ಹೆಣ್ಣು ಕುದುರೆ ಮಿಡತೆಗೆ ಹೆಚ್ಚಿನ ಬೇಟೆ ಆಪತ್ತು: ರೇಡಿಯೋ ಟ್ರ್ಯಾಕಿಂಗ್ ಭೇದಿಸಿದ ರಹಸ್ಯ


06 ಏಪ್ರಿಲ್ 2023

– ನರ್ಮದಾ ಖರೆ

ಮನುಷ್ಯರಂತೆಯೇ ಪ್ರಾಣಿಗಳು ಕೂಡ ಆಹಾರ ವಸತಿ ಮತ್ತು ಸಂಗಾತಿಗಳನ್ನು ಹುಡುಕಲು ಸಂಚರಿಸುತ್ತವೆ. ಅದರಲ್ಲೂ ಕಾಡಿನಲ್ಲಿ ಸಂಚರಿಸುವಾಗ ಬೇಟೆ ಪ್ರಾಣಿಗಳು ಹಿಂಬಾಲಿಸುವುದರಿಂದ ಅವುಗಳಿಗೆ ಆಪತ್ತಿನ ಸಾಧ್ಯತೆ ಹೆಚ್ಚಾಗಿರುತ್ತದೆ.

ಕುದುರೆ ಮಿಡತೆಗಳು ಲೆಸ್ಸರ್- ಫಾಲ್ಸ್- ವ್ಯಾಂಪೈರ್ -ಬ್ಯಾಟ್ (ಒಂದು ಬಗೆಯ ಬಾವಲಿ ಪ್ರಭೇದ)ನಿಂದ ಹೇಗೆ ಬೇಟೆಯಾಡಲ್ಪಡುತ್ತವೆ ಎಂಬುದನ್ನು ಅರಿಯಲು ಅಧ್ಯಯನಕಾರರು ಈ ಮಿಡತೆಗಳಿಗೆ ರೇಡಿಯೋ ಟ್ಯಾಗ್ ಕಟ್ಟಿ ಕ್ಯಾನೋಪಿಯಲ್ಲಿ ಅವುಗಳ ಚಲನವಲನ ದಾಖಲಿಸಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಜೀವವಿಜ್ಞಾನಗಳ ಕೇಂದ್ರದ (ಸಿಇಎಸ್) ಪ್ರಾಧ್ಯಾಪಕರಾದ ರೋಹಿಣಿ ಬಾಲಕೃಷ್ಣನ್ ಅವರ ನೇತೃತ್ವದ ತಂಡವು ಈ ಅಧ್ಯಯನ ನಡೆಸಿದೆ.

ಹೆಣ್ಣು ಕುದುರೆ ಮಿಡತೆಗಳಿಗೆ ಗಂಡು ಮಿಡತೆಗಳಿಗಿಂತ ಹೆಚ್ಚಿನ ಆಪತ್ತಿನ ಸಂಭಾವ್ಯತೆ ಇರುತ್ತದೆ ಎಂಬುದನ್ನು ತಜ್ಞರು ಪತ್ತೆಹಚ್ಚಿದ್ದಾರೆ.

ಹೆಣ್ಣು ಮಿಡತೆಗಳು ಹೆಚ್ಚು ಬಾರಿ ಸಂಚರಿಸುವುದು ಹಾಗೂ ಹೆಚ್ಚು ದೂರ ಕ್ರಮಿಸುವುದು ಇದಕ್ಕೆ ಕಾರಣವಿರಬಹುದು ಎಂದು ವಿವರಿಸಲಾಗಿದೆ.

‘ಬಿಹೇವಿಯರಲ್ ಎಕಾಲಜಿ ಅಂಡ್ ಸೋಶಿಯಾಲಜಿ’ ದಲ್ಲಿ ಈ ಕುರಿತ ಅಧ್ಯಯನ ವರದಿ ಪ್ರಕಟವಾಗಿದ್ದು, ಇದು ಭಾರತದಲ್ಲಿ ಕೀಟವೊಂದರ ಮೇಲೆ ನಡೆದ ಮೊತ್ತಮೊದಲ ರೇಡಿಯೋ ಟ್ರ್ಯಾಕಿಂಗ್ ಅಧ್ಯಯನ ಎನ್ನುತ್ತಾರೆ ಸಿಇಎಸ್ ನಲ್ಲಿ ಪೋಸ್ಟ್ ಡಾಕ್ಟೋರಲ್ ಆಗಿರುವ ಹಾಗೂ ಅಧ್ಯಯನ ಪ್ರಬಂಧದ ಲೇಖಕರಲ್ಲೊಬ್ಬರಾದ ಹರೀಶ್ ಪ್ರಕಾಶ್. ‘ಬೇಟೆ- ಬೇಟೆಗಾರ’ ಪ್ರತಿವರ್ತನೆಗಳಿಗೆ ಸಂಬಂಧಿಸಿದಂತೆ ಸಂಶೋಧನೆಯ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸಲುವಾಗಿ ಕ್ಷೇತ್ರಾವಲೋಕನದ ಜೊತೆಗೆ ನಿಯಂತ್ರಿತ ಪರಿಸರದಲ್ಲಿ ಪ್ರಯೋಗಗಳನ್ನು ನಡೆಸಲಾಗಿತ್ತು ಎಂದೂ ಅವರು ಹೇಳಿದ್ದಾರೆ.

ಏಷ್ಯಾದ ದಕ್ಷಿಣ ಭಾಗ ಮತ್ತು ಆಗ್ನೇಯ ಭಾಗಗಳಲ್ಲಿ ಕಂಡುಬರುವ ಈ ಪ್ರಭೇದದ ಬಾವಲಿಗಳು (ಲೆಸ್ಸರ್ ಫಾಲ್ಸ್ ವ್ಯಾಂಪೈರ್ ಬ್ಯಾಟ್) ಬೇಟೆಯಾಡಿದ ಪ್ರಾಣಿಗಳನ್ನು ತಮ್ಮ ಗೂಡಿಗೆ ತಂದು ತಿನ್ನುತ್ತವೆ. ಹೀಗೆ ಅವು ಬೇಟೆಯಾಡಿ ತಂದ ಆಹಾರವನ್ನು ಗಮನಿಸಿದಾಗ ಹೆಚ್ಚಿನ ಪ್ರಮಾಣದ ಆಹಾರವು ಕುದುರೆ ಮಿಡತೆಯಂತಹ ಕೀಟಗಳು ಎಂಬುದು ಕಂಡುಬಂತು. ಬಾಲಕೃಷ್ಣನ್ ಮತ್ತು ಇತರರು ನಡೆಸಿದ ಈ ಮುಂಚಿನ ಅಧ್ಯಯನಗಳ ವೇಳೆ, ಹೀಗೆ ಪತ್ತೆಯಾದ ಆಹಾರದಲ್ಲಿ ಗಂಡು ಮಿಡತೆಗಳಿಗಿಂತ ಹೆಣ್ಣುಮಿಡತೆ ರೆಕ್ಕೆಗಳು ಜಾಸ್ತಿ ಪ್ರಮಾಣದಲ್ಲಿ ಕಂಡುಬಂದಿದ್ದವು. ಅಂದರೆ, ಈ ಬಾವಲಿಗಳು ಹೆಣ್ಣುಮಿಡತೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೇಟೆಯಾಡುತ್ತವೆ ಎಂಬುದನ್ನು ಇದು ಸೂಚಿಸುತ್ತದೆ. ಆದರೆ ಇದು ಅನಿರೀಕ್ಷಿತ. ಏಕೆಂದರೆ, ಹೆಣ್ಣು ಮಿಡತೆಗಳು ಸಾಮಾನ್ಯವಾಗಿ ಸದ್ದಿಲ್ಲದೆ ಮೌನವಾಗಿರುತ್ತವೆ. ಗಂಡು ಮಿಡತೆಗಳಾದರೊ ಹೆಣ್ಣು ಸಂಗಾತಿಗಳನ್ನು ಆಕರ್ಷಿಸಲು ಸದ್ದು ಮಾಡುತ್ತವೆ. ಇದನ್ನು ಗಮನಿಸಿದ ಸಂಶೋಧಕರಿಗೆ, ‘ಬಾವಲಿಗಳು ಹೆಣ್ಣು ಕುದುರೆ ಮಿಡತೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೇಟೆಯಾಡಲು ಕಾರಣವೇನು? ಎಂಬ ಪ್ರಶ್ನೆ ಮೂಡಿತು.

