗಿಯೇ ಸ್ಥಾಪಿಸಲಾಗಿರುವ ಹಲವು ಕೇಂದ್ರಗಳ ಮೂಲಕ ಸಂಸ್ಥೆ ಹಾಗೂ ಉದ್ಯಮದ ನಡುವಿನ ಸಮಾಲೋಚನಾ ವ್ಯವಸ್ಥೆಯನ್ನು ಸದೃಢಗೊಳಿಸಲಾಗಿದೆ. ಸಂಸ್ಥೆಯನ್ನು ರಾಷ್ಟ್ರದ ಮುಂಚೂಣಿ ಸಂಶೋಧನಾ ತಾಣ ಎಂಬ ಹೆಗ್ಗಳಿಕೆಯಿಂದ ಜಾಗತಿಕ ಅತ್ಯುತ್ತಮ ಸಂಶೋಧನಾ ತಾಣವಾಗಿ ಮುನ್ನಡೆಸಲು ಅಧಿಕ ನಿಧಿಯ ಅಗತ್ಯ ಇದ್ದೇ ಇದೆ. ಇದೇ ಸಂದರ್ಭದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಸ್ಥಾಪನೆಯು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಫಲಶ್ರುತಿ ಎಂಬ ಉಲ್ಲೇಖ ಇಲ್ಲಿ ಯಥೋಚಿತ ಎನ್ನಿಸುತ್ತದೆ.
ಈ ಚಾರಿತ್ರಿಕ ಹಿನ್ನೆಲೆಯನ್ನು ಗಮದಲ್ಲಿರಿಸಿಕೊಂಡು, ಇತ್ತೀಚಿನ ವರ್ಷಗಳಲ್ಲಿ, ಸಂಸ್ಥೆಯ ಹಲವಾರು ಕಾರ್ಯಕ್ರಮಗಳನ್ನು ಖಾಸಗಿ ಮೂಲಗಳ ನಿಧಿಯ ಬೆಂಬಲದೊಂದಿಗೆ ನಡೆಸಲಾಗುತ್ತಿದೆ. ನರವಿಜ್ಞಾನ ಕ್ಷೇತ್ರದ ಸಂಶೋಧನೆಗಾಗಿ ಟಾಟಾ ಟ್ರಸ್ಟ್ 75 ಕೋಟಿ ರೂಪಾಯಿಗಳ ಕೊಡುಗೆ ನೀಡಿ ಉತ್ತೇಜಿಸಿದೆ. ಶ್ರೀ ಮತ್ತು ಶ್ರೀಮತಿ ಕ್ರಿಷ್‌ಗೋಪಾಲಕೃಷ್ಣನ್‌ ದಂಪತಿ ಅವರು ಬದುಕಿನ ಸಂಧ್ಯಾಕಾಲದಲ್ಲಿ ಕಂಡುಬರುವ ಮಿದುಳಿನ ರೋಗಗಳ ಕುರಿತ ಸಂಶೋಧನೆಗಾಗಿ ‘ಮಿದುಳು ಸಂಶೋಧನಾ ಕೇಂದ್ರ’ದ (ಸಿಬಿಆರ್) ಸ್ಥಾಪನೆಗಾಗಿ 225 ಕೋಟಿ ರೂಪಾಯಿಗಳ ದೇಣಿಗೆ ನೀಡುವುದಾಗಿ ಪ್ರಕಟಿಸಿದ್ದಾರೆ. ಅಲ್ಲದೇ, ಈ ದಂಪತಿ ‘ನ್ಯೂರೋಮಾರ್ಫಿಕ್‌ ಕಂಪ್ಯೂಟಿಂಗ್’ಗೆ ಸಂಬಂಧಪಟ್ಟಂತೆ ಶ್ರೀ ಕೆ.ವೈದ್ಯನಾಥನ್‌ ಅಧ್ಯಯನ ಪೀಠಕ್ಕಾಗಿ 10ಕೋಟಿ ನೀಡುವುದಾಗಿ ತಿಳಿಸಿದ್ದಾರೆ. ಕ್ರಿಷ್‌ ದಂಪತಿ ಐಐಎಸ್‌ಸಿ ಆವರಣದಲ್ಲಿ ನಿರ್ಮಿಸಲಿರುವ ಕಟ್ಟಡದಲ್ಲಿ ಸಿಬಿಆರ್ ಕೇಂದ್ರ ಸ್ಥಾಪಿಸಲು ಭಾರತೀಯ ವಿಜ್ಞಾನ ಸಂಸ್ಥೆಯ ಮಂಡಳಿ ಈಗಾಗಲೇ ಅನುಮತಿಯನ್ನೂ ನೀಡಿದೆ. ಭೌತಶಾಸ್ರ್ರ ಮತ್ತು ಗಣಿತ ಶಾಸ್ತ್ರ ವಿಷಯಗಳಲ್ಲಿ ಸಂದರ್ಶಕ ಅಧ್ಯಾಪಕರಾಗಿ ಆಗಮಿಸುವವರ ವಿದೇಶಿ ಪರಿಣತರ ಖರ್ಚು ವೆಚ್ಚಕ್ಕಾಗಿ ಇನ್ಫೋಸಿಸ್ ಫೌಂಡೇಷನ್‌ ದತ್ತಿ ನಿಧಿ ನೀಡಿದೆ. ಸಂಸ್ಥೆ ಹಾಗೂ ಮುಂಚೂಣಿ ಕಂಪೆನಿಗಳೊಂದಿಗೆ ಪರಸ್ಪರ ಸಮಾಲೋಚನೆ ಉತ್ತೇಜಿಸುವ ಸಲುವಾಗಿ ಇತ್ತೀಚೆಗೆ ಟಾಟಾ ಕನ್ಸಲ್ಟಿಂಗ್ ಸರ್ವೀಸಸ್ (ಟಿಸಿಎಸ್), ಜನರಲ್‌ ಎಲೆಕ್ಟ್ರಿಕಲ್ಸ್ (ಜಿಇ), ಹ್ಯಾವ್ಲೆಟ್ ಪೆಕಾರ್ಡ್ (ಎಚ್‌ಪಿ) ಮತ್ತು ರಾಬರ್ಟ್ ಬಾಷ್ ಕಂಪೆನಿಗಳ ಜತೆ ಒಡಂಬಡಿಕೆಗಳಿಗೆ ಅಂಕಿತ ಹಾಕಲಾಗಿದೆ. ಅಭಿವೃದ್ಧಿ ಮತ್ತು ಹಳೆಯ ವಿದ್ಯಾರ್ಥಿಗಳ ಕಾರ್ಯಕ್ರಮಗಳ ಮೇಲ್ವಿಚಾರಣೆಗಾಗಿ (ಒಡಿಎಎ- ದಿ ಆಫೀಸ್‌ ಆಫ್‌ ಡೆವಲಪ್‌ಮೆಂಟ್‌ ಅಂಡ್‌ ಅಲುಮ್ನಿ ಅಫೇರ್ಸ್) ಕಚೇರಿಯನ್ನು 2014-15ರಲ್ಲಿ ಆರಂಭಿಸಲಾಗಿದೆ. ಈ ಕಚೇರಿಯು ಈಗಾಗಲೇ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿರುವ ಸಂಸ್ಥೆಯ ವಿಸ್ತರಿತ ಆವರಣದಲ್ಲಿ ಹೊಸ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪಿಸುವ ಸಲುವಾಗಿ ಹಾಗೂ ಸಂಸ್ಥೆಯ ಸ್ಥಾಪಕರು ಉದ್ಗರಿಸಿದ್ದಂತೆ, ರಾಷ್ಟ್ರದ ಭೌತಿಕ ಮತ್ತು ಔದ್ಯಮಿಕ ಕಲ್ಯಾಣದ ದೂರದರ್ಶಿತ್ವವನ್ನು ಗಮನದಲ್ಲಿರಿಸಿಕೊಂಡು ಇನ್ನಿತರ ಶೈಕ್ಷಣಿಕ- ಸಾಂಸ್ಥಿಕ ಬೆಳವಣಿಗೆಯ ಕಾರ್ಯಕ್ರಮಗಳಿಗಾಗಿ ಖಾಸಗಿ ಮೂಲಗಳಿಂದ ನಿಧಿ ಕ್ರೋಢೀಕರಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಒಂದೂವರೆ ದಶಕದ ಅವಧಿಯಿಂದ ಸಂಸ್ಥೆಯು, ತನ್ನ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ತಮ್ಮ ಸಂಶೋಧನೆಗಳ ಬೌದ್ಧಿಕ ಹಕ್ಕುಸ್ವಾಮ್ಯವನ್ನು ತಂತ್ರಜ್ಞಾನ ಪರವಾನಗಿ ಅಥವಾ ಉದ್ಮಮಶೀಲತೆ ಮೂಲಕ ಸಂರಕ್ಷಿಸಿಕೊಳ್ಳುವುದಕ್ಕೆ ಉತ್ತೇಜಿಸುತ್ತಿದೆ. ಇವುಗಳ ಫಲವಾಗಿ-ಎಲೆಕ್ಟ್ರಿಕ್ ಗ್ರೇಡಿಯಂಟ್‌ ಆಧಾರಿತ ನೀರು ಶುದ್ಧೀಕರಣ ಸಾಧನ, ಮಧುಮೇಹದ ಮೇಲೆ ನಿಗಾ ಇಡಲು ನೆರವಾಗುವ ಮಲ್ಟಿ-ಅನಲೈಟ್ ಸಾಧನ, ರೋಗ ಪತ್ತೆ ಪ್ರಯೋಗಾಲಯಗಳಿಗಾಗಿ ಫ್ಲುಯಿಡಿಕ್ಸ್ ಆಧಾರಿತ ಕೋಶ ಗಣನೆ ಉಪಕರಣ, ಕಟ್ಟಡ ನಿರ್ಮಾಣದ ವಿಚಕ್ಷಣೆಗಾಗಿ ಆಪ್ಟಿಕಲ್ ಫೈಬರ್‌ ಆಧಾರಿತ ಸೆನ್ಸರ್‌ಗಳ ಅಭಿವೃದ್ಧಿ- ಮುಂತಾದ ಸಂಶೋಧನೆಗಳು ನವೋದ್ಯಮಗಳಾಗಿ (ಸ್ಟಾರ್ಟ್ ಅಪ್‌ಗಳು) ರೂಪು ತಳೆದಿರುವುದು ಇದಕ್ಕೆ ನಿದರ್ಶನವಾಗಿದೆ.

ಅನುರಾಗ್‌ ಕುಮಾರ್
ನಿರ್ದೇಶಕರು