ದೀರ್ಘಕಾಲದ ನೋವು ನಮ್ಮ ದೇಹದ ನಾರಡ್ರೆನಲಿನ್ ಸಾಗಣೆಯನ್ನು ಹೇಗೆ ನಿರ್ಬಂಧಿಸುತ್ತದೆ ?

ನರ ಕೋಶಗಳ ನಡುವಿನ ಸಂವಹನೆಯು ನರಸಂವಾಹಕ(ನ್ಯೂರೋ ಟ್ರಾನ್ಸ್ ಮಿಟರ್) ಎಂಬ ರಾಸಾಯನಿಕಗಳ ಬಿಡುಗಡೆಯ ಮೂಲಕ ನಡೆಯುತ್ತದೆ. ಅಂತಹ ಒಂದು ನರಸಂವಾಹಕವಾದ ನಾರಡ್ರೆನಲಿನ್ (ನಾರ್ ಎಪಿನೆಫ್ರಿನ್) ಎಚ್ಚರಿಕೆ, ಪ್ರಚೋದನೆ ಮತ್ತು ನೋವು ಸಂವೇದನೆಯನ್ನು ನಿಯಂತ್ರಣಕ್ಕೆ ಮುಖ್ಯ. ನರ ಕೋಶಗಳ ಸಂಧಿಸ್ಥಾನ ಅಥವಾ ಸಿನಾಪ್ಸೆಸ್‌ಗಳಲ್ಲಿ ನರಸಂವಾಹಕ ಮಟ್ಟವನ್ನು ಪದರವುಳ್ಳ ಸಾಗಣೆ ಪ್ರೋಟೀನ್‌ಗಳ ಒಂದು ವರ್ಗವು ನಿಯಂತ್ರಿಸುತ್ತದೆ. ಈ ಸಾಗಣೆ ಪ್ರೋಟೀನುಗಳು ಹೆಚ್ಚುವರಿ ನರಸಂವಾಹಕಗಳನ್ನು ತೆಗೆಯಲು ಅಣು “ವಾಕ್ಯೂಮ್ ಕ್ಲೀನರುಗಳು” ರೀತಿಯಲ್ಲಿ ಕಾರ್ಯನಿರ್ವಹಿಸಿ ತನ್ಮೂಲಕ ನರಕೋಶಗಳ ನಡುವಿನ ಸಂವಹನೆ ಅಥವಾ ಸಂಪರ್ಕದ ಪ್ರಮಾಣವನ್ನು ನಿಯಂತ್ರಿಸುತ್ತವೆ.

ನಾರಡ್ರೆನಲಿನ್ ಬೆನ್ನುಹುರಿಯಲ್ಲಿ ಬಿಡುಗಡೆಯಾಗಿ ಫೈಬ್ರೊಮಯಾಲ್ಜಿಯ( ಮಾಂಸಪೇಶೀ ನೋವು) ಮತ್ತು ನ್ಯೂರೋಪತಿ(ನರರೋಗ)ಗಳಂತಹ ದೀರ್ಘಕಾಲದ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಸಿನಾಪ್ಸಿಸ್ನಲ್ಲಿ ನಾರಡ್ರೆನಲಿನ್ ಮಟ್ಟವನ್ನು ಹೆಚ್ಚಿಸುವ ಮೂಲಕ ಅದರ ಸಾಗಾಣಿಕೆಕಾರವನ್ನು ತಡೆಯುವ ಮೂಲಕ ನೋವನ್ನು ತಗ್ಗಿಸಬಹುದು. ಆದ್ದರಿಂದ, ನಾರಡ್ರೆನಲಿನ್ ಸಾಗಣೆಯನ್ನು ನಿರ್ಬಂಧಿಸುವ ಔಷಧಿಗಳನ್ನು ದೀರ್ಘಕಾಲದ ನೋವಿನ ಔಷಧಿಗಳಾಗಿ ನೀಡಲಾಗುತ್ತದೆ. ಕ್ರಮವಾಗಿ ಸಿಂಬಾಲ್ಟಾ, ಸಾವೆಲ್ಲಾ ಮತ್ತು ಅಲ್ಟ್ರಾಸೆಟ್ ಎಂಬ ಬ್ರಾಂಡ್ ಹೆಸರಿನಲ್ಲಿ ಸಿಗುವ ಡುಲೋಕ್ಸೆಟೈನ್, ಮಿಲ್ನಾಸಿಪ್ರನ್ ಮತ್ತು ಟ್ರಮಡಾಲ್ ಕೆಲವು ನಿರ್ಬಂಧಕಗಳಾಗಿವೆ(ಬ್ಲಾಕರ್ಸ್) . ಇವುಗಳಲ್ಲಿ, ಡುಲೋಕ್ಸೆಟೈನ್ ಮತ್ತು ಮಿಲ್ನಾಸಿಪ್ರನ್ನುಗಳನ್ನು ಸಕ್ಕರೆ ಕಾಯಿಲೆ ನರನೋವು ಮತ್ತು ಫೈಬ್ರೊಮಯಾಲ್ಜಿಯಗಳನ್ನು(ಮಾಂಸಪೇಶಿ ನೋವು) ನಿವಾರಿಸಲು ಬಳಸಲಾಗುತ್ತದೆ. ಶಸ್ತ್ರಚಿಕಿತ್ಸೆಯ ನಂತರದ ನೋವು ಮತ್ತು ರೆಸ್ಟ್ ಲೆಸ್ ಲೆಗ್ ಸಿಂಡ್ರೋಮ್ಗಳಲ್ಲಿ ( ಕಾಲುಗಳ ಚಡಪಡಿ) ಟ್ರಮಡಾಲ್ ಪರಿಣಾಮಕಾರಿಯಾಗಿದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಬಳಸಿದಾಗ ಇವು ಗೀಳಾಗಿ ಪರಿವರ್ತನೆಗೊಳ್ಳಬಹುದು.