ಹೆಣ್ಣು ಮಿಡತೆಗಳು ಸಾಮಾನ್ಯವಾಗಿ ಗಂಡು ಜಾತಿ ಮಿಡತೆಗಳಿಗಿಂತ ಗಾತ್ರದಲ್ಲಿ ದೊಡ್ಡದಿರುವುದರಿಂದ ಅವುಗಳನ್ನು ಬಾವಲಿಗಳು ಸುಲಭವಾಗಿ ಗುರುತಿಸಬಲ್ಲವು ಎಂಬುದು ಒಂದು ಸಂಭಾವ್ಯ ಕಾರಣವಿರಬಹುದು. ಎರಡನೆಯದಾಗಿ, ಹೆಣ್ಣು ಕುದುರೆ ಮಿಡತೆಗಳು ಗಂಡು ಜಾತಿಯವಕ್ಕಿಂತ ಹೆಚ್ಚು ಪೌಷ್ಟಿಕಾಂಶದಿಂದ ಕೂಡಿರುವ ಸಾಧ್ಯತೆಯು ಮತ್ತೊಂದು ಕಾರಣವಿರಬಹುದು ಎಂದು ಊಹಿಸಿದರು. ಈ ಬಗ್ಗೆ ಖಚಿತಪಡಿಸಿಕೊಳ್ಳಲು ತಜ್ಞರು ‘ವಿಸ್ಲರ್ಸ್’ ಎಂದು ಕರೆಯಲಾಗುವ ಕುದುರೆ ಮಿಡತೆಗಳ ಗುಂಪಿನ ಮೇಲೆ ಗಮನ ಕೇಂದ್ರೀಕರಿಸಿದರು. ಈ ಮಿಡತೆಗಳ ಪ್ರಭೇದದಲ್ಲಿ ಹೆಣ್ಣು ಜಾತಿಯವು ಗಂಡು ಜಾತಿಯದಕ್ಕಿಂತ ದುಪ್ಪಟ್ಟು ಗಾತ್ರ ಹಾಗೂ ದುಪ್ಪಟ್ಟು ತೂಕ ಹೊಂದಿರುತ್ತವೆ. ಸಂಶೋಧಕರು ದೊಡ್ಡ ಹೊರಾಂಗಣ ಪಂಜರದಲ್ಲಿ ‘ವಿಸ್ಲರ್’ ಪ್ರಭೇದದ ಹೆಣ್ಣು ಹಾಗೂ ಗಂಡುಮಿಡತೆಗಳನ್ನು ಮುಕ್ತವಾಗಿ ಹಾರಾಡಲು ಬಿಟ್ಟು ಅವು ಬಾವಲಿಗಳ ಕಣ್ಣಿಗೆ ಬೀಳುವಂತೆ ಮಾಡಿದರು. ಅಚ್ಚರಿಯ ಸಂಗತಿಯೆಂದರೆ, ಹೀಗೆ ಮಾಡಿದಾಗ ಬಾವಲಿಗಳು ಹೆಣ್ಣು ಮಿಡತೆ ಮತ್ತು ಗಂಡು ಮಿಡತೆಗಳನ್ನು ಸಮಾನ ಪ್ರಮಾಣದಲ್ಲಿ ಹಿಂಬಾಲಿಸುತ್ತವೆ ಎಂಬುದು ಕಂಡುಬಂದಿತು. ಹೇಳಬೇಕೆಂದರೆ, ಈ ಪ್ರಾಯೋಗಿಕ ವ್ಯವಸ್ಥೆಯಲ್ಲಿ ಹೆಣ್ಣು ಮಿಡತೆಗಳು ಗಂಡು ಮಿಡತೆಗಳಿಗಿಂತ ಹೆಚ್ಚಿನ ವೇಳೆ ಬೇಟೆಯಿಂದ ಪಾರಾಗುತ್ತವೆ ಎಂಬ ಅಂಶವೂ ದೃಢಪಟ್ಟಿತು.

ಇದರಿಂದ, ಹೆಣ್ಣು ಮಿಡತೆಗಳ ಗಾತ್ರವಾಗಲೀ ಅಥವಾ ಅವುಗಳಲ್ಲಿ ಇರಬಹುದಾದ ಹೆಚ್ಚಿನ ಪೌಷ್ಟಿಕಾಂಶ ಪ್ರಮಾಣವಾಗಲಿ ಅವುಗಳ ಹೆಚ್ಚಿನ ಬೇಟೆ ಆಪತ್ತಿಗೆ ಕಾರಣವಲ್ಲ ಎಂಬುದು ಸ್ಪಷ್ಟವಾಯಿತು.

ಆಗ ಸಂಶೋಧಕರಲ್ಲಿ ಮೂರನೇ ಸಾಧ್ಯತೆಯ ಬಗ್ಗೆ ಆಲೋಚನೆ ಮೊಳೆಯಿತು. ಅದೇನೆಂದರೆ, ಪ್ರಾಯಶಃ ಹೆಣ್ಣು ಕುದುರೆ ಮಿಡತೆಗಳು ಹೆಚ್ಚು ಬಾರಿ ಹೊರಗೆ ಹಾರಾಟ ನಡೆಸುವುದೇ ಇದಕ್ಕೆ ಕಾರಣವಿರಬಹುದು ಎಂಬ ಅನುಮಾನ ಅದಾಗಿತ್ತು. ಇದನ್ನು ಪರೀಕ್ಷಿಸಲು ತಂಡದವರು ಗಂಡು ಹಾಗೂ ಮತ್ತು ಹೆಣ್ಣು ಕುದುರೆ ಮಿಡತೆಗಳ ಬೆನ್ನಿಗೆ ಪುಟಾಣಿ ರೇಡಿಯೋ ಟ್ರಾನ್ಸ್ಮಿಟರ್ ಗಳನ್ನು ಅಂಟಿಸಿ ಮರದಿಂದ ಮರಕ್ಕೆ ಅವುಗಳ ಹಾರಾಟದ ರೀತಿಯನ್ನು ಅವಲೋಕಿಸಿದರು. ಹೀಗೆ ಗಮನಿಸಿದಾಗ, ಹೆಣ್ಣು ಮಿಡತೆಗಳು ಗಂಡು ಜಾತಿ ಮಿಡತೆಗಳಿಗಿಂತ 1.5ರಷ್ಟು ಹೆಚ್ಚು ಸಲ ಹಾಗೂ 1.8ರಷ್ಟು ಹೆಚ್ಚು ದೂರ ಸಂಚರಿಸುತ್ತವೆ ಎಂಬುದು ನಿಚ್ಚಳವಾಯಿತು. ಇದರ ಆಧಾರದ ಮೇಲೆ ತಜ್ಞರು, ಹೆಣ್ಣು ಕುದುರೆ ಮಿಡತೆಗಳು ಹೆಚ್ಚು ಸಲ ಹಾರಾಟ ನಡೆಸುವುದು ಹಾಗೂ ಹೆಚ್ಚು ದೂರ ಕ್ರಮಿಸುವುದು ಅವನ್ನು ಗಂಡು ಮಿಡತೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬೇಟೆಯಾಡಲ್ಪಡುವ ಅಪಾಯಕ್ಕೆ ಸಿಲುಕಿಸುತ್ತವೆ ಎಂಬ ನಿರ್ಧಾರಕ್ಕೆ ಬಂದರು.

“ಬಹುಶಃ ಹೆಣ್ಣು ಮಿಡತೆಗಳು ಸಂಗಾತಿಗಳನ್ನು ಅರಸುವ ಸಲುವಾಗಿ ಹಾಗೂ ಮೊಟ್ಟೆ ಇಡಲು ಸೂಕ್ತ ಜಾಗ ಹುಡುಕುವ ಸಲುವಾಗಿ ಹೆಚ್ಚು ಕ್ರಮಿಸುತ್ತವೆ” ಎನ್ನುತ್ತಾರೆ ಸಿಇಎಸ್ ನಲ್ಲಿ ಪಿಎಚ್.ಡಿ. ವ್ಯಾಸಂಗ ಮಾಡುತ್ತಿರುವ ಹಾಗೂ ಈ ಅಧ್ಯಯನದ ಸಹಲೇಖಕರಾದ ಕಸ್ತೂರಿ ಸಹಾ.