ತಮ್ಮ ಹೊಸ ಅಧ್ಯಯನದಲ್ಲಿ ಅರವಿಂದ್ ಪೆನ್ಮಾಟ್ಸಾ ನೇತೃತ್ವದ ಮಾಲಿಕ್ಯುಲರ್ ಬಯೋಫಿಸಿಕ್ಸ್ ಘಟಕದ ಸಂಶೋಧಕರು ನಾರಡ್ರೆನಲಿನ್ ಮತ್ತು ಡೋಪಮಿನ್ ನರಸಂವಾಹಕಗಳು ಪರಸ್ಪರ ರಾಸಾಯನಿಕವಾಗಿ ಹೋಲುವಂತಿದ್ದರೂ ಒಂದೇ ರೀತಿಯ ಸಾಗಾಣಿಕೆಗಾರಗಳಲ್ಲಿ ಬೇರೆ ಬೇರೆ ರೀತಿಯ ಸಂವಹನಗಳನ್ನು ಪ್ರದರ್ಶಿಸುತ್ತವೆಂದು ತೋರಿಸಲು ನರಸಂವಾಹಕ ಸಾಗಾಣಿಕೆಗಾರದ ರಚನೆಯನ್ನು ಎಕ್ಸ್-ರೇ ಸ್ಫಟಿಕಶಾಸ್ತ್ರವನ್ನು ಬಳಸಿ ತೋರಿಸಿದರು. ನಾರಡ್ರೆನಲಿನ್ ಅಂತರಕ್ರಿಯೆ ನಡೆಸುವ ಸಾಗಾಣಿಕೆಗಾರದ ನಿರ್ದಿಷ್ಟ ಪ್ರದೇಶವೂ ಕೂಡ ನಿರ್ಬಂಧಕಗಳಾದ ಡುಲೋಕ್ಸೆಟೈನ್, ಮಿಲ್ನಾಸಿಪ್ರನ್ ಮತ್ತು ಟ್ರಮಡಾಲ್ ಗಳು ಜೊತೆ ಸೇರುವ ಮತ್ತು ಮುಖ್ಯವಾಗಿ ನಾರಡ್ರೆನಲಿನ್ ಸ್ವೀಕಾರವನ್ನು ನಿರ್ಬಂಧಿಸುವ ಸ್ಥಳವಾಗಿದೆ. ಇಲ್ಲಿ ಯಾವುದೇ ಬದಲಾವಣೆಗಳಾದರೆ ನಾರಡ್ರೆನಲಿನ್ ಸ್ವೀಕಾರವನ್ನು ತಡೆಯುವ ಔಷಧಗಳ ಸಾಮರ್ಥ್ಯವನ್ನು ತೀವ್ರವಾಗಿ ತಗ್ಗಿಸುತ್ತವೆಂದು ಅಧ್ಯಯನ ತಂಡವು ಕಂಡುಹಿಡಿದಿದೆ. ದೀರ್ಘಕಾಲದ ನೋವನ್ನು ತಗ್ಗಿಸಲು ಮಿತವಾದ ಅಡ್ಡಪರಿಣಾಮಗಳೊಂದಿಗೆ ನಾರಡ್ರೆನಲಿನ್ ಸಾಗಾಣಿಕೆಯ ಸುಧಾರಿತ ನಿರ್ಬಂಧಕಗಳನ್ನು ರೂಪಿಸಲು ಈ ಸಂಶೋಧನೆಯು ಒಂದು ಹೊಸ ವಿಚಾರವನ್ನು ನೀಡುತ್ತವೆ.

ಉಲ್ಲೇಖ:

ಶಬರೀಶ್, ಪಿ., ಮಲ್ಲೇಲ, ಎ ಕೆ, ಜೋಸೆಫ್, ಡಿ. ಮತ್ತು ಪೆನ್ಮತ್ಸ ಎ.,* ಸ್ಟ್ರಕ್ಚರಲ್ ಬೇಸಿಸ್ ಆಫ್ ನಾರಡ್ರೆನಲಿನ್ ರೆಕೊಗ್ನಿಷನ್ ಅಂಡ್ ಟ್ರಾನ್ಸಪೋರ್ಟ್ ಇನ್ಹಿಬಿಷನ್ ಇನ್ ನ್ಯೂರೊಟ್ರಾನ್ಸ್ಮಿಟರ್ ಟ್ರಾನ್ಸ್ಪೋರ್ಟರ್. ನ್ಯಾಟ್ ಕಮ್ಯುನಿಕೇಷನ್ (2021) 12: 2199. (DOI: https://doi.org/10.1038/s41467-021-22385-9)

ವೆಬ್ ಪೇಜ್ :

https://aplabmbu.weebly.com/