“ಗಂಡು ಮಿಡತೆಗಳು ಧ್ವನಿಗಳನ್ನು ಹೊಮ್ಮಿಸುವ ಹಾಗೂ ಹೆಣ್ಣು ಜಾತಿಯವು ಮೌನವಾಗಿ ಸಂಚರಿಸುವ ವ್ಯವಸ್ಥೆಯಲ್ಲಿ ಗಂಡು ಮಿಡತೆಗಳೇ ಆಪತ್ತಿಗೆ ಸಿಲುಕುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಈ ಅನಿಸಿಕೆಗೆ ವ್ಯತಿರಿಕ್ತವಾಗಿ ಈಗ ನಡೆದಿರುವ ಅಧ್ಯಯನವು ಹೆಣ್ಣು ಮಿಡತೆಗಳು ಬೇಟೆಗೆ ಬೀಳುವ ಹೆಚ್ಚಿನ ಆಪತ್ತಿನಲ್ಲಿರುತ್ತವೆ ಎಂಬುದನ್ನು ತೋರಿಸಿದೆ ಎನ್ನುತ್ತಾರೆ ರೋಹಿಣಿ ಬಾಲಕೃಷ್ಣನ್.

ಈ ನಡುವೆ, ‘ಬೇಟೆ- ಬೇಟೆಗಾರ’ ಪ್ರತಿವರ್ತನೆಗಳ ಬಗ್ಗೆ ಇನ್ನೂ ಉತ್ತರ ಕಾಣದ ಹಲವಾರು ಪ್ರಶ್ನೆಗಳಿವೆ. ಉದಾಹರಣೆಗೆ, ಸಹಾ ಅವರು ಹೇಳುವ ಪ್ರಕಾರ, ಬಾವಲಿಗಳು ಹೆಣ್ಣು ಕುದುರೆ ಮಿಡತೆಗಳನ್ನು ಸಂತಾನೋತ್ಪತ್ತಿಗೆ ಹೊರತಾದ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೇಟೆಯಾಡುತ್ತವೆ. ಇದು ಮತ್ತೊಂದು ರಹಸ್ಯವಾಗಿದ್ದು, ಇದಕ್ಕೆ ಕಾರಣವೇನು ಎಂಬುದನ್ನು ಕಂಡುಕೊಳ್ಳಲು ನಾವು ಪ್ರಯತ್ನಿಸುತಿದ್ದೇವೆ ಎಂದು ಅವರು ಹೇಳುತ್ತಾರೆ.

ಉಲ್ಲೇಖ:

ಸಹಾ ಕೆ, ಪ್ರಕಾಶ್ ಎಚ್, ಮೋಹಪಾತ್ರ ಪಿಪಿ, ಬಾಲಕೃಷ್ಣನ್ ಆರ್, Is flying riskier for female katydids than for males? Behavioral Ecology and Sociobiology (2023). https://link.springer.com/article/10.1007/s00265-023-03298-7

ಸಂಪರ್ಕಿಸಿ:

ಕಸ್ತೂರಿ ಸಹಾ
ಪಿಎಚ್.ಡಿ. ಅಧ್ಯಯನಾರ್ಥಿ
ಜೀವ ವಿಜ್ಞಾನಗಳ ಕೇಂದ್ರ (ಸಿಇಎಸ್)
ಭಾರತೀಯ ವಿಜ್ಞಾನ ಸಂಸ್ಥೆ (ಐ ಐ ಎಸ್ ಸಿ)
ಫೋನ್: 9486172985
ಇ-ಮೇಲ್: kasturisahaks@iisc.ac.in

ರೋಹಿಣಿ ಬಾಲಕೃಷ್ಣನ್
ಪ್ರಾಧ್ಯಾಪಕರು
ಜೀವ ವಿಜ್ಞಾನಗಳ ಕೇಂದ್ರ (ಸಿಇಎಸ್)
ಭಾರತೀಯ ವಿಜ್ಞಾನ ಸಂಸ್ಥೆ (ಐ ಐ ಎಸ್ ಸಿ)
ಫೋನ್: +91-80-23602971
ಇ-ಮೇಲ್: brohini@iisc.ac.in
Website: https://sites.google.com/view/rohinibalakrishnanlab/home

ಪರ್ತಕರ್ತರಿಗೆ ಸೂಚನೆ:

ಅ) ಈ ಪತ್ರಿಕಾ ಪ್ರಕಟಣೆಯನ್ನು ಅಥವಾ ಇದರ ಯಾವುದೇ ಭಾಗವನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ.

ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ ದಯವಿಟ್ಟು news@iisc.ac.in ಅಥವಾ pro@iisc.ac.in ಗೆ ಬರೆಯಿರಿ.